ಉತ್ತರ ಪ್ರದೇಶದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎಂಬುದು ಸುಳ್ಳು

‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗಿದ ನಂತರ ಉತ್ತರ ಪ್ರದೇಶ ಪೊಲೀಸರು ವ್ಯಕ್ತಿಯೊಬ್ಬನನ್ನು ಥಳಿಸಿದ್ದಾರೆ ಎಂದು ಹೇಳುವ ಪೋಸ್ಟ್‌ನಲ್ಲಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿದ್ದಕ್ಕಾಗಿ ಯುಪಿ ಪೊಲೀಸರು ವ್ಯಕ್ತಿಯೊಬ್ಬನನ್ನು ಥಳಿಸಿದ ವಿಡಿಯೋ.

ನಿಜಾಂಶ: ಮೊಬೈಲ್ ಅಂಗಡಿಯೊಂದರಲ್ಲಿ ಕಳ್ಳತನದ ಆರೋಪದ ಮೇಲೆ ಸಿಕ್ಕಿಬಿದ್ದ ಬಾಲಕನೊಬ್ಬನನ್ನು ಪೊಲೀಸರು ಕ್ರೂರವಾಗಿ ಥಳಿಸಿದ ಘಟನೆ ಯುಪಿಯ ಚಂದೌಲಿ ಜಿಲ್ಲೆಯಲ್ಲಿ ನಡೆದಿದೆ. ಚಂದೌಲಿ ಪೊಲೀಸರ ಪ್ರಕಾರ, ಈ ವೀಡಿಯೊ ಒಂದು ವರ್ಷಕ್ಕೂ ಹಳೆಯದಾಗಿದೆ ಮತ್ತು ಆ ಬಾಲಕ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿಲ್ಲ. ಈ ಥಳಿತದ ಘಟನೆಯ ನಂತರ ಇಬ್ಬರೂ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳ ಮೂಲಕ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಕಳ್ಳತನದ ಆರೋಪದ ಮೇಲೆ ಪೊಲೀಸರು ಹುಡುಗರನ್ನು ಥಳಿಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ  ಮೇ 2021 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಒಂದೇ ರೀತಿಯ ದೃಶ್ಯಗಳಿರುವ ಹಲವು ವೀಡಿಯೊಗಳು (ಇಲ್ಲಿ ಮತ್ತು ಇಲ್ಲಿ) ಕಂಡುಬಂದಿವೆ. ಉತ್ತರಪ್ರದೇಶದ ಚಂದೌಲಿ ಜಿಲ್ಲೆಯ ಮಥೇಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳ್ಳತನದ ಆರೋಪದ ಮೇಲೆ ಪೊಲೀಸರು ಮಕ್ಕಳನ್ನು ಕ್ರೂರವಾಗಿ ಥಳಿಸಿದ್ದಾರೆ ಎಂದು ಪೋಸ್ಟ್‌ಗಳಲ್ಲಿ ಹೇಳಲಾಗಿದೆ. ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಹೇಳಿದ ಕಾರಣಕ್ಕೆ ಪೊಲೀಸರು ಆತನನ್ನು ಥಳಿಸಿದ್ದಾರೆ ಎಂದು ಯಾವ ವರದಿಗಳಲ್ಲಿಯೂ ಹೇಳಿಲ್ಲ.

ಗೂಗಲ್‌ನಲ್ಲಿ ಸಂಬಂಧಿತ ಕೀವರ್ಡ್‌ಗಳೊಂದಿಗೆ ಸರ್ಚ್ ಮಾಡಿದಾಗ, ಘಟನೆಯ ಕುರಿತು ವರದಿ ಮಾಡಿದ ಹಲವು ಸುದ್ದಿಗಳು ಕಂಡುಬಂದಿವೆ. ಟೈಮ್ಸ್ ಆಫ್ ಇಂಡಿಯಾ ಪೋಸ್ಟ್ ಮಾಡಿದ ಇದೇ ರೀತಿಯ ವೀಡಿಯೊದಲ್ಲಿ ಮೊಬೈಲ್ ಕಳ್ಳತನದ ಆರೋಪದ ಮೇಲೆ ಪೊಲೀಸರು ಕೆಲವರನ್ನು ಥಳಿಸುತ್ತಿರುವುದು ಎಂದು ವರದಿ ಮಾಡಿದೆ. ಮೊಬೈಲ್ ಅಂಗಡಿಯೊಂದರಲ್ಲಿ ಕಳ್ಳತನದ ಆರೋಪದಲ್ಲಿ ಸಿಕ್ಕಿಬಿದ್ದ ಹುಡುಗರನ್ನು ಪೊಲೀಸ್ ಸಿಬ್ಬಂದಿ ಥಳಿಸಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಘಟನೆಯ ವೀಡಿಯೊ ವೈರಲ್ ಆದ ನಂತರ, ಎಸ್ಪಿ ಅಮಿತ್ ಕುಮಾರ್ ಅವರು ಕೈಲಾವರ್ ಹೊರಠಾಣೆಯ ಪ್ರಭಾರಿ ಶಿವಾನಂದ್ ವರ್ಮಾ ಮತ್ತು ಬಲುವಾ ಪೊಲೀಸ್ ಠಾಣೆಯ (ಯುಪಿಯ ಚಂದೌಲಿ ಜಿಲ್ಲೆಯಲ್ಲಿ) ಹೆಡ್ ಕಾನ್‌ಸ್ಟೆಬಲ್ ದಿಲೀಪ್ ಕುಮಾರ್ ಅವರನ್ನು ಅಮಾನತು ಮಾಡಿದ್ದಾರೆ.

ಚಂದೌಲಿ ಪೊಲೀಸರ ಅಧಿಕೃತ ಟ್ವಿಟರ್ ಹ್ಯಾಂಡಲ್ 20 ಮಾರ್ಚ್ 2022 ರಂದು ಟ್ವೀಟ್ ಮಾಡಿದ್ದು, ವೈರಲ್ ವೀಡಿಯೊ ಒಂದು ವರ್ಷಕ್ಕಿಂತ ಹಳೆಯದು, ಈ ಘಟನೆಯ ನಂತರ ಬಾಲಕರನ್ನು ಥಳಿಸಿದ ಇಬ್ಬರೂ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದೆ. ಸತ್ಯ ಸಂಗತಿಗಳನ್ನು ತಿಳಿದುಕೊಳ್ಳದೆ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಬೇಡಿ ಎಂದು ಪೊಲೀಸ್ ಪ್ರಕಟಣೆಯಲ್ಲಿ ಮನವಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಳ್ಳತನದ ಆರೋಪದ ಮೇಲೆ ಉತ್ತರಪ್ರದೇಶದ ಪೊಲೀಸರು ಹುಡುಗರನ್ನು ಥಳಿಸುವ ಹಳೆಯ ವೀಡಿಯೊವನ್ನು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಹೇಳಿದ್ದಕ್ಕಾಗಿ ವ್ಯಕ್ತಿಯನ್ನು ಉತ್ತರಪ್ರದೇಶದ ಪೊಲೀಸರು ಥಳಿಸುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.