ದಕ್ಷಿಣ ಆಫ್ರಿಕಾದ ಮಹಿಳಾ ಕ್ರಿಕೆಟರ್ ತಾಜ್ಮಿನ್ ಬ್ರಿಟ್ಸ್ ಮಂಡಿಯೂರಿ, ಕಾಣದ ಬಿಲ್ಲು (ಅದೃಶ್ಯ ಬಿಲ್ಲು) ಬಳಸಿ ಬಾಣ ಬಿಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ (ಇಲ್ಲಿ). ಕೆಲವು ಬಳಕೆದಾರರು ಈ ವೀಡಿಯೊವನ್ನು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅವರು ಭಾರತಕ್ಕೆ ಬೆಂಬಲ ನೀಡಲು, ಶ್ರೀರಾಮನ ಅನುಕರಣೆ ಮಾಡಿದ್ದಾರೆ ಎಂದು ಹೇಳಿಕೊಂಡು ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ದಕ್ಷಿಣ ಆಫ್ರಿಕಾದ ಕ್ರಿಕೆಟರ್ ತಾಜ್ಮಿನ್ ಬ್ರಿಟ್ಸ್ ಅವರು ಪಾಕಿಸ್ತಾನದ ವಿರುದ್ಧದ ಕ್ರಿಕೆಟ್ ಪಂದ್ಯದ ಸಮಯದಲ್ಲಿ, ಭಾರತಕ್ಕೆ ಬೆಂಬಲ ನೀಡಲು, ಶ್ರೀರಾಮನ ಅನುಕರಣೆ ಮಾಡಿ ಗಾಳಿಯಲ್ಲಿ ಬಿಲ್ಲು ಬಿಡುವ ದೃಶ್ಯ ಈ ವೀಡಿಯೊದಲ್ಲಿದೆ.
ಫ್ಯಾಕ್ಟ್: ದಕ್ಷಿಣ ಆಫ್ರಿಕಾದ ಆಟಗಾರ್ತಿ ತಾಜ್ಮಿನ್ ಬ್ರಿಟ್ಸ್ ಈ ಸಂಭ್ರಮಾಚರಣೆಯನ್ನು ಪಾಕಿಸ್ತಾನದ ವಿರುದ್ಧವಲ್ಲ, ಬದಲಿಗೆ 2025 ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿದ ನಂತರ ಮಾಡಿದ್ದರು. ಇದು ಫುಟ್‌ಬಾಲ್ ಆಟಗಾರ ಮೊಹಮದ್ ಸಲಾಹ್ ಗೋಲು ಗಳಿಸಿದಾಗ ಮಾಡುವ ಸಂಭ್ರಮಾಚರಣೆಯಾಗಿದೆ. ಇಬ್ಬರು 13 ವರ್ಷದ ಹುಡುಗಿಯರ ಕೋರಿಕೆಯ ಮೇರೆಗೆ ಶತಕ ಗಳಿಸಿದ ನಂತರ ತಾಜ್ಮಿನ್ ಬ್ರಿಟ್ಸ್ ಅವರು ಈ ಸಂಭ್ರಮಾಚರಣೆಯನ್ನು ಮಾಡಿದ್ದಾಗಿ ಖಚಿತಪಡಿಸಿದ್ದಾರೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪುದಾರಿಗೆಳೆಯುವಂತಿದೆ.
ಈ ಕ್ಲೈಮ್ ಅನ್ನು ಪರಿಶೀಲಿಸಲು, ನಾವು ಕೆಲವು ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ನಲ್ಲಿ ಹುಡುಕಿದೆವು ಮತ್ತು ವೈರಲ್ ವೀಡಿಯೊದಲ್ಲಿ ಕಂಡುಬಂದ ದೃಶ್ಯಗಳಿಗೆ ಹೋಲುವ ಒಂದು ವೀಡಿಯೊ ಐಸಿಸಿ (ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಯ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಕಂಡುಬಂದಿತು.
ಈ ವೀಡಿಯೊದ ವಿವರಣೆಯು, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ (ಅಕ್ಟೋಬರ್ 6, 2025 ರ ವಿಶ್ವಕಪ್ ಪಂದ್ಯದಲ್ಲಿ) ಶತಕ ಗಳಿಸಿದ ನಂತರ ತಾಜ್ಮಿನ್ ಬ್ರಿಟ್ಸ್ ಈ ಭಂಗಿ ಮಾಡಿದ್ದಾರೆ ಎಂದು ತಿಳಿಸುತ್ತದೆ. ಇದೇ ವೀಡಿಯೊವನ್ನು ನಾವು ಸ್ಟಾರ್ ಸ್ಪೋರ್ಟ್ಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿಯೂ ಕಂಡುಕೊಂಡಿದ್ದೇವೆ. ಆಕೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಇದನ್ನು ಮಾಡಿದ್ದಾರೆ ಎಂಬ ವೈರಲ್ ಕ್ಲೈಮ್ ಅನ್ನು. ನಿರಾಕರಿಸುತ್ತದೆ. ಸದ್ಯ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಪಂದ್ಯವು ಇನ್ನೂ ನಡೆಯಬೇಕಿದೆ, ಅದು ಅಕ್ಟೋಬರ್ 21, 2025 ರಂದು ನಿಗದಿಯಾಗಿದೆ. ಹೆಚ್ಚುವರಿಯಾಗಿ, ಈ ಹಿಂದೆ ಪಾಕಿಸ್ತಾನದ ವಿರುದ್ಧದ ಯಾವುದೇ ಪಂದ್ಯದಲ್ಲಿ ಆಕೆ ಈ ರೀತಿಯ ಭಂಗಿಯನ್ನು ಪ್ರದರ್ಶಿಸಿದ ಬಗ್ಗೆ ನಮಗೆ ಯಾವುದೇ ಸುದ್ದಿ ವರದಿಗಳು ಸಿಕ್ಕಿಲ್ಲ.
ಇದಕ್ಕೆ ಹೆಚ್ಚುವರಿಯಾಗಿ, ಈ ಪಂದ್ಯದಲ್ಲಿ ತಾಜ್ಮಿನ್ ಬ್ರಿಟ್ಸ್ ಶತಕ ಗಳಿಸಿದ ನಂತರದ ಸಂಭ್ರಮಾಚರಣೆಯ ಕುರಿತು ಸ್ಪೋರ್ಟ್ಸ್‌ಸ್ಟಾರ್ ಪ್ರಕಟಿಸಿದ ಲೇಖನದಲ್ಲಿ, ಅವರು 13 ವರ್ಷದ ಇಬ್ಬರು ಹುಡುಗಿಯರ ಕೋರಿಕೆಯ ಮೇರೆಗೆ ಈ ರೀತಿಯಲ್ಲಿ ಸಂಭ್ರಮಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಈ ಲೇಖನದ ಪ್ರಕಾರ, ಆಕೆಗೆ ಸಿಗ್ನೇಚರ್ ಸ್ಟೈಲ್ ಸೆಲೆಬ್ರೇಶನ್ (ಬ್ಯಾಲೆರಿನಾ ಸೆಲೆಬ್ರೇಶನ್) ಇದೆ. ಇದಲ್ಲದೆ, ವಿಶ್ವಕಪ್ ಪಂದ್ಯದ ಮೊದಲು ನಡೆದ ಮಾಧ್ಯಮ ದಿನದಂದು, ಆಕೆಯ ಸಹ ಆಟಗಾರ್ತಿ ಸೈನಾಲೋ ಜಾಫ್ತಾ ಅವರು ಶತಕ ಗಳಿಸಿದರೆ ಯಾವ ಸಂಭ್ರಮಾಚರಣೆ ಮಾಡುತ್ತೀರಿ ಎಂದು ಕೇಳಿದಾಗ, ಆಕೆ ತಮ್ಮ ಅಭಿಮಾನಿಗಳಿಗೆ ಆಯ್ಕೆ ಮಾಡಲು ಕೇಳಿಕೊಂಡಿದ್ದರು. ಸ್ಪೋರ್ಟ್‌ಸ್ಟಾರ್ ಲೇಖನದ ಪ್ರಕಾರ, ಇಬ್ಬರು 13 ವರ್ಷದ ಹುಡುಗಿಯರು ಅದನ್ನು ಆಯ್ಕೆ ಮಾಡಿದರು, ಅದಕ್ಕಾಗಿಯೇ ಅವರು ಆ ರೀತಿ ಮಾಡಿದ್ದಾರೆ. ಈ ಬಗ್ಗೆ ಪ್ರಕಟವಾದ ಇತರ ಕೆಲವು ಸುದ್ದಿ ಲೇಖನಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸ್ಪೋರ್ಟ್‌ಸ್ಟಾರ್ ಲೇಖನವು ಈ ಸಂಭ್ರಮಾಚರಣೆಯನ್ನು ಮೊಹಮದ್ ಸಲಾಹ್ ಸಂಭ್ರಮಾಚರಣೆ ಎಂದು ಉಲ್ಲೇಖಿಸಿದೆ. ಹೆಚ್ಚಿನ ವಿವರಗಳಿಗಾಗಿ ನಾವು ಇಂಟರ್ನೆಟ್ ನಲ್ಲಿ ಹುಡುಕಿದಾಗ, ಮೊಹಮದ್ ಸಲಾಹ್ ಒಬ್ಬ ಈಜಿಪ್ಟಿನ ಫುಟ್‌ಬಾಲ್ ಆಟಗಾರ ಮತ್ತು ಅವರು ಫುಟ್‌ಬಾಲ್ ಪಂದ್ಯಗಳಲ್ಲಿ ಗೋಲು ಗಳಿಸಿದಾಗ (ಇಲ್ಲಿ, ಇಲ್ಲಿ, ಇಲ್ಲಿ) ಬಿಲ್ಲು-ಬಾಣದ ಸಂಭ್ರಮಾಚರಣೆಯನ್ನು (ಗಾಳಿಯಲ್ಲಿ ಬಾಣ ಎಸೆಯುವಂತೆ ನಟಿಸುವುದು) ಮಾಡುತ್ತಾರೆ ಎಂದು ತಿಳಿದುಬಂದಿದೆ. ಮೊಹಮದ್ ಸಲಾಹ್ ಅವರು ಪ್ರೀಮಿಯರ್ ಲೀಗ್‌ನಲ್ಲಿ ಲಿವರ್‌ಪೂಲ್ ತಂಡಕ್ಕಾಗಿ ಆಡುತ್ತಾರೆ.

ಯೂಟ್ಯೂಬ್ ಚಾನೆಲ್ ‘ಮೆನ್ ಇನ್ ಬ್ಲೇಜರ್ಸ್’ ಗೆ ನೀಡಿದ ಸಂದರ್ಶನದಲ್ಲಿ, ಮೊಹಮದ್ ಸಲಾಹ್ ಅವರು, ಯುಎಫ್‌ಸಿ (UFC – Ultimate Fighting Championship) ಫೈಟರ್ ಇಸ್ರೇಲ್ ಅಡೆಸನ್ಯಾ ಅವರು ಒಂದು ಪಂದ್ಯವನ್ನು ಗೆದ್ದ ನಂತರ ಇದೇ ಸಂಭ್ರಮಾಚರಣೆ ಮಾಡುವುದನ್ನು ನೋಡಿ, ತಾವೂ ಅದನ್ನು ಪಂದ್ಯದ ಸಮಯದಲ್ಲಿ ಮಾಡಿದ್ದಾಗಿ ಹೇಳಿದ್ದಾರೆ. ಮೊಹಮದ್ ಸಲಾಹ್ ಅವರು, ಕೆಲವರು ಇದನ್ನು ಈಜಿಪ್ಟಿನವರ ದೇವಾಲಯಗಳು ಅಥವಾ ಪಿರಮಿಡ್‌ಗಳ ಸಂಕೇತವೆಂದು ಸಹ ಅರ್ಥೈಸುತ್ತಾರೆ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರ್ತಿ ತಾಜ್ಮಿನ್ ಬ್ರಿಟ್ಸ್ ಅವರು 2025 ರ ಮಹಿಳಾ ಕ್ರಿಕೆಟ್ ವಿಶ್ವಕಪ್‌ನ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಸಮಯದಲ್ಲಿ ಫುಟ್‌ಬಾಲ್ ಆಟಗಾರ ಮೊಹಮದ್ ಸಲಾಹ್ ಅವರ ಸಂಭ್ರಮಾಚರಣೆಯನ್ನು ಮಾಡಿದ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

