ಪ್ರಸ್ತುತ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿ “ಬಾಂಗ್ಲಾದೇಶಿ ಹಿಂದೂ ಕ್ರಿಕೆಟಿಗ ಲಿಟನ್ ದಾಸ್ ಅವರ ಆಸ್ತಿಯನ್ನು ಸುಟ್ಟುಹಾಕಲಾಗಿದೆ” ಎಂಬ ಕ್ಯಾಪ್ಶನ್ ಅನ್ನು ಒಳಗೊಂಡ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟ್‌ಗಳಲ್ಲಿ ನಾವು ಉರಿಯುತ್ತಿರುವ ಮನೆಯ ಫೋಟೋ ಮತ್ತು ಅದರ ಪಕ್ಕದಲ್ಲಿ ಲಿಟನ್ ದಾಸ್ ಅವರ ಫೋಟೋವನ್ನು ನೋಡಬಹುದು. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಬಾಂಗ್ಲಾದೇಶದ ಹಿಂದೂ ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಯನ್ನು ಪ್ರತಿಭಟನಾಕಾರರು ಸುಟ್ಟುಹಾಕಿದ್ದಾರೆ, ಎನ್ನುವ ಫೋಟೋ.
ಫ್ಯಾಕ್ಟ್: ವೈರಲ್ ಫೋಟೋದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಮನೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಸಂಸದ, ಮಾಜಿ ಕ್ರಿಕೆಟ್ ನಾಯಕ ಮಶ್ರಫೆ ಬಿನ್ ಮೊರ್ತಾಜಾ ಅವರಿಗೆ ಸೇರಿದ್ದಾಗಿದೆ. 05 ಆಗಸ್ಟ್ 2024 ರಂದು ಶೇಖ್ ಹಸೀನಾ ರಾಜೀನಾಮೆ ನೀಡಿದ ನಂತರ, ಗಲಭೆಯಲ್ಲಿ ನರೈಲ್ -2 ಕ್ಷೇತ್ರದ ಸಂಸದ ಮೊರ್ತಾಜಾ ಅವರ ಮನೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ ಸುಟ್ಟು ಹಾಕಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಚಳವಳಿಗಳು ಭುಗಿಲೆದಿದೆ. 1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದವರನ್ನು ಬಾಂಗ್ಲಾದೇಶದಲ್ಲಿ ಯುದ್ಧವೀರರೆಂದು ಕರೆಯಲಾಗುತ್ತದೆ. ಬಾಂಗ್ಲಾದೇಶದ ರಚನೆಯ ನಂತರ, 30% ಸರ್ಕಾರಿ ಉದ್ಯೋಗಗಳನ್ನು ಯುದ್ಧದಲ್ಲಿ ಭಾಗವಹಿಸಿದವರ ಮಕ್ಕಳು ಮತ್ತು ಯುದ್ಧ ಪರಿಣತರ ವಂಶಸ್ಥರಿಗೆ ಮೀಸಲಿಡಲಾಯಿತು. 2018 ರಲ್ಲಿ, ಶೇಖ್ ಹಸೀನಾ ಅವರ ಸರ್ಕಾರವು ಈ ಮೀಸಲಾತಿಯ ವಿರುದ್ಧ ದೊಡ್ಡ ಪ್ರಮಾಣದ ಪ್ರತಿಭಟನೆಗಳನ್ನುನಡೆಸಿದ ನಂತರ ಈ ಮೀಸಲಾತಿಗಳನ್ನು ರದ್ದುಗೊಳಿಸಿತು. ಆದರೂ, ಈ ಕೋಟಾವನ್ನು ಜೂನ್ 2024 ರ ಆರಂಭದಲ್ಲಿ ಮರುಸ್ಥಾಪಿಸಬೇಕು ಎಂದು ಹೈಕೋರ್ಟ್ ತೀರ್ಪು ನೀಡಿತು. ಜೂನ್ 2024 ರಲ್ಲಿ, ಶೇಖ್ ಹಸೀನಾ ಸರ್ಕಾರವು ಬಾಂಗ್ಲಾದೇಶದ ವಿಮೋಚನಾ ಹೋರಾಟಗಾರರ ವಂಶಸ್ಥರಿಗೆ ಸರ್ಕಾರಿ ಉದ್ಯೋಗಗಳಲ್ಲಿ 30 ಪ್ರತಿಶತ ಮೀಸಲಾತಿಯನ್ನು ಮರುಸ್ಥಾಪಿಸುವ ನಿರ್ಧಾರವನ್ನು ತೆಗೆದುಕೊಂಡಿತು. ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿ ಹೆಚ್ಚಿನ ಸಂಖ್ಯೆಯ ಯುವಕರು ಮತ್ತು ನಿರುದ್ಯೋಗಿಗಳು ಬೀದಿಗಿಳಿದರು. ಇದರ ಸಲುವಾಗಿ ನಡೆದ ಚಳುವಳಿ, ಪ್ರತಿಭಟನೆ ಮತ್ತು ಘರ್ಷಣೆಗಳಲ್ಲಿ ಸುಮಾರು 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ತದನಂತರ ಅಂತಿಮವಾಗಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಈ ಮೀಸಲಾತಿಯನ್ನು ಶೇಕಡಾ 5 ಕ್ಕೆ ಇಳಿಸಿತು. ಆದರೆ, 200 ಅಮಾಯಕರ ಸಾವಿಗೆ ಕಾರಣವಾದ ಪ್ರಧಾನಿ ಹಸೀನಾ, ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಒಂದು ವಾರದಿಂದ ಮತ್ತೆ ಪ್ರತಿಭಟನೆಗಳು ನಡೆದವು. 03 ಮತ್ತು 04 ಆಗಸ್ಟ್ 2024 ರಂದು, ಬಾಂಗ್ಲಾದೇಶದಲ್ಲಿ ದೇಶಾದ್ಯಂತ ಘರ್ಷಣೆಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಹೇರಲಾಗಿತ್ತು. 05 ಆಗಸ್ಟ್ 2024 ರಂದು, ಪ್ರತಿಭಟನಾಕಾರರು ‘ಢಾಕಾ ಲಾಂಗ್ ಮಾರ್ಚ್‘ ಗೆ ಕರೆ ನೀಡಿದರು, ಇದರ ಹಿನ್ನೆಲೆಯಲ್ಲಿ ಶೇಖ್ ಹಸೀನಾ ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಆಗಮಿಸಿದರು. ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದಾಗ ಪರಿಸ್ಥಿತಿ ಹದಗೆಟ್ಟಿತು. ಪ್ರತಿಭಟನಾಕಾರರು ಢಾಕಾದಲ್ಲಿನ ಅವರ ಅಧಿಕೃತ ನಿವಾಸಕ್ಕೆ ನುಗ್ಗಿ, ಲೂಟಿ ಮಾಡಿದಲ್ಲದೆ ಅಲ್ಲಿನ ವಸ್ತು ಮತ್ತು ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ (ಇಲ್ಲಿ, ಇಲ್ಲಿ).
ವರದಿಗಳ ಪ್ರಕಾರ, ಪ್ರಸ್ತುತ ನಡೆಯುತ್ತಿರುವ ಗಲಭೆಗಳಲ್ಲಿ ಕೆಲವು ಸ್ಥಳಗಳಲ್ಲಿ ಪ್ರತಿಭಟನಾಕಾರರು ಅಲ್ಪಸಂಖ್ಯಾತರ ಮನೆಗಳು ಮತ್ತು ವ್ಯವಹಾರಗಳ ಮೇಲೆ ದಾಳಿ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಹಿಂದೂಗಳು ಮತ್ತು ಅವರ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಅಲ್ಲದೆ, ಇತರ ಕೆಲವು ವರದಿಗಳು ಹಿಂದೂ ಮನೆಗಳು ಮತ್ತು ದೇವಾಲಯಗಳನ್ನು (ಇಲ್ಲಿ, ಇಲ್ಲಿ, ಇಲ್ಲಿ) ಧ್ವಂಸ ಮಾಡಿ ಸುಟ್ಟಿದ್ದಾರೆ ಎಂದು ಉಲ್ಲೇಖಿಸಿದೆ.
ಇದಲ್ಲದೆ ವೈರಲ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದಂತೆ ಬಾಂಗ್ಲಾದೇಶ ಕ್ರಿಕೆಟಿಗ ಲಿಟನ್ ದಾಸ್ ಮನೆಗೆ ಆಂದೋಲನಕೋರರು ಬೆಂಕಿ ಹಚ್ಚಿದ್ದಾರೆಯೇ? ಎಂದು ತಿಳಿಯಲು ಸೂಕ್ತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ನಲ್ಲಿ ಹುಡುಕಾಡಿದಾಗ ದಾಸ್ ಅವರ ಮನೆಯ ಮೇಲೆ ದಾಳಿ ನಡೆದ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿಯೂ ನಮಗೆ ದೊರಕಿಲ್ಲ. ಇನ್ನು ವೈರಲ್ ಫೋಟೋದಲ್ಲಿ (ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ) ಸುತ್ತು ಹೋಗಿರುವ ಮನೆಯ ದೃಶ್ಯಗಳನ್ನು ವರದಿ ಮಾಡಿರುವ ಹಲವಾರು ಪಬ್ಲಿಶ್ಡ್ ಆರ್ಟಿಕಲ್ಸ್ ಗಳು ನಮಗೆ ದೊರಕಿದೆ. ಈ ವರದಿಗಳ ಪ್ರಕಾರ, ವೈರಲ್ ಫೋಟೋದಲ್ಲಿರುವ ಮನೆ ಮಾಜಿ ಕ್ರಿಕೆಟ್ ನಾಯಕ ಮಶ್ರಫೆ ಮೊರ್ತಾಜಾ ಅವರಿಗೆ ಸೇರಿದ್ದು, ಅವರು ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಾರ್ಟಿಯಲ್ಲಿ ಸಂಸದರಾಗಿದ್ದಾರೆ ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ, ಶೇಖ್ ಹಸೀನಾ ಅವರು 05 ಆಗಸ್ಟ್ 2024 ರಂದು ರಾಜೀನಾಮೆ ನೀಡಿದ ನಂತರ, ದುಷ್ಕರ್ಮಿಗಳು ನರೈಲ್ -2 ಕ್ಷೇತ್ರದ ಅವಾಮಿ ಲೀಗ್ ಸಂಸದ ಮಶ್ರಫೆ ಬಿನ್ ಮೊರ್ತಾಜಾ ಅವರ ಮನೆಯನ್ನು ಧ್ವಂಸಗೊಳಿಸಿ ಸುಟ್ಟು ಹಾಕಿದ್ದಾರೆ. ಪ್ರತಿಭಟನಾಕಾರರು ಅವರ ಮನೆಗೆ ನುಗ್ಗಿದಾಗ ಮನೆಯಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ಪ್ರಮಾಣದ ಅವಘಡದಿಂದ ತಪ್ಪಿಕೊಂಡಿದ್ದಾರೆ. ಅಲ್ಲದೆ, ನರೈಲ್ ಜಿಲ್ಲಾ ಅವಾಮಿ ಲೀಗ್ ಕಚೇರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ಜಿಲ್ಲಾ ಅವಾಮಿ ಲೀಗ್ ಅಧ್ಯಕ್ಷ ಸುಭಾಷ್ ಚಂದ್ರ ಬೋಸ್ ಅವರ ಮನೆಗಳನ್ನೂ ಧ್ವಂಸ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮಶ್ರಫೆ ಅವರು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ತುಂಬಾ ಹತ್ತಿರದವರು ಎಂದು ಹೇಳಲಾಗುತ್ತದೆ ಮತ್ತು ಮೊರ್ತಜಾ ಅವರು 2017 ರಲ್ಲಿ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ನಂತರ 2018 ರಲ್ಲಿ ಅವಾಮಿ ಲೀಗ್‌ಗೆ ಸೇರಿದ್ದಾರೆ. 2019 ರಲ್ಲಿ, ಮೊರ್ತಜಾ ಅವರು ನರೆಲ್ -2 ಸಂಸದೀಯ ಕ್ಷೇತ್ರದಿಂದ ಆಡಳಿತ ವ್ಯವಸ್ಥೆಗೆ ಅವಾಮಿ ಲೀಗ್‌ನಿಂದ ಸಂಸದರಾಗಿ ಆಯ್ಕೆಯಾದರು. 2024 ರ ಚುನಾವಣೆಯಲ್ಲಿ ಮೊರ್ತಾಜಾ ಅವರು ಪ್ರಧಾನಿ ಶೇಖ್ ಹಸೀನಾ (ಇಲ್ಲಿ) ಉತ್ತಮ ಸಂಬಂಧವನ್ನು ಹೊಂದಿದ್ದರು. ಮಶ್ರಫೆ ಅವರು ತಮ್ಮ ಕ್ರಿಕೆಟ್ ಜೀವನದಲ್ಲಿ 117 ಪಂದ್ಯಗಳಲ್ಲಿ ಬಾಂಗ್ಲಾದೇಶದ ನಾಯಕರಾಗಿದ್ದರು. ಅವರು 36 ಟೆಸ್ಟ್‌ಗಳು, 220 ODIಗಳು ಮತ್ತು 54 T20I ಗಳಲ್ಲಿ ಆಡಿದ್ದಾರೆ, 390 ಅಂತರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದು 2,955 ರನ್ ಕಲೆ ಹಾಕಿದ್ದಾರೆ (ಇಲ್ಲಿ).
ಇದಲ್ಲದೆ, ನಾವು ಗೂಗಲ್ ಮ್ಯಾಪ್‌ನಲ್ಲಿ ನರೈಲ್ ಜಿಲ್ಲೆಯಲ್ಲಿ ಜಿಯೋ ಲೇಔಟ್ ನಲ್ಲಿರುವ ಮಶ್ರಫೆ ಮೊರ್ತಜಾ ಅವರ ಮನೆಯನ್ನು ಕಂಡುಕೊಂಡಿದ್ದೇವೆ. ವೈರಲ್ ಫೋಟೋದಲ್ಲಿರುವ ಮನೆಯೊಂದಿಗೆ ಗೂಗಲ್ ಮ್ಯಾಪ್‌ನಲ್ಲಿ ನೋಡಿದ ಮನೆಯೊಂದಿಗೆ ಹೋಲಿಸಿದಾಗ, ಎರಡೂ ದೃಶ್ಯಗಳು ಒಂದೇ ಮನೆಯನ್ನು ತೋರಿಸುತ್ತಿದೆ ಎಂದು ನಾವು ನಿರ್ಧರಿಸಿದ್ದೇವೆ. ಅಲ್ಲದೆ, ನಾವು ಯೂಟ್ಯೂಬ್‌ನಲ್ಲಿ ನರೈಲ್‌ನಲ್ಲಿರುವ ಮೊರ್ತಜಾ ಅವರ ಮನೆಯ ಹಳೆಯ ವೀಡಿಯೊಗಳನ್ನು ನೋಡಿದ್ದೇವೆ (ಇಲ್ಲಿ, ಇಲ್ಲಿ). 05 ಆಗಸ್ಟ್ 2024 ರಂದು, ಪ್ರತಿಭಟನಾಕಾರರು ಮೊರ್ತಾಜಾ ಅವರ ಮನೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ ದೃಶ್ಯಗಳನ್ನು ಹಲವಾರು ಬಾಂಗ್ಲಾದೇಶದ ಸುದ್ದಿ ಸಂಸ್ಥೆಗಳು ತಮ್ಮ ಯೂಟ್ಯೂಬ್ ಚಾನಲ್‌ಗಳಲ್ಲಿ (ಇಲ್ಲಿ, ಇಲ್ಲಿ) ಹಂಚಿಕೊಂಡಿವೆ. ನರೈಲ್ ಜಿಲ್ಲೆಯ ಮಶ್ರಫೆ ಮೊರ್ತಜಾ ಅವರ ಮನೆಯನ್ನು ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ಕೆಳಗೆ ನೋಡಬಹುದು. ವೈರಲ್ ಫೋಟೋದಲ್ಲಿ ಕಂಡುಬರುವ ಮನೆ ಬಾಂಗ್ಲಾದೇಶದ ಮಾಜಿ ಕ್ರಿಕೆಟ್ ನಾಯಕ ಮಶ್ರಫೆ ಮೊರ್ತಜಾ ಅವರದ್ದು ಎಂದು ಇದರಿಂದ ನಾವು ಖಚಿತಪಡಿಸಬಹುದು.
ಕೊನೆಯದಾಗಿ ಹೇಳುವುದಾದರೆ, ವೈರಲ್ ಫೋಟೋದಲ್ಲಿ ಕಂಡುಬರುವ ಮನೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಾರ್ಟಿಯಲ್ಲಿ ಸಂಸದರಾಗಿದ್ದ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಮಶ್ರಫೆ ಮೊರ್ತಜಾ ಅವರಿಗೆ ಸೇರಿದ್ದಾಗಿದೆ.