ಬಾಲಕಿಯೊಬ್ಬಳು ಗರ್ಭಿಣಿಯನ್ನು ರಕ್ಷಿಸುವ ನೈಜ ಘಟನೆ ಎಂದು ಸ್ಕ್ರಿಪ್ಟ್ ಮಾಡಿದ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಬಾಲಕಿಯೊಬ್ಬಳು ಗರ್ಭಿಣಿಯನ್ನು ರಕ್ಷಿಸುವ ನೈಜ ಸಿಸಿಟಿವಿ ದೃಶ್ಯಾವಳಿ ಎಂದು ಪ್ರತಿಪಾದಿಸಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆಟೋ ರಿಕ್ಷಾ ಚಾಲಕನೊಬ್ಬ ತನ್ನ ಆಟೋ ರಿಕ್ಷಾದೊಳಗೆ ಕುಳಿತು, ನೋವಿನಿಂದ ಬಳಲುತ್ತಿರುವ ಗರ್ಭಿಣಿಗೆ ಸಹಾಯ ಮಾಡುವಂತೆ ಪ್ರಯಾಣಿಕರನ್ನು ಬೇಡಿಕೊಳ್ಳುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಹಲವು ಪ್ರಯತ್ನಗಳ ನಂತರ, ಆಟೋ ಚಾಲಕನ ಮನವಿಯನ್ನು ಗಮನಿಸಿ ಬಿಎಂಡಬ್ಲ್ಯೂ ಕಾರು ನಿಲ್ಲುತ್ತದೆ. ಬಾಲಕಿಯೊಬ್ಬಳು ಕಾರಿನಿಂದ ಹೊರಬರುವುದನ್ನು ವಿಡಿಯೊದಲ್ಲಿ ನೋಡಬಹುದು. ಗರ್ಭಿಣಿಗೆ ಬಾಲಕಿ ನೀರು ನೀಡಿ ಆಸ್ಪತ್ರೆಗೆ ಕರೆದೊಯ್ದು ರಕ್ಷಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಬಾಲಕಿಯೊಬ್ಬಳು ಗರ್ಭಿಣಿಯನ್ನು ರಕ್ಷಿಸುತ್ತಿರುವುದನ್ನು ತೋರಿಸುವ ವೀಡಿಯೊ ದೃಶ್ಯಾವಳಿ.

ಸತ್ಯಾಂಶ: ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಪೂರ್ವ ನಿಯೋಜಿತವಾದದ್ದು ಅಂದರೆ ಸ್ಕ್ರಿಪ್ಟೆಂಡ್‌ ವಿಡಿಯೊವಾಗಿದೆ. ಈ ವೀಡಿಯೊವನ್ನು ಜಮ್ಮು ಮತ್ತು ಕಾಶ್ಮೀರ ಪೀಸ್‌ (ಶಾಂತಿ) ಪ್ರತಿಷ್ಠಾನದ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಲಾಗಿದೆ. ಮಕ್ಕಳಲ್ಲಿ ಮತ್ತು ಸಮಾಜದಲ್ಲಿ ಮಾನವೀಯತೆಯನ್ನು ಬೆಳೆಸುವುದು ವೀಡಿಯೊದ ಮುಖ್ಯ ಉದ್ದೇಶವಾಗಿದೆ. ವಿಡಿಯೋದಲ್ಲಿರುವ ದೃಶ್ಯಗಳು ನೈಜ ಘಟನೆಯದ್ದಾಗಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಡಿಸೆಂಬರ್ 06, 2021ರಂದು ಜಮ್ಮು ಮತ್ತು ಕಾಶ್ಮೀರ ಪೀಸ್ ಫೌಂಡೇಶನ್ ಫೇಸ್‌ಬುಕ್ ಪುಟದಲ್ಲಿ ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ವೀಡಿಯೊ ಕಂಡುಬಂದಿದೆ. ಮಕ್ಕಳಲ್ಲಿ ಮತ್ತು ಸಮಾಜದ ಜನರಲ್ಲಿ ಮಾನವೀಯತೆಯನ್ನು ಪ್ರೇರೇಪಿಸಲು ರಚಿಸಲಾದ ಸ್ಕ್ರಿಪ್ಟ್‌ ಇದಾಗಿದೆ ಎಂದು ವೀಡಿಯೊದ ವಿವರಣೆಯು ಹೇಳುತ್ತದೆ. ಈ ಫೇಸ್‌ಬುಕ್ ಪೇಜ್‌ ಮನರಂಜನೆ, ಶೈಕ್ಷಣಿಕ ಉದ್ದೇಶಗಳಿಗಾಗಿ ಸ್ಕ್ರಿಪ್ಟ್ ಮಾಡಿದ ನಾಟಕಗಳು ಮತ್ತು ವಿಡಂಬನೆಗಳನ್ನು ಒಳಗೊಂಡಿರುತ್ತದೆ ಎಂದು ಅವರು ಸ್ಪಷ್ಟವಾಗಿ ವಿವರಿಸಿದ್ದಾರೆ.

ಅಲ್ಲದೆ, ಇದೇ ರೀತಿಯ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ವೀಕ್ಷಕರು ‘LOBO 619’ ಫೇಸ್‌ಬುಕ್ ಪುಟದಲ್ಲೂ ನೋಡಬಹುದು ಎಂದು ಈ ಫೇಸ್‌ಬುಕ್ ಪೋಸ್ಟ್ ಶಿಫಾರಸು ಮಾಡುತ್ತದೆ. ಇದೇ ರೀತಿಯ ಶೈಕ್ಷಣಿಕ ಮತ್ತು ಜಾಗೃತಿ ವೀಡಿಯೊಗಳನ್ನು ‘LOBO 619’ Facebook ಪುಟದಲ್ಲಿ ಪ್ರಕಟಿಸಲಾಗಿದೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ತೆಲಂಗಾಣ ರಾಜ್ಯದ ಹೈದ್ರಾಬಾದ್‌ ಹಾಸ್ಯ ಕಲಾವಿದ ಮೊಹಮ್ಮದ್ ಖಯ್ಯೂಮ್ ಅವರು ಲೋಬೋ ಎಂದು ಜನಪ್ರಿಯವಾಗಿದ್ದಾರೆ.

ಈ ಹಿಂದೆ, ಲೈಂಗಿಕ ಕಿರುಕುಳ ಸಂಬಂಧಿಸಿದಂತೆ ಇದೇ ರೀತಿಯ ಜಾಗೃತಿ ವೀಡಿಯೊವು ಕೋಮುದ್ವೇಷ ಪ್ರತಿಪಾದನೆಯೊಂದಿಗೆ ವೈರಲ್ ಆಗಿದ್ದಾಗ ಸತ್ಯಾಂಶವನ್ನು ಪತ್ತೆ ಹಚ್ಚಿ ಪ್ರಕಟಿಸಲಾಗಿತ್ತು. ಅದನ್ನು ಇಲ್ಲಿ ನೋಡಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಪೂರ್ವ ನಿಯೋಜಿತ ವೀಡಿಯೊವನ್ನು “ಬಾಲಕಿಯು ಗರ್ಭಿಣಿಯನ್ನು ರಕ್ಷಿಸುವ ನೈಜ ಘಟನೆ” ಎಂದು ತಪ್ಪಾಗಿ ಪ್ರತಿಪಾದಿಸಿ ಹಂಚಿಕೊಳ್ಳಲಾಗಿದೆ.