ಇದು ಪಾಕಿಸ್ತಾನದಲ್ಲಿ ಮುಸ್ಲಿಂ ಗುಂಪು ಹಿಂದೂ ದೇವಾಲಯವನ್ನು ಧ್ವಂಸಗೊಳಿಸುತ್ತಿರುವ ವಿಡಿಯೊವಾಗಿದೆಯೆ ಹೊರತು, ಅಫ್ಘಾನಿಸ್ತಾನದ್ದಲ್ಲ

‘ತಾಲಿಬಾನ್‌ ಬಂಡುಕೋರರು ಅಫ್ಘಾನಿಸ್ತಾನದ ಹಿಂದೂ ದೇವಸ್ಥಾನವನ್ನು ಧ್ವಂಸಗೊಳಿಸುತ್ತಿದ್ದಾರೆ’ ಎಂದು ಪ್ರತಿಪಾದಿಸಿ, ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೊದಲ್ಲಿ, ಉದ್ರಿಕ್ತ ಮುಸ್ಲಿಂ ಗುಂಪೊಂದು ಹಿಂದೂ ದೇವತೆಗಳ ಪ್ರತಿಮೆಗಳನ್ನು ಮತ್ತು ದೇವಾಲಯದೊಳಗಿನ ಮೂಲಸೌಕರ್ಯಗಳನ್ನು ಧ್ವಂಸಗೊಳಿಸುವುದನ್ನು ಕಾಣುತ್ತಿದೆ. ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ತಾಲಿಬಾನ್ ಬಂಡುಕೋರರು ಅಫ್ಘಾನಿಸ್ತಾನದಲ್ಲಿ ಹಿಂದೂ ದೇವಾಲಯವನ್ನು ಧ್ವಂಸ ಮಾಡುವ ವಿಡಿಯೋ.

ನಿಜಾಂಶ: ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಪಾಕಿಸ್ತಾನದಲ್ಲಿ ನಡೆದ ಇತ್ತೀಚಿನ ಘಟನೆಯ ವಿಡಿಯೊವಾಗಿದೆಯೆ ಹೊರತು, ಅಫ್ಘಾನಿಸ್ತಾನದ್ದಲ್ಲ. ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದ ಭೋಂಗ್‌ನಲ್ಲಿರುವ ಮುಸ್ಲಿಮರ ಗುಂಪು, ಹಿಂದೂ ದೇವಾಲಯವನ್ನು ಧ್ವಂಸಗೊಳಿಸುವುದನ್ನು ಈ ವೀಡಿಯೊದಲ್ಲಿ ಕಾಣುತ್ತಿದೆ. ಈ ವಿಡಿಯೋಗೂ ಅಫ್ಘಾನಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಆದುದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವಿಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್‌ ಮೂಲಕ ಹುಡುಕಿದಾಗ, ಇದೇ ರೀತಿಯ ದೃಶ್ಯಗಳು ‘ಸಿಎನ್ಎನ್-ನ್ಯೂಸ್ 1’ ಯುಟ್ಯೂಬ್ ಚಾನೆಲ್, 2021 ರ ಆಗಸ್ಟ್ 5 ರಂದು ಪ್ರಕಟಿಸಿದ ವೀಡಿಯೋದಲ್ಲಿ ಕಂಡುಬಂದಿದೆ. ಈ ಸುದ್ದಿ ಚಾನಲ್ ಇದನ್ನು, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಮುಸ್ಲಿಂ ಗುಂಪೊಂದು ಹಿಂದೂ ದೇವಸ್ಥಾನವನ್ನು ಧ್ವಂಸ ಮಾಡುವ ದೃಶ್ಯವೆಂದು ವರದಿ ಮಾಡಿದೆ. ಇದೇ ರೀತಿಯ ವರದಿಯನ್ನು ಇತರ ಕೆಲವು ಸುದ್ದಿ ವೆಬ್‌ಸೈಟ್‌ಗಳು ಮಾಡಿದ್ದು, ಅವು ತಮ್ಮ ಯೂಟ್ಯೂಬ್ ಚಾನೆಲ್‌ಗಳಲ್ಲಿ ಇದೇ ರೀತಿಯ ವೀಡಿಯೊಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

‘ಅಲ್‌ಜಝೀರಾ’ ಸುದ್ದಿ ವೆಬ್‌ಸೈಟ್‌ ಈ ಘಟನೆಯ ಸಂಪೂರ್ಣ ವಿವರಗಳನ್ನು ವರದಿ ಮಾಡುತ್ತಾ, 2021 ರ ಆಗಸ್ಟ್ 10 ರಂದು ಒಂದು ಲೇಖನವನ್ನು ಪ್ರಕಟಿಸಿತು. ಆ ಲೇಖನದ ಪ್ರಕಾರ, ಮುಸ್ಲಿಮರ ಗುಂಪೊಂದು ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದ ಭೋಂಗ್‌ನಲ್ಲಿರುವ ಒಂದು ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿತು. ಈ ಘಟನೆ 2021 ರ ಆಗಸ್ಟ್ 04 ರಂದು ನಡೆಯಿತು. ಧರ್ಮ ನಿಂದನೆ ಪ್ರಕರಣದಲ್ಲಿ ಆರೋಪಿಯಾಗಿರುವ 8 ವರ್ಷದ ಹಿಂದೂ ಬಾಲಕನಿಗೆ ಜಾಮೀನು ನೀಡಿದ ನ್ಯಾಯಾಲಯದ ತೀರ್ಪಿನಿಂದ ಕೋಪಗೊಂಡ ಮುಸ್ಲಿಂ ಗುಂಪು ಈ ಕೃತ್ಯವನ್ನು ಎಸಗಿತ್ತು. ಈ ದಾಳಿಯಲ್ಲಿ ಭಾಗಿಯಾದ 90 ಜನ ಶಂಕಿತರನ್ನು ಪಂಜಾಬ್ ಜಿಲ್ಲಾ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಪಾಕಿಸ್ತಾನ ಸರ್ಕಾರವು ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಪೂರ್ಣಗೊಳಿಸಿ ಮತ್ತು ಒಂದು ವಾರದೊಳಗೆ ಅದನ್ನು ಹಿಂದೂ ಸಮುದಾಯಕ್ಕೆ ಹಸ್ತಾಂತರಿಸಿದೆ ಎಂದು ವರದಿಯಾಗಿದೆ. ದಿ ಹಿಂದೂ ಸುದ್ದಿ ವೆ‌ಬ್‌ಸೈಟ್‌ ಕೂಡಾ ಇದೆ ಸುದ್ದಿಯನ್ನು ವರದಿ ಮಾಡಿ, 2021 ರ ಆಗಸ್ಟ್  10 ರಂದು ಒಂದು ಲೇಖನ ವನ್ನು ಪ್ರಕಟಿಸಿದೆ.

ಒಟ್ಟಿನಲ್ಲಿ, ಸಂಕ್ಷಿಪ್ತವಾಗಿ ಹೇಳಬಹುದಾದರೆ, ಪಾಕಿಸ್ತಾನದ ಮುಸ್ಲಿಂ ಗುಂಪೊಂದು ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ ವಿಡಿಯೋವನ್ನು ಅಫ್ಘಾನಿಸ್ತಾನದಲ್ಲಿ ನಡೆದಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.