ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದಲ್ಲಿ ರಸ್ತೆಗಳಲ್ಲಿ ಆಳವಾದ ಗುಂಡಿಗಳಿರುವುದರಿಂದ ಪೋಲೀಸರು ತೆರಳುತ್ತಿದ್ದ ವಾಹನ ಪಲ್ಟಿ ಹೊಡೆದಿದೆ ಎಂದು ಹೇಳಿಕೊಳ್ಳುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ನೀರು ತುಂಬಿದ ರಸ್ತೆಯಲ್ಲಿ ಉರುಳಿದ ವಾಹನದಿಂದ ಪೊಲೀಸರ ಗುಂಪು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದನ್ನು ಈ ವಿಡಿಯೋ ತೋರಿಸುತ್ತದೆ. ಈ ಪೋಸ್ಟ್ನಲ್ಲಿ ಹೇಳಿರುವ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ನೀರಿನಿಂದ ತುಂಬಿದ ರಸ್ತೆಯಲ್ಲಿ ಉರುಳಿದ ವಾಹನದಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಿರುವ ಯುಪಿ ಪೋಲಿಸರ ವಿಡಿಯೊ.
ಸತ್ಯಾಂಶ: ಈ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯ ಬಂಡಿಕುಯಿ ಪಟ್ಟಣದಲ್ಲಿ ನಡೆದಿದೆ. ಕೊಲಾನಾ ಜೈಲಿಗೆ ಕಾವಲುಗಾರರನ್ನು ಹೊತ್ತೊಯ್ಯುತ್ತಿದ್ದ ವಿದ್ಯುತ್ ರಿಕ್ಷಾ ದೌಸಾದ ಜಲಾವೃತ ಬೀದಿಯಲ್ಲಿ ಪ್ರಯಾಣಿಸುತ್ತಿದ್ದಾಗ ಪಲ್ಟಿಯಾಗಿದೆ. ಈ ವಿಡಿಯೊಗೂ ಉತ್ತರ ಪ್ರದೇಶಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ವಿಡಿಯೊದಲ್ಲಿನ ಸ್ಕ್ರೀನ್ಶಾಟ್ಗಳನ್ನು ಗೂಗಲ್ನಲ್ಲಿ ಹುಡುಕಾಡಿದಾಗ, ಇದೇ ರೀತಿಯ ವಿಡಿಯೊವು ‘ಡೈನಿಕ್ ಭಾಸ್ಕರ್’ ಸುದ್ದಿ ವೆಬ್ಸೈಟ್ನಲ್ಲಿ ಅಕ್ಟೋಬರ್ 01, 2021 ರಂದು ಪ್ರಕಟಿಸಿದ ಲೇಖನದಲ್ಲಿ ಕಂಡುಬಂದಿದೆ. ಈ ಲೇಖನವು ಪೋಲೀಸರು ಕೆಳಗೆ ಉರುಳಿದ ವಾಹನದಿಂದ ತಮ್ಮನ್ನು ರಕ್ಷಿಸಿಕೊಳ್ಳುವ ದೃಶ್ಯಗಳನ್ನು ವರದಿ ಮಾಡಿದೆ. ಈ ಘಟನೆ 30 ಸೆಪ್ಟೆಂಬರ್ 2021 ರಂದು ರಾಜಸ್ಥಾನದ ದೌಸಾದ ಬಂಡಿಕುಯಿ ಪಟ್ಟಣದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಲೇಖನದ ಪ್ರಕಾರ, ಬಂಡಿಕುಯಿ ಪಟ್ಟಣದಲ್ಲಿ 30 ಸೆಪ್ಟೆಂಬರ್ 2021 ರಂದು ಭಾರೀ ಮಳೆಯಾಯಿತು. ಕೋಲಾನಾ ಜೈಲಿಗೆ ಐವರು ಗಾರ್ಡ್ಗಳನ್ನು ಕರೆದುಕೊಂಡು ಹೋಗುತ್ತಿದ್ದ ವಿದ್ಯುತ್ ರಿಕ್ಷಾ ಬಂಡಿಕುಯಿಯಲ್ಲಿ ನೀರು ತುಂಬಿದ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಗುಂಡಿಯಲ್ಲಿ ಸಿಲುಕಿಕೊಂಡಿದೆ ಎಂದು ವರದಿಯಾಗಿದೆ. ವಾಹನ ಪಲ್ಟಿಯಾದ ತಕ್ಷಣ ಇ-ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಐವರು ಪೊಲೀಸರು ಮಳೆ ನೀರಿಗೆ ಬಿದ್ದಿದ್ದಾರೆ.
ಇದೇ ಘಟನೆಯನ್ನು ವರದಿ ಮಾಡುತ್ತಾ, ಇತರ ಕೆಲವು ಸುದ್ದಿ ವೆಬ್ಸೈಟ್ಗಳು ತಮ್ಮ ಯೂಟ್ಯೂಬ್ ಚಾನೆಲ್ಗಳಲ್ಲಿ ವಿಡಿಯೊಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಕಾಣಬಹುದು.
ಈ ವಿಡಿಯೊ ಉತ್ತರ ಪ್ರದೇಶದ ರಸ್ತೆಗಳ ದಯನೀಯ ಸ್ಥಿತಿಯ ದೃಶ್ಯಗಳು ಎಂದು ವೈರಲ್ ಆದಾಗ, ವೀಡಿಯೊವು ಉತ್ತರ ಪ್ರದೇಶದಿಂದಲ್ಲ, ರಾಜಸ್ಥಾನದಲ್ಲಿ ನಡೆದ ಘಟನೆಯನ್ನು ತೋರಿಸುತ್ತದೆ ಎಂದು ‘ಉತ್ತರ ಪ್ರದೇಶ ಪೋಲೀಸ್ ಫ್ಯಾಕ್ಟ್ ಚೆಕ್’ ತಂಡ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.
ಒಟ್ಟಾರೆ ಸಂಕ್ಷಿಪ್ತವಾಗಿ ಹೇಳುವುದಾದರೆ, ರಾಜಸ್ಥಾನ ಪೊಲೀಸರು ನೀರಿಗೆ ಉರುಳಿದ ವಾಹನದಿಂದ ತಮ್ಮನ್ನು ರಕ್ಷಿಸಿಕೊಳ್ಳುವ ವಿಡಿಯೊವನ್ನು ಉತ್ತರ ಪ್ರದೇಶದ ದೃಶ್ಯಗಳಂತೆ ತಪ್ಪಾಗಿ ಹಂಚಿಕೊಳ್ಳಲಾಗಿದೆ.