ಕಾಶ್ಮೀರಿ ಪಂಡಿತರಿಗೆ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮನೆ ನಿರ್ಮಿಸಿಕೊಡುತ್ತಾರೆ ಎಂಬುದು ಸುಳ್ಳು

ಇತ್ತೀಚೆಗೆ ತೆರೆಕಂಡ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ದೇಶಾದ್ಯಂತ ಭಾರಿ ಸದ್ದು ಮಾಡಿತ್ತು. ಇದೆ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯೊಂದು ವೈರಲ್ ಆಗುತ್ತಿದ್ದು, ಚಿತ್ರದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ತಮ್ಮ ‘ದಿ ಕಾಶ್ಮೀರಿ ಫೈಲ್ಸ್’ ಸಿನಿಮಾದಿಂದ ಬಂದ ಲಾಭದಲ್ಲಿ ಕಾಶ್ಮೀರಿ ಹಿಂದೂಗಳಿಗೆ ಮನೆಗಳನ್ನು ನಿರ್ಮಿಸುವ ಭರವಸೆ ನೀಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ವಿವೇಕ್ ಅಗ್ನಿಹೋತ್ರಿಯವರು ನಿಜವಾಗಿಯೂ ಮನೆ ನಿರ್ಮಿಸಿ ಕೊಡುತ್ತಾರಾ? ಎಂದು  ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : ‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾ’ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ತಮ್ಮ ಸಿನಿಮಾ ಲಾಭದಿಂದ ಕಾಶ್ಮೀರಿ ಹಿಂದೂಗಳಿಗೆ ಮನೆಗಳನ್ನು ನಿರ್ಮಿಸಿಕೊಡುವುದಾಗಿ ವಾಗ್ದಾನ ಮಾಡಿದರು.

ನಿಜಾಂಶ : ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಕಾಶ್ಮೀರದಲ್ಲಿ ಹಿಂದೂಗಳಿಗೆ ಮನೆಗಳನ್ನು ನಿರ್ಮಿಸಿ ಕೊಡುವ ಯಾವುದೇ ಘೋಷಣೆ ಮಾಡಲಿಲ್ಲ. ‘ಕರ್ಣಿ ಸೇನಾ’ ರಾಷ್ಟ್ರೀಯ ಅಧ್ಯಕ್ಷ ಸೂರಜ್ ಪಾಲ್ ಅಮ್ಮು ಇತ್ತೀಚೆಗೆ ‘ಝೀ ಸ್ಟುಡಿಯೋಸ್’ ಮತ್ತು ವಿವೇಕ್ ಅಗ್ನಿಹೋತ್ರಿಗೆ ‘ದಿ ಕಾಶ್ಮೀರ್ ಫೈಲ್ಸ್’ ಲಾಭದ 50% ಅನ್ನು ಕಾಶ್ಮೀರಿ ಪಂಡಿತರ ಕಲ್ಯಾಣಕ್ಕಾಗಿ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಮಧ್ಯಪ್ರದೇಶದ ಐಎಎಸ್ ಅಧಿಕಾರಿಯೊಬ್ಬರ ಇದೇ ರೀತಿಯ ವಿನಂತಿಗೆ ಪ್ರತಿಕ್ರಿಯಿಸಿದ ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಚಲನಚಿತ್ರದ ಲಾಭ ಮತ್ತು ಐಎಎಸ್ ಅಧಿಕಾರಿಯಾಗಿ ಅವರ ಶಕ್ತಿಯಿಂದ ಕಾಶ್ಮೀರಿ ಪಂಡಿತರಿಗೆ ಹೇಗೆ ಸಹಾಯ ಮಾಡಬಹುದು ಎಂಬ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಅವರ ಭೇಟಿಗೆ ಸಮಯ ನೀಡುವಂತೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕಾಶ್ಮೀರ ಫೈಲ್ಸ್ ಚಿತ್ರದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ಕಾಶ್ಮೀರದಲ್ಲಿ ಹಿಂದೂಗಳಿಗೆ ಮನೆಗಳನ್ನು ನಿರ್ಮಿಸುವ ಕುರಿತು ಯಾವುದೇ ಘೋಷಣೆ ಮಾಡಿದ್ದಾರೆಯೇ ಎಂದು ಪರಿಶೀಲಿಸಲು ಗೂಗಲ್‌ ಸರ್ಚ್‌ ಮಾಡಿದಾಗ, ವಿವೇಕ್ ಅಗ್ನಿಹೋತ್ರಿ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಆ ರೀತಿಯ ಯಾವ ಪೋಸ್ಟ್‌ ಕಂಡುಬಂದಿಲ್ಲ. ವಿವೇಕ್ ಅಗ್ನಿಹೋತ್ರಿ ಅಂತಹ ಭರವಸೆ ನೀಡಿದ್ದರೆ, ಮುಖ್ಯವಾಹಿನಿಯ ಮಾಧ್ಯಮಗಳು, ಸುದ್ದಿ ವೆಬ್‌ಸೈಟ್‌ಗಳು ಆ ಹೇಳಿಕೆಯನ್ನು ವರದಿ ಮಾಡಿ ಪ್ರಕಟಿಸುತ್ತಿದ್ದವು. ಆದರೆ ಗೂಗಲ್‌ನಲ್ಲಿ ಈ ಸುದ್ದಿಯನ್ನು ವರದಿ ಮಾಡುವ ಒಂದೇ ಒಂದು ಲೇಖನವೂ ಲಭ್ಯವಿಲ್ಲ.

‘ಕರ್ಣಿ ಸೇನೆ’ಯ ರಾಷ್ಟ್ರೀಯ ಅಧ್ಯಕ್ಷ ಸೂರಜ್ ಪಾಲ್ ಅಮ್ಮು ಅವರು ಇತ್ತೀಚೆಗೆ ‘ಝೀ ಸ್ಟುಡಿಯೋಸ್’ ಮತ್ತು ವಿವೇಕ್ ಅಗ್ನಿಹೋತ್ರಿ ಅವರಿಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಲಾಭದ 50% ಅನ್ನು ಕಾಶ್ಮೀರಿ ಪಂಡಿತರ ಕಲ್ಯಾಣಕ್ಕಾಗಿ ಮೀಸಲು ಇಡುವಂತೆ ಮನವಿ ಮಾಡಿದ್ದರು. ಈ ಮಾಹಿತಿಯನ್ನು ವರದಿ ಮಾಡಿದ ಕೆಲವು ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಸ್ಥಳಾಂತರಗೊಂಡ ಕಾಶ್ಮೀರಿಗಳ ಕಲ್ಯಾಣಕ್ಕೆ ಚಲನಚಿತ್ರ ಲಾಭವನ್ನು ನೀಡಲು ವಿಫಲವಾದರೆ, ಅವರು ಸ್ಥಳಾಂತರಗೊಂಡ ಜನರ ದುಃಖವನ್ನು ಹಣ ಮಾಡಲು ಮಾತ್ರ ಚಲನಚಿತ್ರವನ್ನು ನಿರ್ಮಿಸಿದ್ದಾರೆ ಮತ್ತು ನಿಜವಾದ ಕಾಳಜಿಯನ್ನು ಹೊಂದಿಲ್ಲ ಎಂದು ಭಾವಿಸಲಾಗುವುದು ಎಂದು ಸೂರಜ್ ಪಾಲ್ ಅಮ್ಮು ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ನಿರ್ಮಾಪಕರಿಗೆ ಎಚ್ಚರಿಕೆ ನೀಡಿದರು.

ಮಧ್ಯಪ್ರದೇಶದ ಐಎಎಸ್ ಅಧಿಕಾರಿಯೊಬ್ಬರಿಂದ ಇದೇ ರೀತಿಯ ಬೇಡಿಕೆಗೆ ಪ್ರತಿಕ್ರಿಯಿಸಿದ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮೂಲಕ ಕಾಶ್ಮೀರಿ ಪಂಡಿತರಿಗೆ ತಮ್ಮ ಚಲನಚಿತ್ರದಿಂದ ಬರುವ ಲಾಭದ ಹಣ ಮತ್ತು ಐಎಎಸ್ ಅಧಿಕಾರಿಯಾಗಿ ನಿಮ್ಮ ಅಧಿಕಾರದಿಂದ ಹೇಗೆ ಸಹಾಯ ಮಾಡಬಹುದು ಎಂಬುದರ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲು ಸಮಯವನ್ನು ನಿಗದಿ ಮಾಡುವಂತೆ ವಿನಂತಿಸಿದ್ದಾರೆ. ಅಧಿಕಾರಿ ತಮ್ಮ ಮನವಿಯನ್ನು ಸ್ವೀಕರಿಸುತ್ತಾರೆ ಎಂದು ಮಧ್ಯಪ್ರದೇಶದ ಐಎಎಸ್ ಅಧಿಕಾರಿಗೆ ವಿವೇಕ್ ಅಗ್ನಿಹೋತ್ರಿ ಅವರು ವ್ಯಂಗ್ಯವಾಗಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ ಎಂದು ಹಲವು ಸುದ್ದಿ ವೆಬ್‌ಸೈಟ್‌ಗಳು ಲೇಖನಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಾಶ್ಮೀರದಲ್ಲಿ ಹಿಂದೂಗಳಿಗೆ ಮನೆಗಳನ್ನು ನಿರ್ಮಿಸುವ ಭರವಸೆ ನೀಡಿಲ್ಲ. ಹಾಗಾಗಿ ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು.