ದೊಡ್ಡ ಆನೆಗಳ ಹಿಂಡು ರಸ್ತೆಯನ್ನು ದಾಟುತ್ತಿರುವಾಗ ಜನರು ವೀಕ್ಷಿಸುತ್ತಿರುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ ಎಂದು ಕ್ಲೈಮ್ ಮಾಡಲಾಗುತ್ತಿದೆ. ಹಾಗಾದರೆ ಪೋಸ್ಟ್ ನಲ್ಲಿ ಮಾಡಿದ ಕ್ಲೇಮನ್ನು ಪರಿಶೀಲಿಸೋಣ.

ಕ್ಲೇಮ್: ಈ ವೈರಲ್ ವೀಡಿಯೊ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣಕ್ಕೆ ದೊಡ್ಡ ಆನೆ ಹಿಂಡು ಪ್ರವೇಶಿಸುತ್ತಿರುವುದನ್ನು ತೋರಿಸುತ್ತದೆ.
ಫ್ಯಾಕ್ಟ್: ಈ ವೀಡಿಯೊ ಸಕಲೇಶಪುರದ್ದಲ್ಲ. ಜಿಯೋ ಲೊಕೇಶನ್ ಮತ್ತು ಸುದ್ದಿ ವರದಿಗಳು ಇದು ಅಸ್ಸಾಂನ, ರಾಷ್ಟ್ರೀಯ ಹೆದ್ದಾರಿ 39 ಮತ್ತು ಮರಂಗಿ ಸರ್ಕಲ್ ಕಚೇರಿಯ ಸಮೀಪದ್ದು ಎಂದು ಖಚಿತಪಡಿಸಿವೆ. ಸಕಲೇಶಪುರ ಪಟ್ಟಣಕ್ಕೆ ದೊಡ್ಡ ಆನೆ ಹಿಂಡು ಪ್ರವೇಶಿಸಿದ ಕುರಿತು ಇತ್ತೀಚಿನ ವರದಿಗಳಿಲ್ಲ, ಮತ್ತು ವೈರಲ್ ವೀಡಿಯೊಗೆ ಕರ್ನಾಟಕದೊಂದಿಗೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಈ ಕ್ಲೇಮ್ ಸುಳ್ಳು.
ಕ್ಲಿಪ್‌ನ ಮೂಲವನ್ನು ಪರಿಶೀಲಿಸಲು, ನಾವು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಈ ಹುಡುಕಾಟವು ನಮ್ಮನ್ನು News18 Assamese & North East ವರದಿಯಲ್ಲಿ ತೋರಿಸಲಾದ ಅದೇ ವೀಡಿಯೊಗೆ ಕರೆದೊಯ್ಯಿತು. ಈ ವರದಿಯು ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ದಟ್ಟವಾದ ಕಾಡುಗಳಿಂದ ಸುತ್ತುವರೆದಿರುವ ನುಮಾಲಿಗಢದಲ್ಲಿ ನಡೆದ ಆನೆಗಳ ದಾಳಿಯ ಬಗ್ಗೆ ಚರ್ಚಿಸುತ್ತದೆ. ಆ ವರದಿಯ ಒಂದು ಕ್ಲಿಪ್ ವೈರಲ್ ವೀಡಿಯೊಗೆ ಹೊಂದಿಕೆಯಾಗುತ್ತದೆ.

ಹೆಚ್ಚಿನ ಪರಿಶೀಲನೆಯಲ್ಲಿ, ನಾವು ಯೂಟ್ಯೂಬ್‌ನಲ್ಲಿ ವೈರಲ್ ಕ್ಲಿಪ್‌ನ ಬಹು ಎಕ್ಸ್ಟೆಂಡೆಡ್ ವರ್ಷನ್ (ಇಲ್ಲಿ ಮತ್ತು ಇಲ್ಲಿ) ಕಂಡುಕೊಂಡಿದ್ದೇವೆ. ಈ ವೀಡಿಯೊಗಳು ಅದೇ ಘಟನೆಯನ್ನು ವಿವಿಧ ಕೋನಗಳಿಂದ ತೋರಿಸುತ್ತವೆ. ಅವುಗಳಲ್ಲಿ ಒಂದಕ್ಕೆ “ಅಸ್ಸಾಂನ ಮರಂಗಿ ಸರ್ಕಲ್ ಕಚೇರಿ ಬಳಿ ರಾಷ್ಟ್ರೀಯ ಹೆದ್ದಾರಿ 39ನ್ನು ದಾಟುತ್ತಿರುವ ದೊಡ್ಡ ಕಾಡಾನೆ ಹಿಂಡು” ( ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ) ಎಂದು ಕ್ಯಾಪ್ಶನ್ ನೀಡಲಾಗಿದ್ದು, ಇದು ನಿಖರವಾದ ಸ್ಥಳವನ್ನು ಗುರುತಿಸಲು ಸಹಾಯ ಮಾಡುತ್ತದೆ.
ಯೂಟ್ಯೂಬ್ ವೀಡಿಯೊದಲ್ಲಿ ಗುರುತಿಸಲಾದ ಮರಂಗಿ ಸರ್ಕಲ್ ಕಚೇರಿ ಸಮೀಪದ ರಾಷ್ಟ್ರೀಯ ಹೆದ್ದಾರಿ 39ರ ಪ್ರದೇಶದ ಭೌಗೋಳಿಕ ಸ್ಥಳ ನಿರ್ಧಾರವನ್ನು (Geolocating) ಮಾಡಿದಾಗ, ವೈರಲ್ ವೀಡಿಯೊದಲ್ಲಿ ಕಾಣುವ ಅಂಗಡಿಗಳು ಮತ್ತು ಕಟ್ಟಡಗಳು ಆ ಸ್ಥಳಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತವೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಅಕ್ಕಪಕ್ಕದ ಹೋಲಿಕೆಯು ವೈರಲ್ ವೀಡಿಯೊ ಕರ್ನಾಟಕದ್ದಲ್ಲ, ಅಸ್ಸಾಂನದ್ದು ಎಂದು ಸ್ಪಷ್ಟವಾಗಿ ದೃಢಪಡಿಸುತ್ತದೆ.

ಜೊತೆಗೆ, ನಾವು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಇತ್ತೀಚೆಗೆ ನಡೆದ ಆನೆ ಸಂಬಂಧಿತ ಘಟನೆಗಳ ಬಗ್ಗೆ ಪರಿಶೀಲಿಸಿದ್ದೇವೆ. ಸಕಲೇಶಪುರದ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳು ಮತ್ತು ಕಾಫಿ ತೋಟಗಳ ಭಾಗಗಳಿಗೆ ಆನೆಗಳು ಬರುವುದು ನಿಜವಾದರೂ (ಇಲ್ಲಿ ಮತ್ತು ಇಲ್ಲಿ), ಇತ್ತೀಚೆಗೆ ದೊಡ್ಡ ಹಿಂಡು ಪಟ್ಟಣಕ್ಕೆ ಪ್ರವೇಶಿಸಿದ ಯಾವುದೇ ನಿದರ್ಶನದ ಕುರಿತು ವರದಿಗಳಿಲ್ಲ. ವೈರಲ್ ಕ್ಲಿಪ್ ಅನ್ನು ಸಕಲೇಶಪುರಕ್ಕೆ ಲಿಂಕ್ ಮಾಡಲಾಗಿದ್ದು, ಈ ಕುರಿತಾದ ಯಾವುದೇ ವಿಶ್ವಾಸಾರ್ಹ ಸಾಕ್ಷ್ಯಗಳಿಲ್ಲ.
ಕೊನೆಯದಾಗಿ ಹೇಳುವುದಾದರೆ, ಅಸ್ಸಾಂನಲ್ಲಿ ರಸ್ತೆಯನ್ನು ದಾಟುತ್ತಿರುವ ಆನೆ ಹಿಂಡಿನ ವೀಡಿಯೊವನ್ನು ಸಕಲೇಶಪುರ ದೃಶ್ಯಗಳೆಂದು ಸುಳ್ಳಾಗಿ ಹಂಚಿಕೊಳ್ಳಲಾಗುತ್ತಿದೆ.

