ಇತ್ತೀಚೆಗೆ, 2024 ರ ಡಿಸೆಂಬರ್ 17 ರಂದು ನಡೆದ 2024 ರ ಚಳಿಗಾಲದ ಸಂಸತ್ತಿನ ಅಧಿವೇಶನದಲ್ಲಿ, ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಅನ್ನು ಟೀಕಿಸುತ್ತಾ, ಅಂಬೇಡ್ಕರ್ ಅವರ ಹೆಸರನ್ನು ಉಲ್ಲೇಖಿಸುವುದು ಪ್ರತಿಪಕ್ಷಗಳಿಗೆ ‘ಫ್ಯಾಷನ್’ ಆಗಿ ಮಾರ್ಪಟ್ಟಿದೆ ಎಂದು ಹೇಳಿಕೆ ನೀಡಿದ್ದಾರೆ (ಇಲ್ಲಿ). ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಗೃಹ ಸಚಿವ ಅಮಿತ್ ಶಾ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಮಾಡಿದ ಹೇಳಿಕೆಗಳಿಗೆ ಕ್ಷಮೆಯಾಚಿಸಬೇಕೆಂದು ಮತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿವೆ (ಇಲ್ಲಿ, ಇಲ್ಲಿ, ಇಲ್ಲಿ). ಈ ಸಂದರ್ಭದಲ್ಲಿ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವೀಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲಿ ಭಾರತದ ಸಂವಿಧಾನವನ್ನು ರಚಿಸುವಾಗ ಬಿ.ಆರ್. ಅಂಬೇಡ್ಕರ್ ಕುಡಿದಿದ್ದರು ಎಂದು ಅವರು ಹೇಳಿದ್ದಾರೆ (ಇಲ್ಲಿ). ವೈರಲ್ ಕ್ಲಿಪ್‌ನಲ್ಲಿ, ಅರವಿಂದ್ ಕೇಜ್ರಿವಾಲ್ ಹಿಂದಿಯಲ್ಲಿ ಹೀಗೆ ಹೇಳುವುದನ್ನು ಕೇಳಬಹುದು: “ನಾವು ಕುಳಿತಿದ್ದೆವು… ಸಂವಿಧಾನವನ್ನು ಬರೆದವರು ಅದನ್ನು ರಚಿಸುವಾಗ ಕುಡಿದಿರಬೇಕು ಎಂದು ಯಾರೋ ಹೇಳಿದರು.” ಹಾಗಾದರೆ ಈ ಲೇಖನದ ಮೂಲಕ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಭಾರತದ ಸಂವಿಧಾನವನ್ನು ರಚಿಸುವಾಗ ಡಾ. ಬಿ.ಆರ್. ಅಂಬೇಡ್ಕರ್ ಕುಡಿದಿದ್ದರು ಎಂದು ಅರವಿಂದ್ ಕೇಜ್ರಿವಾಲ್ ಹೇಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಫ್ಯಾಕ್ಟ್: ಈ ವೈರಲ್ ವೀಡಿಯೊವನ್ನು ಕ್ಲಿಪ್ ಮಾಡಿ ಸಂದರ್ಭಕ್ಕೆ ಹೊರತಾದ ರೀತಿಯಲ್ಲಿ ಹಂಚಿಕೊಳ್ಳಲಾಗಿದೆ. ಇದು 2012 ರ ಹಿಂದಿನದು ಮತ್ತು 25 ನವೆಂಬರ್ 2012 ರಂದು ನವದೆಹಲಿಯ ರಾಜ್ ಘಾಟ್‌ನಲ್ಲಿ ಕೇಜ್ರಿವಾಲ್ ಮಾಡಿದ ಭಾಷಣವನ್ನು ತೋರಿಸುತ್ತದೆ. ಈ ಭಾಷಣದಲ್ಲಿ, ಕೇಜ್ರಿವಾಲ್ ಕಾಂಗ್ರೆಸ್ ಸಂವಿಧಾನದ ಲೇಖಕರನ್ನು ಅಪಹಾಸ್ಯ ಮಾಡುತ್ತಿದ್ದರು, ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ಮದ್ಯಪಾನದಿಂದ ದೂರವಿರುವುದು ಕಡ್ಡಾಯ ಎಂಬ ಷರತ್ತನ್ನು ಉಲ್ಲೇಖಿಸುತ್ತಿದ್ದರು. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳಾಗಿದೆ.
ಅರವಿಂದ್ ಕೇಜ್ರಿವಾಲ್ ಅಂಬೇಡ್ಕರ್ ಬಗ್ಗೆ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರೆ, ಅವು ನ್ಯೂಸ್ ಹೆಡ್ಲೈನ್ಗಳಾಗುತಿತ್ತು ಆದರೆ, ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ.
ಈ ಕುರಿತು ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ನಾವು ಈ ವೈರಲ್ ವೀಡಿಯೊವನ್ನು ಒಳಗೊಂಡ ಹಲವಾರು ವೈರಲ್ ಪೋಸ್ಟ್‌ಗಳನ್ನು ಪರಿಶೀಲಿಸಿದ್ದೇವೆ. X (ಹಿಂದೆ ಟ್ವಿಟರ್) ನಲ್ಲಿ ಒಬ್ಬ ಉಸೆರ್ ವೈರಲ್ ಪೋಸ್ಟ್‌ಗಳಲ್ಲಿ ಪ್ರತಿಕ್ರಿಯಿಸುವಾಗ, 22 ಸೆಕೆಂಡುಗಳ ಉದ್ದದ ವೀಡಿಯೊವನ್ನು ಹಂಚಿಕೊಳ್ಳುವುದರ ಜೊತೆಗೆ ವೈರಲ್ ವೀಡಿಯೊ ನಕಲಿಯಾಗಿದ್ದು ಇದನ್ನು ಎಡಿಟ್ ಮಾಡಲಾಗಿದೆ ಎಂದು ಹೇಳಿರುವುದನ್ನು ನಾವು ಕಂಡುಕೊಂಡಿದ್ದೇವೆ. ಈ 22 ಸೆಕೆಂಡುಗಳ ಕ್ಲಿಪ್‌ನಲ್ಲಿ, ಕೇಜ್ರಿವಾಲ್ ಹಿಂದಿಯಲ್ಲಿ ಹೀಗೆ ಹೇಳುವುದನ್ನು ಕೇಳಬಹುದು: “ಈ ಬಾರಿ ನಾನು ಎಲ್ಲಾ ರಾಜಕೀಯ ಪಕ್ಷಗಳ ಸಂವಿಧಾನಗಳನ್ನು ಓದಿದ್ದೇನೆ. ಕಾಂಗ್ರೆಸ್ ಸಂವಿಧಾನವು ಯಾವುದೇ ಕಾಂಗ್ರೆಸ್ ಸದಸ್ಯರು ಮದ್ಯಪಾನ ಮಾಡಬಾರದು ಎಂದು ಹೇಳುತ್ತದೆ. ನಾವು ಕುಳಿತಿದ್ದೆವು, ಮತ್ತು ಸಂವಿಧಾನವನ್ನು ಬರೆದವರು (ಮದ್ಯ) ಕುಡಿದ ನಂತರ ಅದನ್ನು ಬರೆದಿರಬೇಕು ಎಂದು ಯಾರೋ ಹೇಳಿದರು.” ವೀಡಿಯೊದಲ್ಲಿ ಡಾ. ಅಂಬೇಡ್ಕರ್ ಅಥವಾ ಭಾರತೀಯ ಸಂವಿಧಾನದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಉಸೆರ್ ತಮ್ಮ ಮುಂದಿನ ಟ್ವೀಟ್‌ನಲ್ಲಿ ಫುಲ್ ವೀಡಿಯೊದ ಯೂಟ್ಯೂಬ್ ಲಿಂಕ್ ಅನ್ನು ಸಹ ಹಂಚಿಕೊಂಡಿದ್ದಾರೆ. ಈ ಲಿಂಕ್ ನಮ್ಮನ್ನು ಡಿಸೆಂಬರ್ 03, 2012 ರಂದು ಆಮ್ ಆದ್ಮಿ ಪಕ್ಷದ ಅಫೀಷಿಯಲ್ ಯೂಟ್ಯೂಬ್ ಚಾನೆಲ್‌ಗೆ ಅಪ್‌ಲೋಡ್ ಮಾಡಲಾದ 17 ನಿಮಿಷಗಳ ಅವಧಿಯ ಮೂಲ ವೀಡಿಯೊಗೆ ಕರೆದೊಯ್ಯಿತು. ವೀಡಿಯೊದ ವಿವರಣೆಯ ಪ್ರಕಾರ, ಕೇಜ್ರಿವಾಲ್ 25 ನವೆಂಬರ್ 2012 ರಂದು ನವದೆಹಲಿಯ ರಾಜ್ ಘಾಟ್‌ನಲ್ಲಿ ಈ ಭಾಷಣ ಮಾಡಿದ್ದಾರೆ. ಈ ವೀಡಿಯೊದಲ್ಲಿ, ಕೇಜ್ರಿವಾಲ್, ಜನರನ್ನು ಉದ್ದೇಶಿಸಿ ಮಾತನಾಡುತ್ತಾ, ಆಮ್ ಆದ್ಮಿ ಪಕ್ಷದ ಆಂತರಿಕ ಸಂವಿಧಾನದ ಪ್ರಮುಖ ಅಂಶಗಳನ್ನು ವಿವರಿಸಿದರು ಮತ್ತು ಕಾಂಗ್ರೆಸ್ ಪಕ್ಷವು ತನ್ನದೇ ಆದ ಸಂವಿಧಾನವನ್ನು “ಅನುಸರಿಸುತ್ತಿಲ್ಲ” ಎಂದು ಟೀಕಿಸಿದ್ದಾರೆ. ಟೈಂಸ್ಟಮ್ಪ್ 04:35, ಕೇಜ್ರಿವಾಲ್ ಈ ರೀತಿ ಹೇಳಿದ್ದಾರೆ: “ನಾನು ಎಲ್ಲಾ ರಾಜಕೀಯ ಪಕ್ಷಗಳ ಸಂವಿಧಾನಗಳನ್ನು ಓದಿದ್ದೇನೆ. ಕಾಂಗ್ರೆಸ್ ಪಕ್ಷದ ಸಂವಿಧಾನವು ಯಾವುದೇ ಕಾಂಗ್ರೆಸ್ ಕಾರ್ಯಕರ್ತ ಮದ್ಯಪಾನ ಮಾಡುವುದಿಲ್ಲ ಎಂದು ಹೇಳುತ್ತದೆ… ನಾವು ಕುಳಿತಿದ್ದೆವು, ಮತ್ತು ಸಂವಿಧಾನವನ್ನು ಬರೆದವರು ಮದ್ಯಪಾನ ಮಾಡಿದ ನಂತರ ಅದನ್ನು ಬರೆದಿರಬೇಕು ಎಂದು ಯಾರೋ ಹೇಳಿದರು” (ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಲಾಗಿದೆ). ಅವರ ಭಾಷಣದ ಒಂದು ಭಾಗವನ್ನು ತೆಗೆದು ವೈರಲ್ ಮಾಡಲಾಗಿದ್ದು, ಇದು ಅವರು ಭಾರತೀಯ ಸಂವಿಧಾನ ಮತ್ತು ಅದರ ಲೇಖಕರನ್ನು ಅಗೌರವಿಸುತ್ತಿದ್ದಾರೆ ಎಂದು ತಪ್ಪಾಗಿ ಸೂಚಿಸುವಂತೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಕಾಂಗ್ರೆಸ್ ಪಕ್ಷದ ಅಫೀಷಿಯಲ್ ವೆಬ್‌ಸೈಟ್‌ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಂವಿಧಾನ ಮತ್ತು ನಿಯಮಗಳನ್ನು ಸಹ ನಾವು ಪರಿಶೀಲಿಸಿದ್ದೇವೆ. ಪುಟ 72 ರಲ್ಲಿ, ಸದಸ್ಯತ್ವ ನೋಂದಣಿ/ನವೀಕರಣ ನಮೂನೆಯಲ್ಲಿ, ಅರ್ಜಿದಾರರು ಮದ್ಯ ಮತ್ತು ಮಾದಕ ದ್ರವ್ಯಗಳಿಂದ ದೂರವಿರುವುದಾಗಿ ಘೋಷಿಸುವುದು ಕಡ್ಡಾಯವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಆದರೆ ವರದಿಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಫೆಬ್ರವರಿ 2023 ರಲ್ಲಿ, ಕಾಂಗ್ರೆಸ್ ಪಕ್ಷವು ತನ್ನ ಸಂವಿಧಾನವನ್ನು ಪರಿಷ್ಕರಿಸಿ, ಸದಸ್ಯತ್ವಕ್ಕಾಗಿ ಮದ್ಯದಿಂದ ದೂರವಿರಬೇಕು ಎಂಬ ಷರತ್ತನ್ನು ತೆಗೆದುಹಾಕುವುದರ ಜೊತೆಗೆ ಖಾದಿ ಧರಿಸುವುದನ್ನು ಅವರವರ ಇಚ್ಛೆಗೆ ಬಿಡಲಾಗಿದೆ ಎಂದು ತಿಳಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಭಾರತದ ಸಂವಿಧಾನವನ್ನು ಬರೆಯುವಾಗ ಬಿ.ಆರ್. ಅಂಬೇಡ್ಕರ್ ಕುಡಿದಿದ್ದರು ಎಂದು ಕೇಜ್ರಿವಾಲ್ ಹೇಳಿದ್ದಾರೆ ಎಂಬ ಹೇಳಿಕೆ ಸುಳ್ಳು.