Fake News - Kannada
 

‘ದಿ ಕೇರಳ ಸ್ಟೋರಿ’ ಚಿತ್ರದ ಟೀಸರ್ ಅನ್ನು ನೈಜ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ಕೇರಳದ ಮಹಿಳೆಯೊಬ್ಬರು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಂಡು ನಂತರ ಐಸಿಸ್ ಭಯೋತ್ಪಾದಕ ಗುಂಪಿಗೆ ಸೇರಿದ್ದೇನೆ ಎಂದು ತನ್ನ ಹೃದಯ ವಿದ್ರಾವಕ ಕಥೆಯನ್ನು ವಿವರಿಸುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬರಿದ್ದು, ಅವರು, “ನನ್ನ ಹೆಸರು ಶಾಲಿನಿ ಉನ್ನಿಕೃಷ್ಣನ್. ನಾನು ನರ್ಸ್ ಆಗಿ ಈ ಜನರಿಗೆ ಸೇವೆ ಮಾಡಲು ಬಯಸಿದ್ದೆ. ಇಂದು ನಾನು ಫಾತಿಮಾ ಬಾ ಆಗಿದ್ದು, ಅಫ್ಘಾನಿಸ್ತಾನದ ಜೈಲಿನಲ್ಲಿರುವ ಐಸಿಸ್ ಭಯೋತ್ಪಾದಕಿ. ಇಲ್ಲಿ ನಾನೊಬ್ಬಳೇ ಅಲ್ಲ, ನನ್ನಂತೆಯೇ 32,000 ಹುಡುಗಿಯರು ಈಗಾಗಲೇ ಮತಾಂತರಗೊಂಡಿದ್ದು, ಸಿರಿಯಾ ಮತ್ತು ಯೆಮೆನ್ ಮರುಭೂಮಿಗಳಲ್ಲಿ ಸಮಾಧಿಯಾಗಿದ್ದಾರೆ. ಕೇರಳದಲ್ಲಿ ಸಾಮಾನ್ಯ ಹುಡುಗಿಯರನ್ನು ಭಯಂಕರ ಭಯೋತ್ಪಾದಕರನ್ನಾಗಿ ಪರಿವರ್ತಿಸುವ ಮಾರಣಾಂತಿಕ ಆಟವನ್ನು ಆಡಲಾಗುತ್ತಿದೆ. ಅದು ಕೂಡಾ ಬಹಿರಂಗವಾಗಿ ನಡೆಯುತ್ತಿದೆ. ಅವರನ್ನು ತಡೆಯಲು ಯಾರಾದರೂ ಇದ್ದಾರೆಯೇ? ಇದು ನನ್ನ ಕಥೆ. ಇದು ಆ 32,000 ಹುಡುಗಿಯರ ಕಥೆ. ಇದು ಕೇರಳದ ಕಥೆ” ಎಂದು ಹೇಳುತ್ತಾರೆ. ವಿಡಿಯೊದ ಜೊತೆಗೆ ಇರುವ ಪೋಸ್ಟ್‌‌ ಕೇರಳದ 32,000 ಹುಡುಗಿಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗುತ್ತಿದ್ದು, ಐಸಿಸ್ ಭಯೋತ್ಪಾದಕ ಗುಂಪಿಗೆ ಸೇರಲು ತೀವ್ರಗಾಮಿಗೊಳಿಸಲಾಗುತ್ತಿದೆ ಎಂದು ಹೇಳುತ್ತದೆ. ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಕೇರಳದ ಮಹಿಳೆಯೊಬ್ಬರು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಂಡು ಐಸಿಸ್ ಭಯೋತ್ಪಾದಕ ಗುಂಪಿಗೆ ಸೇರಿ ತಾನೂ ಭಯೋತ್ಪಾದಕಿಯಾದ ತನ್ನ ದುರಂತ ಕಥೆಯನ್ನು ವಿವರಿಸುವ ವೀಡಿಯೊ.

ವಾಸ್ತವ: ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮುಂಬರುವ ‘ದಿ ಕೇರಳ ಸ್ಟೋರಿ’ ಎಂಬ ಚಿತ್ರದ ಟೀಸರ್‌ನ ಕ್ಲಿಪ್  ಆಗಿದೆ. ಸುದೀಪ್ತೋ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ಚಲನಚಿತ್ರವು 32,000 ಕೇರಳದ ಮಹಿಳೆಯರನ್ನು ಯೆಮೆನ್ ಮತ್ತು ಸಿರಿಯಾದಲ್ಲಿ ಐಸಿಸ್ ಭಯೋತ್ಪಾದಕ ಗುಂಪುಗಳಿಗೆ ಸೇರಿರುವ ಬಗ್ಗೆ ಮಾತನಾಡುತ್ತದೆ. ವಿಡಿಯೋ ಕ್ಲಿಪ್‌ನಲ್ಲಿ ಬುರ್ಖಾ ಧರಿಸಿದ ಮಹಿಳೆಯ ಪಾತ್ರವನ್ನು ನಟಿ ಅದಾ ಶರ್ಮಾ ಅಭಿನಯಿಸಿದ್ದು, ಅವರು ತಮ್ಮ ಎಲ್ಲಾ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ವಾಸ್ತವದಲ್ಲಿ, ಈ ವಿಡಿಯೊ ಭಯೋತ್ಪಾದಕಿಯಾದ ಮಹಿಳೆಯದ್ದಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೋವನ್ನು ಕೂಲಂಕುಷವಾಗಿ ಗಮನಿಸಿದಾಗ, ವೀಡಿಯೊದ ಕೊನೆಯಲ್ಲಿ ‘ದಿ ಕೇರಳ ಸ್ಟೋರಿ’ ಎಂಬ ವಾಟರ್‌ಮಾರ್ಕ್ ಅನ್ನು ನೋಡಬಹುದು. ಈ ಬಗ್ಗೆ ನಾವು ಇಂಟರ್‌‌ನೆಟ್‌ನಲ್ಲಿ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ವೀಡಿಯೊವನ್ನು ಹುಡುಕಿದಾಗ, ಮುಂಬರುವ ಚಿತ್ರ ‘ದಿ ಕೇರಳ ಸ್ಟೋರಿ’ಯ ಇತ್ತೀಚೆಗೆ ಬಿಡುಗಡೆಯಾದ ಟೀಸರ್‌ನಲ್ಲಿ ಕೂಡಾ ನಮಗೆ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ. ಸನ್ ಶೈನ್ ಪಿಕ್ಚರ್ಸ್ ಈ ಟೀಸರ್ ಅನ್ನು ಪ್ರಕಟಿಸಿದ್ದು, ಇದು ಕೇರಳದ 32,000 ಸ್ತ್ರೀಯರ ಕಥೆಗಳ ಕುರಿತು ನಿರ್ಮಿಸಲಾದ ಚಲನಚಿತ್ರವಾಗಿದೆ ಎಂದು ಹೇಳಿದೆ.

ಚಲನಚಿತ್ರ ನಿರ್ಮಾಪಕರ ಪ್ರಕಾರ, ಸುದೀಪ್ತೋ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ 32,000 ಕೇರಳದ ಮಹಿಳೆಯರ ಕಥೆಯನ್ನು ಚಿತ್ರಿಸುತ್ತದೆ. ಈ ಮಹಿಳೆಯರು ಇಸ್ಲಾಂಗೆ ಮತಾಂತರಗೊಂಡು ಯೆಮೆನ್ ಮತ್ತು ಸಿರಿಯಾದಲ್ಲಿ ಐಸಿಸ್ ಭಯೋತ್ಪಾದಕ ಗುಂಪುಗಳನ್ನು ಸೇರಲು ಮೂಲಭೂತವಾದಿಗಳಾಗಿ ಪರಿವರ್ತನೆಯಾಗಿದ್ದಾರೆ ಎಂದು ಚಿತ್ರ ತಂಡವು ಪ್ರತಿಪಾದಿಸಿದೆ. ಟೀಸರ್‌ನಲ್ಲಿ ಬುರ್ಖಾ ಧರಿಸಿದ ಮಹಿಳೆಯ ಪಾತ್ರದಲ್ಲಿ ನಟಿಸಿರುವ ನಟಿ ಅದಾ ಶರ್ಮಾ ಅವರು ‘ದಿ ಕೇರಳ ಸ್ಟೋರಿ’ ಟೀಸರ್ ಅನ್ನು ತಮ್ಮ ಎಲ್ಲಾ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿದ್ದಾರೆ.

2022ರ ನವೆಂಬರ್  03ರಂದು ‘ದಿ ಕೇರಳ ಸ್ಟೋರಿ’ ಟೀಸರ್ ಬಿಡುಗಡೆಯಾಗಿದ್ದು, ನಂತರ ಸಾಮಾಜಿಕ ಮಾಧ್ಯಮದಲ್ಲಿ ವಿವಾದ ಉಂಟಾಗಿದೆ. ಕೆಲವು ಪತ್ರಕರ್ತರು ಮತ್ತು ಹಿಂದೂ ಕಾರ್ಯಕರ್ತರು ಟೀಸರ್ ಬಗ್ಗೆ ಪ್ರತಿಕ್ರಿಯಿಸಿದ್ದು, ಚಿತ್ರದ ಟೀಸರ್‌‌ ವಾಸ್ತವಿಕವಾಗಿ ತಪ್ಪಾಗಿದೆ ಎಂದು ಹೇಳಿದ್ದಾರೆ. ತಮಿಳುನಾಡು ಮೂಲದ ಪತ್ರಕರ್ತ ಅರವಿಂದಾಕ್ಷನ್ ಬಿಆರ್ ಅವರು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ಗೆ (ಸಿಬಿಎಫ್‌ಸಿ) ಅರ್ಜಿ ಸಲ್ಲಿಸಿದ್ದು, ಸಿನಿಮಾದಲ್ಲಿ ಮಾಡಲಾಗಿರುವ ಪ್ರತಿಪಾದನೆಗಳ ಸತ್ಯಾಸತ್ಯತೆಯನ್ನು ಚಿತ್ರ ನಿರ್ಮಾಪಕರು ದೃಢೀಕರಿಸದ ಹೊರತು ‘ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ನಿಷೇಧಿಸುವಂತೆ ಕೋರಿದ್ದಾರೆ. ‘ದಿ ಕೇರಳ ಸ್ಟೋರಿ’ ಚಿತ್ರದ ನಿರ್ಮಾಪಕರು ಮಾಡಿರುವ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಮಗ್ರ ತನಿಖೆ ನಡೆಸುವಂತೆ ಕೋರಿ ಅರವಿಂದಾಕ್ಷನ್ ಅವರು ಕೇರಳ ಸಿ.ಎಂ. ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ. ‘ದಿ ಕೇರಳ ಸ್ಟೋರಿ’ ಟೀಸರ್‌ಗೆ ಪ್ರತಿಕ್ರಿಯಿಸಿರುವ ಹಿಂದೂ ಕಾರ್ಯಕರ್ತ, ರಾಹುಲ್ ಈಶ್ವರ್ , “ಕೇರಳವು ರಾಜರ ಕಾಲ ಮತ್ತು ಸಮಾಜ ಸುಧಾರಕರ ಕಾಲದಿಂದ ಶಿಕ್ಷಣ, ಆರೋಗ್ಯ, ಮೂಲಸೌಕರ್ಯಗಳಲ್ಲಿ ಉತ್ತಮ ಪ್ರಗತಿಯನ್ನು ಹೊಂದಿರುವ ಭಾರತದ ಅತ್ಯುತ್ತಮ ರಾಜ್ಯಗಳಲ್ಲಿ ಒಂದಾಗಿದೆ. 100 ಜನರು ಕೇರಳದಿಂದ ISIS ಸೇರಿದ್ದಾರೆ. ಒಬ್ಬ ವ್ಯಕ್ತಿ ಕೂಡ ಭಯೋತ್ಪಾದನೆಗೆ ಸೇರುವುದು ಭಯಾನಕ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಆದರೆ 32,000 ಮಹಿಳೆಯರು ಎಂಬುವುದು ದೊಡ್ಡ ಸುಳ್ಳು” ಎಂದು ಟ್ವೀಟ್ ಮಾಡಿದ್ದಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ‘ದಿ ಕೇರಳ ಸ್ಟೋರಿ’ ಟೀಸರ್‌ನ ವೀಡಿಯೊ ಕ್ಲಿಪ್ ಅನ್ನು ಕೇರಳದ ಮಹಿಳೆಯೊಬ್ಬರು ಐಸಿಸ್‌ಗೆ ಬಲವಂತವಾಗಿ ಸೇರಿರುವ ಬಗ್ಗೆಗಿನ ತನ್ನ ಹೃದಯ ವಿದ್ರಾವಕ ಕಥೆಯನ್ನು ವಿವರಿಸುವ ದೃಶ್ಯಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

Comments are closed.

scroll