Fake News - Kannada
 

ಮಧ್ಯಪ್ರದೇಶದಲ್ಲಿ ಯುವಕನೊಬ್ಬ ತನ್ನ ಗೆಳತಿಯ ಮೇಲೆ ಹಲ್ಲೆ ನಡೆಸುತ್ತಿರುವ ಹಳೆಯ ವೀಡಿಯೊವನ್ನು ಈಗ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

0

ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದ್ದು,  ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಗೆಳತಿಯ ಮೇಲೆ ಕ್ರೂರವಾಗಿ ಹಲ್ಲೆ ಮಾಡುತ್ತಿರುವ ದೃಶ್ಯಗಳೆಂದು ಹೇಳಲಾಗುತ್ತಿದೆ. ಈ ವಿಡಿಯೋದಲ್ಲಿ ಯುವಕನೊಬ್ಬ ಹೊಲದಲ್ಲಿ ಹುಡುಗಿಯನ್ನು ಹೊಡೆದು ಒದೆಯುತ್ತಿರುವುದನ್ನು ತೋರಿಸಲಾಗಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಪೋಸ್ಟ್, ಹಿಂದೂ ಹುಡುಗಿಯರು ಮುಸ್ಲಿಂರನ್ನು ಪ್ರೀತಿಸಬಾರದು ಎಂದು ಎಚ್ಚರಿಸಿದೆ. ಹಾಗಾದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು  ಪರಿಶೀಲಿಸೋಣ.

ಕ್ಲೇಮ್: ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಗೆಳತಿಯ ಮೇಲೆ ಹೊಲದಲ್ಲಿ ಕ್ರೂರವಾಗಿ ಹಲ್ಲೆ ಮಾಡುತ್ತಿರುವ ವಿಡಿಯೋ.

ಫ್ಯಾಕ್ಟ್: ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಮಧ್ಯಪ್ರದೇಶದಲ್ಲಿ ಪಂಕಜ್ ತ್ರಿಪಾಠಿ ಎಂಬ ಯುವಕ ತನ್ನ ಗೆಳತಿಯ ಮೇಲೆ ಕ್ರೂರವಾಗಿ ಹಲ್ಲೆ ಮಾಡಿರುವ ಹಳೆಯ ಘಟನೆಯನ್ನು ತೋರಿಸುತ್ತದೆ. ಪಂಕಜ್ ತ್ರಿಪಾಠಿ ತನ್ನ ಗೆಳತಿಯನ್ನು ಮದುವೆಯಾಗಲು ಪದೇ ಪದೇ ಒತ್ತಾಯಿಸಿದ್ದಕ್ಕಾಗಿ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಯಾವುದೇ ಕೋಮು ಆಯಾಮವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್  ಸುಳ್ಳು.

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಹುಡುಕಿದಾಗ, ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ವೀಡಿಯೊ ಕಂಡುಬಂದಿದೆ. ಇದನ್ನು ಡಿಸೆಂಬರ್ 24, 2022 ರಂದು ‘ಟೈಮ್ಸ್ ನೌ’ ಪ್ರಕಟಿಸಿದೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಯುವಕನೊಬ್ಬ ತನ್ನ ಗೆಳತಿಯನ್ನು ಕ್ರೂರವಾಗಿ ಕಪಾಳಮೋಕ್ಷ ಮಾಡಿ ಒದೆಯುತ್ತಿರುವ ದೃಶ್ಯಗಳು ಎಂದು ‘ಟೈಮ್ಸ್ ನೌ’ ವರದಿ ಮಾಡಿದೆ. ಡಿಸೆಂಬರ್ 2022 ರಲ್ಲಿ ನಡೆದ ಘಟನೆಗೆ ಸಂಬಂಧಿಸಿದ ಲೇಖನಗಳು ಮತ್ತು ವೀಡಿಯೊಗಳನ್ನು ಹಲವಾರು ಸುದ್ದಿ ವೆಬ್‌ಸೈಟ್‌ಗಳು ಪ್ರಕಟಿಸಿವೆ. ಈ ಎಲ್ಲಾ ಸುದ್ದಿ ಸಂಸ್ಥೆಗಳು ಆರೋಪಿಯ ಹೆಸರನ್ನು ರೇವಾ ಜಿಲ್ಲೆಯ ಧೇರಾ ಗ್ರಾಮದ ಪಂಕಜ್ ತ್ರಿಪಾಠಿ ಎಂದು ವರದಿ ಮಾಡಿವೆ.

ಘಟನೆಯ ಕುರಿತು ಮಾತನಾಡಿದ ರೇವಾದ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ನವೀನ್ ತಿವಾರಿ, “ಮೌಗಂಜ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ, ಧೇರಾದಲ್ಲಿರುವ ತನ್ನ ಊರಿಗೆ ಹೋಗುತ್ತಿದ್ದಾಗ ಉಂಟಾದ ಜಗಳದಿಂದಾಗಿ ಆರೋಪಿ ಪಂಕಜ್ ತ್ರಿಪಾಠಿ ಅವರನ್ನು ಥಳಿಸಿದ್ದಕ್ಕಾಗಿ ಬಂಧಿಸಲಾಗಿದೆ” ಎಂದು ಹೇಳಿದರು. ವರದಿಗಳ ಪ್ರಕಾರ, ಪೀಡಿತ ಮತ್ತು ಆರೋಪಿ ಸಂಬಂಧದಲ್ಲಿದ್ದರು ಮತ್ತು ಪೀಡಿತ  ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ ನಂತರ ಜಗಳ ನಡೆದಿದೆ. ರೇವಾ ಎಸ್‌ಪಿ ಕೂಡ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಪ್ರಕಟಿಸಿದ್ದಾರೆ. 

ಮಧ್ಯಪ್ರದೇಶದ ಮುಖ್ಯಮಂತ್ರಿ ಕಚೇರಿಯು 25 ಡಿಸೆಂಬರ್ 2022 ರಂದು ಘಟನೆಗೆ ಸಂಬಂಧಿಸಿದ ಟ್ವೀಟ್ ಅನ್ನು ಪ್ರಕಟಿಸಿತು. ಮುಖ್ಯಮಂತ್ರಿ ಕಚೇರಿಯು ಟ್ವೀಟ್ ಮೂಲಕ ಸಾರ್ವಜನಿಕರಿಗೆ ಆರೋಪಿ ಪಂಕಜ್ ತ್ರಿಪಾಠಿಯನ್ನು ಬಂಧಿಸಲಾಗಿದೆ ಮತ್ತು ಅವರು ಅಕ್ರಮವಾಗಿ ನಿರ್ಮಿಸಲಾದ ಮನೆಯನ್ನು ಅಧಿಕಾರಿಗಳು ಕೆಡವಿದ್ದಾರೆ ಎಂದು ತಿಳಿಸಿದೆ. ರೇವಾ ಕಲೆಕ್ಟರ್ ಕಚೇರಿಯು ಆರೋಪಿ ಪಂಕಜ್ ತ್ರಿಪಾಠಿ ಅವರ ಮನೆಯನ್ನು ಕೆಡವುವ ವೀಡಿಯೊವನ್ನು ಟ್ವೀಟ್ ಮಾಡಿದೆ. ರೇವಾ ಕಲೆಕ್ಟರ್ ಕಚೇರಿಯು ಟ್ವೀಟ್‌ನಲ್ಲಿ ಆರೋಪಿ ಪಂಕಜ್ ತ್ರಿಪಾಠಿ ಅವರ ತಂದೆಯ ಹೆಸರನ್ನು ಕನ್ಹಯ್ಯಾ ಲಾಲ್ ತ್ರಿಪಾಠಿ ಎಂದು ಉಲ್ಲೇಖಿಸಿದೆ. ಆದರೆ ಈ ಪ್ರಕರಣದ ಎಫ್‌ಐಆರ್ ಮಧ್ಯಪ್ರದೇಶ ಪೊಲೀಸ್ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ. ಎಫ್‌ಐಆರ್ ಮಧ್ಯಪ್ರದೇಶ ವೆಬ್‌ಸೈಟ್‌ನಲ್ಲಿ ಲಭ್ಯವಾದ ನಂತರ ನಾವು ಲೇಖನವನ್ನು ಅಪ್ಡೇಟ್ ಮಾಡುತ್ತೇವೆ. 

ಒಟ್ಟಾರೆಯಾಗಿ ಹೇಳುವುದಾದರೆ, ಮಧ್ಯಪ್ರದೇಶದಲ್ಲಿ ಯುವಕನೊಬ್ಬ ತನ್ನ ಗೆಳತಿಯ ಮೇಲೆ ಹಲ್ಲೆ ಮಾಡುತ್ತಿರುವ ಹಳೆಯ ವೀಡಿಯೊವನ್ನು ಈಗ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll