ಈ ಫೋಟೋದಲ್ಲಿರುವ ಹುಡುಗನನ್ನು ಕಳ್ಳತನಕ್ಕಾಗಿ ಅಲ್ಲ, ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ

ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾದ ಬಾಲಕನ ಫೋಟೋವನ್ನು ತನ್ನ ತಾಯಿಗಾಗಿ ಅಂಗಡಿಯಲ್ಲಿ ಬ್ರೆಡ್ ಮತ್ತು ಬೆಣ್ಣೆಯನ್ನು ಕದಿಯುವಾಗ ಸಿಕ್ಕಿಬಿದ್ದ 15 ವರ್ಷದ ಬಾಲಕ ಎಂದು ಸಾಮಾಜಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಲ್ಲದೆ, ಬಾಲಕನ ಮೇಲೆ ಕ್ರೂರವಾಗಿ ವರ್ತಿಸಿದ್ದಕ್ಕಾಗಿ ನ್ಯಾಯಾಧೀಶರು ಅಂಗಡಿ ಆಡಳಿತಕ್ಕೆ $ 1000 ದಂಡ ವಿಧಿಸಿದ್ದಾರೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಅಂಗಡಿಯಲ್ಲಿ ಬ್ರೆಡ್ ಮತ್ತು ಬೆಣ್ಣೆಯನ್ನು ಕದಿಯುತ್ತಿದ್ದ 15 ವರ್ಷದ ಬಾಲಕನನ್ನು ಬಂಧಿಸಲಾಗಿದೆ.

ಸತ್ಯ: ಫೋಟೋದಲ್ಲಿರುವ ಹುಡುಗನನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ಕಳ್ಳತನದ ಆರೋಪದ ಮೇಲೆ ಅಲ್ಲ. 2011 ರಲ್ಲಿ ಜಾಕ್ಸನ್‌ವಿಲ್ಲೆಯಲ್ಲಿ ತನ್ನ ಅಣ್ಣ ಡೇವಿಡ್‌ನನ್ನು ಕೊಲೆ ಮಾಡಿದ ಆರೋಪದ ಮೇಲೆ 12 ವರ್ಷದ ಕ್ರಿಶ್ಚಿಯನ್ ಫರ್ನಾಂಡೀಸ್‌ನನ್ನು ಬಂಧಿಸಲಾಗಿದೆ. ಆ ಬಾಲಕ 2018 ರವರೆಗೆ ಬಂಧನದಲ್ಲಿದ್ದ. ಆದ್ದರಿಂದ, ಪೋಸ್ಟ್‌ನಲ್ಲಿ ಹೇಳಲಾಗಿರುವ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿರುವ ಫೋಟೋವನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ‘03 ಜನವರಿ 2012’ ರಂದು ‘ಫ್ಲೋರಿಡಾ ಟೈಮ್ಸ್-ಯೂನಿಯನ್’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ಫೋಟೋ ಕಂಡುಬಂದಿದೆ. ಲೇಖನದಲ್ಲಿ, ಈ ಹುಡುಗನನ್ನು 12 ವರ್ಷದ ಕ್ರಿಶ್ಚಿಯನ್ ಜುವಾನ್ ಫರ್ನಾಂಡೀಸ್ ಎಂದು ಉಲ್ಲೇಖಿಸಿದ್ದಾರೆ. ಆತ ತನಗಿಂತ 2 ವರ್ಷ ಹಿರಿಯನಾದ ಅಣ್ಣನನ್ನು ಕೊಂದ ಆರೋಪದ ಮೇಲೆ ಕೊಲೆ ಆರೋಪ ಹೊತ್ತಿದ್ದರು. 2011 ರಲ್ಲಿ ಆತನ ಅಣ್ಣ ಡೇವಿಡ್ ಗ್ಯಾಲರರಾಗಾ ತಲೆಬುರುಡೆ ಒಡೆತ ಮತ್ತು ಮಿದುಳಿನಲ್ಲಿ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ, ‘19 ಅಕ್ಟೋಬರ್ 2011’ ರಂದು ‘ಫಾಕ್ಸ್ ನ್ಯೂಸ್’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ದೃಶ್ಯಗಳನ್ನು ತೋರಿಸುವ ವೀಡಿಯೊ ಕಂಡುಬಂದಿದೆ. ಫ್ಲೋರಿಡಾದ ಜಾಕ್ಸನ್‌ವಿಲ್ಲೆಯಲ್ಲಿ ತನ್ನ ಸಹೋದರನ ಕೊಲೆಗೆ ಸಂಬಂಧಿಸಿದಂತೆ 12 ವರ್ಷದ ಕ್ರಿಶ್ಚಿಯನ್ ಫರ್ನಾಂಡೀಸ್ ವಿರುದ್ಧ ಆರೋಪ ಹೊರಿಸಲಾಗಿದೆ ಎಂದು ವೀಡಿಯೊದಲ್ಲಿ ಉಲ್ಲೇಖಿಸಲಾಗಿದೆ. ಕ್ರಿಶ್ಚಿಯನ್ ಫರ್ನಾಂಡೀಸ್ ತನ್ನ ಅಣ್ಣ ಡೇವಿಡ್‌ನನ್ನು ಹಿಂಸಾತ್ಮಕವಾಗಿ ಪುಸ್ತಕದ ಕಪಾಟಿಗೆ ನೂಕಿದ್ದು, ಆತನ ತಲೆಬುರುಡೆಯ ತೀವ್ರ ಗಾಯ ಮತ್ತು ತಲೆಯೊಳಗೆ ರಕ್ತಸ್ರಾವವಾದ ಕಾರಣ ಮೃತಪಟ್ಟಿದ್ದ. ಇದಕ್ಕೆ ಕಾರಣವಾದ ಆರೋಪದ ಮೇಲೆ ಬಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಕ್ರಿಶ್ಚಿಯನ್ ಫರ್ನಾಂಡೀಸ್ ಜಾಕ್ಸನ್‌ವಿಲ್ಲೆಯಲ್ಲಿ  ಅತ್ಯಂತ ಕಿರಿಯ ಕೊಲೆಗಾರ ಎಂದು ವರದಿಯಾಗಿದೆ.

‘ನ್ಯೂಸ್ 4 ಜಾಕ್ಸ್’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದ ಪ್ರಕಾರ, ಕ್ರಿಶ್ಚಿಯನ್ ಫರ್ನಾಂಡೀಸ್ ಅವರನ್ನು 2013 ರಿಂದ ಬಂಧನದಲ್ಲಿಡಲಾಗಿತ್ತು. ನಂತರ ’15 ಜನವರಿ 2018′ ರಂದು ಜೈಲಿನಿಂದ ಬಿಡುಗಡೆ ಮಾಡಲಾಯಿತು. ವಿಶೇಷ ಷರತ್ತುಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲು ಪ್ರಾಸಿಕ್ಯೂಟರ್‌ಗಳು ಮತ್ತು ಸರ್ಕ್ಯೂಟ್ ನ್ಯಾಯಾಧೀಶರು ಒಪ್ಪಿದ ನಂತರ ಆತನನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಫೋಟೋದಲ್ಲಿರುವ ಹುಡುಗನನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ಕಳ್ಳತನದ ಆರೋಪದ ಮೇಲೆ ಅಲ್ಲ.