ಪ್ರತಿಭಟನೆಯಲ್ಲಿ ಗುಂಡು ಹಾರಿಸಿದ ಮುಸ್ಲಿಮರು ಎಂದು ಹಳೆಯ ವಿಡಿಯೋ ಹಂಚಿಕೊಂಡ ಬಲಪಂಥೀಯ ಬೆಂಬಲಿಗರು

ಉತ್ತರ ಪ್ರದೇಶದ ಕಾನ್ಪುರ ಹಿಂಸಾಚಾರದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಬಂದೂಕು ಝಳಪಿಸುತ್ತಿರುವ ಮತ್ತು ಜನರನ್ನು ಬೆದರಿಸುವ ಇತ್ತೀಚಿನ ದೃಶ್ಯಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪ್ರವಾದಿ ಮುಹಮ್ಮದ್ ಕುರಿತು ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ನೀಡಿದ ನಿಂದನಾತ್ಮಕ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇತ್ತೀಚೆಗೆ ನಡೆದ ಕಾನ್ಪುರ ಹಿಂಸಾಚಾರದ ಹಿನ್ನೆಲೆಯಲ್ಲಿ, ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಾಗಿದ್ದರೆ ವಿಡಿಯೊ  ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : ಕಾನ್ಪುರ ಹಿಂಸಾಚಾರದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಬಂದೂಕು ಝಳಪಿಸುತ್ತಿರುವ ಮತ್ತು ಜನರನ್ನು ಬೆದರಿಸುವ ಇತ್ತೀಚಿನ ವೀಡಿಯೊ.

ನಿಜಾಂಶ : ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಧೌರಾ ತಾಂಡಾ ಪಟ್ಟಣದಲ್ಲಿ ನಡೆದ ಹಳೆಯ ಘಟನೆಯನ್ನು ತೋರಿಸುತ್ತದೆ. ಈ ವೀಡಿಯೊವನ್ನು 09 ಮೇ 2021 ರಂದು ಒಂದೇ ಸಮುದಾಯದ ಎರಡು ಪಕ್ಷಗಳ ನಡುವೆ ಮಾಂಸದ ಖರೀದಿಗೆ ಸಂಬಂಧಿಸಿದಂತೆ ನಡೆದ ಜಗಳದ ಸಮಯದಲ್ಲಿ ಚಿತ್ರೀಕರಿಸಲಾಗಿದೆ. ವಿಡಿಯೋ ಹಳೆಯದಾಗಿದ್ದು, ಇತ್ತೀಚಿನ ಕಾನ್ಪುರ ಹಿಂಸಾಚಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ , 10 ಮೇ 2021 ರಂದು ‘ದೈನಿಕ್ ಭಾಸ್ಕರ್ ಯುಪಿ-ಯುಕೆ’ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊ ಕಂಡುಬಂದಿದೆ. ಈ ಚಾನಲ್ ಇದನ್ನು ಎರಡು ಗುಂಪುಗಳ ನಡುವೆ ಭುಗಿಲೆದ್ದ ಜಗಳದ ದೃಶ್ಯಗಳು ಎಂದು ವರದಿ ಮಾಡಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ಮಾಂಸ ಖರೀದಿ ವಿಚಾರದಲ್ಲಿ ಈ ಘರ್ಷಣೆ ನಡೆದಿದೆ ಎನ್ನಲಾಗಿದೆ.

ಅಂತರ್ಜಾಲದಲ್ಲಿ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ವಿವರಗಳನ್ನು ಹುಡುಕಿದಾಗ, 12 ಮೇ 2021 ರಂದು ‘ಅಮರ್ ಉಜಾಲಾ’ ಪ್ರಕಟಿಸಿದ ಲೇಖನದಲ್ಲಿ ಈ ಘಟನೆಯ ಹೆಚ್ಚಿನ ವಿವರಗಳನ್ನು ನಾವು ಕಂಡುಕೊಂಡಿದ್ದೇವೆ. ಘಟನೆಯ ಚಿತ್ರವನ್ನು ಹಂಚಿಕೊಳ್ಳುತ್ತಾ, ‘ಅಮರ್ ಉಜಾಲಾ’ ವರದಿ ಮಾಡಿದೆ. ಲಾಕ್‌ಡೌನ್, ಬರೇಲಿ ಜಿಲ್ಲೆಯ ಧೌರಾ ಥಂಡಾ ಪಟ್ಟಣದಲ್ಲಿ ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ವಿವಾದ ಉಂಟಾಗಿತ್ತು. ಲೇಖನದಲ್ಲಿ ಒದಗಿಸಲಾದ ವಿವರಗಳ ಪ್ರಕಾರ, ಜಲೀಶ್ ಅಹ್ಮದ್ ಅವರು ಸಲೀಂ ಖುರೇಷಿಗೆ ತಮ್ಮ ಅಂಗಡಿಯನ್ನು ಬಾಡಿಗೆಗೆ ನೀಡಿದ್ದರು, ಅವರು ಮಾಂಸವನ್ನು ಕಾನೂನುಬದ್ಧವಾಗಿ ಮಾರಾಟ ಮಾಡಬೇಕು. 09 ಮೇ 2021 ರಂದು, ಸಲೀಂ ಖುರೇಷಿ ತನ್ನ ಮಾಂಸವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ ಆರೋಪದ ಮೇಲೆ, ಜಲೀಶ್ ಅಹ್ಮದ್ ಸಲೀಂ ಖುರೇಷಿಯನ್ನು ತಕ್ಷಣ ಅಂಗಡಿಯನ್ನು ಖಾಲಿ ಮಾಡುವಂತೆ ಕೇಳಿಕೊಂಡರು. ಇದರಿಂದ ಮಾತಿನ ಚಕಮಕಿ ನಡೆದು ಅದೇ ಸಮುದಾಯದವರು ಸಲೀಂ ಖುರೇಷಿಗೆ ಥಳಿಸಿದ್ದಾರೆ. ಇದೇ ವೇಳೆ ಸಲೀಂ ಬೆಂಬಲಕ್ಕೆ ಆತನ ಕುಟುಂಬಸ್ಥರು ಆಯುಧಗಳೊಂದಿಗೆ ಸ್ಥಳಕ್ಕಾಗಮಿಸಿ ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಬೆದರಿಸತೊಡಗಿದರು. ಘಟನೆಯ ವಿವರಗಳನ್ನು ವರದಿ ಮಾಡಿದ ಬರೇಲಿ ಪೊಲೀಸರು 09 ಮೇ 2021 ರಂದು ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ, ಕಾನ್ಪುರ ಹಿಂಸಾಚಾರಕ್ಕೆ ಸಂಬಂಧಿಸಿ ಈ ಒಂದು ವರ್ಷದ ಹಳೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾಗ, ಬರೇಲಿ ಪೊಲೀಸರು ಟ್ವೀಟ್ ಮೂಲಕ ವೀಡಿಯೊ ಹಳೆಯದು ಮತ್ತು ಇತ್ತೀಚಿನ ಕಾನ್ಪುರ ಗಲಭೆಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವೀಡಿಯೊದ ಘಟನೆಯು ನೂಪುರ್ ಶರ್ಮಾ ಅವರ ಹೇಳಿಕೆಯ ನಂತರ ನಡೆದ ಘರ್ಷಣೆಯಿಂದಲ್ಲ ಎಂಬುದು  ಸ್ಪಷ್ಟವಾಗಿದೆ. ಮೇ 2021 ರ ಬರೇಲಿಯ ಧೌರಾ ತಾಂಡಾದಲ್ಲಿ ಮಾಂಸದ ಖರೀದಿಗೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಾಗ ಸೆರೆಯಾದ ವಿಡಿಯೋ ಎಂದು ಸ್ಪಷ್ಟವಾಗಿದೆ. ಭೋಜ್ಪುರ ಪೊಲೀಸರು ಕೂಡ ವೈರಲ್ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ..