Fake News - Kannada
 

ಮಧ್ಯಪ್ರದೇಶದಲ್ಲಿ ಇತ್ತೀಚೆಗೆ 3.35 ಲಕ್ಷ ಟನ್ ಚಿನ್ನ ಪತ್ತೆಯಾಗಿದೆ ಎಂಬ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ

0

‘ಮಧ್ಯಪ್ರದೇಶದಲ್ಲಿ 3.35 ಲಕ್ಷ ಟನ್ ಚಿನ್ನದ ಅದಿರಿನ ನಿಕ್ಷೇಪ ಪತ್ತೆಯಾಗಿದೆ. ಇದು ಭಾರತದ ಆರ್ಥಿಕತೆ ಮತ್ತು ಜಗತ್ತಿನಲ್ಲಿ ನಮ್ಮ ಸ್ಥಾನಕ್ಕೆ ಒಂದು ಮಹತ್ವದ ತಿರುವು ಆಗಬಹುದು!’ ಎಂದು ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ, ಇಲ್ಲಿ, ಇಲ್ಲಿ) ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ಈ ಹೇಳಿಕೆಗೆ ಇಂಬು ನೀಡುವಂತೆ ಚಿನ್ನದ ಗಣಿಯಿಂದ ಕೆಲವು ಕಾರ್ಮಿಕರು ಮತ್ತು ಅಧಿಕಾರಿಗಳು ಪತ್ತೆಯಾದ ಚಿನ್ನವನ್ನು ಪರಿಶೀಲಿಸುತ್ತಿರುವ ಫೋಟೋವನ್ನು ಸಹ ಹಂಚಿಕೊಳ್ಳಲಾಗುತ್ತಿದೆ. ಅದೇ ರೀತಿ, ಮಧ್ಯಪ್ರದೇಶದ ಜಬಲ್ಪುರದ ಸಿರೋಹಾದಲ್ಲಿ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ನಡೆಸಿದ ಸಮೀಕ್ಷೆಯಲ್ಲಿ ಭೂವಿಜ್ಞಾನಿಗಳು 100 ಹೆಕ್ಟೇರ್ ಭೂಮಿಯಲ್ಲಿ ಚಿನ್ನದ ನಿಕ್ಷೇಪವನ್ನು ಕಂಡುಕೊಂಡಿದ್ದಾರೆ ಎಂದು ಹೇಳುವ ಆರ್ಟಿಕಲ್ ಅನ್ನು ಮಾಧ್ಯಮಗಳು ಪ್ರಕಟಿಸಿವೆ (ಇಲ್ಲಿ). ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಇತ್ತೀಚೆಗೆ ಮಧ್ಯಪ್ರದೇಶದಲ್ಲಿ 3.35 ಲಕ್ಷ ಟನ್ ಚಿನ್ನದ ಗಣಿ ಪತ್ತೆಯಾಗಿದೆ.

ಫ್ಯಾಕ್ಟ್: ಮಧ್ಯಪ್ರದೇಶದ ಜಬಲ್ಪುರದಲ್ಲಿ ತೆಗೆದ ಮಾದರಿಯಲ್ಲಿ ಚಿನ್ನದ ಪುರಾವೆಗಳು ಕಂಡುಬಂದಿದ್ದು, ಪ್ರಸ್ತುತ ಸಂಶೋಧನೆ ನಡೆಯುತ್ತಿದೆ ಎಂದು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI) ಮಹಾನಿರ್ದೇಶಕ ಅಸಿತ್ ಸಹಾ ಮಾಧ್ಯಮಗಳಿಗೆ ತಿಳಿಸಿದರು. ಅಲ್ಲಿ ದೊಡ್ಡ ಚಿನ್ನದ ಗಣಿ ಇದೆಯೋ ಇಲ್ಲವೋ ಎಂದು ಹೇಳಲು ಇನ್ನೂ ಸಾಧ್ಯವಿಲ್ಲ ಮತ್ತು ಪ್ರಸ್ತುತ ಸಂಶೋಧನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ದಾರಿತಪ್ಪಿಸುವಂತಿದೆ.

ಈ ಕ್ಲೇಮ್ ನ ಹಿಂದಿನ ಸತ್ಯವನ್ನು ಕಂಡುಹಿಡಿಯಲು, ನಾವು ಸೂಕ್ತವಾದ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ನಲ್ಲಿ ಹುಡುಕಿದ್ದೇವೆ.  ಭಾರತದ ಭೂವೈಜ್ಞಾನಿಕ ಸಮೀಕ್ಷೆ ಮಹಾನಿರ್ದೇಶಕ ಅಸಿತ್ ಸಹಾ ಅವರು ಆಗಸ್ಟ್ 7, 2025 ರಂದು ಮಾಧ್ಯಮಗಳೊಂದಿಗೆ ಮಾತನಾಡಿದರು (ಇಲ್ಲಿ, ಇಲ್ಲಿ, ಇಲ್ಲಿ). 

ಈ ಸುದ್ದಿ ವರದಿಗಳ ಪ್ರಕಾರ, ಮಧ್ಯಪ್ರದೇಶದ ಜಬಲ್ಪುರದ ಸಿರೋಹಾ ಬಳಿ ಬೃಹತ್ ಚಿನ್ನದ ನಿಕ್ಷೇಪಗಳು ಪತ್ತೆಯಾಗಿವೆ ಎಂಬ ಮಾಹಿತಿಯಲ್ಲಿ ಎಷ್ಟು ಸತ್ಯವಿದೆ ಎಂದು ಮಾಧ್ಯಮದವರು ಅಸಿತ್ ಸಹಾನಿ ಅವರನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಅಲ್ಲಿ ತೆಗೆದ ಮಾದರಿಯ ಪ್ರಾಥಮಿಕ ವಿಶ್ಲೇಷಣೆಯು ಅಲ್ಲಿ ಚಿನ್ನ ಇರಬಹುದು ಎಂದು ತೋರಿಸಿದೆ ಎಂದು ಅವರು ಹೇಳಿದರು. ‘etvbharat’ ಪ್ರಕಟಿಸಿದ ಸುದ್ದಿ ಲೇಖನದಲ್ಲಿ ಅವರು ಮಾಧ್ಯಮಗಳಿಗೆ ಈ ವಿಷಯಗಳನ್ನು ಹೇಳುವ ವೀಡಿಯೊವನ್ನು ನಾವು ನೋಡಬಹುದು.

ಆದರೆ, ಅಲ್ಲಿ ಚಿನ್ನದ ಗಣಿ ಇದೆಯೋ ಇಲ್ಲವೋ ಎಂದು ಈಗಲೇ ಹೇಳಲು ಸಾಧ್ಯವಿಲ್ಲ,  ಸಂಶೋಧನೆಯ ನಂತರವೇ ಅದನ್ನು ತಿಳಿದುಕೊಳ್ಳಲು ಸಾಧ್ಯ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು. ಸಂಶೋಧನೆಯಲ್ಲಿ ಬಹಿರಂಗವಾಗಿರುವ 100 ಹೆಕ್ಟೇರ್ ಭೂಮಿಯಲ್ಲಿ ಚಿನ್ನದ ಗಣಿ ಇರಬಹುದು ಎಂಬ ವದಂತಿಯ ಬಗ್ಗೆ ಮಾತನಾಡಿದ ಅವರು, ಈಗ  ಏನನ್ನು ಹೇಳಲು ಸಾಧ್ಯವಿಲ್ಲ,  ದೀರ್ಘಾವಧಿಯ ಸಂಶೋಧನೆಯ ನಂತರವೇ ಅದು ತಿಳಿಯುತ್ತದೆ ಎಂದು ಹೇಳಿದ್ದಾರೆ . ಇದರರ್ಥ ವೈರಲ್ ಆಗಿರುವ ಕ್ಲೇಮ್ ನಲ್ಲಿ ಯಾವುದೇ ಸತ್ಯವಿಲ್ಲ ಎಂದು ತಿಳಿದು ಬಂದಿದೆ. 

ಆಗಸ್ಟ್ 7, 2025 ರಂದು ಜಬಲ್ಪುರದಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಅಸಿತ್ ಸಹಾ ಮಾಧ್ಯಮಗಳಿಗೆ ತಿಳಿಸಿದರು.

ಹೆಚ್ಚುವರಿಯಾಗಿ, ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೋವನ್ನು ಕೃತಕ ಬುದ್ಧಿಮತ್ತೆಯನ್ನು ಬಳಸಿ ರಚಿಸಲಾಗಿದೆ ಎಂದು AI ಪತ್ತೆ ಪರಿಕರಗಳು ಬಹಿರಂಗಪಡಿಸಿವೆ.

ಕೊನೆಯದಾಗಿ ಹೇಳುವುದಾದರೆ, ಮಧ್ಯಪ್ರದೇಶದಲ್ಲಿ ಇತ್ತೀಚೆಗೆ 3.35 ಲಕ್ಷ ಟನ್ ಚಿನ್ನ ಪತ್ತೆಯಾಗಿದೆ ಎಂಬ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ಅಲ್ಲಿ ತೆಗೆದ ಮಾದರಿಯ ಪ್ರಾಥಮಿಕ ವಿಶ್ಲೇಷಣೆಯು ಚಿನ್ನ ಇರಬಹುದು ಎಂದು ಸೂಚಿಸಿದೆ ಎಂದು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಸ್ಪಷ್ಟಪಡಿಸಿದ್ದು, ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

Share.

Comments are closed.

scroll