ಬ್ರೆಜಿಲ್‌ನ ವೀಡಿಯೊವನ್ನು ಶ್ರೀನಗರದಲ್ಲಿ ಭಯೋತ್ಪಾದಕರನ್ನು ಬಂಧಿಸುವ ದೃಶ್ಯ ಎಂದು ಹಂಚಿಕೊಳ್ಳಲಾಗಿದೆ

‘ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಭಯೋತ್ಪಾದಕರನ್ನು ಸೆರೆಹಿಡಿಯುತ್ತಿರುವ ಪೊಲೀಸ್ ಸಿಬ್ಬಂದಿಯ ಲೈವ್ ದೃಶ್ಯಾವಳಿ’ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಕೆಲವು ಕಡೆ ಇದೇ ವಿಡಿಯೋವನ್ನು ಹಂಚಿ, ‘ಉತ್ತರ ಪ್ರದೇಶ ಪೊಲೀಸರು ಗಾಜಿಯಾಬಾದ್‌ನಲ್ಲಿ ಕಳ್ಳನನ್ನು ಹಿಡಿಯುವ ದೃಶ್ಯಗಳು’ ಎಂದು ಪ್ರತಿಪಾದಿಸುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆಯು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕನನ್ನು ಬಂಧಿಸಿತ್ತು. ಈ ವರದಿಗಳ ನಡುವೆ, ಈ ವಿಡಿಯೊ ಮತ್ತು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆಗಳನ್ನು ಈ ಲೇಖನದಲ್ಲಿ ಪರಿಶೀಲಿಸೋಣ.

ಪ್ರತಿಪಾದನೆ: ಶ್ರೀನಗರ ಪೊಲೀಸರು ಭಯೋತ್ಪಾದಕರನ್ನು ಬಂಧಿಸುತ್ತಿರುವ ವಿಡಿಯೋ.

ವಾಸ್ತವ: ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೋ ಬ್ರೆಜಿಲ್ ಪೊಲೀಸ್ ಸಿಬ್ಬಂದಿ 17 ವರ್ಷದ ಯುವ ಬೈಕ್ ಸವಾರನನ್ನು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧಿಸಿರುವುದನ್ನು ತೋರಿಸುತ್ತದೆ. ಈ ಘಟನೆ 2021 ಆಗಸ್ಟ್ 01 ರಂದು ಬ್ರೆಜಿಲ್‌ನ ಪೆರೋಲಾ ನಗರದಲ್ಲಿ ನಡೆಯಿತು. ಈ ವಿಡಿಯೋಗೂ ಶ್ರೀನಗರ ಪೊಲೀಸರಿಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಹುಡುಕಾಡಿದಾಗ, ಇದೇ ರೀತಿಯ ದೃಶ್ಯಾವಳಿಗಳು ‘ಪರಾನಾ ನೋ ಅರ್’ ಸುದ್ದಿ ಚಾನೆಲ್, 03 ಆಗಸ್ಟ್ 2021 ರಂದು ಪ್ರಕಟಿಸಿದ ವೀಡಿಯೊದಲ್ಲಿ ಕಂಡುಬಂದಿವೆ. ‘ಪರಾನಾ ನೋ ಆರ್’ ಒಂದು ಸುದ್ದಿ ಕಾರ್ಯಕ್ರಮವಾಗಿದ್ದು, ಬ್ರೆಜಿಲ್‌ ಮೂಲದ ‘ರಿಮೈಸ್‌’ ಸುದ್ದಿ ಮಾಧ್ಯಮದಲ್ಲಿ ನಿಯಮಿತವಾಗಿ ಪ್ರಸಾರವಾಗುತ್ತದೆ. ಬ್ರೆಜಿಲ್‌ನ ಪೆರೋಲಾದಲ್ಲಿ ಬ್ರೆಜಿಲ್ ಪೊಲೀಸರು ಯುವ ಬೈಕ್ ಸವಾರನನ್ನು ಹಿಡಿಯುವ ದೃಶ್ಯಾವಳಿಗಳು ಎಂದು ಈ ವೀಡಿಯೊ ವರದಿ ಹೇಳಿದೆ. ಈ ಘಟನೆ 01 ಆಗಸ್ಟ್ 2021 ರಂದು ನಡೆದಿದೆ ಎಂದು ವರದಿಯಾಗಿದೆ.

ಈ ಘಟನೆಯ ಸಂಪೂರ್ಣ ವಿವರಗಳನ್ನು ‘ರಿಕ್ಮೈಸ್’ ಸುದ್ದಿ ವೆಬ್‌ಸೈಟ್ 2021 ರ ಆಗಸ್ಟ್ 02 ರಂದು ಒಂದು ಲೇಖನವನ್ನು ಪ್ರಕಟಿಸಿತ್ತು. ಈ ಲೇಖನದಲ್ಲಿ 17 ವರ್ಷದ ಯುವ ಬೈಕ್‌‌ ಸವಾರನನ್ನು ಪೆರೋಲಾ ಮಿಲಿಟರಿ ಪೋಲಿಸ್‌ನಿಂದ ತಪ್ಪಿಸಿಕೊಂಡಿದ್ದಕ್ಕಾಗಿ ಬಂಧಿಸಲಾಯಿತು ಎಂದು ವರದಿ ಮಾಡಿದೆ. ಲೇಖನದ ಪ್ರಕಾರ, ಪೆರೋಲಾ ಮಿಲಿಟರಿ ಪೋಲಿಸ್ ಗಸ್ತು ನಡೆಸುತ್ತಿದ್ದಾಗ ಯುವ ಬೈಕ್‌‌ ಸವಾರನು ಅನುಮಾನಾಸ್ಪದ ರೀತಿಯಲ್ಲಿ ಪೊಲೀಸ್ ಕಾರನ್ನು ಹಿಂದಿಕ್ಕಿ ಮತ್ತು ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು. ಪೆರೋಲಾ ಪೊಲೀಸ್ ಸಿಬ್ಬಂದಿ ಪರ್ಲ್ ಅವೆನ್ಯೂ ಬೈಂಗ್ಟನ್‌ನಲ್ಲಿ ಈ ಬೈಕ್ ಸವಾರನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಯುವಕನು ಬೈಕ್‌ನಿಂದ  ಬಿದ್ದ ನಂತರ ಓಡಲು ಪ್ರಯತ್ನಿಸಿದಾಗ ಪೋಲಿಸ್ ಅಧಿಕಾರಿಯು ಹಾರಿ ಅವರನ್ನು ಮತ್ತೆ ಉರುಳಿಸಿದರು.

ಪರವಾನಗಿ ಇಲ್ಲದೆ ಚಾಲನೆ, ನಿಲ್ಲಿಸುವಂತೆ ಕೇಳಿಕೊಂಡ ಆದೇಶಗಳನ್ನು ಪಾಲಿಸದಿರುವುದು, ಅಪಾಯಕಾರಿ ಚಾಲನೆ, ತಪ್ಪಾದ ದಾರಿಯಲ್ಲಿ ಓಡಿಸಿದ ಆರೋಪಗಳೊಂದಿಗೆ ಯುವಕನನ್ನು ಬಂಧಿಸಲಾಗಿದೆ. ಈ ಘಟನೆಯ ವಿವರಗಳನ್ನು ಹಲವಾರು ಸುದ್ದಿ ವೆಬ್‌ಸೈಟ್‌ಗಳು ವರದಿ ಮಾಡಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು. ಈ ಎಲ್ಲ ಸಾಕ್ಷ್ಯಾಧಾರಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಭಾರತದ  ಶ್ರೀನಗರದ ವಿಡಿಯೊ ಅಲ್ಲ, ಬ್ರೆಜಿಲ್‌ನದ್ದು ಎಂದು ತೀರ್ಮಾನಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಶ್ರೀನಗರದಲ್ಲಿ ಭಯೋತ್ಪಾದಕರನ್ನು ಬಂಧಿಸುವ ದೃಶ್ಯಗಳು ಎಂದು ಬ್ರೆಜಿಲ್‌ನಲ್ಲಿ ನಡೆದ ಘಟನೆಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.