TRAI ಮೊಬೈಲ್ ಸೇವೆಗಳಿಗೆ 11-ಅಂಕಿಯ ಸಂಖ್ಯಾ ಯೋಜನೆಯನ್ನು ಶಿಫಾರಸ್ಸು ಮಾಡಿದೆ

TRAI (ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ಭಾರತದಲ್ಲಿ 10-ಅಂಕಿ ಮೊಬೈಲ್ ಸಂಖ್ಯೆಗಳನ್ನು 11-ಅಂಕಿಗಳಿಂದ ಬದಲಾಯಿಸಲು ಶಿಫಾರಸ್ಸು ಮಾಡಿದೆ ಎಂಬ ಪೋಸ್ಟ್ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ನ ಆರ್ಕೈವ್ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಮಂಡನೆ: TRAI ಭಾರತದಲ್ಲಿ 10-ಅಂಕಿ ಮೊಬೈಲ್ ಸಂಖ್ಯೆಗಳನ್ನು 11-ಅಂಕಿಗಳಿಂದ ಬದಲಾಯಿಸಲು ಶಿಫಾರಸ್ಸು ಮಾಡಿದೆ.

ನಿಜಾಂಶ: ಮೊಬೈಲ್ ಸೇವೆಗೆ 11-ಅಂಕಿಗಳ ಸಂಖ್ಯಾ ಯೋಜನೆಯನ್ನು ಶಿಫಾರಸ್ಸು ಮಾಡಿಲ್ಲವೆಂದು TRAI ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದೆ. ಮೊಬೈಲ್ ಸಂಖ್ಯೆಗಳ ಸಂಪನ್ಮೂಲ ಹೆಚ್ಚಿಸಿಕೊಳ್ಳುವುದಕ್ಕೆ 11-ಅಂಕಿಗಳ ಸಂಖ್ಯಾ ಯೋಜನೆ ಬಳಸುವುದು ಒಂದು ಆಯ್ಕೆ ಎಂದು ಪರಿಗಣಿಸಲಾಗಿತ್ತು, ಆದರೆ TRAI ಇದನ್ನು ತಿರಸ್ಕರಿಸಿದೆ. ಆದುದರಿಂದ ಪೋಸ್ಟ್ ನಲ್ಲಿ ಪ್ರತಿಪಾದಿಸಿರುವುದು ಸುಳ್ಳು.

ಪೋಸ್ಟ್ ನಲ್ಲಿ ಹೇಳಿರುವಂತೆ TRAI ಶಿಫಾರಸ್ಸುಗಳಿಗೆ ಹುಡುಕಿದಾಗ, “ಸ್ಥಿರ ಮತ್ತು ಮೊಬೈಲ್ ಸೇವೆಗಳಿಗೆ ಅಗತ್ಯವಾದ ಸಂಖ್ಯಾ ಸಂಪನ್ಮೂಲವನ್ನು ಖಾತ್ರಿಪಡಿಸಲು ಶಿಫಾರಸ್ಸುಗಳು” ಎಂಬ ಶೀರ್ಷಿಕೆಯೊಂದಿಗೆ TRAI, 29 ಮೇ 2020 ರಂದು ಬಿಡುಗಡೆ ಮಾಡಿರುವ ದಾಖಲೆಯಲ್ಲಿ ಅದೇ ವಾಕ್ಯವನ್ನು ನಮೂದಿಸಿರುವುದು ಕಂಡುಬಂದಿದೆ. ‘ಸಂಖ್ಯಾ ಸಂಪನ್ಮೂಲಗಳ ಅಂದಾಜು ಅಗತ್ಯ: ಪರಿಹಾರದ ಸಾಧ್ಯತೆಗಳು” ಎಂಬ ಉಪಶೀರ್ಷಿಕೆಯಡಿ ಅದು ಕಂಡುಬರುತ್ತದೆ. TRAI ಅದನ್ನು ಶಿಫಾರಸ್ಸು ಮಾಡಿಲ್ಲ. ಶಿಫಾರಸ್ಸು ಭಾಗದಲ್ಲಿ ಅಂತಹ ಯಾವುದೇ ಅಂಶವಿಲ್ಲ. ಬದಲಿ ಅವಕಾಶದ ಬಗ್ಗೆ TRAI ಅಭಿಪ್ರಾಯವನ್ನು ಇಲ್ಲಿ ಓದಬಹುದು.

10-ಅಂಕಿಗಳ ಮೊಬೈಲ್ ನಂಬರ್ ಅನ್ನು 11-ಅಂಕಿಗಳಿಂದ ಬದಲಿಸಲಾಗುತ್ತದೆ ಎಂಬ ಸಂದೇಶ ವೈರಲ್ ಆದಾಗ ಮೊಬೈಲ್ ಸೇವೆಗಳಿಗೆ 11-ಅಂಕಿಗಳ ಸಂಖ್ಯಾಧಾರಿತ ಯೋಜನೆಯನ್ನು ಶಿಫಾರಸ್ಸು ಮಾಡಿಲ್ಲ ಎಂದು TRAI ಪತ್ರಿಕಾ ಹೇಳಿಕೆ ನೀಡಿದೆ. 11-ಅಂಕಿಗಳ ಮೊಬೈಲ್ ಸಂಖ್ಯೆಯ ಯೋಜನೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿರುವುದಾಗಿ TRAI ಒತ್ತಿ ಹೇಳಿದೆ. ಮುಂದುವರೆದು “ಸ್ಥಿರ ದೂರವಾಣಿ ಸಂಖ್ಯೆಯಿಂದ ಮೊಬೈಲ್ ಸಂಖ್ಯೆಗೆ ಕರೆ ಮಾಡುವಾಗ ಮೊದಲು 0 ಒತ್ತುವಂತೆ ಶಿಫಾರಸ್ಸು ಮಾಡಿದ್ದೇವೆ. ಒಂದು ರೀತಿಯ ಕರೆಗೆ ಒಂದು ಅಂಕಿಯನ್ನು ಮೊದಲು ಒತ್ತುವಂತೆ ಪರಿಚಯಿಸಿರುವುದು, ದೂರವಾಣಿ ಸಂಖ್ಯೆಯ ಅಂಕಿಗಳನ್ನು ಹೆಚ್ಚಿಸಿದಂತಲ್ಲ’ ಎಂದು ಕೂಡ ಹೇಳಿದೆ. ಪತ್ರಿಕಾ ಹೇಳಿಕೆಯ ಪೂರ್ಣ ಪಾಠವನ್ನು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ TRAI 11-ಅಂಕಿಗಳ ಸಂಖ್ಯಾ ಯೋಜನೆಯನ್ನು ಮೊಬೈಲ್ ಸೇವೆಗೆಳಿಗೆ ಶಿಫಾರಸ್ಸು ಮಾಡಿಲ್ಲ. ಇಂಥ ಒಂದು ಬದಲಿ ಸಾಧ್ಯತೆಯನ್ನು ಈ ಸಂಸ್ಥೆ ತಿರಸ್ಕರಿಸಿದೆ.