Fake News - Kannada
 

ಬಳ್ಳಾರಿಯಲ್ಲಿನ ಕಾಂಗ್ರೆಸ್ ಸಮಾವೇಶ ಎಂದು ನೈಜೀರಿಯಾದ ಪೋಟೋ ಹಂಚಿಕೆ

0

ಬಳ್ಳಾರಿಯಲ್ಲಿ ನಡೆದ ಭಾರತ ಐಕ್ಯತಾ ಯಾತ್ರಾ ರ್ಯಾಲಿಯಲ್ಲಿ ಭಾರೀ ಜನಸ್ತೋಮದ ಇತ್ತೀಚಿನ ಚಿತ್ರ ಎಂದು ಹೇಳುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಕಾಂಗ್ರೆಸ್‌ನ ‘ಭಾರತ್ ಜೋಡೊ ಯಾತ್ರೆ’ ಒಂದು ಸಾವಿರ ಕಿಲೋಮೀಟರ್ ಪೂರೈಸಿದ ಅಂಗವಾಗಿ ಅಕ್ಟೋಬರ್ 15ರಂದು ಬಳ್ಳಾರಿಯಲ್ಲಿ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಜನಸಾಗರವನ್ನು ಬಿಂಬಿಸುವ ಫೋಟೋ ಎಂಬ ಹೇಳಿಕೆಯೊಂದಿಗೆ ಈ ಫೊಟೊವನ್ನು ಹಂಚಿಕೊಳ್ಳಲಾಗಿದೆ. ಭಾರತ ಐಕ್ಯತಾ ಯಾತ್ರೆ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ನಡೆದ ಸಮಾವೇಶದ ಪೋಟೋ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗಿರುವ ಫೋಟೋದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅಪಾರ ಜನಸ್ತೋಮದ ಫೋಟೋ.

ನಿಜಾಂಶ: ಪೋಸ್ಟ್‌ನಲ್ಲಿರುವ ಫೋಟೋ ನೈಜೀರಿಯಾದಲ್ಲಿ ಸುವಾರ್ತಾಬೋಧಕ ರೀನ್‌ಹಾರ್ಡ್ ಬೊನ್ಕೆ ಅವರ ರ್ಯಾಲಿಗಾಗಿ ನೆರೆದಿದ್ದ ಬೃಹತ್ ಜನಸಮೂಹದ ಹಳೆಯ ಚಿತ್ರವನ್ನು ತೋರಿಸುತ್ತದೆ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋ ಹಳೆಯದಾಗಿದೆ ಮತ್ತು ಭಾರತ್ ಜೋಡೋ ಯಾತ್ರೆಗೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ ನಲ್ಲಿ ಸರ್ಚ್ ಮಾಡಿದಾಗ 2010 ರಲ್ಲಿ ‘Milost.sk’ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಅದೇ ಫೋಟೋ ಕಂಡುಬಂದಿದೆ. ಅದು ನೈಜೀರಿಯಾದ ಚಿತ್ರವಾಗಿದ್ದು 2010ರಲ್ಲಿ ಸೆರೆಹಿಡಿಯಲಾಗಿದೆ ಎಂದು ವಿವರಣೆಯಲ್ಲಿ ಬರೆಯಲಾಗಿದೆ.

ಮತ್ತಷ್ಟು ಮಾಹಿತಿಗಾಗಿ ಕೀವರ್ಡ್‌ಗಳನ್ನು ಬಳಸಿಕೊಂಡು  ಫೋಟೋವನ್ನು ಸರ್ಚ್ ಮಾಡಿದಾಗ, CfaN ಪ್ರೆಸ್ ಪೋರ್ಟಲ್‌ನಲ್ಲಿ ಪ್ರಕಟವಾದ ಚಿತ್ರ ಸಂಗ್ರಹದಲ್ಲಿ ನಮಗೆ ಅದೇ ಫೋಟೋ ಕಂಡುಬಂದಿದೆ. CfaN ಈ ಚಿತ್ರವನ್ನು ರೆನ್‌ಹಾರ್ಡ್ ಬೊನ್ಕೆ ಅವರ ರ್ಯಾಲಿಗಾಗಿ ನೆರೆದಿದ್ದ ಜನಸಮೂಹವನ್ನು ತೋರಿಸುವ ಚಿತ್ರ ಎಂದು ವಿವರಿಸಲಾಗಿದೆ. Reinhard Bonnke ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಇದೇ ರೀತಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. Reinhard Bonnke ಅವರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ವರದಿಯಲ್ಲಿ ಇದೇ ಚಿತ್ರದ ವಿವರಗಳು ಲಭ್ಯವಿವೆ.

ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರಾ ರ್ಯಾಲಿಗೆ ನೆರೆದಿದ್ದ ಜನಸಮೂಹದ ಫೋಟೋಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೋ ನೈಜೀರಿಯಾದಲ್ಲಿ ನಡೆದ ರ್ಯಾಲಿಯ ಹಳೆಯ ಪೋಟೊ ಎಂಬುದು ಖಾತ್ರಿಯಾಗಿದೆ. ಬಳ್ಳಾರಿಯ ಭಾರತ್ ಜೋಡೋ ಯಾತ್ರಾ ರ್ಯಾಲಿಗೆ ಈ ವೈರಲ್ ಫೋಟೋಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2010ರಲ್ಲಿ ನೈಜೀರಿಯಾದಲ್ಲಿ ನಡೆದಿದ್ದ ರ್ಯಾಲಿಯ ಸಂಬಂಧವಿಲ್ಲದ ಹಳೆಯ ಫೋಟೋವನ್ನು ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರಾ ರ್ಯಾಲಿಯಲ್ಲಿ ಭಾಗವಹಿಸಿದ ಜನಸಮೂಹ ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll