ಈ ವಿಡಿಯೋ ಕೇರಳದ ‘ಮಾಪಿಲ ತೆಯ್ಯಮ್’ ಉತ್ಸವದದ್ದು; ಇದರಲ್ಲಿ ಆಜಾನ್ ಓದುವುದು ಒಂದು ಆಚರಣೆಯಾಗಿದೆ

ಕೇರಳ ಸರ್ಕಾರವು ಹಿಂದೂ ದೇವಾಲಯಗಳಲ್ಲಿ ಹನುಮಂತನ ಚಿತ್ರಕ್ಕೆ ಮಾಂಸ ಬಡಿಸಲು, ಮದ್ಯ ನೈವೇದ್ಯಕ್ಕೆ ಮತ್ತು ಅಲ್ಲಾಹು ಅಕ್ಬರ್ ಎಂದು ಪಠಿಸಲು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅರ್ಚಕರನ್ನು ನೇಮಿಸಿದೆ ಎಂದು ಹೇಳುವ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ಎಷ್ಟರಮಟ್ಟಿಗೆ ನಿಜ ಎಂದು ತಿಳಿಯೋಣ. 

ಕ್ಲೇಮ್: ಕೇರಳ ಸರ್ಕಾರವು ದೇವಸ್ಥಾನಗಳಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅರ್ಚಕರನ್ನು ನೇಮಿಸಿರುವುದರಿಂದ ಹನುಮಂತನ ಚಿತ್ರಕ್ಕೆ ಮದ್ಯ ಮತ್ತು ಮಾಂಸವನ್ನು ಸುರಿದು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಿದ್ದಾರೆ.

ಫ್ಯಾಕ್ಟ್: ಕೇರಳದ ಉತ್ತರ ಭಾಗದಲ್ಲಿ ನಡೆಯುವ ‘ಮಾಪಿಲಾ ತೆಯ್ಯಮ್’ ಎಂಬ ವಾರ್ಷಿಕ ಸಮಾರಂಭದ ವಿಡಿಯೋವನ್ನು ವೈರಲ್ ವೀಡಿಯೊ ತೋರಿಸುತ್ತದೆ. ಈ ಸಂದರ್ಭದಲ್ಲಿ ಹಿಂದೂ ದೈವ ನರ್ತಕರು ಮುಸ್ಲಿಮರಂತೆ ವೇಷ ಧರಿಸಿ ಆಜಾನ್ ಪಠಿಸುತ್ತಾರೆ. ಇದಲ್ಲದೆ ತೆಯ್ಯಮ್ ಗಳಲ್ಲಿ  ಮದ್ಯ ಮತ್ತು ಮಾಂಸವನ್ನು ನೀಡಲಾಗುತ್ತದೆ. ಕೇರಳ ಸರ್ಕಾರವು ಹಿಂದೂ ದೇವಾಲಯಗಳಲ್ಲಿ ಮುಸ್ಲಿಮರನ್ನು/ಕ್ರೈಸ್ತರನ್ನು ಅರ್ಚಕರನ್ನಾಗಿ ನೇಮಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿರುವ ಕ್ಲೇಮ್ ತಪ್ಪಾಗಿದೆ.

ವೈರಲ್ ವೀಡಿಯೊದಲ್ಲಿನ ದೃಶ್ಯಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ ಹಲವಾರು ಸುದ್ದಿ ಲೇಖನಗಳ ಮೂಲಕ (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ) 2022 ರಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಶ್ರೀ ಕೋಮರಾಯ ದೈವ ಆಸ್ಥಾನದಲ್ಲಿ ಈ ಘಟನೆ ನಡೆದಿದೆ ಎಂದು ಮೊದಲಿಗೆ ತಿಳಿದು ಬಂತು. 

ಇದರ ಪ್ರಕಾರ ಕೇರಳದ ಉತ್ತರ ಭಾಗ ಮತ್ತು ದಕ್ಷಿಣ ಕರ್ನಾಟಕದ (ತುಳುನಾಡು) ಭಾಗಗಳಲ್ಲಿ ತೆಯ್ಯಮ್ ಅಥವಾ ದ್ವೈವಾರಾಧನೆ ನಡೆಸುತ್ತಾರೆ. ದೈವ ನರ್ತಕರು ಎಂಬ ಸಮುದಾಯವಿದ್ದು, ಆ ಜನಾಂಗದವರು ವೇಷ ಧರಿಸಿದ ನಂತರ ಅವರನ್ನು ದೈವಸ್ವರೂಪಿ ಎಂದು ಪರಿಗಣಿಸಿ ಆತನಿಂದ ಆಶೀರ್ವಾದವನ್ನು ಪಡೆಯುತ್ತಾರೆ. ಇಂತಹ ತೆಯ್ಯಮ್ ನಲ್ಲಿ  ನೂರಾರು ರೀತಿ – ನೀತಿ ಮತ್ತು ಹಲವು ಬಗೆಗಳಿವೆ. ಕೇರಳದಲ್ಲಿ ತೆಯ್ಯಮ್  ಅನ್ನು ಸಾಮಾನ್ಯವಾಗಿ ಪುಲ್ಯಾರ್, ವಣ್ಣನ್, ಮಲಯನ್, ಅನ್ಹೂಟ್ಟನ್, ಮುನ್ನೂಟ್ಟನ್, ಮಾವಿಲನ್, ಕೊಪ್ಪಳನ್, ವೇಲನ್, ಚಿಂಗಾಟನ್, ಕಳನಾಡಿ, ಪರವನ್, ನಲಿಕೇಯವರ್ ಮುಂತಾದ ಜಾತಿ ಮತ್ತು ಬುಡಕಟ್ಟುಗಳ ಜನರು ನಿರ್ವಹಿಸುತ್ತಾರೆ. 

ಆದರೆ ಇದರಲ್ಲಿ ಈ ‘ಮಾಪಿಲ ತೆಯ್ಯಂ‘, ತೆಯ್ಯಂನ ಒಂದು ವಿಧದಲ್ಲಿವಾಗಿದೆ.  ಹಿಂದೂಗಳು ಮುಸ್ಲಿಮರಂತೆ ವೇಷ ಧರಿಸುತ್ತಾರೆ ಮತ್ತು ಇಸ್ಲಾಮಿಕ್ ಕಥೆಗಳು ಮತ್ತು ಘೋಷಣೆಗಳನ್ನು ಪಠಿಸುತ್ತಾರೆ. ಇವುಗಳನ್ನು ಹಿಂದೂ-ಮುಸ್ಲಿಂ ಐಕ್ಯತೆಯ ಸಂಕೇತವಾಗಿ ನಡೆಸಲಾಗುತ್ತದೆ. ‘ಮಾಪಿಲ ತೇಯಂ’ನಲ್ಲಿ ಹದಿನೈದಕ್ಕೂ ಹೆಚ್ಚು ಪ್ರಭೇದಗಳಿವೆ. ವೈರಲ್ ವೀಡಿಯೊದಲ್ಲಿ ಬಪಿರಿಯನ್ ತೆಯ್ಯಮ್ ಅನ್ನು ತೋರಿಸಲಾಗಿದೆ. ಇದರ ಭಾಗವಾಗಿ, ಮುಸ್ಲಿಂ ಉಡುಪುಗಳನ್ನು ಧರಿಸಿದ ವ್ಯಕ್ತಿಯೊಬ್ಬರು ಅಜಾನ್ ಪಠಿಸುತ್ತಾರೆ. ಈ ಸಂಪ್ರದಾಯವನ್ನು ಹಲವು ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿದೆ. ಕೆಲವು ವಿಧದ ತೇಯಂಗಳಲ್ಲಿ ಮದ್ಯ ಮತ್ತು ಮಾಂಸವನ್ನು ನೈವೇದ್ಯವಾಗಿ ನೀಡಲಾಗುತ್ತದೆ ಎಂದು ಹಲವಾರು ಸುದ್ದಿ ಲೇಖನಗಳು ಹೇಳಿವೆ.

ಕೇರಳ ಸರ್ಕಾರವು ಮುಸ್ಲಿಮರನ್ನು ಮತ್ತು ಕ್ರಿಶ್ಚಿಯನ್ನರನ್ನು ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಿಸಿದೆಯೇ?

ಕೇರಳವು ಸರ್ಕಾರ ನಡೆಸುವ ದೇವಸ್ಥಾನ ಮಂಡಳಿಗಳು, ಖಾಸಗಿ ದೇವಸ್ಥಾನ ಮಂಡಳಿಗಳು ಅಥವಾ ಸಮುದಾಯ ಸಂಸ್ಥೆಗಳಾದ ನಾಯರ್ ಸರ್ವೀಸ್ ಸೊಸೈಟಿ (NSS) ಮತ್ತು ಶ್ರೀ ನಾರಾಯಣ ಧರ್ಮ ಆಡಳಿತ (SNDP) ಯೋಗಂ, ಅಖಿಲ ಭಾರತ ಅಯ್ಯಪ್ಪ ಸೇವಾ ಸಂಗಮದಿಂದ ನಡೆಸಲ್ಪಡುವ ದೇವಾಲಯಗಳನ್ನು ಹೊಂದಿದೆ.

ಅರ್ಚಕರು ಸೇರಿದಂತೆ ಸಿಬ್ಬಂದಿಯನ್ನು ಆಯಾ ದೇವಸ್ಥಾನ ಮಂಡಳಿಗಳು ನೇಮಿಸುತ್ತವೆ. ಸಾಂಪ್ರದಾಯಿಕವಾಗಿ ಕುಟುಂಬದ ಸದಸ್ಯರಿಗೆ ನೀಡಲಾಗುವ ಹುದ್ದೆಗಳ ಹೊರತಾಗಿ, ಮಂಡಳಿಗಳ ಅಡಿಯಲ್ಲಿ ದೇವಸ್ಥಾನಗಳಿಗೆ ನೇಮಕಾತಿಗಳನ್ನು ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯಿದೆ, 1951 ರ ಅಡಿಯಲ್ಲಿ ಮಾಡಲಾಗುತ್ತದೆ. ಪ್ರಸ್ತುತ ನಿಯಮಗಳ ಪ್ರಕಾರ, ನೇಮಕಾತಿಗಳಲ್ಲಿ ಎಸ್‌ಸಿಗಳಿಗೆ 10% ಮತ್ತು ಎಸ್‌ಟಿಗಳಿಗೆ 2% ಮೀಸಲಾತಿ ನೀಡಲಾಗಿದೆ. 

2017 ರಲ್ಲಿ, ತಿರುವಾಂಕೂರು ಮಂಡಳಿಯು ಮೊದಲ ಬಾರಿಗೆ ದಲಿತರನ್ನು ವಿವಿಧ ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಿಸಿದೆ ಎಂದು ವರದಿಗಳು ತಿಳಿಸಿವೆ. ಆದರೆ, ಕೇರಳ ಸರ್ಕಾರವು ದೇವಸ್ಥಾನಗಳಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅರ್ಚಕರನ್ನು ನೇಮಿಸಿದೆಯೇ ಎಂದು ಹುಡುಕಿದಾಗ ನಮಗೆ ಯಾವುದೇ ಅಧಿಕೃತ ಮಾಹಿತಿ/ಸುದ್ದಿ ಲೇಖನಗಳು ದೊರಕಿಲ್ಲ. 

ಅಂತಿಮವಾಗಿ, ವೈರಲ್ ವೀಡಿಯೊದಲ್ಲಿನ ದೃಶ್ಯಗಳು ಕೇರಳದ ಮಾಪಿಲಾ ತೆಯ್ಯಂಗೆ  ಸಂಬಂಧಿಸಿವೆ. ಇದರಲ್ಲಿ ಅಜಾನ್ ಓದುವುದು ಒಂದು ಸಂಪ್ರದಾಯವಷ್ಟೆ.