ಪ್ರಯಾಗ್‌ರಾಜ್‌ನಲ್ಲಿರುವ ಶಾಹಿ ಮಸೀದಿಯನ್ನು ರಸ್ತೆ ವಿಸ್ತರಣೆ ಕಾಮಗಾರಿಯ ಉತ್ತರ ಪ್ರದೇಶ ಸರ್ಕಾರ ಕೆಡವಿತ್ತು

ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ್ದಕ್ಕಾಗಿ ಯು.ಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಸೀದಿಯನ್ನು ಕೆಡವಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು. ರಸ್ತೆ ಬದಿಯ ಬುಲ್ಡೋಜರ್ ಸಹಾಯದಿಂದ ಮಸೀದಿಯನ್ನು ಕೆಡವುತ್ತಿರುವ ದೃಶ್ಯಗಳನ್ನು ಈ ವಿಡಿಯೋದಲಿದ್ದು,  ಈ ಪೋಸ್ಟ್ ಎಷ್ಟು ನಿಜ ಎಂಬುದನ್ನು ತಿಳಿಯೋಣ.

ಕ್ಲೇಮ್: ಪಾಕಿಸ್ತಾನದ ಧ್ವಜ ಹಾರಿಸಿದ್ದಕ್ಕಾಗಿ ಉತ್ತರ ಪ್ರದೇಶ ಸರ್ಕಾರ ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ಮಸೀದಿಯನ್ನು ಕೆಡವಿದ ದೃಶ್ಯಗಳು.

ಫ್ಯಾಕ್ಟ್ : ಪ್ರಯಾಗರಾಜ್ ಜಿಲ್ಲೆಯ ಹಂಡಿಯಾ ಮಂಡಲ್‌ನ ಸೈದಾಬಾದ್ ಮಾರುಕಟ್ಟೆ ಬಳಿ ಇರುವ ಶಾಹಿ ಮಸೀದಿಯನ್ನು ಉತ್ತರ ಪ್ರದೇಶದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೆಡವುತ್ತಿರುವುದನ್ನು ಈ ವೀಡಿಯೊ ತೋರಿಸುತ್ತದೆ. ಉತ್ತರ ಪ್ರದೇಶ ಸರ್ಕಾರವು ಪ್ರಯಾಗ್‌ರಾಜ್-ಹಂಡಿಯಾ ನಡುವಿನ ರಾಜ್ಯ ಹೆದ್ದಾರಿಯ ಅಗಲೀಕರಣದ ಭಾಗವಾಗಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾದ ಶಾಹಿ ಮಸೀದಿಯನ್ನು ಕೆಡವಿದೆ. ವೀಡಿಯೊದಲ್ಲಿ ಮಸೀದಿಯ ಮೇಲೆ ಕಂಡುಬರುವ ಹಸಿರು ಬಣ್ಣವು ಇಸ್ಲಾಮಿಕ್ ಧ್ವಜಗಳು, ಪಾಕಿಸ್ತಾನದ ರಾಷ್ಟ್ರಧ್ವಜವಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪು.

ಪೋಸ್ಟ್‌ನಲ್ಲಿ ಶೇರ್ ಮಾಡಿದ ವೀಡಿಯೊದ ವಿವರಗಳನ್ನು ಹುಡುಕಿದಾಗ, ವೀಡಿಯೊದಲ್ಲಿ ಕಂಡುಬರುವ ಮಸೀದಿಯ ಧ್ವಂಸಕ್ಕೆ ಸಂಬಂಧಿಸಿದಂತೆ ‘Siasat’ (‘ಸಿಯಾಸತ್’) ಸುದ್ದಿ ಸಂಸ್ಥೆ ಇತ್ತೀಚೆಗೆ ಲೇಖನವನ್ನು ಪ್ರಕಟಿಸಿದೆ ಎಂದು ತಿಳಿದಿದೆ. ರಸ್ತೆ ವಿಸ್ತರಣೆಯ ಭಾಗವಾಗಿ ಪ್ರಯಾಗ್ರಾಜ್ ಜಿಲ್ಲೆಯ ಹಂಡಿಯಾ ಪ್ರದೇಶದಲ್ಲಿ 16 ನೇ ಶತಮಾನದ ಶಾಹಿ ಮಸೀದಿಯನ್ನುಉತ್ತರ ಪ್ರದೇಶ ಸರ್ಕಾರ ನೆಲಸಮ ಮಾಡಿದೆ ಎಂದು ಈ ಲೇಖನದಲ್ಲಿ ವರದಿಯಾಗಿದೆ.

ಈ ಘಟನೆಗೆ  ಸಂಬಂಧಿಸಿದಂತೆ ‘ದೈನಿಕ್ ಭಾಸ್ಕರ್’  ಎಂಬ ಸುದ್ದಿ ಸಂಸ್ಥೆ ಘಟನೆಯ ವಿವರವಾದ ಲೇಖನವನ್ನು ಪ್ರಕಟಿಸಿದೆ. ಪ್ರಯಾಗ್‌ರಾಜ್ ಮತ್ತು ಹಂಡಿಯಾ ನಡುವಿನ ರಸ್ತೆ ವಿಸ್ತರಣೆ ಕಾಮಗಾರಿಯ ಭಾಗವಾಗಿ  ಜನವರಿ ೯, 2023 ರಂದು ಉತ್ತರ ಪ್ರದೇಶದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶಾಹಿ ಮಸೀದಿಯನ್ನು ಕೆಡವಿದ್ದಾರೆ ಎಂದು ಈ ಲೇಖನದಲ್ಲಿ ವರದಿಯಾಗಿದೆ. ಶಾಹಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶಾಹಿ ಮಸೀದಿ ಆಡಳಿತ ಮಂಡಳಿಗೆ ಮೊದಲೇ ನೋಟಿಸ್ ನೀಡಿದ್ದು, ಇದರ ವಿರುದ್ಧ ಶಾಹಿ ಮಸೀದಿಯ  ಆಡಳಿತ ಮಂಡಳಿ ಹೈಕೋರ್ಟ್, ಸಿವಿಲ್ ಕೋರ್ಟ್ ಹಾಗೂ ಕೆಳ ನ್ಯಾಯಾಲಯದ ಮೊರೆ ಹೋಗಿದೆ ಎಂದು ಲೇಖನದಲ್ಲಿ ತಿಳಿಸಲಾಗಿದೆ.

ಶಾಹಿ ಮಸೀದಿ ಧ್ವಂಸದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನುಅಲಹಾಬಾದ್ ಹೈಕೋರ್ಟ್ 2022ರ ಆಗಸ್ಟ್ ತಿಂಗಳಿನಲ್ಲಿಯೇ ವಜಾಗೊಳಿಸಿದೆ. ರಾಜ್ಯ ಹೆದ್ದಾರಿ 106 ಅನ್ನು ಅಗಲಗೊಳಿಸುವ ಸಲುವಾಗಿ ಸರ್ಕಾರಿ ಜಮೀನು Gata No. 402 ರಲ್ಲಿ ನಿರ್ಮಿಸಲಾದ ಶಾಹಿ ಮಸೀದಿಯನ್ನು ತೆರವು ಮಾಡಬೇಕು  ಎಂದು ಯು.ಪಿ  ಲೋಕೋಪಯೋಗಿ ಇಲಾಖೆಯು ಹೈಕೋರ್ಟ್‌ಗೆ ತಿಳಿಸಿದ್ದರಿಂದ, ಈ ಪ್ರಕರಣದಲ್ಲಿ ಯಾವುದೇ ಆದೇಶವನ್ನು ಹೊರಡಿಸಲು ಸಾಧ್ಯವಾಗುವುದಿಲ್ಲ ಬೇಕಾದರೆ  ಅರ್ಜಿದಾರರು ಸಿವಿಲ್ ದಾವೆ ಹೂಡಬಹುದು ಎಂದು ಹೈಕೋರ್ಟ್ ಹೇಳಿದೆ.  ಶಾಹಿ ಮಸೀದಿ ಧ್ವಂಸವನ್ನು ತಡೆಯಲು ಸಲ್ಲಿಸಿದ ಅರ್ಜಿಯನ್ನು ಸಿವಿಲ್ ನ್ಯಾಯಾಲಯವೂ ತಿರಸ್ಕರಿಸಿತು. ನ್ಯಾಯಾಲಯದ ವಿಚಾರಣೆಯ ಮೊದಲೇ  ಶಾಹಿ ಮಸೀದಿಯನ್ನು ಅಧಿಕಾರಿಗಳು ಕೆಡವಿದ್ದಾರೆ ಎಂದು ಆರೋಪಿಸಿ ಕೆಳ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಶಾಹಿ ಮಸೀದಿ ಇಮಾಮ್ ಮಾಧ್ಯಮಗಳಿಗೆ ತಿಳಿಸಿದ್ದರು.

ವೀಡಿಯೊದಲ್ಲಿ ಮಸೀದಿಯ ಮೇಲೆ ಕಾಣಿಸುತ್ತಿರುವ ಹಸಿರು ಬಣ್ಣದ ಧ್ವಜ ಇಸ್ಲಾಮಿಕ್ ಮತೀಯ ಧ್ವಜಗಳೇ ಹೊರತು ಪಾಕಿಸ್ತಾನದ ರಾಷ್ಟ್ರಧ್ವಜವಲ್ಲ. ಈ ಧ್ವಜಗಳನ್ನು ಅನೇಕ ಇಸ್ಲಾಮಿಕ್ ಧಾರ್ಮಿಕ ಸ್ಥಳಗಳಲ್ಲಿ ಹಾರಿಸಲಾಗುತ್ತದೆ. ಇಲ್ಲಿ, ಇಸ್ಲಾಮಿಕ್ ಧ್ವಜಗಳನ್ನು ಪಾಕಿಸ್ತಾನದ ರಾಷ್ಟ್ರೀಯ ಧ್ವಜ ಎನ್ನುವ ಸುಳ್ಳು  ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆದರೆ  ಫ್ಯಾಕ್ಟ್ಲಿ ಇದರ ಕುರಿತು ಫ್ಯಾಕ್ಟ್ ಚೆಕ್ ಆರ್ಟಿಕಲ್ ಅನ್ನು ಪ್ರಕಟಿಸಿದೆ.

ಕೊನೆಯದಾಗಿ ಹೇಳುವುದಾದರೆ  ಪ್ರಯಾಗ್‌ರಾಜ್‌ನಲ್ಲಿರುವ ಶಾಹಿ ಮಸೀದಿಯನ್ನು ಉತ್ತರ ಪ್ರದೇಶ ಸರ್ಕಾರವು ರಸ್ತೆ ವಿಸ್ತರಣೆ ಕಾರ್ಯಗಳ ಭಾಗವಾಗಿ ಕೆಡವಿದೆ. ಇದಲ್ಲದೆ ವಿಡಿಯೋದಲ್ಲಿ ಮಸೀದಿಯ ಮೇಲೆ ಕಂಡುಬರುವ ಹಸಿರು ಬಣ್ಣದ ನಿಶಾನೆಯು ಇಸ್ಲಾಮಿಕ್ ಮತೀಯ ಧ್ವಜವಾಗಿದ್ದು, ಪಾಕಿಸ್ತಾನದ ರಾಷ್ಟ್ರ ಧ್ವಜವಲ್ಲ.