ತನ್ನ ರಿಕ್ಷಾ ಕಸಿದುಕೊಂಡಿದ್ದಕ್ಕೆ ರಿಕ್ಷಾ ಚಾಲಕನೊಬ್ಬ ಅಳುತ್ತಿರುವ ವೀಡಿಯೋ ಭಾರತದ್ದಲ್ಲ; ಬಾಂಗ್ಲಾದೇಶದ್ದು

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವ್ಯಾಪಕವಾಗಿ ಹರಿದಾಡುತ್ತಿದ್ದು, ಸರ್ಕಾರಿ ಅಧಿಕಾರಿಗಳು ವ್ಯಕ್ತಿಯೊಬ್ಬನ ರಿಕ್ಷಾವನ್ನು ವಶಪಡಿಸಿಕೊಂಡಿದ್ದರಿಂದ ರಿಕ್ಷಾ ಎಳೆಯುವವನು ಅಳುತ್ತಿರುವ ವೀಡಿಯೊವನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು, “ನಮ್ಮ ದೇಶದಲ್ಲಿ ಕಾನೂನು ಬಡ ಜನರಿಗೆ ಮಾತ್ರ, ಈ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ ನಲ್ಲಿ ಮಾಡಿರುವ ಪ್ರತಿಪಾದನೆ ನಿಜವೆ ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ತನ್ನ ರಿಕ್ಷಾವನ್ನು ಸರ್ಕಾರಿ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿರುವಾಗ ಭಾರತದ ರಿಕ್ಷಾ ಚಾಲಕನೊಬ್ಬ ಅಳುತ್ತಿರುವ ವಿಡಿಯೋ.

ಸತ್ಯಾಂಶ: ವೀಡಿಯೊದಲ್ಲಿ ಅಳುತ್ತಿರುವ ವ್ಯಕ್ತಿ ಬಾಂಗ್ಲಾದೇಶದ ಡಾಕಾದಲ್ಲಿ ರಿಕ್ಷಾ ಎಳೆಯುವ ಫಜ್ಲೂರ್ ರಹಮಾನ್ . ‘05 ಅಕ್ಟೋಬರ್ 2020 ’ರಂದು ಡಾಕಾ ಮುನ್ಸಿಪಲ್ ಕಾರ್ಪೊರೇಷನ್ ಆತನ ರಿಕ್ಷಾವನ್ನು ವಶಪಡಿಸಿಕೊಳ್ಳುತ್ತಿದ್ದಂತೆ ಫಜ್ಲೂರ್ ರಹಮಾನ್ ಅಳತೊಡಗಿದ್ದಾನೆ. ಹಾಗಾಗಿ ಈ ಘಟನೆ ಭಾರತಕ್ಕೆ ಸಂಬಂಧಿಸಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳಾಗಿದೆ.

ಈ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೀಡಿಯೊದಲ್ಲಿ ಕಂಡುಬರುವ ಕೆಲವು ಪಠ್ಯವು ಬಂಗಾಳಿ ಭಾಷೆಯಲ್ಲಿದೆ ಎಂದು ತಿಳಿದುಬಂದಿದೆ. ಅಲ್ಲದೆ, ವೀಡಿಯೊದ 0.25 ನಿಮಿಷದ  ಅವಧಿಯಲ್ಲಿ ವ್ಯಕ್ತಿಯು ಅಳುತ್ತಿರುವಾಗ ‘ಜಮುನಾ ಟಿವಿ’ಯ ಲೋಗೋ ಇರುವ ಮೈಕ್‌ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ. ‘ಜಮುನಾ ಟಿವಿ’ ಬಾಂಗ್ಲಾದೇಶ ಮೂಲದ ಸುದ್ದಿ ವಾಹಿನಿಯಾಗಿದೆ.

ಈ ಕೀವರ್ಡ್‌ಗಳನ್ನು ಬಳಸಿಕೊಂಡು ವೀಡಿಯೊ ಕುರಿತ ಮಾಹಿತಿಗಾಗಿ ಹುಡುಕಿದಾಗ, 06 ಅಕ್ಟೋಬರ್ 2020 ರಂದು ಜಮುನಾ ಟಿವಿ ಅಧಿಕೃತ ಯೂಟ್ಯೂಬ್ ಚಾನೆಲ್ ಪೋಸ್ಟ್ ಮಾಡಿದ ವೀಡಿಯೊದಲ್ಲಿಯೂ ಇದೇ ದೃಶ್ಯಗಳು ಕಂಡುಬಂದಿದೆ. ವೀಡಿಯೊದಲ್ಲಿ, ಇದನ್ನು ರಿಕ್ಷಾ-ಎಳೆಯುವವರ ಕಿರುಚಾಟ ಎಂದು ವಿವರಿಸಲಾಗಿದೆ. ಯೂಟ್ಯೂಬ್‌ನಲ್ಲಿ ಬಾಂಗ್ಲಾದೇಶದ ನ್ಯೂಸ್ ಪೋರ್ಟಲ್ ‘bdnews24.com’ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ. ಈ ವೀಡಿಯೊದ ವಿವರಣೆಯಲ್ಲಿ, ರಿಕ್ಷಾ ಚಾಲಕ ಫಜ್ಲೂರ್ ರಹಮಾನ್ ‘05 ಅಕ್ಟೋಬರ್ 2020 ರಂದು ಡಿಎಸ್‌ಸಿಸಿಯ ರಿಕ್ಷಾ ತೆರವುಗೊಳಿಸುವ ಪ್ರಕ್ರಿಯೆಯಲ್ಲಿ ವಾಹನವನ್ನು ವಶಪಡಿಸಿಕೊಂಡ ನಂತರ ಡಾಕಾದ ಜಿಗತಲಾ ಪ್ರದೇಶದಲ್ಲಿ ಅಳುತ್ತಿರುವುದು ಕಂಡುಬಂದಿದೆ ಎಂದು ಉಲ್ಲೇಖಿಸಲಾಗಿದೆ. ಈ ಘಟನೆಯ ಬಗ್ಗೆ ‘bdnews24.com’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನವನ್ನು ಇಲ್ಲಿ ನೋಡಬಹುದು.

ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಫಜ್ಲೂರ್ ರೆಹಮಾನ್ ತನ್ನ ಕೆಲಸವನ್ನು ಕಳೆದುಕೊಂಡಿದ್ದು, ಆತ ಬಾಂಗ್ಲಾದೇಶದಲ್ಲಿ ತನ್ನ ಜೀವನೋಪಾಯಕ್ಕಾಗಿ 80,000 ರೂಗಳ ಟಕಾ ಸಾಲವನ್ನು ತೆಗೆದುಕೊಂಡು ಬ್ಯಾಟರಿ ಚಾಲಿತ ರಿಕ್ಷಾವನ್ನು ಖರೀದಿಸಿದ್ದನು. ಇತ್ತೀಚೆಗೆ, ಡಾಕಾ ಸೌತ್ ಸಿಟಿ ಕಾರ್ಪೊರೇಷನ್ (ಡಿಎಸ್‌ಸಿಸಿ) ಯಾಂತ್ರಿಕೃತ, ಎಂಜಿನ್ ಚಾಲಿತ ಮತ್ತು ಬ್ಯಾಟರಿ ಚಾಲಿತ ರಿಕ್ಷಾ ಮತ್ತು ವ್ಯಾನ್‌ಗಳ ಚಲನೆಯನ್ನು ನಿಷೇಧಿಸಿತು. ‘05 ಅಕ್ಟೋಬರ್ 2020 ’ರಂದು ಡಿಎಸ್‌ಸಿಸಿ ನಡೆಸಿದ ತೆರವುಗೊಳಿಸುವ ಪ್ರಕ್ರಿಯೆಯಲ್ಲಿ ಫಜ್ಲೂರ್ ರೆಹಮಾನ್‌ರ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆಯನ್ನು ವರದಿ ಮಾಡುವ ಹೆಚ್ಚಿನ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫಜ್ಲೂರ್ ರಹಮಾನ್ ಅಳುವ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗ, ಕೆಲವು ದಾನಿಗಳು ಫಜ್ಲೂರ್ ರಹಮಾನ್‌ರನ್ನು ಬೆಂಬಲಿಸುವುದಾಗಿ ಮುಂದೆ ಬಂದರು. ‘ಡಾಕಾ ಟ್ರಿಬ್ಯೂನ್’ ಪ್ರಕಟಿಸಿದ ಲೇಖನದ ಪ್ರಕಾರ, ಬಾಂಗ್ಲಾದೇಶ ಮೂಲದ ಇ-ಕಾಮರ್ಸ್ ಕಂಪನಿ ಶ್ವಾಪ್ನೋ ಎರಡು ರಿಕ್ಷಾಗಳನ್ನು ಫಜ್ಲೂರ್ ರಹಮಾನ್‌ಗೆ ದಾನ ಮಾಡಿದರು ಎಂದು ತಿಳಿದುಬಂದಿದೆ. ಅಪರಿಚಿತರೊಬ್ಬರು, ಫಜ್ಲೂರ್ ರಹಮಾನ್ ಜೊತೆಗೆ ಇತರ ಇಬ್ಬರು ರಿಕ್ಷಾ ಚಾಲಕರಿಗೆ 2 ರಿಕ್ಷಾಗಳನ್ನು ದಾನ ಮಾಡಿದ್ದಾರೆ ಎಂದು ‘ಟೈಮ್ಸ್ ನೌ’ ಸುದ್ದಿ ಲೇಖನದಲ್ಲಿ ವರದಿಯಾಗಿದೆ.

ಒಟ್ಟಾರೆ ಹೇಳುವುದಾದರೆ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ರಿಕ್ಷಾ ಚಾಲಕ ಅಳುವ ವಿಡಿಯೋ ಬಾಂಗ್ಲಾದೇಶದ್ದಾಗಿದ್ದು, ಭಾರತಕ್ಕೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.