ವೀಡಿಯೊದಲ್ಲಿ ಗೋಹತ್ಯೆಯನ್ನು ತಡೆಯುತ್ತಿರುವುದು ಶ್ರೀನಗರದ ಕಾಶ್ಮೀರಿ ಪಂಡಿತ್ ಅಲ್ಲ, ಮುಸ್ಲಿಂ ಯುವಕ

ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕಾಶ್ಮೀರಿ ಪಂಡಿತರೊಬ್ಬರು ಧೈರ್ಯದಿಂದ ಗೋಹತ್ಯೆಯನ್ನು ತಡೆದಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಆ ಪೋಸ್ಟ್ ಎಷ್ಟು ಸತ್ಯ ಎಂದು ಪರಿಶೀಲಿಸೋಣ.

ಪ್ರತಿಪಾದನೆ: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕಾಶ್ಮೀರಿ ಪಂಡಿತರೊಬ್ಬರು ಗೋಹತ್ಯೆಯನ್ನು ಧೈರ್ಯದಿಂದ ತಡೆಯುವ ವಿಡಿಯೋ.

ನಿಜಾಂಶ: ಈ ವೀಡಿಯೊದಲ್ಲಿ ಗೋಹತ್ಯೆಯನ್ನು ತಡೆಯುತ್ತಿರುವವರು ಶ್ರೀನಗರದ ಮುಸ್ಲಿಂ ಆರಿಫ್ ಜಾನ್ ಆಗಿದ್ದಾರೆ, ಕಾಶ್ಮೀರಿ ಪಂಡಿತ್ ಅಲ್ಲ. ಈದ್ ಸಂದರ್ಭದಲ್ಲಿ ತನ್ನ ಮನೆಯ ಪಕ್ಕದ ಖಾಲಿ ಜಾಗದಲ್ಲಿ ದಾರುಲ್-ಉಲುಮ್ ಮಸೀದಿಯವರು ಗೋಹತ್ಯೆ ನಡೆಸುತ್ತಿದ್ದಾಗ ಆರಿಫ್ ಜಾನ್ ತನ್ನ ಮನೆಯ ಪಕ್ಕದಲ್ಲಿ ಗೋಹತ್ಯೆ ಮಾಡದಂತೆ ಮಸೀದಿಯ ಸದಸ್ಯರೊಂದಿಗೆ ಕಲಹ ನಡೆಸಿದ್ದರು. ಮನೆಯೊಳಕ್ಕೆ ದುರ್ವಾಸನೆ ಬರುತ್ತಿದ್ದರಿಂದ ಗೋಹತ್ಯೆಯನ್ನು ತಡೆದಿದ್ದೇನೆ ಎಂದು ಆರಿಫ್ ಜಾನ್ ತನ್ನ ಫೇಸ್ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದ ಸ್ಕ್ರೀನ್‌ ಶಾಟ್‌ಗಳನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ಟ್ವಿಟರ್‌ ಬಳಕೆದಾರರು 05 ಆಗಸ್ಟ್ 2021 ರಂದು ಈ ವೀಡಿಯೊಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಸಿ ಟ್ವೀಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಶ್ರೀನಗರದ ಮುಸ್ಲಿಂ ವ್ಯಕ್ತಿಯೊಬ್ಬ ದಾರುಲ್-ಉಲುಮ್ ಮಸೀದಿಯಲ್ಲಿ ಗೋಹತ್ಯೆಗೆ ಅಡ್ಡಿಪಡಿಸುವ ದೃಶ್ಯಗಳು ಎಂದು ಟ್ವೀಟ್ ಹೇಳಿದೆ. ಶ್ರೀನಗರದ ರೇನ್ವಾರಿ ಪ್ರದೇಶದಲ್ಲಿ ಈದ್ ದಿನದಂದು ಈ ಘಟನೆ ನಡೆದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಬಳಕೆದಾರರು ತಮ್ಮ ಟ್ವಿಟರ್ ಖಾತೆಯಲ್ಲಿ ಘಟನೆಯ ಇನ್ನೊಂದು ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.

ಈ ವಿವರಗಳ ಆಧಾರದ ಮೇಲೆ ವೀಡಿಯೊ ಕುರಿತು ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ, ಸುದ್ದಿ ವೆಬ್‌ಸೈಟ್ ‘ಕಾಶ್ಮೀರ ವಾಲಾ’ ಈ ವೀಡಿಯೊದ ಬಗ್ಗೆ ಲೇಖನವನ್ನು ಪ್ರಕಟಿಸಿದೆ. ಶ್ರೀನಗರದ ಕಾಶ್ಮೀರಿ ಮುಸ್ಲಿಂ ಆರಿಫ್ ಜಾನ್ ಅವರು ವಿಡಿಯೋದಲ್ಲಿ ಗೋಹತ್ಯೆಯನ್ನು ತಡೆಯುತ್ತಿರುವುದಾಗಿ ಲೇಖನದಲ್ಲಿ ಹೇಳಲಾಗಿದೆ. ಘಟನೆಯ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಆರಿಫ್ ಜಾನ್ ಅವರನ್ನು ಸಂಪರ್ಕಿಸಿ, ಲೇಖನವನ್ನು ಬರೆಯಲಾಗಿದೆ. “ಈದ್ ಆಚರಣೆಯ ಸಮಯದಲ್ಲಿ, ಮಸೀದಿಯ ಸದಸ್ಯರು ನಮ್ಮ ಮನೆಯ ಪಕ್ಕದ ದಾರುಲ್-ಉಲಂನ ಖಾಲಿ ಜಾಗದಲ್ಲಿ ಸುಮಾರು 20 ಹಸುಗಳನ್ನು ಕೊಲ್ಲಲು ಮುಂದಾಗಿದ್ದರು. ಆಗ, ನಮ್ಮ ಮನೆಯ ಪಕ್ಕ ರಕ್ತದ ಕಲೆಗಳಾಗುತ್ತವೆ ಮತ್ತು ಮನೆಯ ಒಳಕ್ಕೆ ಕೆಟ್ಟ ವಾಸನೆ ಬರುತ್ತದೆ ಎಂದು ನಾನು ಹತ್ಯೆಯನ್ನು ತಡೆದಿದ್ದೇನೆ” ಎಂದು ಆರಿಫ್‌ ಜಾನ್‌ ಹೇಳಿದ್ದಾರೆ.

ಆರಿಫ್ ಜಾನ್ 17 ಸೆಪ್ಟೆಂಬರ್ 2021 ರಂದು ತನ್ನ ಫೇಸ್‌ಬುಕ್‌ ಪುಟದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಆರಿಫ್ ಜಾನ್ ಅವರು ದಾರುಲ್-ಉಲುಮ್ ಮಸೀದಿಯ ಸದಸ್ಯರೊಂದಿಗೆ ಜಗಳ ನಡೆಸಿದ್ದಾರೆ ಮತ್ತು ಅವರು ತಮ್ಮ ಮನೆಯ ಪಕ್ಕದ ಸ್ಥಳದಲ್ಲಿ ಈದ್ ಆಚರಣೆಯ ದಿನದಂದು ಗೋಹತ್ಯೆಯನ್ನು ಮಾಡಬಾರದೆಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ. ಕೆಲವರು ಪಂಥೀಯತೆಯನ್ನು ಪ್ರಚೋದಿಸುವ ದುರುದ್ದೇಶದಿಂದ ತಮ್ಮ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರಿಫ್ ಜಾನ್ ಹೇಳಿದ್ದಾರೆ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿನ ಈ ವಿವರಗಳ ಆಧಾರದ ಮೇಲೆ ಶ್ರೀನಗರದ ಕಾಶ್ಮೀರಿ ಮುಸ್ಲಿಂ ಗೋಹತ್ಯೆಯನ್ನು ತಡೆಯುತ್ತಿದ್ದಾರೆ, ಅವರು ಕಾಶ್ಮೀರಿ ಪಂಡಿತರಲ್ಲ ಎಂಬುದು ಸಾಬೀತಾಗಿದೆ.

ಒಟ್ಟಾರೆಯಾಗಿ, ಈ ವೀಡಿಯೊದಲ್ಲಿ ಗೋಹತ್ಯೆಯನ್ನು ತಡೆಯುತ್ತಿರುವುದು ಶ್ರೀನಗರದ ಕಾಶ್ಮೀರಿ ಮುಸ್ಲಿಂ ಆರಿಫ್ ಜಾನ್ ಆಗಿದ್ದಾರೆ, ಕಾಶ್ಮೀರಿ ಪಂಡಿತರಲ್ಲ.