ಈ ಫೋಟೋದಲ್ಲಿ ಜಿನ್ನಾ ಅವರ ಬಲಭಾಗದಲ್ಲಿ ಕುಳಿತಿರುವ ವ್ಯಕ್ತಿ ಭಾರತೀಯ ಜನಸಂಘದ ಸ್ಥಾಪಕ ಶ್ಯಾಮಾ ಪ್ರಸಾದ್ ಮುಖರ್ಜಿ ಅಲ್ಲ

‘ಜನಸಂಘದ ಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಅವರು ಮುಸ್ಲಿಂ ಲೀಗ್ ನಾಯಕ ಮೊಹಮ್ಮದ್ ಅಲಿ ಜಿನ್ನಾ ಅವರೊಂದಿಗೆ ಬಂಗಾಳದಲ್ಲಿ ಅಧಿಕಾರ ಹಂಚಿಕೊಂಡ ಸಮಯದ ಫೋಟೋ,’ ಎಂದು ಕ್ಲೈಮ್ ಮಾಡುತ್ತಿರುವ ಪೋಸ್ಟ್ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋದಲ್ಲಿ ಜಿನ್ನಾ ಅವರ ಬಲಭಾಗದಲ್ಲಿರುವ ವ್ಯಕ್ತಿ ಶ್ಯಾಮಾ ಪ್ರಸಾದ್ ಮುಖರ್ಜಿ ಎಂದು ಸೂಚಿಸುತ್ತಾ, ಅವರ ಮುಖದ ಮೇಲೆ ಒಂದು ವೃತ್ತವನ್ನು ಹಾಕಲಾಗಿದೆ. ಅಸಲಿಗೆ, ಈ ಕ್ಲೇಮ್ ಹಿಂದೆ ಎಷ್ಟರ ಮಟ್ಟಿಗೆ ಸತ್ಯವಿದೆ ಎಂದು ಈ ಆರ್ಟಿಕಲ್ ಮೂಲಕ ನೋಡೋಣ.

ಕ್ಲೇಮ್: ಆಲ್-ಇಂಡಿಯಾ ಮುಸ್ಲಿಂ ಲೀಗ್ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಮತ್ತು ಭಾರತೀಯ ಜನಸಂಘದ ಸ್ಥಾಪಕ ಶ್ಯಾಮಾ ಪ್ರಸಾದ್ ಮುಖರ್ಜಿ ಅವರು ಜೊತೆಯಾಗಿ ಇರುವ ಫೋಟೋ.

ಫ್ಯಾಕ್ಟ್: ಜಿನ್ನಾ ಅವರ ಬಲಭಾಗದಲ್ಲಿ ಕುಳಿತಿರುವ ವ್ಯಕ್ತಿ ಭಾರತೀಯ ಜನಸಂಘದ ಸ್ಥಾಪಕ ಶ್ಯಾಮಾ ಪ್ರಸಾದ್ ಮುಖರ್ಜಿ ಅವರಲ್ಲ; ಬದಲಿಗೆ ಅವರು ಪಾಕಿಸ್ತಾನದ ಎರಡನೇ ಪ್ರಧಾನ ಮಂತ್ರಿ ಖ್ವಾಜಾ ನಜೀಮುದ್ದೀನ್. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.

ವೈರಲ್ ಫೋಟೋ ಹಿಂದಿರುವ ನಿಜಾನಿಜಗಳನ್ನು ತಿಳಿದುಕೊಳ್ಳಲು, ಅದನ್ನು ಬಳಸಿ ಇಂಟರ್ನೆಟ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ಸರ್ಚ್ ಮೂಲಕ, ವೈರಲ್ ಫೋಟೋದ ಅನ್-ಕ್ರಾಪ್ಡ್ ವರ್ಷನ್ (uncropped version) ನಮಗೆ ‘Alamy’ ಎಂಬ ಸ್ಟಾಕ್ ಫೋಟೋ ವೆಬ್‌ಸೈಟ್‌ನಲ್ಲಿ ಲಭ್ಯವಾಗಿದೆ.

ಈ ಫೋಟೋದ ಕ್ಯಾಪ್ಷನ್ ಪ್ರಕಾರ, ಇದು ಲಕ್ನೋದಲ್ಲಿ ನಡೆದ ಮುಸ್ಲಿಂ ಲೀಗ್ ವರ್ಕಿಂಗ್ ಕಮಿಟಿ ಅಧಿವೇಶನಕ್ಕೆ ಸಂಬಂಧಿಸಿದ ಫೋಟೋ ಆಗಿದೆ. ಇದೇ ಫೋಟೋ ನಮಗೆ ವಿಕಿ ಕಾಮನ್ಸ್ (Wiki Commons) ಸೈಟ್‌ನಲ್ಲಿಯೂ ಲಭ್ಯವಾಗಿದೆ. ಶ್ಯಾಮಾ ಪ್ರಸಾದ್ ಮುಖರ್ಜಿ ಅವರು ಮುಸ್ಲಿಂ ಲೀಗ್‌ನ ಸದಸ್ಯರಾಗಿದ್ದರು ಎಂಬುದಕ್ಕೆ ಯಾವುದೇ ಆಧಾರಗಳು ಲಭ್ಯವಾಗಿಲ್ಲ; ಅವರು ಭಾರತೀಯ ಜನಸಂಘದ ಸ್ಥಾಪಕರು (ಇಲ್ಲಿ, ಇಲ್ಲಿ).

ಹಾಗೆಯೇ, ಈ ಫೋಟೋವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡುವ ಸಂದರ್ಭದಲ್ಲಿ, ಇದರಲ್ಲಿ ಕಾಣಿಸುತ್ತಿರುವ ವ್ಯಕ್ತಿಗಳಿರುವ ಮತ್ತೊಂದು ಫೋಟೋ ನಮಗೆ ‘Getty Images‘ ಎಂಬ ಸ್ಟಾಕ್ ಫೋಟೋ ವೆಬ್‌ಸೈಟ್‌ನಲ್ಲಿ ಮತ್ತು ‘The Hindu Frontline’ ಅವರ 2015ರ ವರದಿಯೊಂದರಲ್ಲಿ ಲಭ್ಯವಾಗಿದೆ.

ಈ ಫೋಟೋಗಳ ವಿವರಣೆಯ ಪ್ರಕಾರ, ಈ ಫೋಟೋದಲ್ಲಿ ಜಿನ್ನಾ ಅವರ ಬಲಭಾಗದಲ್ಲಿರುವ ವ್ಯಕ್ತಿಯ ಹೆಸರು ‘ಸರ್-ನಿಜಾಮುದ್ದೀನ್ (Sir Nizam-ud-Din).’ Frontline ವರದಿಯ ಪ್ರಕಾರ, ಇವರು ಬಂಗಾಳ ಸರ್ಕಾರದ ಗೃಹ ಸಚಿವರಾಗಿದ್ದರು

ಈ ವ್ಯಕ್ತಿಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಸೂಕ್ತ ಕೀವರ್ಡ್‌ಗಳನ್ನು ಬಳಸಿ ಇಂಟರ್ನೆಟ್‌ನಲ್ಲಿ ಹುಡುಕಿದಾಗ, ಸರ್-ನಿಜಾಮುದ್ದೀನ್ ಅವರ ಅಸಲಿ ಹೆಸರು ಖ್ವಾಜಾ ನಜೀಮುದ್ದೀನ್ ಎಂದು ನಮಗೆ ತಿಳಿದುಬಂದಿದೆ (ಇಲ್ಲಿ, ಇಲ್ಲಿ, ಇಲ್ಲಿ). ಬಂಗಾಳ ಸರ್ಕಾರದಲ್ಲಿ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ನಂತರ, ಇವರು ಪಾಕಿಸ್ತಾನದ ಎರಡನೇ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿ ವೆಬ್‌ಸೈಟ್‌ನಲ್ಲಿರುವ ಇವರ ಫೋಟೋ (ಇಲ್ಲಿ, ಇಲ್ಲಿ), Getty Images ಹಾಗೂ ಇತರ ಪಬ್ಲಿಕ್ ಡೊಮೇನ್‌ನಲ್ಲಿರುವ ಫೋಟೋಗಳೊಂದಿಗೆ (ಇಲ್ಲಿ, ಇಲ್ಲಿ), Frontline ವರದಿ ಮತ್ತು Getty, Alamy ಸ್ಟಾಕ್ ಫೋಟೋಗಳನ್ನು ಹೋಲಿಸಿ ನೋಡಿದಾಗ, ಸರ್-ನಿಜಾಮುದ್ದೀನ್ ಮತ್ತು ಖ್ವಾಜಾ ನಜೀಮುದ್ದೀನ್ ಇಬ್ಬರೂ ಒಬ್ಬರೇ ಎಂಬ ವಿಷಯ ನಮಗೆ ಸ್ಪಷ್ಟವಾಗಿದೆ.

ಆದರೆ, ಭಾರತೀಯ ಜನಸಂಘದ ಸ್ಥಾಪಕ ಶ್ಯಾಮಾ ಪ್ರಸಾದ್ ಮುಖರ್ಜಿ ಮತ್ತು ಪಾಕಿಸ್ತಾನದ ಎರಡನೇ ಪ್ರಧಾನ ಮಂತ್ರಿ ಖ್ವಾಜಾ ನಜೀಮುದ್ದೀನ್ ಅವರ ಮೀಸೆ ಹಾಗೂ ಕೂದಲಿನ ಶೈಲಿ ಒಂದೇ ಮಾದರಿಯಲ್ಲಿರುವುದು ಗಮನಾರ್ಹ.

ಕೊನೆಯದಾಗಿ ಹೇಳುವುದಾದರೆ, ಈ ಫೋಟೋದಲ್ಲಿ ಜಿನ್ನಾ ಅವರ ಬಲಭಾಗದಲ್ಲಿ ಕುಳಿತಿರುವ ವ್ಯಕ್ತಿ ಭಾರತೀಯ ಜನಸಂಘದ ಸ್ಥಾಪಕ ಶ್ಯಾಮಾ ಪ್ರಸಾದ್ ಮುಖರ್ಜಿ ಅಲ್ಲ, ಬದಲಿಗೆ ಪಾಕಿಸ್ತಾನದ ಎರಡನೇ ಪ್ರಧಾನಿ ಖ್ವಾಜಾ ನಜೀಮುದ್ದೀನ್.