ಮುಸ್ಲಿಂ ಯುವಕರು ಹಿಂದೂ ಹುಡುಗಿಯರನ್ನು ಟ್ರಾಪ್ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ‘ನಾಟಕೀಯ’ ವಿಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

‘ಹಿಂದೂ ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಮುಸ್ಲಿಂ ಯುವಕರು ದುಷ್ಕೃತ್ಯವನ್ನು ಮಾಡುತ್ತಿದ್ದಾರೆ’ ಎಂದು ಪ್ರತಿಪಾದಿಸಿ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ, ನಾಲ್ವರು ಹುಡುಗರ ಗುಂಪೊಂದು ಹುಟ್ಟುಹಬ್ಬದ ಪಾರ್ಟಿಯ ಹೆಸರಿನಲ್ಲಿ ಇಬ್ಬರು ಹುಡುಗಿಯರನ್ನು ಆಹ್ವಾನಿಸಿ, ಹುಟ್ಟುಹಬ್ಬದ ಕೇಕ್ ಮೇಲೆ ರಹಸ್ಯವಾಗಿ ಪುಡಿಯನ್ನು ಸುರಿದು, ಯುವತಿಯರನ್ನು ಪ್ರಜ್ಞೆ ತಪ್ಪಿಸುವಂತೆ ತೋರಿಸಲಾಗಿದೆ. ವೀಡಿಯೊವನ್ನು ಶೇರ್ ಮಾಡುತ್ತಾ, ‘ಮುಸ್ಲಿಮರು ನಿಮ್ಮ ಸ್ನೇಹಿತರು, ಅವರು ಹೇಗೆ ಜಿಹಾದ್ ಮಾಡುತ್ತಾರೆ ಎಂದು ನೋಡಿ. ಪ್ರಜ್ಞೆ ತಪ್ಪಿಸಿ ಸೆಕ್ಸ್ ಕ್ಲಿಪ್‌ಗಳನ್ನು ತೆಗೆದು, ನಂತರ ನಿಮ್ಮನ್ನು ಲೈಂಗಿಕ ಗುಲಾಮಗಿರಿ, ಪರಿವರ್ತನೆ ಮತ್ತು ನೀವು ಕನಸು ಕಾಣದಂತಹದನ್ನು ಮಾಡುತ್ತಾರೆ” ಎಂದು ಬರೆಯಲಾಗಿದೆ. ವೈರಲ್‌ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಬರ್ತ್‌ಡೇ ಪಾರ್ಟಿಯ ಹೆಸರಿನಲ್ಲಿ ಮುಸ್ಲಿಂ ಸ್ನೇಹಿತರು ಹಿಂದೂ ಹುಡುಗಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಮಾಡುತ್ತಿರುವ ದುಷ್ಕೃತ್ಯದ ವಿಡಿಯೋ.

ವಾಸ್ತವ: ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ನಾಟಕೀಯವಾಗಿ ಮಾಡಲ್ಪಟ್ಟಿದೆ. ಹುಡುಗಿಯರಲ್ಲಿ ಜಾಗೃತಿ ಮೂಡಿಸಲು ಉದ್ದೇಶಪೂರ್ವಕವಾಗಿ ಈ ವೀಡಿಯೊವನ್ನು ತಯಾರಿಸಲಾಗಿದೆ. ಈ ನಾಟಕೀಯ ವೀಡಿಯೊ ಹುಡುಗರನ್ನು ಮುಸ್ಲಿಮರಂತೆ ಚಿತ್ರಿಸಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಬಳಸಿಕೊಂಡು ರಿವರ್ಸ್ ಸರ್ಚ್ ಮೂಲಕ ಹುಡುಕಾಡಿದಾಗ, ಇದೇ ರೀತಿಯ ದೃಶ್ಯಗಳಿರುವ ವೀಡಿಯೊವನ್ನು ಕನ್ನಡದ ಜನಪ್ರಿಯ ನಟಿ ಸಂಜನಾ ಗಲ್ರಾನಿ ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಲಾಗಿದೆ. ಈ ವೀಡಿಯೊ ವಿವರಣೆಯಲ್ಲಿ, “ಎಚ್ಚರಿಕೆಯಿಂದಿರಿ…ವೀಕ್ಷಿಸಿದ್ದಕ್ಕಾಗಿ ಧನ್ಯವಾದಗಳು! ಈ ಪುಟವು ಸ್ಕ್ರಿಪ್ಟ್ ಮಾಡಿದ ನಾಟಕಗಳು ಮತ್ತು ವಿಡಂಬನೆಗಳನ್ನು ಸಹ ಒಳಗೊಂಡಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಕಿರುಚಿತ್ರಗಳು ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ!” ಎಂದು ಬರೆಯಲಾಗಿದೆ. ನಟಿ ಸಂಜನಾ ಗಲ್ರಾನಿ ಅವರು ತಾನು ಹಂಚಿರುವ ವಿಡಿಯೊದಲ್ಲಿ ಸ್ನೇಹಿತರನ್ನು ಕುರುಡಾಗಿ ನಂಬದಂತೆ ಹುಡುಗಿಯರಿಗೆ ಶಿಕ್ಷಣ ನೀಡಲು ರಚಿಸಲಾದ ಸ್ಕ್ರಿಪ್ಟ್ ವೀಡಿಯೊ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಅಲ್ಲದೆ, ಮೂಲ ವೀಡಿಯೊದ ಕೊನೆಯಲ್ಲಿ, “ವೀಕ್ಷಿಸಿದ್ದಕ್ಕಾಗಿ ಧನ್ಯವಾದಗಳು! ಈ ಪುಟವು ಸ್ಕ್ರಿಪ್ಟ್ ಮಾಡಿದ ನಾಟಕಗಳು ಮತ್ತು ವಿಡಂಬನೆಗಳನ್ನು ಸಹ ಒಳಗೊಂಡಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಕಿರುಚಿತ್ರಗಳು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ!” ಎಂದು ಬರೆಯಾಲಾಗಿದೆ. ವೈರಲ್‌ ಪೋಸ್ಟ್‌ನಲ್ಲಿರುವ ವಿಡಿಯೊವನ್ನು, ಮೂಲ ವೀಡಿಯೊದಲ್ಲಿನ ವಿಶೇ‍ಷ ಸೂಚನೆ ಭಾಗವನ್ನು ತೆಗೆದುಹಾಕಿ, ಎಡಿಟ್ ಮಾಡಿ ಅದಕ್ಕೆ ಕೋಮು ನಿರೂಪಣೆಯೊಂದಿಗೆ ಹಂಚಲಾಗುತ್ತಿದೆ. ವಾಸ್ತವದಲ್ಲಿ ನಾಟಕೀಯ ವಿಡಿಯೊದಲ್ಲಿ ಕೂಡಾ ಹುಡುಗರನ್ನು ಮುಸ್ಲಿಮರು ಎಂಬಂತೆ ಚಿತ್ರಿಸಿಲ್ಲ.

ಇತ್ತೀಚೆಗೆ, ಇದೇ ರೀತಿಯ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ನೈಜ ಘಟನೆಗಳು ಎಂಬಂತೆ ವೈರಲ್ ಆಗಿದೆ. ಈ ವಿಡಿಯೊಗಳ ಪ್ರತಿಪಾದನೆಯನ್ನು ನಿರಾಕರಿಸಿ ಪ್ಯಾಕ್ಟ್‌‌ಲಿ ಹಲವು ಫ್ಯಾಕ್ಟ್‌ಚೆಕ್‌ಗಳನ್ನು ಮಾಡಿದೆ. ಆ ಲೇಖನಗಳನ್ನು ಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಹಿಂದೂ ಹುಡುಗಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಮುಸ್ಲಿಂ ಯುವಕರು ಮಾಡುತ್ತಿರುವ ದುಷ್ಕೃತ್ಯ ಎಂದು ನಟನೆ ಮಾಡಿರುವ ವಿಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.