Fake News - Kannada
 

ಐಶ್ವರ್ಯಾ ರೈ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿಯವರನ್ನು ಆಪರೇಷನ್ ಸಿಂಧೂರ್ ಕುರಿತು ಪ್ರಶ್ನಿಸುತ್ತಿರುವ ಈ ವಿಡಿಯೋ ಡೀಪ್‌ಫೇಕ್ ಮಾಡಿದ್ದಾಗಿದೆ

0

ನವೆಂಬರ್ 19, 2025 ರಂದು, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಶ್ರೀ ಸತ್ಯ ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಸಮಾರಂಭಗಳಿಗಾಗಿ ಆಂಧ್ರಪ್ರದೇಶದ ಪುಟ್ಟಪರ್ತಿಗೆ ಆಗಮಿಸಿದ್ದರು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್, ಸಚಿನ್ ತೆಂಡೂಲ್ಕರ್ ಮತ್ತು ಐಶ್ವರ್ಯಾ ರೈ ಬಚ್ಚನ್ ಸೇರಿದಂತೆ ರಾಜಕೀಯ, ಕಲೆ, ಕ್ರೀಡೆ ಇತ್ಯಾದಿ ಕ್ಷೇತ್ರಗಳ ಅನೇಕ ಪ್ರಮುಖ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು (ಇಲ್ಲಿ, ಇಲ್ಲಿ ಮತ್ತು ಇಲ್ಲಿ).

​ಈ ಕಾರ್ಯಕ್ರಮದ ನಂತರ, ಐಶ್ವರ್ಯಾ ರೈ ಅವರ ವಿಡಿಯೋವೊಂದು (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಲು ಪ್ರಾರಂಭಿಸಿತು. ಈ ಕ್ಲಿಪ್‌ನಲ್ಲಿ ಅವರು ತಮ್ಮ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸಿ ಪ್ರಶ್ನಿಸಿದ್ದಾರೆ ಎಂದು ಹೇಳಲಾಗಿದೆ. ವೈರಲ್ ಕ್ಲಿಪ್‌ನಲ್ಲಿ, ಅವರು ಇತ್ತೀಚಿನ ರಾಷ್ಟ್ರೀಯ ಭದ್ರತಾ ಸಮಸ್ಯೆಗಳ ಕುರಿತು ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿ, “ಪಾಕಿಸ್ತಾನಕ್ಕೆ ಆರು ಜೆಟ್‌ಗಳನ್ನು, ನಾಲ್ಕು ರಾಫೇಲ್‌ಗಳನ್ನು, ಎರಡು S-400 ಸಿಸ್ಟಮ್‌ಗಳನ್ನು ಮತ್ತು 300 ಸೈನಿಕರನ್ನು ಏಕೆ ಕಳೆದುಕೊಂಡೆವು ಎಂದು ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಲು ಬಯಸುತ್ತೇನೆ” ಎಂದು ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮನ್ನು ಪರಿಶೀಲಿಸೋಣ.

ಕ್ಲೇಮ್: ಪುಟ್ಟಪರ್ತಿ ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸಿ, ಪಾಕಿಸ್ತಾನಕ್ಕೆ ಕಳೆದುಕೊಂಡ ಜೆಟ್‌ಗಳು, ರಾಫೇಲ್ ವಿಮಾನಗಳು, S-400 ಸಿಸ್ಟಮ್‌ಗಳು ಮತ್ತು ಸೈನಿಕರ ಬಗ್ಗೆ ಪ್ರಶ್ನಿಸಿದ್ದಾರೆ ಎಂದು ವೈರಲ್ ವಿಡಿಯೋ ತೋರಿಸುತ್ತದೆ.

ಫ್ಯಾಕ್ಟ್: ಈ ವಿಡಿಯೋ ಡೀಪ್‌ಫೇಕ್ ಮಾಡಿದ್ದಾಗಿದೆ.  ಶ್ರೀ ಸತ್ಯ ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಸಮಾರಂಭಗಳ ಸಂದರ್ಭದಲ್ಲಿ ಮಾಡಿದ ಒರಿಜಿನಲ್ ಭಾಷಣದಲ್ಲಿ, ಐಶ್ವರ್ಯಾ ರೈ ಅವರು ಶ್ರೀ ಸತ್ಯ ಸಾಯಿ ಬಾಬಾ ಅವರ ಬೋಧನೆಗಳ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಅವರು ಸೇನೆ, ರಾಫೇಲ್ ಜೆಟ್‌ಗಳು, ಪಾಕಿಸ್ತಾನ ಅಥವಾ ಯಾವುದೇ ಭದ್ರತಾ ವಿಷಯಗಳ ಬಗ್ಗೆ ಪ್ರಸ್ತಾಪಿಸಲಿಲ್ಲ. ವೈರಲ್ ಕ್ಲಿಪ್‌ನಲ್ಲಿ ಅಸಂಗತತೆಗಳು ಕಂಡುಬಂದಿದ್ದು, ಇದನ್ನು ವಿವಿಧ ಡೀಪ್‌ಫೇಕ್ ಡಿಟೆಕ್ಟರ್ ಪರಿಕರಗಳಿಂದ  AI-ಜನರೇಟೆಡ್ ಎಂದು ಗುರುತಿಸಲಾಗಿದೆ. ಆದ್ದರಿಂದ, ಈ ಕ್ಲೇಮ್ ಸುಳ್ಳು.

ಸತ್ಯಾಂಶವನ್ನು ಪರಿಶೀಲಿಸಲು, ನಾವು ಈ ಸಮಾರಂಭದಲ್ಲಿ ಐಶ್ವರ್ಯಾ ರೈ ಅವರ ಸಂಪೂರ್ಣ ಭಾಷಣಕ್ಕಾಗಿ ಗೂಗಲ್‌ನಲ್ಲಿ ಕೀವರ್ಡ್ ಬಳಸಿ ಹುಡುಕಿದೆವು. ANI ವರದಿ ಮಾಡಿದ ಅವರ ಭಾಷಣದ 8 ನಿಮಿಷಗಳ ವರ್ಷನ್  ನಾವು ಕಂಡುಕೊಂಡೆವು. ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂನ ಅಧಿಕೃತ ಯೂಟ್ಯೂಬ್ ಚಾನೆಲ್ ಸಹ ಇಡೀ ಕಾರ್ಯಕ್ರಮವನ್ನು (ಸುಮಾರು 3 ಗಂಟೆ 25 ನಿಮಿಷಗಳಷ್ಟು ಉದ್ದವಿರುವ) ನೇರಪ್ರಸಾರ ಮಾಡಿದೆ.

ಎರಡೂ ವಿಡಿಯೋಗಳನ್ನು ಪರಿಶೀಲಿಸಿದ ನಂತರ, ಐಶ್ವರ್ಯಾ ರೈ ಅವರು ಶ್ರೀ ಸತ್ಯ ಸಾಯಿ ಬಾಬಾ ಅವರ ಬೋಧನೆಗಳ ಬಗ್ಗೆ ಮಾತನಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.  ಶಿಸ್ತು, ಸಮರ್ಪಣೆ, ಭಕ್ತಿ, ದೃಢಸಂಕಲ್ಪ, ಮತ್ತು ವಿವೇಚನೆ  ಎಂಬ ತತ್ವಗಳನ್ನು ಎತ್ತಿ ತೋರಿಸಿದ್ದಾರೆ. ತಮ್ಮ ಭಾಷಣದ ಕೊನೆಯಲ್ಲಿ, ಅವರು ಬಾಬಾ ಅವರ ಸಂದೇಶವನ್ನೂ ಹಂಚಿಕೊಂಡಿದ್ದಾರೆ: “ಇರುವುದು ಒಂದೇ ಜಾತಿ, ಅದು ಮಾನವೀಯತೆಯ ಜಾತಿ. ಇರುವುದು ಒಂದೇ ಧರ್ಮ, ಅದು ಪ್ರೀತಿಯ ಧರ್ಮ. ಇರುವುದು ಒಂದೇ ಭಾಷೆ, ಅದು ಹೃದಯದ ಭಾಷೆ.” ಈ ಎರಡೂ ವಿಡಿಯೋಗಳಲ್ಲಿ ಅವರು ಸೇನೆ, ರಾಫೇಲ್ ಜೆಟ್‌ಗಳು, ಆಪರೇಷನ್ ಸಿಂಧೂರ್, ಪಾಕಿಸ್ತಾನ ಅಥವಾ ಯಾವುದೇ ಭದ್ರತೆಗೆ ಸಂಬಂಧಿಸಿದ ವಿಷಯವನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ.

ಇದಕ್ಕಿಂತ ಹೆಚ್ಚಾಗಿ, ಕಾರ್ಯಕ್ರಮ ಮತ್ತು ಐಶ್ವರ್ಯಾ ರೈ ಅವರ ಭಾಷಣವನ್ನು ಒಳಗೊಂಡಿರುವ ಸುದ್ದಿ ವರದಿಗಳನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಾವು ಕಂಡುಕೊಂಡಿದ್ದೇವೆ. ಈ ವರದಿಗಳಲ್ಲಿ ಯಾವುದೂ ಸಹ ವೈರಲ್ ಕ್ಲಿಪ್‌ನಲ್ಲಿ ಹೇಳಿರುವ ವಿಷಯಕ್ಕೆ ಹತ್ತಿರವಾದ ಅಂಶವನ್ನೂ ಎಲ್ಲಿಯೂ ಸಹ ಉಲ್ಲೇಖಿಸಿಲ್ಲ.

ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಐಶ್ವರ್ಯಾ ರೈ ಅವರ ಧ್ವನಿಯು ನೈಜ ಕಾರ್ಯಕ್ರಮದಲ್ಲಿನ ಅವರ ಒರಿಜಿನಲ್ ಧ್ವನಿಗಿಂತ ಬಹಳ ಭಿನ್ನವಾಗಿದೆ ಎಂದು ನಾವು ಗಮನಿಸಿದ್ದೇವೆ. ಕ್ಲಿಪ್‌ನ ಹಲವಾರು ಭಾಗಗಳಲ್ಲಿ ತುಟಿಯ ಚಲನೆಯು (lip movements) ಸಹ ಆಡಿಯೊಗೆ ಹೊಂದಿಕೆಯಾಗಲಿಲ್ಲ. ಇದನ್ನು ಪರಿಶೀಲಿಸಲು, ನಾವು Hiya Deepfake Detector ಅನ್ನು ಬಳಸಿ ವಿಡಿಯೋವನ್ನು ಪರಿಶೀಲಿಸಿದೆವು. ಈ ಡಿಟೆಕ್ಟರ್ ವೈರಲ್ ಕ್ಲಿಪ್‌ನಲ್ಲಿರುವ ಧ್ವನಿಯು AI-ಜನರೇಟೆಡ್ ಎಂದು ದೃಢಪಡಿಸಿತು. ಹಾಗಾಗಿ ಈ ವಿಡಿಯೋ  ಡೀಪ್‌ಫೇಕ್ ಆಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.

ಕೊನೆಯದಾಗಿ ಹೇಳುವುದಾದರೆ, ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಅವರು ಆಪರೇಷನ್ ಸಿಂಧೂರ್ ಕುರಿತು ಪ್ರಧಾನಿ ಅವರನ್ನು ಎದುರಿಸಿ ಪ್ರಶ್ನಿಸಿದ್ದಾರೆ ಎಂದು ಹೇಳುವ ವಿಡಿಯೋ ಡೀಪ್‌ಫೇಕ್ ಆಗಿದೆ.

Share.

Comments are closed.

scroll