09 ಮಾರ್ಚ್ 2025 ರಂದು ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ಅನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸುವ ಮೂಲಕ 12 ವರ್ಷಗಳ ನಂತರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಈ ಸಂದರ್ಭದಲ್ಲಿ, ಕ್ರೀಡಾಂಗಣದಲ್ಲಿ ಪಟಾಕಿ ಸಿಡಿಯುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ವೈರಲ್ ಆಗುತ್ತಿದೆ. 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ಕ್ರಿಕೆಟ್ ತಂಡ ಜಯಗಳಿಸಿದ ನಂತರ ಕ್ರೀಡಾಂಗಣದಲ್ಲಿ ನಡೆದ ಪಟಾಕಿ ಪ್ರದರ್ಶನದ ದೃಶ್ಯಗಳೆಂದು ಹೇಳಿಕೊಂಡು ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಮಾರ್ಚ್ 09, 2025 ರಂದು ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಜಯಗಳಿಸಿದ ನಂತರ ಕ್ರೀಡಾಂಗಣದಲ್ಲಿ ನಡೆದ ಪಟಾಕಿ ಪ್ರದರ್ಶನದ ದೃಶ್ಯಗಳು.
ಫ್ಯಾಕ್ಟ್: ಈ ವೈರಲ್ ವೀಡಿಯೊ ಡಿಸೆಂಬರ್ 21, 2024 ರಂದು 26 ನೇ ಗಲ್ಫ್ ಕಪ್‌ನ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಕುವೈತ್‌ನ ಜಾಬರ್ ಅಲ್-ಅಹ್ಮದ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಟಾಕಿ ಪ್ರದರ್ಶನದ ದೃಶ್ಯಗಳನ್ನು ತೋರಿಸುತ್ತದೆ. ಇದಕ್ಕೂ 2025 ರ ಮಾರ್ಚ್ 09 ರಂದು ನ್ಯೂಜಿಲೆಂಡ್ ವಿರುದ್ಧ ಭಾರತ ಸಾಧಿಸಿದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಗೆಲುವಿಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.
ವೈರಲ್ ವೀಡಿಯೊದ ಕೀ ಫ್ರೇಮ್‌ಗಳಲ್ಲಿ ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಅದೇ ವೀಡಿಯೊವನ್ನು ಇದಕ್ಕೂ ಮುನ್ನ ಡಿಸೆಂಬರ್ 2024 ರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು (ಇಲ್ಲಿ, ಇಲ್ಲಿ) ನಮಗೆ ಕಂಡುಬಂದವು. ಈ ಪೋಸ್ಟ್‌ಗಳು ವೀಡಿಯೊ ಕುವೈತ್‌ನದ್ದು ಎಂದು ಹೇಳಿಕೊಂಡಿವೆ. ಇದರಿಂದ, ಈ ವೀಡಿಯೊಗೂ ಮಾರ್ಚ್ 09, 2025 ರಂದು ನಡೆದ ಭಾರತ-ನ್ಯೂಜಿಲೆಂಡ್ ಫೈನಲ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಈ ಕ್ಲೂ ಗಳ ಆಧಾರದ ಮೇಲೆ, ಸೂಕ್ತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ನಲ್ಲಿ ಹುಡುಕಾಡಿದಾಗ, ಅಲ್ ರೈ ಮೀಡಿಯಾ ಗ್ರೂಪ್ ವೆಬ್‌ಸೈಟ್‌ನಲ್ಲಿ “Fireworks Light Up Jaber Stadium at the Opening of Gulf Zain 26” ಎಂಬ ಕ್ಯಾಪ್ಶನ್ ನ ಸುದ್ದಿ ಲೇಖನ (ಆರ್ಕೈವ್ ಲಿಂಕ್) ಕಂಡುಕೊಂಡೆವು. ವೈರಲ್ ವೀಡಿಯೊದಲ್ಲಿರುವಂತೆಯೇ ಸ್ಟೇಡಿಯಂ ದೃಶ್ಯಗಳ ಫೋಟೋಗಳನ್ನು ಇದು ಒಳಗೊಂಡಿದೆ. ಡಿಸೆಂಬರ್ 21, 2024 ರಂದು ಅಲ್ ರೈ ಮೀಡಿಯಾ ಗ್ರೂಪ್ ಮಾಡಿದ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿಯೂ ಇದೇ ರೀತಿಯ ದೃಶ್ಯಗಳು ಕಂಡುಬಂದವು. ಈ ಪೋಸ್ಟ್ 26 ನೇ ಗಲ್ಫ್ ಕಪ್‌ನ ಉದ್ಘಾಟನಾ ಸಮಾರಂಭಕ್ಕೆ ಸಂಬಂಧಿಸಿದೆ ಎಂದು ಉಲ್ಲೇಖಿಸಿದೆ.

21 ಡಿಸೆಂಬರ್ 2024 ರಂದು ಕುವೈತ್ ಸುದ್ದಿ ಸಂಸ್ಥೆ (KUNA) ಮಾಡಿದ x ಪೋಸ್ಟ್‌ನಲ್ಲಿ, ಕ್ರೀಡಾಂಗಣದಲ್ಲಿ ಪಟಾಕಿ ಸಿಡಿಯುತ್ತಿರುವ ಅದೇ ದೃಶ್ಯಗಳನ್ನು ನಾವು ಕಂಡುಕೊಂಡಿದ್ದೇವೆ. “ಅರೇಬಿಯನ್ ಗಲ್ಫ್ ಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಸಮಾರಂಭದಲ್ಲಿ ಕಲಾತ್ಮಕ ಮತ್ತು ಪರಂಪರೆಯ ಪ್ರದರ್ಶನಗಳು” ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ಈ ಘಟನೆಯ ಕುರಿತು ನಮಗೆ ಹಲವಾರು ಸುದ್ದಿ ಲೇಖನಗಳು (ಇಲ್ಲಿ, ಇಲ್ಲಿ, ಇಲ್ಲಿ) ದೊರಕಿವೆ. ಈ ಲೇಖನಗಳ ಪ್ರಕಾರ, ಅರೇಬಿಯನ್ ಗಲ್ಫ್ ಫುಟ್ಬಾಲ್ ಕಪ್, “ಖಲೀಜಿ ಜೈನ್ 26”, ಡಿಸೆಂಬರ್ 21, 2024 ರಂದು ಕುವೈತ್‌ನ ಜಾಬರ್ ಅಲ್-ಅಹ್ಮದ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರಾರಂಭವಾಯಿತು. ಈ ಕಾರ್ಯಕ್ರಮದಲ್ಲಿ ಅಮೀರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಭಾಗವಹಿಸಿದ್ದರು. ಗಲ್ಫ್ ಸಂಸ್ಕೃತಿ ಮತ್ತು ಏಕತೆಯನ್ನು ಪ್ರತಿಬಿಂಬಿಸುವ ಕಲಾತ್ಮಕ ಪ್ರದರ್ಶನಗಳು ನಡೆದವು. ಗಲ್ಫ್ ರಾಷ್ಟ್ರಗಳ ಉನ್ನತ ಫುಟ್ಬಾಲ್ ತಂಡಗಳು ಭಾಗವಹಿಸಲಿರುವ ಈ ಪಂದ್ಯಾವಳಿಯು ಕ್ರೀಡಾ ಪ್ರತಿಭೆಗಳನ್ನು ಉತ್ತೇಜಿಸುವ ಮತ್ತು ಪ್ರಾದೇಶಿಕ ಏಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದೆ.

ವೈರಲ್ ವೀಡಿಯೊದಲ್ಲಿ ನಾವು ಗೂಗಲ್ ಮ್ಯಾಪ್ ನಲ್ಲಿ ಕುವೈತ್‌ನ ಜಾಬರ್ ಅಲ್-ಅಹ್ಮದ್ ಅಂತರಾಷ್ಟ್ರೀಯ ಕ್ರೀಡಾಂಗಣಕ್ಕೆ ಕ್ರೀಡಾಂಗಣವನ್ನು ಜಿಯೋ ಲೋಕೇಟ್ ಗುರುತಿಸಿದ್ದೇವೆ. ವೈರಲ್ ವೀಡಿಯೊದಲ್ಲಿನ ದೃಶ್ಯಗಳನ್ನು ಗೂಗಲ್ ನಕ್ಷೆಗಳ ಚಿತ್ರಗಳೊಂದಿಗೆ ಹೋಲಿಸಿದಾಗ, ಈ ಸ್ಥಳವು ಕುವೈತ್‌ಗೆ ಸೇರಿದೆ ಎಂದು ನಾವು ದೃಢಪಡಿಸಿದ್ದೇವೆ. ಈ ಹೋಲಿಕೆಯನ್ನು ಕೆಳಗೆ ನೋಡಬಹುದು.

ಕೊನೆಯದಾಗಿ ಹೇಳುವುದಾದರೆ, ಡಿಸೆಂಬರ್ 2024 ರಲ್ಲಿ ಕುವೈತ್‌ನಲ್ಲಿ ನಡೆದ ಗಲ್ಫ್ ಕಪ್ ಉದ್ಘಾಟನಾ ಸಮಾರಂಭದಲ್ಲಿ ಸಿಡಿಸಲಾದ ಪಟಾಕಿ ವೀಡಿಯೊವನ್ನು ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ನಂತರದ ಪಟಾಕಿ ಪ್ರದರ್ಶನ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.