ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಸಿಕ್ಕಿಂನಲ್ಲಿ ಲಿಂಬು ಬುಡಕಟ್ಟು ಜನಾಂಗದವರು ಆಯೋಜಿಸಿದ್ದ ರಾಲಿಯ ವೀಡಿಯೊವನ್ನು ನೇಪಾಳದ ರಾಲಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಸೆಪ್ಟೆಂಬರ್ 04, 2025 ರಂದು, ನೇಪಾಳ ಸರ್ಕಾರವು 26 ಪ್ರಮುಖ ಸೋಶಿಯಲ್ ಮೀಡಿಯಾ ಪ್ಲಾಟಫಾರ್ಮ್ ಅನ್ನು ನಿಷೇಧಿಸಿತು.  ಇದು ದೇಶಾದ್ಯಂತ ಯುವ ನೇತೃತ್ವದ ಪ್ರತಿಭಟನೆಗಳಿಗೆ ಕಾರಣವಾಯಿತು ಸೆಪ್ಟೆಂಬರ್ 08, 2025 ರಿಂದ ಹಿಂಸಾತ್ಮಕ ರೂಪತಾಳಿ, ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿ ಅಧ್ಯಕ್ಷರ ನಿವಾಸ ಸೇರಿದಂತೆ ಸರ್ಕಾರಿ ಆಸ್ತಿಗಳನ್ನು ಗುರಿಯಾಗಿಸಿಕೊಂಡರು. ಕನಿಷ್ಠ 72 ಜನರು ಸಾವನ್ನಪ್ಪಿದ್ದು,  2,100 ಕ್ಕೂ ಹೆಚ್ಚು ಜನರು ಗಾಯಗೊಂಡರು. ಸೆಪ್ಟೆಂಬರ್ 09, 2025 ರಂದು ನಿಷೇಧವನ್ನು ತೆಗೆದುಹಾಕಿದರೂ, ಭ್ರಷ್ಟಾಚಾರ ಮತ್ತು ಅಸಮಾನತೆಯ ಕಾರಣ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ರಾಜೀನಾಮೆಯನ್ನು ಪ್ರತಿಭಟನಾಕಾರರು ಒತ್ತಾಯಿಸಿದರು. ಹಲವಾರು ಮಂತ್ರಿಗಳೊಂದಿಗೆ ಅದೇ ದಿನ ಓಲಿ ರಾಜೀನಾಮೆ ನೀಡಿದರು. ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಪ್ರಧಾನಿಯಾಗಿ ನೇಮಿಸಲಾಯಿತು. ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ  ಕರ್ಕಿ.  ಮಾರ್ಚ್ 05, 2026 ರಂದು ಹೊಸ ಚುನಾವಣೆಗಳು ನಿಗದಿಯಾಗಿವೆ. ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಸೈನ್ಯವನ್ನು ನಿಯೋಜಿಸಲಾಯಿತು, ಆದರೆ ಮಧ್ಯಂತರ ಸರ್ಕಾರವು ಅಸುನೀಗಿದ ಕುಟುಂಬಗಳಿಗೆ ₹10 ಲಕ್ಷ ಪರಿಹಾರ ಮತ್ತು ಗಾಯಗೊಂಡವರಿಗೆ ಉಚಿತ ವೈದ್ಯಕೀಯ ಆರೈಕೆಯನ್ನು ಘೋಷಿಸಿದೆ. ಯುವಕರ ನೇತೃತ್ವದ ಗುಂಪುಗಳು ನೇಪಾಳದ ರಾಜಕೀಯ ನಿರ್ದೇಶನವನ್ನು ರೂಪಿಸುವುದನ್ನು ಮುಂದುವರೆಸಿವೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ).

ಈ ಸಂದರ್ಭದಲ್ಲಿ, ಭಾರತೀಯ ಪ್ರಧಾನಿ ಮೋದಿಯವರ ಬ್ಯಾನರ್‌ನೊಂದಿಗೆ ಜನರು ರಾಲಿ ನಡೆಸುತ್ತಿರುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈ ರಾಲಿಯನ್ನು ನೇಪಾಳದಲ್ಲಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಈ ವೀಡಿಯೊದ ಹಿಂದಿನ ಸತ್ಯವನ್ನು ಪರಿಶೀಲಿಸೋಣ.

ಕ್ಲೇಮ್: ವೈರಲ್ ಆಗಿರುವ ವೀಡಿಯೊ ಸೆಪ್ಟೆಂಬರ್ 2025 ರ ಪ್ರತಿಭಟನೆಗಳ ಸಂದರ್ಭದಲ್ಲಿ ನೇಪಾಳದ ಜನರು ಭಾರತೀಯ ಪ್ರಧಾನಿ ಮೋದಿಯವರನ್ನು ಬೆಂಬಲಿಸಿ ರಾಲಿ ಮಾಡುತ್ತಿರುವುದನ್ನು ತೋರಿಸುತ್ತದೆ.

ಫ್ಯಾಕ್ಟ್: ಈ ವೀಡಿಯೊ ನೇಪಾಳದದ್ದಲ್ಲ, ಸಿಕ್ಕಿಂನದ್ದು. ಸಿಕ್ಕಿಂ ರಾಜ್ಯದ 50 ನೇ ವಾರ್ಷಿಕೋತ್ಸವವನ್ನು ಗುರುತಿಸಲು ಪ್ರಧಾನಿ ಮೋದಿ ಅವರ ಭೇಟಿಯ ಸಂದರ್ಭದಲ್ಲಿ ಮೇ 29, 2025 ರಂದು ಗ್ಯಾಂಗ್ಟಾಕ್‌ನಲ್ಲಿ ‘ಸುಖ್ಮಿ ಯಕ್ತುಂಗ್ ಸಪ್ಸೊಕ್ ಸಾಂಗ್ಚುಂಬೋ’ ಬ್ಯಾನರ್ ಅಡಿಯಲ್ಲಿ ಲಿಂಬು ಬುಡಕಟ್ಟು ಜನಾಂಗದವರು ಆಯೋಜಿಸಿದ್ದ ರಾಲಿಯನ್ನು ಇದು ತೋರಿಸುತ್ತದೆ. ಆದ್ದರಿಂದ ಈ ಕ್ಲೇಮ್  ಸುಳ್ಳು.

ಸತ್ಯವನ್ನು ಪರಿಶೀಲಿಸಲು, ನಾವು ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ. ರಾಲಿಯಲ್ಲಿರುವ ಬ್ಯಾನರ್‌ನಲ್ಲಿ “ಭಾರತದ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಅವರನ್ನು ಸಿಕ್ಕಿಂ ರಾಜ್ಯಕ್ಕೆ, ಸಿಕ್ಕಿಂ ಲಿಂಬೂ ಬುಡಕಟ್ಟು ಜನಾಂಗದವರು ಹೃತ್ಪೂರ್ವಕವಾಗಿ ಸ್ವಾಗತ. ಸುಖಿಮ್ ಉಕ್ಮಿ ಯಕ್ತುಂಗ್ ಸಪ್ಸೊಕ್ ಸಾಂಗ್ಚುಂಬೋ” ಎಂದು ಬರೆಯಲಾಗಿದೆ.  ಇದು ಈ ವೀಡಿಯೊವನ್ನು ಸಿಕ್ಕಿಂನಲ್ಲಿ ಚಿತ್ರೀಕರಿಸಿರಬಹುದು ಎಂದು ಸೂಚಿಸುತ್ತದೆ.

ಇದಲ್ಲದೆ, ಗೂಗಲ್‌ನಲ್ಲಿ ಕೀವರ್ಡ್ ಹುಡುಕಾಟವು ವಿವಿಧ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಒಂದೇ ಕಾರ್ಯಕ್ರಮದ ಹಲವಾರು ವೀಡಿಯೊಗಳಿಗೆ ನಮ್ಮನ್ನು ಕರೆದೊಯ್ಯಿತು. ಅದರಲ್ಲಿ ‘ಸುಖ್ಮಿ ಯಕ್ತುಂಗ್ ಸಪ್ಸೊಕ್ ಸಾಂಗ್‌ಚುಂಬೋ’ ಎಂಬ ಫೇಸ್‌ಬುಕ್ ಪೇಜ್ ಕೂಡ ಸೇರಿದ್ದು,  ಎಲ್ಲವೂ ಒಂದೇ ಬ್ಯಾನರ್ ಮತ್ತು ಅದನ್ನು ಹಿಡಿದಿರುವ ಅದೇ ಜನರನ್ನು ತೋರಿಸುತ್ತದೆ (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಪ್ರಧಾನಿ ಮೋದಿಯವರ ಭೇಟಿಯ ಸಮಯದಲ್ಲಿ ಸಿಕ್ಕಿಂ ರಾಜ್ಯತ್ವದ 50 ನೇ ವಾರ್ಷಿಕೋತ್ಸವವನ್ನು ಗುರುತಿಸಲು 2025 ರ ಮೇ 29 ರಂದು ಸಿಕ್ಕಿಂನ ಲಿಂಬು ಬುಡಕಟ್ಟು ಜನಾಂಗದವರು ‘ಸುಖ್ಮಿ ಯಕ್ತುಂಗ್ ಸಪ್ಸೊಕ್ ಸಾಂಗ್‌ಚುಂಬೋ’ ಬ್ಯಾನರ್ ಅಡಿಯಲ್ಲಿ ರಾಲಿಯನ್ನು ಆಯೋಜಿಸಿದ್ದರು ಎಂದು ಈ ಪೋಸ್ಟ್‌ಗಳು ಹೇಳುತ್ತವೆ.

ವೈರಲ್ ಆಗಿರುವ ವಿಡಿಯೋ ಮತ್ತು ‘ಸುಖ್ಮಿ ಯಕ್ತುಂಗ್ ಸಪ್ಸೋಕ್ ಸಾಂಗ್‌ಚುಂಬೋ’ ಎಂಬ ಫೇಸ್‌ಬುಕ್ ಪುಟದ, ವಿಡಿಯೋವನ್ನು ಒಂದಕ್ಕೊಂದು ಹೋಲಿಸಿದಾಗ ಎರಡೂ ಒಂದೇ ಎಂದು ಕಂಡುಬಂದಿದೆ. 

ಇದಲ್ಲದೆ, ನಾವು ರಾಲಿ  ಸ್ಥಳವನ್ನು ಜಿಯೋ -ಲೋಕೇಟೆಡ್ ಪತ್ತೆಹಚ್ಚಿದ್ದೇವೆ ಮತ್ತು ಅದನ್ನು ರಿಲಯನ್ಸ್ ಸ್ಮಾರ್ಟ್ ಬಜಾರ್, 31 ಸಿಂಗ್ಟಮ್-ಚುಂಗ್ಥಾಂಗ್ ರಸ್ತೆ, ಗ್ಯಾಂಗ್ಟಾಕ್, ಸಿಕ್ಕಿಂ ಬಳಿ ಚಿತ್ರೀಕರಿಸಲಾಗಿದೆ ಎಂದು ದೃಢಪಡಿಸಿದ್ದೇವೆ. ಈ ಸಾಕ್ಷ್ಯವು ವೈರಲ್ ವೀಡಿಯೊ ನೇಪಾಳದದ್ದಲ್ಲ, ಸಿಕ್ಕಿಂನದ್ದು ಎಂದು ತಿಳಿದು ಬಂದಿದೆ. 

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಸಿಕ್ಕಿಂನಲ್ಲಿ ಲಿಂಬು ಬುಡಕಟ್ಟು ಜನಾಂಗದವರು ಆಯೋಜಿಸಿದ್ದ ರಾಲಿಯ ವೀಡಿಯೊವನ್ನು ನೇಪಾಳದ ರಾಲಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.