ಬೋಸ್ಟನ್‌ ವಿಮಾನ ನಿಲ್ದಾಣದಲ್ಲಿ ರಾಹುಲ್‌ ಗಾಂಧಿ ಬಂಧನ ವರದಿ ಮಾಡಿರುವ ಪತ್ರಿಕೆಯ ಕ್ಲಿಪ್ಪಿಂಗ್‌ ನಿಜವಲ್ಲ

2001ರಲ್ಲಿ ಡ್ರಗ್ಸ್‌ ಹಾಗೂ ಲೆಕ್ಕಕ್ಕೆ ಸಿಗದಷ್ಟು ಹಣವನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ಬೋಸ್ಟನ್‌ ಏರ್‌ಪೋರ್ಟ್‌‌ನಲ್ಲಿ ಬಂಧಿಸಲಾಗಿದೆ ಎಂದು ಹೇಳುವ ಮೂಲಕ ಪತ್ರಿಕಾ ವರದಿಯೊಂದರ ಫೋಟೊ ಕ್ಲಿಪ್ಪಿಂಗ್‌ನಂತೆ ಕಾಣುವ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ‘ಭಾರತದ ರಾಜಕಾರಣಿಯನ್ನು ಬಂಧಿಸಲಾಗಿದೆ’ ಎಂಬ ಶೀರ್ಷಿಕೆ ಹೊಂದಿರುವ ಪತ್ರಿಕೆ ಕ್ಲಿಪ್ಪಿಂಗ್‌, 30 ಸೆಪ್ಟೆಂಬರ್‌ 2001 ರಂದು ಪ್ರಕಟಗೊಂಡಿದೆ ಎಂದು ಹೇಳಲಾಗಿದೆ.

ಪತ್ರಿಕೆಯ ವರದಿಯು, ‘ಬಾಸ್ಟನ್ ವಿಮಾನ ನಿಲ್ದಾಣದಲ್ಲಿ ಭಾರತೀಯ ರಾಜಕಾರಣಿಯೊಬ್ಬರು ನಿಷೇಧಿತ ಮಾದಕ ದ್ರವ್ಯ ಮತ್ತು ಲೆಕ್ಕಕ್ಕೆ ಸಿಗದ ಹಣವನ್ನು ಹೊಂದಿರುವುದನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಪತ್ತೆ ಮಾಡಿದ್ದು, ಅವರನ್ನು ಬಂಧಿಸಲಾಯಿತು. ನಮ್ಮ ಮೂಲಗಳ ಪ್ರಕಾರ, ಅವರು ಭಾರತದ ಮಾಜಿ ಪ್ರಧಾನಿಯ ಮಗ. ಭಾರತೀಯ ರಾಯಭಾರಿಯ ಮಧ್ಯಸ್ಥಿಕೆಯ ನಂತರ ಅವರನ್ನು ನಂತರ ಬಿಡುಗಡೆ ಮಾಡಲಾಯಿತು ಎಂದು ಎಪಿಎಫ್‌ ವರದಿ ಮಾಡಿದೆ’. ಹೇಳಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗಿರುವ ಪೋಸ್ಟ್‌, ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಧ್ಯಸ್ಥಿಕೆಯ ನಂತರವೇ ರಾಹುಲ್ ಗಾಂಧಿಯನ್ನು ಬಿಡುಗಡೆ ಮಾಡಲಾಯಿತು ಎಂದು ಹೇಳುತ್ತದೆ. ಈ ಪೋಸ್ಟ್‌ನಲ್ಲಿ ಪ್ರತಿಪಾದಿಸಿರುವ ಹೇಳಿಕೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ:  ಬಾಸ್ಟನ್ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯ ಬಂಧನವನ್ನು ವರದಿ ಮಾಡಿರುವ ಹಳೆಯ ಪತ್ರಿಕೆ ಕ್ಲಿಪ್‌ನ ಸ್ಕ್ರೀನ್‌ಶಾಟ್.

ನಿಜಾಂಶ: ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಪತ್ರಿಕೆ ಕ್ಲಿಪ್ ಅನ್ನು ರಚಿಸಲು `Fodey.com’ ಎಂಬ ವೃತ್ತ ಪತ್ರಿಕೆ ಕ್ಲಿಪ್ಪಿಂಗ್‌ ಜನರೇಟರ್‌ ವೆಬ್‌ಸೈಟ್‌ ಅನ್ನು ಬಳಸಿದ್ದಾರೆ. ಇದು ನಿಜವಾದ ಕ್ಲಿಪ್ಪಿಂಗ್‌ ಅಲ್ಲ. ಸೆಪ್ಟೆಂಬರ್‌ 2001ರಲ್ಲಿ ಅಮೆರಿಕಾದಲ್ಲಿ ‘9/11’ ಭಯೋತ್ಪಾದಕ ದಾಳಿಯ ನಂತರ ಭದ್ರತಾ ಮುನ್ನೆಚ್ಚರಿಕೆಗಳ ಭಾಗವಾಗಿ ಬೋಸ್ಟನ್‌ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ‘ಸುಮಾರು ಒಂದು ಗಂಟೆ’ ಬಂಧಿಸಲಾಗಿತ್ತು. ಮಾದಕ ವಸ್ತು ಹೊಂದಿರುವ ಆರೋಪದಡಿ ಬೋಸ್ಟನ್‌ ವಿಮಾನ ನಿಲ್ದಾಣದ ಪ್ರಾಧಿಕಾರವು ರಾಹುಲ್‌ ಗಾಂಧಿ ಅವರನ್ನು ಬಂಧಿಸಿರಲಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಬೋಸ್ಟನ್ ವಿಮಾನನಿಲ್ದಾಣದಲ್ಲಿ ಭಾರತೀಯ ರಾಜಕಾರಣಿಯೊಬ್ಬರ ಬಂಧನದ ಬಗ್ಗೆ ‘ಎಎಫ್‌ಪಿ‘ ಸುದ್ದಿ ಸಂಸ್ಥೆ  ಯಾವುದಾದರೂ ಸುದ್ದಿ ವರದಿ ಮಾಡಿದೆಯೇ ಎಂದು ಪರಿಶೀಲಿಸಲು ನಾವು ಹುಡುಕಿದಾಗ, ಎಎಫ್‌ಪಿಯ ಆರ್ಕೈವ್‌ನಲ್ಲಿ ಅಂತಹ ಯಾವುದೇ ಸುದ್ದಿ ವರದಿ ನಮಗೆ ಕಂಡುಬಂದಿಲ್ಲ. ಆದರೆ ಎಎಫ್‌ಪಿ ಈ ಪತ್ರಿಕೆಯ ಕ್ಲಿಪ್‌ಗೆ ಸಂಬಂಧಿಸಿದಂತೆ ‘ಭಾರತೀಯ ರಾಜಕಾರಣಿಯನ್ನು ಬಂಧಿಸಲಾಗಿದೆ’ ಎಂಬ ಶೀರ್ಷಿಕೆಯ ಸತ್ಯ ಪರಿಶೀಲನೆ ಲೇಖನವನ್ನು ಪ್ರಕಟಿಸಿದೆ ಎಂದು ಕಂಡುಬಂದಿದೆ. ಬೋಸ್ಟನ್ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯ ಬಂಧನವನ್ನು ವರದಿ ಮಾಡುವ ಪತ್ರಿಕೆ ಕ್ಲಿಪ್ಪಿಂಗ್ ಅನ್ನು ಆನ್‌ಲೈನ್ ವೆಬ್‌ಸೈಟ್  ‘fodey.com’ ಬಳಸಿ ರಚಿಸಲಾಗಿದೆ ಎಂದು ಎಎಫ್‌ಪಿ ಸ್ಪಷ್ಟಪಡಿಸಿದೆ.

‘fodey.com’ ಎಂಬುದು ಆನ್‌ಲೈನ್ ನ್ಯೂಸ್‌ಪೇಪರ್ ಕ್ಲಿಪಿಂಗ್ ಜನರೇಟರ್ ವೆಬ್‌ಸೈಟ್ ಆಗಿದ್ದು, ಅದು ಬಳಕೆದಾರರಿಗೆ ತಮ್ಮದೇ ಆದ ಮುಖ್ಯಾಂಶಗಳು ಮತ್ತು ವರದಿಯೊಂದಿಗೆ ಪತ್ರಿಕೆ ತುಣುಕುಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ. ‘Fodey.com’ ಅನ್ನು ಬಳಸಿಕೊಂಡು ಇದೇ ರೀತಿಯ ಪತ್ರಿಕೆ ಕ್ಲಿಪ್ಪಿಂಗ್ ಅನ್ನು ಮರುಸೃಷ್ಟಿಸಲು ‘FACTLY’ ಗೆ ಸಾಧ್ಯವಾಯಿತು.

ಪೋಸ್ಟ್‌ನಲ್ಲಿ ಮಾಡಿದ ಈ ಹೇಳಿಕೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗಳನ್ನು ಹುಡುಕಿದಾಗ, ರಾಹುಲ್ ಗಾಂಧಿಯನ್ನು ಸೆಪ್ಟೆಂಬರ್ 2001 ರಲ್ಲಿ ಬೋಸ್ಟನ್ ಲೋಗನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಬಂಧಿಸಲಾಗಿದೆ ಎಂಬುದನ್ನು ನಾವು ತಿಳಿದುಕೊಂಡೆವು. ಈ ಮಾಹಿತಿಯನ್ನು ವರದಿ ಮಾಡಿ, ‘ದಿ ಹಿಂದೂ’ 30 ಸೆಪ್ಟೆಂಬರ್ 2001 ರಂದು ಲೇಖನವನ್ನು ಪ್ರಕಟಿಸಿತ್ತು. ಲೇಖನದಲ್ಲಿ ಒದಗಿಸಲಾದ ವಿವರಗಳಲ್ಲಿ, ಅಮೆರಿಕದಲ್ಲಿ ನಡೆದ ‘9/11’ ಭಯೋತ್ಪಾದಕ ದಾಳಿಯ ನಂತರ ತೆಗೆದುಕೊಂಡ ಭದ್ರತಾ ಕ್ರಮಗಳ ಭಾಗವಾಗಿ ಬಾಸ್ಟನ್ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯನ್ನು ‘ಸುಮಾರು ಒಂದು ಗಂಟೆ’ ಕಾಲ ಎಫ್‌ಬಿಐ ಅಧಿಕಾರಿಗಳು ಬಂಧಿಸಿದ್ದರು. ಸಾಮಾನ್ಯ ವಿಚಾರಣೆಯ ನಂತರ ರಾಹುಲ್ ಗಾಂಧಿಯನ್ನು ತಕ್ಷಣವೇ ಬಿಡುಗಡೆ ಮಾಡಲಾಯಿತು. ಬೋಸ್ಟನ್ ವಿಮಾನ ನಿಲ್ದಾಣ ಪ್ರಾಧಿಕಾರವು ಡ್ರಗ್ಸ್ ಹೊಂದಿದ್ದ ಅಥವಾ ಲೆಕ್ಕಕ್ಕೆ ಸಿಗದ ಹಣವನ್ನು ಸಾಗಿಸಿದ ಆರೋಪದ ಮೇಲೆ ರಾಹುಲ್ ಗಾಂಧಿಯನ್ನು ಬಂಧಿಸಿರಲಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಬೋಸ್ಟನ್ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯ ಬಂಧನವನ್ನು ವರದಿ ಮಾಡುವ ಈ ಪತ್ರಿಕೆಯ ಕ್ಲಿಪ್ಪಿಂಗ್ ಡಿಜಿಟಲ್ ಆಗಿ ರಚಿಸಲಾಗಿದೆ,  ಇದು ನಿಜವಾದ ಪತ್ರಿಕಾ ವರದಿಯಲ್ಲ.