ರಾಜಸ್ಥಾನದ ಹಳೆಯ ಫೋಟೋವನ್ನು ಉತ್ತರ ಪ್ರದೇಶ ಚುನಾವಣಾ ಪ್ರಚಾರಕ್ಕೆ ಹೋದ ಬಿಜೆಪಿ ನಾಯಕನನ್ನು ಥಳಿಸುತ್ತಿರುವ ಜನರು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಉತ್ತರ ಪ್ರದೇಶ ಚುನಾವಣಾ ಪ್ರಚಾರದ ಅಂಗವಾಗಿ ಮತ ಕೇಳಲು ಹೋದ ಬಿಜೆಪಿ ಮುಖಂಡನಿಗೆ ಜನರು ಥಳಿಸಿದ್ದಾರೆ ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗಿದೆ. ಇತ್ತೀಚೆಗೆ ಉತ್ತರ ಪ್ರದೇಶ ಚುನಾವಣಾ ಪ್ರಚಾರದ ವೇಳೆ ಈ ಘಟನೆ ನಡೆದಿದೆ ಎಂದು ಕೆಲವರು ಫೇಸ್ಬುಕ್ ನಲ್ಲಿ ಪ್ರತಿಪಾದಿಸಿದ್ದಾರೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಉತ್ತರ ಪ್ರದೇಶ ಚುನಾವಣೆ ಅಂಗವಾಗಿ ಮತ ಕೇಳಲು ಹೋದ ಬಿಜೆಪಿ ಮುಖಂಡನನ್ನು ಜನರು ಥಳಿಸಿ ಹೊರ ಹಾಕುತ್ತಿದ್ದಾರೆ.

ನಿಜಾಂಶ: ವೈರಲ್ ಆಗುತ್ತಿರುವ ಫೋಟೋ ಜುಲೈ 2021 ರಲ್ಲಿ ರಾಜಸ್ಥಾನದ ಬಿಜೆಪಿ ನಾಯಕ ಕೈಲಾಶ್ ಮೇಘವಾಲ್ ಮೇಲೆ ಪ್ರತಿಭಟನಾನಿರತ ರೈತರು ದಾಳಿ ಮಾಡುವ ದೃಶ್ಯಗಳೆಂದು ತಿಳಿದು ಬಂದಿದೆ. ಇದು ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ನಡೆದ ಘಟನೆಯಾಗಿದೆ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋ ಹಳೆಯದಾಗಿದ್ದು ಉತ್ತರ ಪ್ರದೇಶ ಚುನಾವಣೆಗೆ ಸಂಬಂಧಿಸಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೈರಲ್ ಆದ ಫೋಟೊ ಅನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ  ಜುಲೈ 30, 2021 ರಂದು ‘ಆಜ್ ತಕ್’ ಸುದ್ದಿ ಸಂಸ್ಥೆ  ಪ್ರಕಟಿಸಿದ ವರದಿಯಲ್ಲಿ ಅದೇ ಫೋಟೋ ಕಂಡುಬಂದಿದೆ. ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ರಾಜಸ್ಥಾನ ಬಿಜೆಪಿಯು 30 ಜುಲೈ 2021 ರಂದು ಶ್ರೀ ಗಂಗಾನಗರದಲ್ಲಿ ಕಾಂಗ್ರೆಸ್ ಆಡಳಿತದ ರಾಜ್ಯವಾದ ರಾಜಸ್ಥಾನದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ನೀರಾವರಿ ಸಮಸ್ಯೆಗಳ ಬಗ್ಗೆ ಪ್ರತಿಭಟನೆಯನ್ನು ನಡೆಸಿತು. ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳಿದ್ದ ಬಿಜೆಪಿ ಮುಖಂಡ ಕೈಲಾಶ್ ಮೇಘವಾಲ್ ಮೇಲೆ ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಈ ದಾಳಿಗೆ ಸಂಬಂಧಿಸಿದಂತೆ ಪ್ರಕಟವಾದ ಇನ್ನೂ ಕೆಲವು ಲೇಖನಗಳು ಮತ್ತು ವೀಡಿಯೊಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ವಿವರಗಳ ಆಧಾರದ ಮೇಲೆ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಹಳೆಯದು ಮತ್ತು ಉತ್ತರ ಪ್ರದೇಶ ಚುನಾವಣೆಗೆ ಸಂಬಂಧಿಸಿಲ್ಲ ಎಂದು ಖಾತ್ರಯಾಗಿದೆ

ಒಟ್ಟಾರೆಯಾಗಿ ಹೇಳುವುದಾದರೆ  ಉತ್ತರ ಪ್ರದೇಶ ಚುನಾವಣಾ ಪ್ರಚಾರಕ್ಕೆ ತೆರಳಿದ ಬಿಜೆಪಿ ನಾಯಕನಿಗೆ ಥಳಿಸಿದ್ದಾರೆ ಎಂದು ರಾಜಸ್ಥಾನದ ಹಳೆಯ ಫೋಟೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.