ಅಳುತ್ತಿರುವ ಮಹಿಳೆ ಯಾಸಿನ್ ಮಲಿಕ್ ಪತ್ನಿ ಅಲ್ಲ

ಯಾಸಿನ್ ಮಲಿಕ್ ಪತ್ನಿ ಕ್ಯಾಮರಾ ಮುಂದೆ ಅಳುತ್ತಿರುವುದು ಕಂಡುಬಂದಿದೆ ಎಂದು ಹೇಳುವ ಪೋಸ್ಟ್ ಮೂಲಕ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. 2016-17ರಲ್ಲಿ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಎನ್‌ಐಎ ನ್ಯಾಯಾಲಯ ಇತ್ತೀಚೆಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ವಿಡಿಯೋದ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಪ್ರತಿಪಾದನೆ: ಯಾಸಿನ್ ಮಲಿಕ್ ಗೆ ಎನ್ಐಎ ನ್ಯಾಯಾಲಯವು ಜೀವಾವಧಿ ಶಿಕ್ಷೆಯ ತೀರ್ಪು ನೀಡಿದ ನಂತರ ಅವರ ಪತ್ನಿ ಅಳುತ್ತಿರುವ ವೀಡಿಯೊ.

ನಿಜಾಂಶ : ಪಾಕಿಸ್ತಾನದಲ್ಲಿ ಅಸೆಂಬ್ಲಿಗಳನ್ನು ವಿಸರ್ಜಿಸಲು ಮತ್ತು ಚುನಾವಣೆಯನ್ನು ಘೋಷಿಸುವಂತೆ ಒತ್ತಾಯಿಸಲು ಪಾಕಿಸ್ತಾನದ ಪಿಎಂಎಲ್-ಎನ್ ಸರ್ಕಾರದ ವಿರುದ್ಧ ಇಮ್ರಾನ್ ಖಾನ್ ಆಯೋಜಿಸಿದ್ದ ‘ಆಜಾದಿ ಮಾರ್ಚ್’ನಲ್ಲಿ ಮಹಿಳೆ ಅಳುತ್ತಿರುವ ವೀಡಿಯೊವನ್ನು, ಯಾಸಿನ್ ಮಲಿಕ್ ಪತ್ನಿ ಅಳುತ್ತಿದ್ದಾರೆ ಎಂದು ಸುಳ್ಳು ಹೇಳಲಾಗಿದೆ. ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಅವರ ಪತ್ನಿ ಪಾಕಿಸ್ತಾನಿ ಕಲಾವಿದೆ ಮುಶಾಲ್ ಹುಸೇನ್ ಮುಲ್ಲಿಕ್. ಅವರು 2019 ರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅಳುತ್ತಾ, ಅವರು ಯಾಸಿನ್ ಮಲಿಕ್ ಮತ್ತು ಅವರ ಆರೋಗ್ಯಕ್ಕಾಗಿ ಮನವಿ ಮಾಡಿದರು, ಆಗ ಅವರು ಭಾರತದಲ್ಲಿ ಜೈಲಿನಲ್ಲಿದ್ದರು. ಮಲಿಕ್ ಪತ್ನಿ ಪತ್ರಿಕಾಗೋಷ್ಠಿಯಲ್ಲಿ ತನ್ನ ಗಂಡನ ಬಿಡುಗಡೆಗಾಗಿ ಮನವಿ ಮಾಡುತ್ತಾ ಅತ್ತಿದ್ದರು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪುದಾರಿಗೆಳೆಯುವಂತಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಅನ್ನು ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದಾಗ, ಅದೇ ವೀಡಿಯೊ YouTube ನಲ್ಲಿ ಕಂಡುಬಂದಿದೆ. ಯೂಟ್ಯೂಬ್ ವೀಡಿಯೋವನ್ನು ಪಾಕಿಸ್ತಾನಿ ಸುದ್ದಿ ವಾಹಿನಿ ‘ಜಿಎನ್‌ಎನ್’ ಅಪ್‌ಲೋಡ್ ಮಾಡಿದೆ. ಮಹಿಳೆಯೊಬ್ಬರು ಅಳುತ್ತಿರುವ ದೃಶ್ಯಗಳು ಪಾಕಿಸ್ತಾನದಲ್ಲಿ ನಡೆದ ‘ಆಜಾದಿ ಮಾರ್ಚ್’ ಸಂದರ್ಭದ ಘಟನೆ ಎಂದು ಹೇಳಲಾಗಿದ್ದು. ಅವರು ಯಾಸಿನ್ ಮಲಿಕ್ ರವರ ಪತ್ನಿ ಎಂದು ವೀಡಿಯೊದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ.

ಸಂಬಂಧಿತ ಕೀವರ್ಡ್‌ಗಳೊಂದಿಗೆ Google ನಲ್ಲಿ ಸರ್ಚ್ ಮಾಡಿದಾಗ, ಇಮ್ರಾನ್ ಖಾನ್ ಅವರ ರಾಜಕೀಯ ಪಕ್ಷದ ಅಧಿಕೃತ ಹ್ಯಾಂಡಲ್‌ಗಳು ಹಂಚಿಕೊಂಡಿರುವ ಅದೇ ವೀಡಿಯೊ ಕಂಡುಬಂದಿದೆ ವಿಡಿಯೊವನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಅಸೆಂಬ್ಲಿಯನ್ನು ವಿಸರ್ಜಿಸಲು ಮತ್ತು ಚುನಾವಣೆಯನ್ನು ಘೋಷಿಸಲು ಒತ್ತಾಯಿಸಿ ಪಾಕಿಸ್ತಾನದ ಪಿಎಂಎಲ್-ಎನ್ ಸರ್ಕಾರದ ವಿರುದ್ಧ ಇಮ್ರಾನ್ ಖಾನ್ ಆಯೋಜಿಸಿದ ‘ಆಜಾದಿ ಮಾರ್ಚ್’ ಮೆರವಣಿಗೆಯ ಸಂದರ್ಭದಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು ಈ ಸಂದರ್ಭದಲ್ಲಿ ಮಕ್ಕಳು ಮತ್ತು ಮಹಿಳೆಯರಿಗೆ ಅಪಾರ ಹಾನಿಯುಂಟಾಗಿತ್ತು ಆಗ ಮಹಿಳೆಯೊಬ್ಬರು ಅಳುತ್ತಿರುವ ಮಹಿಳೆಯ ವಿಡಿಯೋವನ್ನು ಯಾಸಿನ್ ಮಲ್ಲಿಕ್ ಪತ್ನಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಅವರ ಪತ್ನಿ ಪಾಕಿಸ್ತಾನಿ ಕಲಾವಿದ ಮುಶಾಲ್ ಹುಸೇನ್ ಮುಲ್ಲಿಕ್. ಎನ್‌ಐಎ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಯಾಸಿನ್ ಮಲಿಕ್ ಅವರನ್ನು ಬಿಡುಗಡೆ ಮಾಡಲು ಸಹಾಯ ಮಾಡುವಂತೆ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಪಾಕಿಸ್ತಾನದ ಸಂಸತ್ತಿಗೆ ಮನವಿಯನ್ನೂ ಸಲ್ಲಿಸಿದ್ದರು.

2019 ರಲ್ಲಿ ಯಾಸಿನ್ ಮಲಿಕ್ ಅವರ ಪತ್ನಿ ಅವರ ಆರೋಗ್ಯದ ಕಾರಣಕ್ಕೆ ಬಿಡುಗಡೆ ಮಾಡಿ ಎಂದು ಮನವಿ ಮಾಡುತ್ತ ಅಳುವ ವೀಡಿಯೊ ಇತ್ತೀಚಿನದು ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಈ ವಿಡಿಯೋದಲ್ಲಿ ಅಳುತ್ತಿರುವ ಮಹಿಳೆ ಯಾಸಿನ್ ಮಲಿಕ್ ಅವರ ಪತ್ನಿ ಅಲ್ಲ.