ಜಮೀನಿನ ಮಾಲೀಕತ್ವವನ್ನು ಅತಿಕ್ರಮಣದಾರರಿಗೆ ವರ್ಗಾಯಿಸಲು ರೋಶ್ನಿ ಕಾಯ್ದೆ ಜಾರಿಗೆ ತರಲಾಯಿತು!

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಕಾಶ್ಮೀರದಿಂದ ಪಲಾಯನ ಮಾಡಿದ ಹಿಂದೂಗಳ ಆಸ್ತಿಯನ್ನು ಮುಸ್ಲಿಮರಿಗೆ ಹಂಚಿಕೆ ಮಾಡಲು ರೋಶ್ನಿ ಕಾಯ್ದೆಯನ್ನು ಪರಿಚಯಿಸಿದರು ಎಂದು ಹೇಳುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದ ಮೂಲಕ, ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಹಿಂದೂಗಳ ಆಸ್ತಿಯನ್ನು ಮುಸ್ಲಿಮರಿಗೆ ಹಂಚಿಕೊಡಲು ರೋಶ್ನಿ ಕಾಯ್ದೆಯನ್ನು ಕಾನೂನಾಗಿ ರೂಪಿಸಲಾಯಿತು.

ಸತ್ಯಾಂಶ: ರೋಶ್ನಿ ಕಾಯ್ದೆಯು ಅತಿಕ್ರಮಣದಾರರ ಧರ್ಮವನ್ನು ಲೆಕ್ಕಿಸದೆ ಅತಿಕ್ರಮಣಗೊಂಡಿರುವ ರಾಜ್ಯದ ಭೂಮಿಯನ್ನು ಹಂಚುವ ಬಗ್ಗೆ ಇದೆ. ಇದು ಹಿಂದೂಗಳ ಒಡೆತನದ ಆಸ್ತಿಯನ್ನು ಮುಸ್ಲಿಮರಿಗೆ ವರ್ಗಾಯಿಸುವ ಉದ್ದೇಶವನ್ನು ಹೊಂದಿಲ್ಲ. ಈ ಕಾಯ್ದೆಯು ಮಾಲೀಕತ್ವದ ಹಕ್ಕುಗಳನ್ನು ತಮ್ಮ ಧರ್ಮವನ್ನು ಲೆಕ್ಕಿಸದೆ ನಿವಾಸಿಗಳಿಗೆ ವರ್ಗಾಯಿಸಲು ಉದ್ದೇಶಿಸಿದೆ. ಆದರೆ, 2018 ರಲ್ಲಿ ಆಗಿನ ರಾಜ್ಯಪಾಲರು ಈ ಕಾಯ್ದೆಯನ್ನು ರದ್ದುಪಡಿಸಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.

ಸರ್ಕಾರವು ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿದ ನಂತರ ರಾಜ್ಯದ ಭೂಮಿಯನ್ನು  ನಿವಾಸಿಗಳಿಗೆ ಮಾಲೀಕತ್ವದ ಹಕ್ಕುಗಳನ್ನು ವರ್ಗಾಯಿಸಲು, ಫಾರೂಕ್ ಅಬ್ದುಲ್ಲಾ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಸರ್ಕಾರವು 2001 ರಲ್ಲಿ ರಾಜ್ಯ ಭೂಮಿ ಕಾಯ್ದೆ- 2001 ಅನ್ನು ಜಾರಿಗೆ ತಂದಿತು.

ವಿದ್ಯುತ್ ಯೋಜನೆಗಳ ನಿರ್ಮಾಣಕ್ಕಾಗಿ ಹಣವನ್ನು ಸಂಗ್ರಹಿಸಲು ಸರ್ಕಾರ ಈ ಕಾಯ್ದೆಯನ್ನು ತಂದಿತ್ತು, ಆದ್ದರಿಂದ ಈ ಕಾಯ್ದೆಯನ್ನು ರೋಶ್ನಿ ಆಕ್ಟ್ ಎಂದೂ ಕರೆಯಲಾಯಿತು. ಈ ಕಾಯ್ದೆ 1990ನೇ ಇಸವಿಯನ್ನು ಕಟ್-ಆಫ್ ದಿನಾಂಕವಾಗಿ ನಿಗದಿಪಡಿಸಿದೆ. ಅಂದರೆ 1990 ಕ್ಕಿಂತ ಮೊದಲು ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿದ ನಿವಾಸಿಗಳು ಮಾಲೀಕತ್ವದ ಹಕ್ಕುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.  ಸರ್ಕಾರ ರಚಿಸಿದ ಸಮಿತಿಯು ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಭೂಮಿಯ ಬೆಲೆಯನ್ನು ನಿರ್ಧರಿಸಿತು. ರೋಶ್ನಿ ಕಾಯ್ದೆಯು ಕೇವಲ ಅತಿಕ್ರಮಣದಾರರ ಧರ್ಮವನ್ನು ಲೆಕ್ಕಿಸದೆ ಅತಿಕ್ರಮಣಗೊಂಡಿರುವ ರಾಜ್ಯ ಭೂಮಿಯೊಂದಿಗೆ ವ್ಯವಹರಿಸುತ್ತದೆ. ಹಿಂದೂಗಳ ಒಡೆತನದ ಆಸ್ತಿಯನ್ನು ಮುಸ್ಲಿಮರಿಗೆ ವರ್ಗಾಯಿಸುವ ಉದ್ದೇಶವನ್ನು ಹೊಂದಿಲ್ಲ ಎಂಬ ಅಂಶವನ್ನು ಇದು ಪ್ರತಿಪಾದಿಸುತ್ತದೆ.

ಆದರೂ, 2005 ರಲ್ಲಿ, ಪಿಡಿಪಿ-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು 1990 ರಿಂದ 2004 ರವರೆಗೆ ತಿದ್ದುಪಡಿಯ ಮೂಲಕ ಕಡಿತ ದಿನಾಂಕವನ್ನು ಸಡಿಲಗೊಳಿಸಿತು. ತದನಂತರ ಗುಲಾಮ್ ನಬಿ ಆಜಾದ್ ಸರ್ಕಾರವು ಕಟ್-ಆಫ್ ದಿನಾಂಕವನ್ನು 2007 ಕ್ಕೆ ಮತ್ತೊಂದು ತಿದ್ದುಪಡಿಯ ಮೂಲಕ ವಿಸ್ತರಿಸಿತು. ಅಲ್ಲದೆ, ಈ ತಿದ್ದುಪಡಿಯು ಭೂಮಿಯ ಗಾತ್ರಕ್ಕೆ ಅನುಗುಣವಾಗಿ ಬೆಲೆಗಳನ್ನು ಸೂಚಿಸುತ್ತದೆ. ತಿದ್ದುಪಡಿಗಳ ಪ್ರಕಾರ, ಕೃಷಿ ಭೂಮಿಯನ್ನು ಪ್ರತಿ ಕನಾಲ್‌ಗೆ ಕೇವಲ ರೂ. 100ಗೆ ನಿಗದಿ ಪಡಿಸಿತ್ತು.

ಆದರೆ, ಸಿಎಜಿ ತನ್ನ 2014 ರ ವರದಿಯಲ್ಲಿ ಸಮಿತಿಯ ಬೆಲೆ ನಿರ್ಣಯಕ್ಕೆ ಸಂಬಂಧಿಸಿದಂತೆ ಅನೇಕ ಅಕ್ರಮಗಳನ್ನು ಎತ್ತಿ ತೋರಿಸಿದೆ.  ತರುವಾಯ 2018 ರಲ್ಲಿ, ಅಂದಿನ ರಾಜ್ಯಪಾಲರು ಇಂತಹ ಆರೋಪಗಳ ಮಧ್ಯೆ ಈ ಕಾಯ್ದೆಯನ್ನು ರದ್ದುಪಡಿಸಿದರು.  ಈ ಕಾಯ್ದೆಯು ನಿರ್ದಿಷ್ಟ ಗುರಿಗಳನ್ನು ಸಾಧಿಸಲಿಲ್ಲ. 2020 ರಲ್ಲಿ ಸುಪ್ರೀಂ ಕೋರ್ಟ್ ರೋಶ್ನಿ ಕಾಯ್ದೆಯನ್ನು ಅಸಂವಿಧಾನಿಕ ಎಂದು ಪರಿಗಣಿಸಿತು.

ಒಟ್ಟಾರೆಯಾಗಿ ಹೇಳುವುದಾದರೆ, ರೋಶ್ನಿ ಕಾಯ್ದೆಯನ್ನು ರಾಜ್ಯದ ಭೂಮಿಯ ಮಾಲೀಕತ್ವವನ್ನು ಅತಿಕ್ರಮಣದಾರರಿಗೆ ವರ್ಗಾಯಿಸಲು ಜಾರಿಗೆ ತರಲಾಗಿತ್ತು. ಹಿಂದೂಗಳ ಆಸ್ತಿಯನ್ನು ಮುಸ್ಲಿಮರಿಗೆ ಹಂಚಲು ಅಲ್ಲ.