ಇದು ಬ್ಯಾಟರಿ ರಹಿತ ‘ಇರಾಕಿಟ್’ ಎಲೆಕ್ಟ್ರಿಕ್ ಮೋಟಾರ್ ಬೈಕ್‌ ಅಲ್ಲ; ಇದು ಬ್ಯಾಟರಿಯ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ

ಬ್ಯಾಟರಿ ಅಥವಾ ಪೆಟ್ರೋಲ್ ಬಳಸದೆ 90 ಕಿಮೀ ವೇಗದಲ್ಲಿ ಚಲಿಸಬಲ್ಲ ಪೆಡಲ್ ನಿಯಂತ್ರಿತ ಬೈಕಿನ ದೃಶ್ಯಗಳು ಎಂದು ಹೇಳಿಕೊಳ್ಳುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಬ್ಯಾಟರಿ ಅಥವಾ ಪೆಟ್ರೋಲ್ ಬಳಸದೆ 90kmph ವೇಗದಲ್ಲಿ ಚಲಿಸಬಲ್ಲ ಪೆಡಲ್ ಬೈಕ್‌ನ ವಿಡಿಯೋ.

ಸತ್ಯ: ಈ ವೀಡಿಯೊ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಮೋಟಾರ್ ಸೈಕಲ್, ‘ಇರಾಕಿಟ್’ ಅನ್ನು ತೋರಿಸುತ್ತದೆ. ‘EROCKIT’ ಜರ್ಮನಿ ಮೂಲದ ‘eROCKITGermany’ ಕಂಪನಿಯಿಂದ ತಯಾರಿಸಿದ ಮೊದಲ ಪೆಡಲ್-ನಿಯಂತ್ರಿತ ಎಲೆಕ್ಟ್ರಿಕ್ ಮೋಟಾರ್ ಬೈಕ್‌ ಆಗಿದೆ. ಈ ಎಲೆಕ್ಟ್ರಿಕ್ ಮೋಟಾರ್ ಸೈಕಲ್ 90kmph ಗರಿಷ್ಠ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಸಂಪೂರ್ಣ ಚಾರ್ಜ್ ಮಾಡಿದ ‘ಇರಾಕಿಟ್’ ಬೈಕ್ ಗರಿಷ್ಠ 120 ಕಿಮೀ ದೂರವನ್ನು ಕ್ರಮಿಸುತ್ತದೆ. ಪೆಡಲ್ ಬಳಸಿ ಇದು ವಾಹನದ ವೇಗವನ್ನು ನಿಯಂತ್ರಿಸುತ್ತದೆಯಾದರೂ, ಇದು ಕಾರ್ಯನಿರ್ವಹಿಸಲು ಬ್ಯಾಟರಿಯ ಅಗತ್ಯವಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದಲ್ಲಿ ತೋರಿಸಿರುವ ಮೋಟಾರ್ ಸೈಕಲ್‌ನಲ್ಲಿ ನಾವು ‘ಇರಾಕಿಟ್’ ಹೆಸರನ್ನು ನೋಡಬಹುದು. ಈ ಕೀವರ್ಡ್‌ಗಳನ್ನು ಬಳಸಿಕೊಂಡು ನಾವು ಬೈಕ್ ವಿವರಗಳನ್ನು ಹುಡುಕಿದಾಗ, ಇದೇ ರೀತಿಯ ವೀಡಿಯೊ ‘eROCKITGermany‘ ಕಂಪನಿ ಫೇಸ್‌ಬುಕ್ ಪುಟದಲ್ಲಿ ಕಂಡುಬರುತ್ತದೆ. ಅವರು ಇದನ್ನು ವಿಶ್ವದ ಮೊದಲ ಪೆಡಲ್ ನಿಯಂತ್ರಿತ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ‘ಇರಾಕಿಟ್’ನ ದೃಶ್ಯಗಳೆಂದು ಉಲ್ಲೇಖಿಸಿದ್ದಾರೆ. ಈ ವಾಹನವನ್ನು ಜರ್ಮನಿ ಮೂಲದ ‘eROCKITGermany’ ಕಂಪನಿ ತಯಾರಿಸಿದೆ. ಕಾಮೆಂಟ್ ವಿಭಾಗದಲ್ಲಿರುವ ಬಳಕೆದಾರರು ‘ಇರಾಕಿಟ್’ ಮೋಟಾರ್‌ಸೈಕಲ್‌ಗೆ ಇತರ ಎಲೆಕ್ಟ್ರಿಕ್ ಬೈಕ್‌ಗಳಂತೆಯೇ ನಿರಂತರ ಚಾರ್ಜಿಂಗ್ ಅಗತ್ಯವಿದೆಯೇ ಎಂದು ಕೇಳಿದಾಗ, ಕಂಪನಿಯ ಅಧಿಕಾರಿಗಳು ‘ಇರಾಕಿಟ್’ ಎಲೆಕ್ಟ್ರಿಕ್ ವಾಹನವನ್ನು ಸಾಮಾನ್ಯ ಸಾಕೆಟ್‌ನಲ್ಲಿ ನಾಲ್ಕು ಗಂಟೆಗಳ ಕಾಲ ಚಾರ್ಜ್ ಮಾಡಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

‘EROCKIT’ ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಸಂಪೂರ್ಣ ಚಾರ್ಜ್ ಮಾಡಿದ 6.6 kwh ಬ್ಯಾಟರಿ ಸಾಮರ್ಥ್ಯದ ‘eROCKIT’ ಮೋಟಾರ್‌ಸೈಕಲ್ ಗರಿಷ್ಠ 120 ಕಿ.ಮೀ ಕ್ರಮಿಸುತ್ತದೆ.

‘ಇರಾಕಿಟ್’ ಮೋಟಾರ್‌ಸೈಕಲ್‌ನಲ್ಲಿ ವೇಗ ನಿಯಂತ್ರಣವು ಸಾಂಪ್ರದಾಯಿಕ ಮೋಟಾರ್‌ಸೈಕಲ್‌ಗಳನ್ನು ಹೋಲುವಂತಿಲ್ಲ. ‘ಇರಾಕಿಟ್’ ಒಂದು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಆಗಿದ್ದು, ಅದರ ವೇಗವನ್ನು ಪೆಡಲ್ ಬಳಸಿ ನಿಯಂತ್ರಿಸಲಾಗುತ್ತದೆ. ವೇಗವಾಗಿ ಪೆಡಲ್ ಮಾಡುವವನು ವೇಗವಾಗಿ ಚಲಿಸುತ್ತಾನೆ ಮತ್ತು ನಿಧಾನವಾಗಿ ಪೆಡಲ್ ಮಾಡುವವನು ನಿಧಾನ ಸವಾರಿ ಮಾಡುತ್ತಾನೆ. ಈ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಮೋಟಾರ್ ಸೈಕಲ್ 90 ಕಿಮೀ ವೇಗದಲ್ಲಿ ಚಲಿಸಬಲ್ಲದು. ಈ ಎಲ್ಲ ವಿವರಗಳನ್ನು ‘eROCKITGermany’ ಕಂಪನಿಯು ಮಾಡಿದ ಇತರ ಫೇಸ್‌ಬುಕ್ ಪೋಸ್ಟ್‌ಗಳಲ್ಲಿ ಒದಗಿಸಲಾಗಿದೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ‘ಇರಾಕಿಟ್’ ಮೋಟಾರ್ ಸೈಕಲ್‌ಗೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿಯನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಪೆಡಲ್ ಬಳಸಿ ವೇಗವನ್ನು ನಿಯಂತ್ರಿಸುವ ಬ್ಯಾಟರಿ ಚಾಲಿತ ‘ಇರಾಕಿಟ್’ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಅನ್ನು ಈ ವೀಡಿಯೊ ತೋರಿಸುತ್ತದೆ.