ಸಲ್ಮಾನ್ ಖಾನ್ ಅವರನ್ನು ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳ ಶಂಕಿತ ವ್ಯಕ್ತಿಗಳ ಪಾಕಿಸ್ತಾನದ ಯಾವುದೇ ಪಟ್ಟಿಗೆ ಸೇರಿಸಲಾಗಿಲ್ಲ; ವೈರಲ್ ಆಗಿರುವ ಆ ನೋಟಿಫಿಕೇಶನ್ ಸುಳ್ಳು

ಅಕ್ಟೋಬರ್ 17, 2025 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ‘ಜಾಯ್ ಫೋರಮ್’ ನ ಚರ್ಚಾ ಗೋಷ್ಠಿಯಲ್ಲಿ ನಟರಾದ ಅಮೀರ್ ಖಾನ್ ಮತ್ತು ಶಾರುಖ್ ಖಾನ್ ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಟ ಸಲ್ಮಾನ್ ಖಾನ್ ಮಾತನಾಡುತ್ತಾ, “ಈಗ, ನೀವು ಒಂದು ಹಿಂದಿ ಚಿತ್ರವನ್ನು ಮಾಡಿ ಇಲ್ಲಿ (ಸೌದಿ ಅರೇಬಿಯಾದಲ್ಲಿ) ಬಿಡುಗಡೆ ಮಾಡಿದರೆ, ಅದು ಸೂಪರ್-ಹಿಟ್ ಆಗುತ್ತದೆ. ನೀವು ತಮಿಳು, ತೆಲುಗು ಅಥವಾ ಮಲಯಾಳಂ ಚಿತ್ರ ಮಾಡಿದರೂ ನೂರಾರು ಕೋಟಿ ಗಳಿಸುತ್ತದೆ, ಏಕೆಂದರೆ ಇತರ ದೇಶಗಳಿಂದ ಅನೇಕ ಜನರು ಇಲ್ಲಿಗೆ ಬಂದಿದ್ದಾರೆ. ಇಲ್ಲಿ ಬಲೂಚಿಸ್ತಾನದವರು ಇದ್ದಾರೆ, ಅಫ್ಘಾನಿಸ್ತಾನದವರು ಇದ್ದಾರೆ, ಪಾಕಿಸ್ತಾನದವರು ಇದ್ದಾರೆ, ಪ್ರತಿಯೊಬ್ಬರೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ,” ಎಂದು ಹೇಳಿದ್ದರು. ಈ ಹೇಳಿಕೆಯು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು.  

ಈ ಹಿನ್ನೆಲೆಯಲ್ಲಿ, ಪಾಕಿಸ್ತಾನವು ನಟ ಸಲ್ಮಾನ್ ಖಾನ್ ಅವರನ್ನು ಉಗ್ರಗಾಮಿ ಚಟುವಟಿಕೆಗಳಿಗೆ ಸಂಬಂಧಿಸಿದ ವ್ಯಕ್ತಿಗಳನ್ನು ಮೇಲ್ವಿಚಾರಣೆ ಮಾಡಲು ಬಳಸುವ ‘ನಾಲ್ಕನೇ ಶೆಡ್ಯೂಲ್’ಗೆ ಸೇರಿಸಿದೆ ಎಂಬ  ಪ್ಲೇಮ್ ನೊಂದಿಗೆ ಒಂದು ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ (ಇಲ್ಲಿ). ​ಪಾಕಿಸ್ತಾನದಿಂದ ‘ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ಕಾಯಿದೆ, 1997’ ರ ಅಡಿಯಲ್ಲಿ ಸಲ್ಮಾನ್ ಖಾನ್ ಅವರನ್ನು ನಾಲ್ಕನೇ ಶೆಡ್ಯೂಲ್‌ಗೆ ಸೇರಿಸುವ ಬಗ್ಗೆ ಬಲೂಚಿಸ್ತಾನ ಗೃಹ ಇಲಾಖೆಯದ್ದೆಂದು ಹೇಳಲಾದ ನೋಟಿಫಿಕೇಶನ್ ಅನ್ನು ಸಹ ಈ ಪೋಸ್ಟ್ ಒಳಗೊಂಡಿದೆ. News18, Mint, The Telegraph, Moneycontrol, DD News, The Times of India ಮತ್ತು Outlook ಸೇರಿದಂತೆ ಹಲವಾರು ಭಾರತೀಯ ಮಾಧ್ಯಮ ಸಂಸ್ಥೆಗಳು ಸಹ ಈ  ಕ್ಲೈಮನ್ನು ವರದಿ ಮಾಡಿವೆ. ಈ ಲೇಖನದಲ್ಲಿ, ಪೋಸ್ಟ್‌ನಲ್ಲಿ ಮಾಡಿದ ಈ ಕ್ಲೇಮ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ. 

ಕ್ಲೇಮ್: ಉಗ್ರಗಾಮಿ ಅಥವಾ ನಿಷೇಧಿತ ಸಂಘಟನೆಗಳಿಗೆ ಸಂಬಂಧಿಸಿದ ವ್ಯಕ್ತಿಗಳನ್ನು ಮೇಲ್ವಿಚಾರಣೆ ಮಾಡಲು ಬಳಸಲಾಗುವ ‘ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ಕಾಯಿದೆ, 1997’ ರ ಅಡಿಯಲ್ಲಿ ನಟ ಸಲ್ಮಾನ್ ಖಾನ್ ಅವರನ್ನು ಪಟ್ಟಿಯೊಂದಕ್ಕೆ ಪಾಕಿಸ್ತಾನ ಸೇರಿಸಿದೆ.  

ಫ್ಯಾಕ್ಟ್:​ ನಟ ಸಲ್ಮಾನ್ ಖಾನ್ ಅವರನ್ನು ಭಯೋತ್ಪಾದನೆಗೆ ಸಂಬಂಧಿಸಿದ ವ್ಯಕ್ತಿಗಳ ಪಟ್ಟಿಗೆ ಪಾಕಿಸ್ತಾನ ಸೇರಿಸಿದೆ ಎಂಬ  ಕ್ಲೈಮ್ ನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆಗಿರುವ ನೋಟಿಫಿಕೇಶನ್, ಹಳೆಯ ನೋಟಿಫಿಕೇಶನ್ ಅನ್ನು ಬಳಸಿಕೊಂಡು ನಕಲಿಯಾಗಿ ಸೃಷ್ಟಿಸಲಾಗಿದೆ. ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ  ಫ್ಯಾಕ್ಚಕಿಂಗ್ ಘಟಕವು  ಅಕ್ಟೋಬರ್ 26, 2025 ರಂದು ಈ  ಕ್ಲೈಮ್ ಸುಳ್ಳು ಮತ್ತು ಪರಿಶೀಲನೆಗೆ ಒಳಪಡದ ವದಂತಿ ಎಂದು ಸ್ಪಷ್ಟಪಡಿಸಿದೆ.ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು

ವೈರಲ್ ಆಗಿರುವ ನೋಟಿಫಿಕೇಶನ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದು ಅಧಿಕೃತವಲ್ಲ ಎಂಬುದನ್ನು ಸೂಚಿಸುವ ಹಲವಾರು ಅಸಂಗತತೆಗಳು ನಮಗೆ ಕಂಡುಬಂದಿವೆ. ​ಸುತ್ತೋಲೆಯ ದಿನಾಂಕವು ಅಕ್ಟೋಬರ್ 16, 2025 ಎಂದಿದೆ, ಆದರೆ ಸಲ್ಮಾನ್ ಖಾನ್, ಅಮೀರ್ ಖಾನ್ ಮತ್ತು ಶಾರುಖ್ ಖಾನ್ ಭಾಗವಹಿಸಿದ್ದ ಚರ್ಚಾ ಗೋಷ್ಠಿಯು ರಿಯಾದ್‌ನ ಜಾಯ್ ಫೋರಂನ ಎರಡನೇ ದಿನವಾದ ಅಕ್ಟೋಬರ್ 17, 2025 ರಂದು ನಡೆಯಿತು. ಇದು, ಸಲ್ಮಾನ್ ಖಾನ್ ಅವರ ಬಲೂಚಿಸ್ತಾನ ಹೇಳಿಕೆ ನೀಡುವ ಮೊದಲೇ ಈ ನೋಟಿಫಿಕೇಶನ್ ಅನ್ನು ಹೊರಡಿಸಲಾಗಿದೆ ಎಂಬುದನ್ನು ತೋರಿಸುತ್ತದೆ.ಇದಕ್ಕಿಂತ ಹೆಚ್ಚಾಗಿ, ಡಾಕ್ಯುಮೆಂಟ್‌ನಲ್ಲಿ ಹಲವಾರು ಕಾಗುಣಿತ ಮತ್ತು ವ್ಯಾಕರಣ ದೋಷಗಳಿವೆ: “BALOCHISTAN” ಅನ್ನು “BALOCIIISTAN” ಎಂದು ಬರೆಯಲಾಗಿದೆ. “Terrorism” ಅನ್ನು “Terrarism” ಎಂದು ಬರೆಯಲಾಗಿದೆ.​”Affiliated” ಅನ್ನು “Aftilisted” ಎಂದು & “Such person” ಅನ್ನು “Soch person” ಎಂದು ಬರೆಯಲಾಗಿದೆ. ಈ ಸ್ಪಷ್ಟ ತಪ್ಪುಗಳು ಡಾಕ್ಯುಮೆಂಟ್ ಅನ್ನು ಕೃತಕವಾಗಿ ಸೃಷ್ಟಿಸಲಾಗಿದೆ (fabricated) ಮತ್ತು ಇದು ಅಧಿಕೃತ ಪ್ರಕಟಣೆಯಲ್ಲ ಎಂಬುದನ್ನು ಮತ್ತಷ್ಟು ದೃಢೀಕರಿಸುತ್ತವೆ. ಇದು ಸಲ್ಮಾನ್ ಖಾನ್ ಅವರಿಗೆ Computerised National Identity Card (CNIC) ಸಂಖ್ಯೆಯನ್ನು ಸಹ ಉಲ್ಲೇಖಿಸುತ್ತದೆ, ಆದರೆ CNIC ಗಳನ್ನು ಪಾಕಿಸ್ತಾನಿ ನಾಗರಿಕರಿಗೆ ಮಾತ್ರ ನೀಡಲಾಗುತ್ತದೆ (ಇಲ್ಲಿ, ಇಲ್ಲಿ). ಪಟ್ಟಿಯಲ್ಲಿರುವ ಸಂಖ್ಯೆ “52203-000000” ಕೇವಲ 11 ಅಂಕೆಗಳನ್ನು ಹೊಂದಿದೆ, ಆದರೆ ಪಾಕಿಸ್ತಾನಿ CNIC ಸಂಖ್ಯೆಗಳು 13 ಅಂಕೆಗಳನ್ನು ಹೊಂದಿರುತ್ತವೆ, ಇದು ಆ ಸಂಖ್ಯೆಯನ್ನು ಅಮಾನ್ಯಗೊಳಿಸುತ್ತದೆ.

ಗೂಗಲ್‌ನಲ್ಲಿ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದಾಗ, ಬಲೂಚ್ ವುಮೆನ್ ಫೋರಂ ನ ಅಕ್ಟೋಬರ್ 21, 2025 ರ ದಿನಾಂಕದ ಒಂದು X ಪೋಸ್ಟ್ (ಆರ್ಕೈವ್ ಮಾಡಲಾಗಿದೆ) ನಮಗೆ ಕಂಡುಬಂದಿದೆ. ಈ ಪೋಸ್ಟ್ ಮೂವರು ವ್ಯಕ್ತಿಗಳನ್ನು ಫೋರ್ಥ್ ಶೆಡ್ಯೂಲ್‌ಗೆ ಸೇರಿಸುವ ಅಧಿಕೃತ ನೋಟಿಫಿಕೇಶನ್ ಅನ್ನು ಒಳಗೊಂಡಿತ್ತು.  ಹೋಲಿಕೆ ಮಾಡಿದಾಗ, ವೈರಲ್ ಆಗಿರುವ  ಡಾಕ್ಯುಮೆಂಟ್ ಮತ್ತು ಈ ಅಧಿಕೃತ ನೋಟಿಫಿಕೇಶನ್‌ನಲ್ಲಿರುವ ವಿವರಗಳು ಒಂದೇ ಆಗಿದ್ದವು — ಅವುಗಳೆಂದರೆ ಸರಣಿ ಸಂಖ್ಯೆ, ಮೊದಲ ಪ್ಯಾರಾಗ್ರಾಫ್‌ನಲ್ಲಿನ ಉಲ್ಲೇಖ ಪತ್ರ ಸಂಖ್ಯೆ, ಪಠ್ಯ, ವಿತರಣಾ ದಿನಾಂಕ, ಮತ್ತು ಸ್ಟಾಂಪ್ ಹಾಗೂ ಸಹಿಯ ಸ್ಥಳ. ಇದು, ಮೂಲ ನೋಟಿಫಿಕೇಶನ್ ಅನ್ನು ದುರುಪಯೋಗಪಡಿಸಿಕೊಂಡು ಸಲ್ಮಾನ್ ಖಾನ್ ಅವರನ್ನು ತಪ್ಪಾಗಿ  ತೋರಿಸಲು  ಬದರಿಸಲಾದ ಘಟನೆಯಾಗಿದೆ. 

ಪಾಕಿಸ್ತಾನ ಸರ್ಕಾರವಾಗಲಿ ಅಥವಾ ಬಲೂಚಿಸ್ತಾನ ಸರ್ಕಾರವಾಗಲಿ ನಟ ಸಲ್ಮಾನ್ ಖಾನ್ ಅವರನ್ನು ಭಯೋತ್ಪಾದನಾ ವಿರೋಧಿ ಕಾಯಿದೆಯ ನಾಲ್ಕನೇ ಶೆಡ್ಯೂಲ್‌ಗೆ ಸೇರಿಸಿದ್ದಾರೆ ಎಂಬುದಕ್ಕೆ ನಮಗೆ ಯಾವುದೇ ಅಧಿಕೃತ ಮಾಹಿತಿ ಅಥವಾ ವಿಶ್ವಾಸಾರ್ಹ ಪಾಕಿಸ್ತಾನಿ ಮಾಧ್ಯಮ ವರದಿಗಳು ಕಂಡುಬಂದಿಲ್ಲ. ​ “ಭಯೋತ್ಪಾದನಾ ವಿರೋಧಿ ಕಾಯಿದೆಯಡಿಯಲ್ಲಿ ಸಲ್ಮಾನ್ ಖಾನ್ ಅವರನ್ನು ಪಾಕಿಸ್ತಾನದ ‘ನಾಲ್ಕನೇ ಶೆಡ್ಯೂಲ್‌ಗೆ’ ಸೇರಿಸಲಾಗಿದೆ ಎಂಬ ಪ್ರತಿಪಾದನೆಗಳು ಸುಳ್ಳು ಮತ್ತು ಪರಿಶೀಲನೆಗೆ ಒಳಪಡದ ವದಂತಿಗಳಾಗಿವೆ.”  ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ  ಫ್ಯಾಟ್ ಚೆಕ್ ಯೂನಿಟ್ ಅಕ್ಟೋಬರ್ 26, 2025 ರಂದು X ಪೋಸ್ಟ್ ಮೂಲಕ ಇದನ್ನು ಸ್ಪಷ್ಟಪಡಿಸಿದೆ.

ನಟ ಸಲ್ಮಾನ್ ಖಾನ್ ಅವರನ್ನು ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳ ಶಂಕಿತ ವ್ಯಕ್ತಿಗಳ ಪಾಕಿಸ್ತಾನದ ಯಾವುದೇ ಪಟ್ಟಿಗೆ ಸೇರಿಸಲಾಗಿಲ್ಲ; ವೈರಲ್ ಆಗಿರುವ ಆ ನೋಟಿಫಿಕೇಶನ್ ನಕಲಿ.