ಯುಪಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ಪೋಟೋಗಳನ್ನು ಅರ್ನಾಬ್‌ ಗೋಸ್ವಾಮಿಗೆ ಪೋಲೀಸರು ಹೊಡೆಯುತ್ತಿರುವುದೆಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಪತ್ರಕರ್ತ ಅರ್ನಾಬ್‌ ಗೋಸ್ವಾಮಿಯನ್ನು ಪೋಲೀಸರು ಹಿಂಸಿಸುತ್ತಿದ್ಧಾರೆಂದು ಹೇಳುವ ಕೆಲವು ಪೋಟೋಗಳನ್ನು ಒಳಗೊಂಡ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇದು ನಿಜವೆ ಎಂಬುದನ್ನು ಪರಿಶೀಲಿಸೋಣ.

ಈ ಪೋಸ್ಟ್‌ನ ಅರ್ಕೈವ್‌ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು

ಪ್ರತಿಪಾದನೆ: ಪತ್ರಕರ್ತ ಅರ್ನಾಬ್‌ ಗೋಸ್ವಾಮಿಗೆ ಪೋಲೀಸರು ಹೊಡೆಯುತ್ತಿರುವ ಪೋಟೋ.

ನಿಜಾಂಶ: ಈ ಪೋಟೋಗಳು ಜನವರಿ 2020ರಲ್ಲಿ ಉತ್ತರಪ್ರದೇಶದಲ್ಲಿನ ದೆಯಾರಿಯಾ ಜಿಲ್ಲೆಯಲ್ಲಿ ಮೊಬೈಲ್ ಕಳ್ಳತನ ಮಾಡಿದ ಆರೋಪದಲ್ಲಿ ಬಂಧಿತನಾದ ವ್ಯಕ್ತಿಯನ್ನು ಪೋಲೀಸರು ಠಾಣೆಯಲ್ಲಿ ಹಗ್ಗದಿಂದ ಹೊಡೆದ ಘಟನೆಗೆ ಸಂಬಂಧಿಸಿದವು. ಈ ಪೋಟೋಗಳಿಗೂ ಅರ್ನಾಬ್‌ ಗೋಸ್ವಾಮಿ ಬಂಧನಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಈ ಪೋಸ್ಟ್‌ನಲ್ಲಿ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿರುವ ಫೋಟೋಗಳನ್ನು ಗೂಗಲ್ ರಿವರ್ಸ್ ಇಮೇಜ್ ಮಾಡಿದಾಗ ಇದೇ ರೀತಿಯ ಫೋಟೋಗಳನ್ನು ಪ್ರಕಟಿಸಿರುವ 10 ಜನವರಿ 2020ರ ಸುದ್ದಿ ಲೇಖನವನ್ನು ನಾವು ಕಾಣಬಹುದು. ಅವುಗಳ ವರದಿಯ ಪ್ರಕಾರ, ಈ ಫೋಟೋಗಳು ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಗೆ ಸಂಬಂಧಿಸಿದ್ದು, ಫೋನ್ ಕದ್ದಿರುವ ಶಂಕೆಯಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಹಗ್ಗಗಳಿಂದ ಥಳಿಸಲಾಗಿದೆ ಎನ್ನಲಾಗಿದೆ

ಈ ಘಟನೆಯನ್ನು ಸುದ್ದಿ ಮಾಡಿದ ನ್ಯೂಸ್‌ ವಿಡಿಯೋವನ್ನು ಇಲ್ಲಿ ನೋಡಬಹುದು. ಈ ನ್ಯೂಸ್‌ ವಿಡಿಯೋ ಸಹ ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಹೇಳುತ್ತದೆ.  ಇದರಿಂದ ಫೋಟೋದಲ್ಲಿ ಹೊಡೆಯುತ್ತಿರುವುದು ಅರ್ನಬ್‌ ಗೋಸ್ವಾಮಿಯನ್ನು ಅಲ್ಲ ಎಂದು ಖಚಿತವಾಗಿ ಹೇಳಬಹುದು.

ಒಬ್ಬ ವ್ಯಕ್ತಿಯ ಆತ್ಮಹತ್ಯೆಗೆ ಕಾರಣವಾದ ಆರೋಪದಲ್ಲಿ ಪತ್ರಕರ್ತ ಅರ್ನಾಬ್‌ ಗೋಸ್ವಾಮಿಯನ್ನು ಬಂಧಿಸಿದ್ದ ನೆಪದಲ್ಲಿ ಇಂತಹ ತಪ್ಪು ದಾರಿ ಹಿಡಿಸುವ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ವಿಸ್ತೃತವಾಗಿ ಷೇರ್‌ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಈ ಫೋಟೋಗಳು ಉತ್ತರ ಪ್ರದೇಶದಲ್ಲಿ ನಡೆದ ಘಟನೆಗೆ ಸಂಬಂಧಿಸಿರುವವು. ಈ ಫೋಟೋಗಳಿಗೂ ಅರ್ನಾಬ್‌ ಗೋಸ್ವಾಮಿಗೂ ಯಾವುದೇ ರೀತಿಯ ಸಂಬಂಧವಿಲ್ಲ.