ಭಾರತ್ ಬಯೋಟೆಕ್ ವಿ.ಪಿ ‘ಕೋವಾಕ್ಸಿನ್’ (ಕೋವಿಡ್ -19 ಲಸಿಕೆ) ಮೊದಲ ಡೋಸ್ ತೆಗೆದುಕೊಳ್ಳುತ್ತಿರುವುದಾಗಿ ಸಂಬಂಧವಿಲ್ಲದ ಫೋಟೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಭಾರತ್ ಬಯೋಟೆಕ್ ನ ಪ್ರಾಯೋಗಿಕ ಕೋವಿಡ್-19 ಲಸಿಕೆ (‘ಕೋವ್ಯಾಕ್ಸಿನ್‘ ಅಥವಾ ಬಿಬಿವಿ152 ಕೋವಿಡ್ ಲಸಿಕೆ) ಮಾನವ ಪ್ರಯೋಗದ ಭಾಗವಾಗಿ ಡಾ. ವಿ. ಕೆ. ಶ್ರೀನಿವಾಸ್ (ಉಪಾಧ್ಯಕ್ಷ, ಭಾರತ್ ಬಯೋಟೆಕ್) ಅವರು ಮೊದಲ ಡೋಸ್ ತೆಗೆದುಕೊಳ್ಳುತ್ತಿದ್ದಾರೆಂದು ತೋರಿಸುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) – ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಹಯೋಗದೊಂದಿಗೆ ಈ ಲಸಿಕೆಯನ್ನು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದೆ. ಭಾರತ್ ಬಯೋಟೆಕ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ, ‘ಲಸಿಕೆ ಹಂತ I ಮತ್ತು II ಮಾನವ ಕ್ಲಿನಿಕಲ್ ಪ್ರಯೋಗಗಳಿಗೆ ಡಿಸಿಜಿಐ ಅನುಮೋದನೆಯನ್ನು ಪಡೆದುಕೊಂಡಿದೆ ಮತ್ತು ಪ್ರಯೋಗಗಳು ಜುಲೈ 2020 ರಿಂದ ಭಾರತದಾದ್ಯಂತ ಪ್ರಾರಂಭವಾಗುತ್ತವೆ’ ಎಂದು ಹೇಳಿದ್ದಾರೆ. ಪೋಸ್ಟ್ ನಲ್ಲಿ ಮಾಡಿದ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಭಾರತ್ ಬಯೋಟೆಕ್ ಉಪಾಧ್ಯಕ್ಷರು ಕೋವ್ಯಾಕ್ಸಿನ್ (ದೇಶೀಯ ಪ್ರಾಯೋಗಿಕ ಕೋವಿಡ್-19 ಲಸಿಕೆ) ಮೊದಲ ಡೋಸ್ ತೆಗೆದುಕೊಳ್ಳುವ ಫೋಟೋ.

ನಿಜಾಂಶ: ‘ಉತ್ಪಾದನಾ ಘಟಕದ ಎಲ್ಲಾ ಸಿಬ್ಬಂದಿಯನ್ನು ಪರೀಕ್ಷಿಸಲು ವಾಡಿಕೆಯಂತೆ ರಕ್ತ ತೆಗೆದುಕೊಳ್ಳುವ ಕಾರ್ಯವಿಧಾನಕ್ಕೆ’ ಈ ಫೋಟೋ ಸಂಬಂಧಿಸಿದೆ ಎಂದು ಭಾರತ್ ಬಯೋಟೆಕ್ ಸ್ಪಷ್ಟಪಡಿಸಿದೆ. ಅಲ್ಲದೆ, ‘ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿ – ಇಂಡಿಯಾ (ಸಿ ಟಿ ಆರ್ ಐ)’ ಜಾಲತಾಣದಲ್ಲಿ, ಬಿಬಿವಿ152 ಕೋವಿಡ್ ಲಸಿಕೆಗಾಗಿ ‘ಮೊದಲ ದಾಖಲಾತಿ ದಿನಾಂಕ (ಭಾರತ)’ ಜುಲೈ 13, 2020 ರಿಂದ ಪ್ರಾರಂಭವಾಗುವುದು ಎಂದು ನೋಡಬಹುದು. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಾವು ಈ ಫೋಟೋಗಾಗಿ ಹುಡುಕಿದಾಗ, ಭಾರತ್ ಬಯೋಟೆಕ್ ಈಗಾಗಲೇ ಫೋಟೋಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವುದು ಕಂಡುಬಂದಿದೆ. ‘ಎಲ್ಲಾ ಉತ್ಪಾದನಾ ಸಿಬ್ಬಂದಿಯನ್ನು ಮಾಮೂಲಿನಂತೆ ಪರೀಕ್ಷಿಸಲು ರಕ್ತ ತೆಗೆದುಕೊಳ್ಳುವ ಕಾರ್ಯವಿಧಾನಕ್ಕೆ’ ಈ ಫೋಟೋ ಸಂಬಂಧಿಸಿದೆ ಎಂದು ಭಾರತ್ ಬಯೋಟೆಕ್ ಟ್ವೀಟ್ ಮಾಡಿದೆ.

ಪ್ರಾಯೋಗಿಕ ಲಸಿಕೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ‘ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿ – ಇಂಡಿಯಾ (ಸಿ ಟಿ ಆರ್ ಐ)’ ಜಾಲತಾಣದಲ್ಲಿ ಕಾಣಬಹುದು. ಅದರಲ್ಲಿ, ಬಿಬಿವಿ152 ಕೋವಿಡ್ ಲಸಿಕೆಗಾಗಿ ‘ಮೊದಲ ದಾಖಲಾತಿ ದಿನಾಂಕ (ಭಾರತ)’ ಜುಲೈ 13, 2020 ರಿಂದ ಪ್ರಾರಂಭವಾಗುತ್ತದೆ ಎನ್ನುವ ವಿವರವನ್ನು ನೋಡಬಹುದು. ಅಲ್ಲದೆ, ಇತ್ತೀಚೆಗೆ ಎನ್‌ಡಿಟಿವಿಯೊಂದಿಗೆ ಮಾತನಾಡುತ್ತಾ, ಡಾ.ಕೃಷ್ಣ ಎಲ್ಲಾ ಅವರು (ಭಾರತ್ ಬಯೋಟೆಕ್ ಅಧ್ಯಕ್ಷ ಮತ್ತು ಎಂಡಿ), “ಹೆಚ್ಚಿನ ಅನುಮತಿಗಳು ಈಗಿನ್ನೂ ಸಿಗುತ್ತಿವೆ ಮತ್ತು ಬಹುಶಃ 10 ದಿನಗಳಲ್ಲಿ ಮಾನವ ಪ್ರಯೋಗಗಳು ಪ್ರಾರಂಭವಾಗಬೇಕು’ ಎಂದು ಹೇಳಿದರು. ಆದ್ದರಿಂದ, 2020 ರ ಜುಲೈ 04 ರಂತೆ, ಯಾವುದೇ ಮಾನವನಿಗೆ ಪ್ರಾಯೋಗಿಕ ಡೋಸ್ ನೀಡಲಾಗಿಲ್ಲ.

ಅಲ್ಲದೆ, ಸಿ ಟಿ ಆರ್ ಐ ಜಾಲತಾಣದಲ್ಲಿ, ಆರೋಗ್ಯವಂತ ಸ್ವಯಂಸೇವಕರು ಬಿಬಿವಿ152 ಲಸಿಕೆಯ  ಫಾರ್ಮುಲಾದ ಡೋಸನ್ನು ಚುಚ್ಚುಮದ್ದಿನ  ಮೂಲಕ (‘ಕೊಡುವ ವಿಧಾನ: ಸ್ನಾಯುವಿನೊಳಗೆ ಕೊಡುವ ಚುಚ್ಚುಮದ್ದು’) ಸ್ವೀಕರಿಸುತ್ತಾರೆ ಎಂದು ಓದಬಹುದು.

ಆದರೆ, ಪೋಸ್ಟ್ ಮಾಡಿದ ಫೋಟೋದಲ್ಲಿ ಸ್ನಾಯುವಿನೊಳಗೆ ಕೊಡುವ ಚುಚ್ಚುಮದ್ದುನ್ನು ತೋರಿಸುವುದಿಲ್ಲ. ವಿವಿಧ ರೀತಿಯ ಚುಚ್ಚುಮದ್ದುಗಳ ನಡುವಿನ ವ್ಯತ್ಯಾಸವನ್ನು ಕೆಳಗಿನ ಚಿತ್ರದಲ್ಲಿ ಕಾಣಬಹುದು:

ಉದಾಹರಣೆಗೆ, ಮಹಿಳೆಯೊಬ್ಬರಿಗೆ ಮಾಡರ್ನಾದ ಎಂಆರ್ ಎನ್ ಎ ಲಸಿಕೆ (ಎಂಆರ್ ಎನ್ ಎ -1273) ಡೋಸ್ (ಮತ್ತೊಂದು ಪ್ರಾಯೋಗಿಕ ಕೋವಿಡ್-19 ಲಸಿಕೆ) ನೀಡಲು ಸಂಬಂಧಿಸಿದ ದೃಶ್ಯಗಳನ್ನು ಇಲ್ಲಿ ಕಾಣಬಹುದು. ಅಮೆರಿಕ ಸರ್ಕಾರದ ಕ್ಲಿನಿಕಲ್ ಪ್ರಯೋಗದ ಜಾಲತಾಣದಲ್ಲಿ, ಎಂಆರ್‌ಎನ್‌ಎ -1273 ಡೋಸ್ ಅನ್ನು ಸ್ನಾಯುವಿನೊಳಗೆ ಕೊಡುವ ಚುಚ್ಚುಮದ್ದು (ಐಎಂ) ನೀಡಲಾಗುತ್ತದೆ ಎಂದು ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಪೋಸ್ಟ್ ಮಾಡಿದ ಫೋಟೋ ಭಾರತ್ ಬಯೋಟೆಕ್ ಉಪಾಧ್ಯಕ್ಷರು ಕೋವ್ಯಾಕ್ಸಿನ್ (ಪ್ರಾಯೋಗಿಕ ಕೋವಿಡ್-19 ಲಸಿಕೆ) ಮೊದಲ ಡೋಸನ್ನು ತೆಗೆದುಕೊಳ್ಳುವುದನ್ನು ತೋರಿಸುವುದಿಲ್ಲ.