‘ಮಾಸ್ಕ್‌ ಧರಿಸದ ಕಾರಣ ಮುಸ್ಲಿಮರ ಮೇಲೆ ಫ್ರೆಂಚ್ ಪೊಲೀಸ್ ಕ್ರಮ’ ಎಂದು ರೊಮೇನಿಯಾದ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪ್ಯಾರಿಸ್ ಮೆಟ್ರೋ ನಿಲ್ದಾಣದಲ್ಲಿ ಮಾಸ್ಕ್‌ ಹಾಕದಿರುವ ಮುಸ್ಲಿಮರನ್ನು ಫ್ರಾನ್ಸ್ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ನಲ್ಲಿ, “ಮೆಟ್ರೊ ರೈಲಿನಲ್ಲಿ ಇತರ ಪ್ರಯಾಣಿಕರ ಮೇಲೆ ಉಗುಳಿದ್ದಕ್ಕಾಗಿ ಫ್ರೆಂಚ್ ಪೊಲೀಸರು ಮುಸ್ಲಿಮರ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ಪ್ರತಿಪಾದಿಸಲಾಗಿದೆ. ಪೋಸ್ಟ್‌ನಲ್ಲಿ ಮಾಡಿದ ಹಕ್ಕನ್ನು ಪರಿಶೀಲಿಸೋಣ.

ಈ ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಕೆಲವು ಮುಸ್ಲಿಮರು ಮೆಟ್ರೊ ರೈಲಿನಲ್ಲಿ ಇತರ ಪ್ರಯಾಣಿಕರ ಮೇಲೆ ಉಗುಳಿದ್ದಕ್ಕಾಗಿ ಮತ್ತು ಮಾಸ್ಕ್ ಧರಿಸಿಲ್ಲವೆಂಬ ಕಾರಣಕ್ಕೆ ಫ್ರೆಂಚ್ ಪೊಲೀಸರು ಮುಸ್ಲಿಮರ ಮೇಲೆ ಹಲ್ಲೆ ನಡೆಸಿದ್ದಾ

ರೆಸತ್ಯಾಂಶ: ಈ ಘಟನೆ ನಡೆದದ್ದು ಫ್ರಾನ್ಸ್‌ನಲ್ಲಿ ಅಲ್ಲ ರೊಮೇನಿಯಾದಲ್ಲಿ. ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಹಿಂಸಾತ್ಮಕ ಫುಟ್ಬಾಲ್ ತಂಡದ ಬೆಂಬಲಿಗರ ಗುಂಪನ್ನು ರೊಮೇನಿಯನ್ ಪೊಲೀಸರು ಬಂಧಿಸಿದ್ದು, ಜೊತೆಗೆ ಅವರಿಂದ ಅಕ್ರಮ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಈ ವೀಡಿಯೊಗೂ ಮತ್ತು ಫ್ರೆಂಚ್ ಪೊಲೀಸರಿಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳ ಮೂಲಕ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, 2020 ಅಕ್ಟೋಬರ್ ನಲ್ಲಿ ಅನೇಕ ಸುದ್ದಿ ವೆಬ್‌ಸೈಟ್‌ಗಳು ಪ್ರಕಟಿಸಿದ ಲೇಖನಗಳಲ್ಲಿನ ವೀಡಿಯೊಗಳಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ. ‘ಡಿಜಿ 24’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ, ರೊಮೇನಿಯಾದ ಬುಚಾರೆಸ್ಟ್ ನಗರದಲ್ಲಿ ಈ ಘಟನೆ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. “ಫುಟ್ಬಾಲ್ ಪಂದ್ಯವೊಂದರಲ್ಲಿ ಪ್ರೇಕ್ಷಕರ ನಿರ್ವಹಣೆಯ ಉಸ್ತುವಾರಿ ವಹಿಸಿಕೊಂಡಿರುವ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ರೊಮೇನಿಯನ್ ಪೊಲೀಸರು ಫುಟ್ಬಾಲ್ ತಂಡದ ಹಿಂಸಾತ್ಮಕ ಬೆಂಬಲಿಗರ ಗುಂಪನ್ನು ಬಂಧಿಸಿದ್ದಾರೆ” ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಈ ಬಂಧಿತ ಅಭಿಮಾನಿಗಳು ಹಲವಾರು ಚಾಕುಗಳು ಮತ್ತು ಹೊಗೆ ಬಂದೂಕುಗಳನ್ನು ಹೊಂದಿದ್ದರು. ಇವುಗಳನ್ನು ರೊಮೇನಿಯನ್ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯ ಬಗ್ಗೆ ಇತರ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ರೊಮೇನಿಯನ್ ಅಧಿಕಾರಿಗಳು ಈ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಮಾಡಿದ್ದು, ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

‘ಸ್ಟೀಫನ್ ಸೆಲ್ ಮೇರೆ’ ಮೆಟ್ರೋ ನಿಲ್ದಾಣದ ಚಿತ್ರಗಳನ್ನು ಈ ವೈರಲ್ ವೀಡಿಯೋದಲ್ಲಿನ ಚಿತ್ರಗಳೊಂದಿಗೆ ಹೋಲಿಸಿದಾಗ ಎರಡೂ ಚಿತ್ರಗಳೂ ಒಂದೇ ರೀತಿ ಇರುವುದು ಕಂಡುಬರುತ್ತದೆ. ಈ ಮೆಟ್ರೋ ನಿಲ್ದಾಣದ ಫೋಟೋಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಘಟನೆಯಲ್ಲಿ ಬಂಧಿಸಲ್ಪಟ್ಟ ಹಿಂಸಾತ್ಮಕ ಬೆಂಬಲಿಗರ ಧರ್ಮದ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ರೊಮೇನಿಯಾದ ಮೆಟ್ರೋ ನಿಲ್ದಾಣವೊಂದರಲ್ಲಿ ಯುವಕರ ಬಂಧನದ ವೀಡಿಯೋವನ್ನು, ಫ್ರಾನ್ಸ್‌ ಮೆಟ್ರೊ ರೈಲು ನಿಲ್ದಾಣದಲ್ಲಿ ಮಾಸ್ಕ್‌ ಧರಿಸದ ಕಾರಣಕ್ಕಾಗಿ ಮುಸ್ಲಿಮರ ಮೇಲೆ ಫ್ರೆಂಚ್ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.