ತಮಿಳುನಾಡಿನ ಮಹಿಳಾ ಕಾಲೇಜಿನ ಹೊರಗೆ ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರನ್ನು ಚುಡಾಯಿಸುವ ಮತ್ತು ತನ್ನ ಮಗಳನ್ನು ಕರೆದುಕೊಂಡು ಹೋಗಲು ಬಂದ ಪೋಷಕರ ಮೇಲೆ ಕೂಡಾ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ತಮಿಳುನಾಡಿನ ಮಹಿಳಾ ಕಾಲೇಜಿನ ಮುಂದೆ ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರನ್ನು ಚುಡಾಯಿಸುವ ಮತ್ತು ಹುಡುಗಿಯ ಪೋಷಕರ ಮೇಲೆ ಹಲ್ಲೆ ಮಾಡುವ ವಿಡಿಯೋ.
ವಾಸ್ತವ: ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ತಮಿಳುನಾಡಿನ ಮಧುರೈನಲ್ಲಿರುವ ಲೇಡಿ ಡಾಕ್ ಕಾಲೇಜು ಮತ್ತು ಶ್ರೀ ಮೀನಾಕ್ಷಿ ಸರ್ಕಾರಿ ಕಲಾ ಕಾಲೇಜು ಆವರಣದ ಬಳಿ ಇತ್ತೀಚೆಗೆ ನಡೆದ ಎರಡು ವಿಭಿನ್ನ ಘಟನೆಗಳ ದೃಶ್ಯಗಳಾಗಿವೆ. ಈ ಎರಡೂ ಘಟನೆಗಳಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿ ಯುವಕರನ್ನು ಮಧುರೈ ಪೊಲೀಸರು ಬಂಧಿಸಿದ್ದಾರೆ ಮತ್ತು ಅವರ ವಿವರಗಳನ್ನು ಫೇಸ್‌ಬುಕ್ ಪೋಸ್ಟ್‌ಗಳ ಮೂಲಕ ಹಂಚಿಕೊಂಡಿದ್ದಾರೆ. ಈ ಎರಡೂ ಘಟನೆಗಳಲ್ಲಿ ಯಾವೊಬ್ಬ ಆರೋಪಿಯೂ ಮುಸ್ಲಿಂ ಇಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳಾಗಿದೆ.
ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಎರಡು ವಿಭಿನ್ನ ವೀಡಿಯೊ ಕ್ಲಿಪ್‌ಗಳಾಗಿವೆ. ಎರಡೂ ಕ್ಲಿಪ್ಪಿಂಗ್‌ನ ವಿವರಗಳನ್ನು ಒಂದೊಂದಾಗಿ ಪರಿಶೀಲಿಸೋಣ.
1ನೇ ವೀಡಿಯೊ ಕ್ಲಿಪ್:
ವೀಡಿಯೊದ ಸ್ಕ್ರೀನ್‌ಶಾಟ್‌ಗಳ ಮೂಲಕ ಅವುಗಳನ್ನು ರಿವರ್ಸ್ ಸರ್ಚ್ ಮಾಡಿದಾಗ, ಇದೇ ರೀತಿಯ ದೃಶ್ಯಗಳಿರುವ ವೀಡಿಯೊ 03 ನವೆಂಬರ್ 2022 ರಂದು ‘Thanthi TV’ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ್ದು ಕಂಡುಬಂದಿದೆ. ಮಧುರೈನಲ್ಲಿರುವ ಯುವತಿಯರ ಕಾಲೇಜಿಗೆ ನುಗ್ಗಿ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ದೃಶ್ಯಗಳು ಎಂದು ತಂತಿ ಟಿವಿ ಸುದ್ದಿ ವಾಹಿನಿ ವರದಿ ಮಾಡಿದೆ. ಘಟನೆಯ ಸಂಪೂರ್ಣ ವಿವರಗಳನ್ನು ವರದಿ ಮಾಡಿರುವ, ‘ಟೈಮ್ಸ್ ಆಫ್ ಇಂಡಿಯಾ’ ಸುದ್ದಿ ವೆಬ್‌ಸೈಟ್ 05 ನವೆಂಬರ್ 2022 ರಂದು ಸುದ್ದಿಯನ್ನು ಪ್ರಕಟಿಸಿದೆ. 30 ಅಕ್ಟೋಬರ್ 2022 ರಂದು ತೇವರ್ ಜಯಂತಿಯಂದು ಲೇಡಿ ಡೋಕ್ ಕಾಲೇಜಿಗೆ ಬಲವಂತವಾಗಿ ಪ್ರವೇಶಿಸಿದ ಮತ್ತು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಒಂಬತ್ತು ಯುವಕರನ್ನು ಮಧುರೈ ನಗರ ಪೊಲೀಸರು ಬಂಧಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ತನ್ನ ವರದಿಯಲ್ಲಿ ಹೇಳಿದೆ.
ಮಧುರೈ ಪೊಲೀಸರು ಘಟನೆಯ ವಿವರಗಳನ್ನು ಮತ್ತು ಆರೋಪಿಗಳ ಬಂಧನವನ್ನು ತಿಳಿಸುವ ಫೇಸ್‌ಬುಕ್ ಪೋಸ್ಟ್ ಅನ್ನು ಪ್ರಕಟಿಸಿದ್ದಾರೆ. ಈ ಘಟನೆ ಕುರಿತು ತಲ್ಲಕುಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯಲ್ಲಿ ಭಾಗಿಯಾಗಿದ್ದ 10 ಮಂದಿಯನ್ನು ಬಂಧಿಸಿರುವುದಾಗಿ ಮಧುರೈ ಪೊಲೀಸರು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಮಧುರೈ ಪೊಲೀಸರು ಹತ್ತು ಆರೋಪಿಗಳ ಹೆಸರನ್ನು ಸೂರ್ಯ, ಮುತ್ತು ನವೇಶ್, ಅರುಣ್ ಪಾಂಡಿಯನ್, ಮಣಿಕಂಡನ್, ಸೇತುಪಾಂಡಿ, ಮಣಿಕಂಡನ್, ಪರ್ಲ್ ವಿಘ್ನೇಶ್, ವಿಲಿಯಂ ಫ್ರಾನ್ಸಿಸ್, ವಿಮಲ್‌ಜಾಯ್ ಪ್ಯಾಟ್ರಿಕ್ ಮತ್ತು ಅರುಣ್ ಎಂದು ಉಲ್ಲೇಖಿಸಿದ್ದಾರೆ.
2ನೇ ವೀಡಿಯೊ ಕ್ಲಿಪ್:
2ನೇ ವೀಡಿಯೊ ಕ್ಲಿಪ್ಪನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಡಿದಾಗ, 05 ನವೆಂಬರ್ 2022 ರಂದು ‘ಟೈಮ್ಸ್ ನೌ’ ಪ್ರಕಟಿಸಿದ ಸುದ್ದಿಯಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ. ‘ಟೈಮ್ಸ್ ನೌ’ ವರದಿಯಲ್ಲಿ, ಮದುರೈ ಶ್ರೀ ಮೀನಾಕ್ಷಿ ಸರ್ಕಾರಿ ಆರ್ಟ್‌ಕಾಲೇಜ್ ಮುಂದೆ ಯುವಕರ ಗುಂಪೊಂದು ವಿದ್ಯಾರ್ಥಿಯ ತಂದೆಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ದೃಶ್ಯಗಳು ಎಂದು ಹೇಳಿದೆ. ವರದಿಗಳ ಪ್ರಕಾರ, “ಶ್ರೀ ಮೀನಾಕ್ಷಿ ಸರ್ಕಾರಿ ಕಲಾ ಕಾಲೇಜಿಗೆ ತನ್ನ ಮಗಳನ್ನು ಕರೆದುಕೊಂಡು ಹೋಗಲು ಬಂದ ಪೋಷಕರ ಮೇಲೆ ಯುವಕರ ಗುಂಪೊಂದು ಕ್ರೂರವಾಗಿ ಹಲ್ಲೆ ನಡೆಸಿದೆ. ಅಂತ್ಯಕ್ರಿಯೆಯ ಮೆರವಣಿಗೆಯೊಂದರ ವೇಳೆ ಹುಡುಗಿಯರ ಮುಂದೆ ಮಾಡಿದ್ದ ವರ್ತನೆಯನ್ನು ಪೋಷಕರು ಪ್ರಶ್ನಿಸಿದ್ದರು. ಈ ದಾಳಿಯಲ್ಲಿ ಭಾಗಿಯಾಗಿದ್ದ 6 ಮಂದಿಯನ್ನು ಮಧುರೈ ಪೊಲೀಸರು ತಮಿಳುನಾಡು ಮಹಿಳೆಯರ ಮೇಲಿನ ಕಿರುಕುಳ ನಿಷೇಧ ಕಾಯ್ದೆ ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿದ್ದಾರೆ.
04 ನವೆಂಬರ್ 2022 ರಂದು ನಡೆದ ಈ ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳ ವಿವರಗಳನ್ನು ಮಧುರೈ ಪೊಲೀಸರು ಫೇಸ್‌ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಮಧುರೈ ಪೊಲೀಸರು ಬಂಧಿತ ಆರು ಯುವಕರ ಹೆಸರುಗಳನ್ನು ಸತೀಶ್ ಕುಮಾರ್, ರಾಮಮೂರ್ತಿ, ನವೀನ್ ಅಲಿಯಾಸ್ ನಾಗಪಿರಿಯನ್, ಅಜಿತ್ ಕುಮಾರ್, ಸೋಮಸುಂದರನ್, ಶಿವಗಣಂ ಎಂದು ವಿವರಿಸಿದ್ದಾರೆ. ಮಧುರೈ ಪೊಲೀಸರು ಉಲ್ಲೇಖಿಸಿರುವ ಆರೋಪಿಗಳ ಹೆಸರು ಮತ್ತು ಅವರ ತಂದೆಯ ವಿವರಗಳನ್ನು ಗಮನಿಸಿದರೆ, ಈ ಪ್ರಕರಣಗಳಲ್ಲಿ ಯಾವೊಬ್ಬ ಆರೋಪಿಯೂ ಮುಸ್ಲಿಂ ಇಲ್ಲ.
ಈ ಎರಡೂ ಪ್ರಕರಣಗಳ ಎಫ್‌ಐಆರ್ ಪ್ರತಿಗಳನ್ನು ಪ್ರಸ್ತುತ ತಮಿಳುನಾಡು ಪೊಲೀಸ್ ವೆಬ್‌ಸೈಟ್‌ನಲ್ಲಿ ನಿರ್ಬಂಧಿಸಲಾಗಿದೆ. ಮಹಿಳಾ ಕಾಲೇಜುಗಳ ಮುಂದೆ ಯುವಕರು ನಡೆಸುತ್ತಿರುವ ಈ ಕಿಡಿಗೇಡಿತನದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಧುರೈ ಉಪ ಪೊಲೀಸ್ ಆಯುಕ್ತ (ಉತ್ತರ) ಎನ್.ಮೋಹನ್ ರಾಜ್, “ಯುವಕರು ನಡೆಸಿದ ಗಲಾಟೆ ಹಿನ್ನೆಲೆಯಲ್ಲಿ ಅನುಚಿತವಾಗಿ ವರ್ತಿಸಿದ ಯುವಕರ ಪೋಷಕರಿಗೆ ಅವರ ವಾರ್ಡ್‌ಗಳೊಂದಿಗೆ ಕೌನ್ಸೆಲಿಂಗ್ ನೀಡಲಾಗುವುದು” ಎಂದು ಹೇಳಿದ್ದಾರೆ. ಮಧುರೈನ ಈ ಮಹಿಳಾ ಕಾಲೇಜುಗಳ ಹೊರಗೆ ನಡೆದ ಗಲಾಟೆಯಲ್ಲಿ ಪಾಲ್ಗೊಂಡ ಯುವಕರು ಮುಸ್ಲಿಮರು ಎಂದು ಎಲ್ಲಿಯೂ ವರದಿಯಾಗಿಲ್ಲ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಮಧುರೈನ ಮಹಿಳಾ ಕಾಲೇಜುಗಳ ಮುಂದೆ ಕೆಲವು ಯುವಕರು ನಡೆಸಿದ ಗಲಾಟೆಯ ವಿಡಿಯೊವನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ಗಲಾಟೆಯಲ್ಲಿ ಯಾವೊಬ್ಬ ಮುಸ್ಲಿಮ್ ಯುವಕರೂ ಇರಲಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.