ಗಾಂಧಿನಗರ ರೈಲ್ವೇ ನಿಲ್ದಾಣದ ದೃಶ್ಯಗಳನ್ನು ಅಯೋಧ್ಯೆ ರೈಲ್ವೇ ನಿಲ್ದಾಣದ ದೃಶ್ಯಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ರೈಲು ನಿಲ್ದಾಣ ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತದೆ. ಅದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಹೊಸ ರೈಲು ನಿಲ್ದಾಣದ ದೃಶ್ಯಗಳು.

ನಿಜಾಂಶ: ಈ ವಿಡಿಯೋದಲ್ಲಿನ ದೃಶ್ಯಗಳು ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ಹೊಸ ರೈಲ್ವೇ ನಿಲ್ದಾಣ ನಿರ್ಮಿಸುವುದನ್ನು ತೋರಿಸುತ್ತವೆ. 2020 ರ ವೇಳೆಗೆ ಅಯೋಧ್ಯೆ ರೈಲ್ವೇ ನಿಲ್ದಾಣದ ಆಧುನೀಕರಣಕ್ಕಾಗಿ ಕೇಂದ್ರ ಸರ್ಕಾರ 104.77 ಕೋಟಿ ರೂ ಘೋಷಿಸಿದೆ. ಆದರೆ ಅಯೋಧ್ಯೆ ರೈಲ್ವೇ ನಿಲ್ದಾಣದ ನವೀಕರಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಅಯೋಧ್ಯೆ ರೈಲ್ವೇ ನಿಲ್ದಾಣಕ್ಕೆ ಸಂಬಂಧಿಸಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ

ಪೋಸ್ಟ್‌ನಲ್ಲಿ ಹಂಚಲಾದ ವೀಡಿಯೊದ ಸ್ಕ್ರೀನ್ ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ ಕೆಲವರು ತಮ್ಮ ಯೂಟ್ಯೂಬ್ ಚಾನೆಲ್‌ಗಳಲ್ಲಿ ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ವೀಡಿಯೊವನ್ನು ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಆ ವೀಡಿಯೋಗಳನ್ನು ಇಲ್ಲಿ, ಇಲ್ಲಿ ನೋಡಬಹುದು. ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ಆಧುನೀಕರಿಸಿದ ಹೊಸ ರೈಲ್ವೇ ನಿಲ್ದಾಣದ ದೃಶ್ಯಗಳನ್ನು ಈ ವೀಡಿಯೊ ತೋರಿಸುತ್ತದೆ. ಯೂಟ್ಯೂಬ್ ಬಳಕೆದಾರರು ಪೋಸ್ಟ್ ಮಾಡಿದ ವೀಡಿಯೊದಲ್ಲಿ ಸ್ಪಷ್ಟವಾಗಿ ಹಿಂದಿ, ಇಂಗ್ಲಿಷ್ ಮತ್ತು ಗುಜರಾತಿ ಭಾಷೆಯಲ್ಲಿ ಗಾಂಧಿನಗರ ಎಂದು ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್ ಬೋರ್ಡ್‌ಗಳಲ್ಲಿ ಕಾಣಿಸಿಕೊಳ್ಳುತ್ತವೆ. ಜೊತೆಗೆ ಗುಜರಾತ್ ಪ್ರವಾಸೋದ್ಯಮ ಇಲಾಖೆಯ ಲಾಂಛನ ಮತ್ತು ಗುಜರಾತ್ ರಾಜ್ಯದ ಕೆಲವು ಪ್ರವಾಸಿ ಆಕರ್ಷಣೆಗಳ ಫೋಟೊಗಳನ್ನು ರೈಲ್ವೇ ನಿಲ್ದಾಣದ ಗೋಡೆಗಳ ಮೇಲೆ ಚಿತ್ರಿಸಲಾಗಿದೆ.

‘ಸೆಂಟ್ರಲ್ ರೈಲ್ವೇ’ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಆಧುನೀಕರಿಸಿದ ಗಾಂಧಿನಗರ ರೈಲ್ವೇ ನಿಲ್ದಾಣದ ಫೋಟೋಗಳನ್ನು ಪ್ರಕಟಿಸಿದೆ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಅದೇ ಫೋಟೋಗಳು ಕಾಣಿಸಿಕೊಳ್ಳುವುದನ್ನು ಗಮನಿಸಬಹುದು. ಗಾಂಧಿನಗರ ರೈಲ್ವೆ ನಿಲ್ದಾಣಕ್ಕೆ ಸಂಬಂಧಿಸಿದಂತೆ ‘ಒನ್ ಇಂಡಿಯಾ ಹಿಂದಿ’ ಸುದ್ದಿ ಚಾನೆಲ್ ಪ್ರಕಟಿಸಿದ ವೀಡಿಯೋದಲ್ಲಿ ಈ ದೃಶ್ಯಗಳನ್ನು ನೋಡಬಹುದು.

ಗಾಂಧಿನಗರದ ಹೊಸ ರೈಲ್ವೇ ನಿಲ್ದಾಣಕ್ಕೆ ಸಂಬಂಧಿಸಿದಂತೆ ಗೂಗಲ್ ನಕ್ಷೆಯಲ್ಲಿ ಪೋಸ್ಟ್ ಮಾಡಿರುವ ಫೋಟೋಗಳನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಗಾಂಧಿನಗರ ರೈಲ್ವೆ ನಿಲ್ದಾಣಕ್ಕೆ ಸಂಬಂಧಿಸಿದಂತೆ ‘ದಿ ಟ್ರಿಬ್ಯೂನ್’ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಈ ವಿವರಗಳನ್ನು ಆಧರಿಸಿ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಖಚಿತವಾಗಿ ಗಾಂಧಿನಗರ ರೈಲ್ವೇ ನಿಲ್ದಾಣಕ್ಕೆ ಸಂಬಂಧಿಸಿದೆ ಎಂದು ಹೇಳಬಹುದು.

2020 ರ ವೇಳೆಗೆ ಅಯೋಧ್ಯೆ ರೈಲ್ವೇ ನಿಲ್ದಾಣದ ಆಧುನೀಕರಣಕ್ಕಾಗಿ ಕೇಂದ್ರ ಸರ್ಕಾರ 104.77 ಕೋಟಿ ರೂಗಳನ್ನು ಮೀಸಲಿಟ್ಟಿದೆ. ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರದ ಅಧಿಕಾರಿಗಳೊಂದಿಗೆ ಅಯೋಧ್ಯೆಯ ನಗರಾಭಿವೃದ್ಧಿ ಕಾರ್ಯವನ್ನು ಪರಿಶೀಲಿಸಿದ ಪ್ರಧಾನಿ ನರೇಂದ್ರ ಮೋದಿ, ಅಯೋಧ್ಯೆಯನ್ನು ಭಾರತೀಯ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನಗರವನ್ನಾಗಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆದರೆ ಅಯೋಧ್ಯೆ ರೈಲ್ವೇ ನಿಲ್ದಾಣದ ಆಧುನೀಕರಣ ಕೆಲಸ ಇನ್ನೂ ಪೂರ್ಣಗೊಂಡಿಲ್ಲ.

ಒಟ್ಟಾರೆಯಾಗಿ ಗಾಂಧಿನಗರ ರೈಲ್ವೇ ನಿಲ್ದಾಣದ ದೃಶ್ಯಗಳನ್ನು ಅಯೋಧ್ಯೆ ರೈಲ್ವೇ ನಿಲ್ದಾಣದ ದೃಶ್ಯಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.