Fake News - Kannada
 

ವಿಡಿಯೋದಲ್ಲಿ ಬೆಂಕಿ ಹಚ್ಚಿಕೊಂಡ ವ್ಯಕ್ತಿ ಮಂಗೋಲಿಯನ್ ಕಲ್ಲಿದ್ದಲು ಗಣಿ ಒಕ್ಕೂಟದ ಹೋರಾಟಗಾರರೆ ಹೊರತು, ಮಂಗೋಲಿಯನ್ ಮಂತ್ರಿ ಅಲ್ಲ

0

ಮಂಗೋಲಿಯನ್ ಮಂತ್ರಿಯೊಬ್ಬರು ಪತ್ರಿಕಾಗೋಷ್ಠಿಯಲ್ಲಿ ಬೆಂಕಿ ಹಚ್ಚಿಕೊಂಡ ದೃಶ್ಯಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಒಂದು ವರ್ಷದಲ್ಲಿ ಕಡಿಮೆ ಆದಾಯದ ಒಂದು ಲಕ್ಷ ಯೂನಿಟ್ ಮನೆಗಳನ್ನು ನಿರ್ಮಿಸುವ ತನ್ನ ಭರವಸೆಯನ್ನು ಉಳಿಸಿಕೊಳ್ಳಲು ವಿಫಲವಾದ ನಂತರ ಮಂಗೋಲಿಯಾದಲ್ಲಿ ಲೋಕೋಪಯೋಗಿ ಸಚಿವರು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಪೋಸ್ಟ್ ನಲ್ಲಿ ಹೇಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಕಡಿಮೆ ಆದಾಯದ ಒಂದು ಲಕ್ಷ ಯೂನಿಟ್ ಮನೆಗಳನ್ನು ನಿರ್ಮಿಸುವ ಭರವಸೆಯನ್ನು ಉಳಿಸಿಕೊಳ್ಳಲು ವಿಫಲವಾದ ನಂತರ ಮಂಗೋಲಿಯನ್ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಬೆಂಕಿ ಹಚ್ಚಿಕೊಂಡ ವಿಡಿಯೋ.

ನಿಜಾಂಶ: ವೀಡಿಯೋದಲ್ಲಿ ಬೆಂಕಿ ಹಚ್ಚಿಕೊಂಡ ವ್ಯಕ್ತಿ ಮಂಗೋಲಿಯಾದ ಕಲ್ಲಿದ್ದಲು ಗಣಿ ಒಕ್ಕೂಟದ ನಾಯಕರೇ (ಟ್ರೇಡ್ ಯೂನಿಯನ್) ಹೊರತು ಮಂಗೋಲಿಯನ್ ಲೋಕೋಪಯೋಗಿ ಸಚಿವರಲ್ಲ. ಮಂಗೋಲಿಯಾದ ಕಲ್ಲಿದ್ದಲು ಗಣಿಗಳನ್ನು ಚೀನಾಕ್ಕೆ ಮಾರಾಟ ಮಾಡುವುದನ್ನು ಪ್ರತಿಭಟಿಸಿ, ಒಕ್ಕೂಟದ ನಾಯಕ ಪತ್ರಿಕಾಗೋಷ್ಠಿಯಲ್ಲಿ ಬೆಂಕಿ ಹಚ್ಚಿಕೊಂಡಿದ್ದರು. ಈ ಘಟನೆಯು ನವೆಂಬರ್ 2015 ರಲ್ಲಿ ನಡೆದಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೋದಲ್ಲಿನ ಸ್ಕ್ರೀನ್‌ಶಾಟ್‌ ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಲಕ ಹುಡುಕಿದಾಗ 16 ನವೆಂಬರ್ 2015 ರಂದು ‘ದಿ ಡೈಲಿ ಮೇಲ್’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊ ಕಂಡುಬಂದಿದೆ. ಈ ಲೇಖನವು ಮಂಗೋಲಿಯನ್ ಕಲ್ಲಿದ್ದಲು ಗಣಿಗಾರಿಕೆ ಒಕ್ಕೂಟದ ನಾಯಕನು ತನ್ನನ್ನು ತಾನೇ ದಹಿಸಿಕೊಳ್ಳುವ ದೃಶ್ಯಗಳು ಎಂದು ವರದಿ ಮಾಡಿದೆ. ಮಂಗೋಲಿಯಾದ ಉಲಾನ್‌ಬಾಟರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೆಂಕಿ ಹಂಚಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.

ಘಟನೆ ಕುರಿತು ಹೆಚ್ಚಿನ ವಿವರಗಳಿಗಾಗಿ ಕೀ ವರ್ಡ್ ಬಳಸಿಕೊಂಡು ಸರ್ಚ್ ಮಾಡಿದಾಗ, ಪತ್ರಿಕಾಗೋಷ್ಠಿಯಲ್ಲಿ ಬೆಂಕಿ ಹಚ್ಚಿಕೊಂಡ ವ್ಯಕ್ತಿ ಮಂಗೋಲಿಯಾದ “ಮಂಗೋಲಿಯನ್ ಸಾಲಿಡಾರಿಟಿ ಲೇಬರ್ ಯೂನಿಯನ್ ಮಂಡಳಿಯ” ಅಧ್ಯಕ್ಷ ಎಸ್. ಎರ್ಡೆನ್ ಎಂದು ತಿಳಿದುಬಂದಿದೆ. ಮಂಗೋಲಿಯಾದ ಕಲ್ಲಿದ್ದಲು ಗಣಿಗಾರಿಕೆಯನ್ನು ಚೀನಾ ಸ್ವಾಧೀನಪಡಿಸಿಕೊಂಡಿರುವುದನ್ನು ಪ್ರತಿಭಟಿಸಿ ಯೂನಿಯನ್ ನಾಯಕ ಸ್ವಯಂ ಬೆಂಕಿ ಹಚ್ಚಿಕೊಂಡಿದ್ದರು. ಅವರು ಬೆಂಕಿ ಹಚ್ಚಿಕೊಳ್ಳುವ ಮೊದಲು ವರದಿಯ ಪ್ರಕಾರ, “ಸರ್ಕಾರವು ಇನ್ನು ಮುಂದೆ ನಮ್ಮ ಕಂಪನಿಯನ್ನು ಬೆಂಬಲಿಸುವುದಿಲ್ಲ, ಕಾರ್ಮಿಕರ ಕುಟುಂಬಗಳು ಹಸಿವಿನಿಂದ ಬಳಲುತ್ತಿದ್ದಾರೆ. ಇದಕ್ಕಾಗಿಯೇ ನಾನು ಮಂಗೋಲಿಯಾದ ಜನರು ಮತ್ತು ನಮ್ಮ ಮಕ್ಕಳಿಗಾಗಿ ನನ್ನನ್ನು ಸುಟ್ಟುಕೊಳ್ಳುತ್ತೇನೆ” ಎಂದು ಎರ್ಡೆನ್ ಹೇಳಿದ್ದಾರೆ. ಅವರು ಗಂಭೀರವಾದ ಸುಟ್ಟಗಾಯಗಳಿಂದ ಬಳಲುತ್ತಿದ್ದರು ಮತ್ತು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಘಟನೆಯ ವಿವರಗಳನ್ನು ವರದಿ ಮಾಡುತ್ತಾ, ಹಲವು ಇತರ ಸುದ್ದಿ ವೆಬ್‌ಸೈಟ್‌ಗಳು 2015 ರಲ್ಲಿ ಲೇಖನಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಇತ್ತೀಚೆಗೆ, ದೇಶದಲ್ಲಿ ಬಡವರಿಗೆ ಕಡಿಮೆ ಆದಾಯದ ಮನೆಗಳನ್ನು ನಿರ್ಮಿಸುವ ಭರವಸೆಯನ್ನು ಉಳಿಸಿಕೊಳ್ಳಲು ವಿಫಲವಾದ ಮಂಗೋಲಿಯನ್ ಮಂತ್ರಿಯೊಬ್ಬರು ಸ್ವತಃ ಬೆಂಕಿ ಹಚ್ಚಿಕೊಂಡ ಸುದ್ದಿ ಎಂಬ ಯಾವ  ವರದಿಗಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಮಂಗೋಲಿಯನ್ ಕಲ್ಲಿದ್ದಲು ಗಣಿ ಒಕ್ಕೂಟದ ನಾಯಕರೊಬ್ಬರು ಸ್ವತಃ ಬೆಂಕಿ ಹಚ್ಚಿಕೊಳ್ಳುವ 2015 ರ ವೀಡಿಯೊವನ್ನು ಮಂಗೋಲಿಯನ್ ಮಂತ್ರಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll