ಈ ವೈರಲ್ ವೀಡಿಯೋದಲ್ಲಿ ಬುರ್ಖಾ ಧರಿಸಿದ ಬಾಲಕಿಯರು ಮತ್ತು ಬಾಲಕರ ನಡುವೆ ವಿಭಜನೆಯಿರುವ ತರಗತಿಯು ಮಹಾರಾಷ್ಟ್ರದ್ದು, ಕೇರಳದ್ದಲ್ಲ

ತರಗತಿಯೊಂದರಲ್ಲಿ ಬುರ್ಖಾ ಧರಿಸಿದ ಬಾಲಕಿಯರನ್ನು ಬಾಲಕರಿಂದ  ಪ್ರತ್ಯೇಕಿಸುವುದನ್ನು ತೋರಿಸುವ ವೈರಲ್ ವಿಡಿಯೋ (ಇಲ್ಲಿ) ಒಂದನ್ನು, ಅದು ಕೇರಳದ ತರಗತಿಯ ದೃಶ್ಯ  ಎಂಬ ಕ್ಲೈಮ್ ನೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದಲ್ಲಿ, ಆ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್‌ನ ಸತ್ಯಾಸತ್ಯತೆಯನ್ನು ನಾವು  ಪರಿಶೀಲಿಸೋಣ.

ಕ್ಲೇಮ್: ಬುರ್ಖಾ ಧರಿಸಿದ ಬಾಲಕಿಯರನ್ನು ಬಾಲಕರಿಂದ ವಿಭಜಕ ಗೋಡೆಯ ಮೂಲಕ ಪ್ರತ್ಯೇಕಿಸಿರುವ ಕೇರಳದ ತರಗತಿಯ ದೃಶ್ಯಗಳನ್ನು ಈ ವಿಡಿಯೋ ತೋರಿಸುತ್ತದೆ.

ಫ್ಯಾಕ್ಟ್: ತರಗತಿಯೊಂದರಲ್ಲಿ ಬುರ್ಖಾ ಧರಿಸಿದ ಬಾಲಕಿಯರನ್ನು ಬಾಲಕರಿಂದ ಪ್ರತ್ಯೇಕಿಸುದನ್ನು ತೋರಿಸುವ ಈ ವೈರಲ್ ವಿಡಿಯೋ ಕೇರಳದ್ದಲ್ಲ, ಬದಲಾಗಿ ಮಹಾರಾಷ್ಟ್ರದ್ದು. ಈ ವಿಡಿಯೋ ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ‘ಎಂ.ಓ.ಎಸ್. ಅಕಾಡೆಮಿ’  ಎಂಬ ಕೋಚಿಂಗ್ ಸಂಸ್ಥೆಗೆ ಸೇರಿದೆ. ಎಂ.ಓ.ಎಸ್. ಅಕಾಡೆಮಿಯ ನಿರ್ದೇಶಕರಾದ ಆಮರ್, ಈ ವಿಡಿಯೋ ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ತಮ್ಮ ಸಂಸ್ಥೆಯಲ್ಲಿ ದಾಖಲಾಗಿದೆ ಎಂಬುದನ್ನು ದೃಢಪಡಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪುದಾರಿಗೆಳೆಯುವಂತಿದೆ.

ವೈರಲ್ ವಿಡಿಯೋ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ನಾವು ಕ್ಲಿಪ್‌ನ ಪ್ರಮುಖ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಈ ಹುಡುಕಾಟವು ನಮ್ಮನ್ನು ಅದೇ ವಿಡಿಯೋಗೆ (ಆರ್ಕೈವ್ ಮಾಡಿದ ಲಿಂಕ್) ಕರೆದೊಯ್ಯಿತು, ಅದನ್ನು ಅಕ್ಟೋಬರ್ 10, 2025 ರಂದು @aamersrs_mos_academy ಎಂಬ  ಅಕೌಂಟ್ ಇನ್‌ಸ್ಟಾಗ್ರಾಮ್‌ನಲ್ಲಿ Balance your life with Deen and Duniya — that’s the formula for real success. #teaching #education #mosacademy #nanded #islamic #deen #duniya #aakhira #coaching  ಎಂಬ  ಕ್ಯಾಪ್ಷನ್ನೊಂದಿಗೆ ಅಪ್ಲೋಡ್ ಮಾಡಿತ್ತು. 

ಆಮರ್ ಎಸ್‌ಆರ್‌ಎಸ್’ ಅವರ ಇನ್‌ಸ್ಟಾಗ್ರಾಮ್ ಬಯೋ ಅವರನ್ನು ನಾಂದೇಡ್‌ನ MOS ಅಕಾಡೆಮಿಯ ನಿರ್ದೇಶಕ ಎಂದು ಗುರುತಿಸುತ್ತದೆ. ಇದೇ ವಿಡಿಯೋವನ್ನು ‘ಆಮರ್ ಎಸ್‌ಆರ್‌ಎಸ್’ ಅವರು ಫೇಸ್‌ಬುಕ್‌ನಲ್ಲಿಯೂ (ಆರ್ಕೈವ್ ಮಾಡಿದ ಲಿಂಕ್) ಅದೇ ದಿನಾಂಕದಂದು ಅದೇ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಪುಟಗಳಲ್ಲಿನ ಇತರ ವಿಡಿಯೋಗಳು ಸಹ, ಬಾಲಕಿಯರು ಮತ್ತು ಬಾಲಕರನ್ನು ಪ್ರತ್ಯೇಕಿಸುವ ವಿಭಜಕವನ್ನು ಹೊಂದಿರುವ ತರಗತಿಗಳ ಇದೇ ರೀತಿಯ ದೃಶ್ಯಗಳನ್ನು ತೋರಿಸುತ್ತವೆ.

ನಾವು ಕಂಡುಕೊಂಡಂತೆ, MOS ಅಕಾಡೆಮಿಯು ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ಒಂದು ಕೋಚಿಂಗ್ ಸಂಸ್ಥೆಯಾಗಿದ್ದು, NEET, MHT-CET, JEE ಮತ್ತು ಇತರ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತದೆ.​ನಂತರ, ನಾವು MOS ಅಕಾಡೆಮಿಯ ನಿರ್ದೇಶಕರಾದ ಆಮರ್ ಅವರನ್ನು ಸಂಪರ್ಕಿಸಿದೆವು. ಅವರು Factly ಗೆ ದೃಢೀಕರಿಸಿದಂತೆ, ಈ ವಿಡಿಯೋ ಕೇರಳದಲ್ಲಿ ಅಲ್ಲ, ಬದಲಿಗೆ ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ತಮ್ಮ  ಸಂಸ್ಥೆಯದ್ದು ಎಂದು ತಿಳಿಸಿದ್ದಾರೆ.

ಇತ್ತೀಚೆಗೆ, ಕೇರಳದಲ್ಲಿ ವಿಸ್ಡಂ ಇಸ್ಲಾಮಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (WISO) ಎಂಬ ಧಾರ್ಮಿಕ ಯುವ ವೇದಿಕೆಯು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪುರುಷ ಮತ್ತು ಮಹಿಳಾ ಭಾಗವಹಿಸುವವರನ್ನು ಬಟ್ಟೆಯ ಪರದೆಯ ಮೂಲಕ ಪ್ರತ್ಯೇಕಿಸಿದ ನಂತರ ವಿವಾದ ಭುಗಿಲೆದ್ದಿತು. ಈ ಕಾರ್ಯಕ್ರಮವು WISO ವಾರ್ಷಿಕವಾಗಿ ನಡೆಸುವ ಪ್ರೊಫೆಷನಲ್ ಸ್ಟೂಡೆಂಟ್ಸ್ ಗ್ಲೋಬಲ್ ಕಾನ್ಫರೆನ್ಸ್  ProfConನ ಪೂರ್ವಭಾವಿ ಕಾರ್ಯಕ್ರಮವಾಗಿತ್ತು, ಇದು ಈ ವರ್ಷ ಮಂಗಳೂರಿನಲ್ಲಿ ನಡೆಯಬೇಕಿತ್ತು. ಸಂಸ್ಥೆಯ ಸಾಮಾಜಿಕ ಮಾಧ್ಯಮ ಪುಟದ ಪ್ರಕಾರ, ಅದರ ಕೊಚ್ಚಿನ್ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ (CUSAT) ಘಟಕವು ಆಯೋಜಿಸಿದ್ದ ಕ್ಯಾಂಪಸ್ ಚರ್ಚೆಯನ್ನು ಸೆಪ್ಟೆಂಬರ್ 15, 2025 ರಂದು CUSAT ಬಳಿಯ ಸಮುದಾಯ ಭವನದಲ್ಲಿ ನಡೆಸಲಾಗಿತ್ತು. ‘wisdom_cusat’ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡ ಚಿತ್ರಗಳು, ಸಭಾಂಗಣದ ಕೊನೆಯ ಸಾಲುಗಳಲ್ಲಿ ಕುಳಿತಿದ್ದ ಮಹಿಳಾ ಭಾಗವಹಿಸುವವರನ್ನು ಪುರುಷ ಭಾಗವಹಿಸುವವರಿಂದ ಪ್ರತ್ಯೇಕಿಸುವ ಹಳದಿ ಬಟ್ಟೆಯ ಪರದೆಯನ್ನು ತೋರಿಸಿದವು.​ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನ ಕೇರಳ ರಾಜ್ಯ ಘಟಕ ಸೇರಿದಂತೆ ವಿವಿಧ ವ್ಯಕ್ತಿಗಳು ಮತ್ತು ಸಂಸ್ಥೆಗಳು ಕ್ಯಾಂಪಸ್‌ನಲ್ಲಿ ಲಿಂಗ ಪ್ರತ್ಯೇಕತೆಯನ್ನು ಆರೋಪಿಸಿ ಈ ಕಾರ್ಯಕ್ರಮದ ವಿರುದ್ಧ ಪ್ರತಿಭಟಿಸಿದರು. ಇದರ ಬೆನ್ನಲ್ಲೇ, CUSAT ವಿಶ್ವವಿದ್ಯಾಲಯವು ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಆನ್‌ಲೈನ್ ಪೋರ್ಟಲ್ ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರ ವಿರುದ್ಧ ಪೊಲೀಸ್ ದೂರನ್ನು ದಾಖಲಿಸಿತು. ಅಲ್ಲದೆ, ವಿಶ್ವವಿದ್ಯಾಲಯವು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ, ಈ ಕಾರ್ಯಕ್ರಮದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿತು ಮತ್ತು ‘ProfCon’ ಹೆಸರಿನ ಯಾವುದೇ ಕಾರ್ಯಕ್ರಮವನ್ನು CUSAT ತನ್ನ ಕ್ಯಾಂಪಸ್‌ನ ಒಳಗೆ ಅಥವಾ ಹೊರಗೆ ಆಯೋಜಿಸಿರಲಿಲ್ಲ ಎಂದು ಸ್ಪಷ್ಟಪಡಿಸಿತು (ಇಲ್ಲಿ, ಇಲ್ಲಿ ಮತ್ತು ಇಲ್ಲಿ).

ಕೊನೆಯದಾಗಿ ಹೇಳುವುದಾದರೆ, ತರಗತಿಯೊಂದರಲ್ಲಿ ಬುರ್ಖಾ ಧರಿಸಿದ ಬಾಲಕಿಯರನ್ನು ಬಾಲಕರಿಂದ ಪ್ರತ್ಯೇಕಿಸುವ   ಲೋ ಪಾರ್ಟಿಶನ್ ತೋರಿಸುವ ಈ ವೈರಲ್ ವಿಡಿಯೋ ಕೇರಳದ್ದಲ್ಲ, ಬದಲಾಗಿ ಮಹಾರಾಷ್ಟ್ರದ್ದು.