ಅಡ್ಯಾರ್ ನದಿಪಾತ್ರವನ್ನು ಆಕ್ರಮಿಸಿಕೊಂಡಿದೆ ಎಂದು ಹೇಳಲಾದ ದೇವಸ್ಥಾನವನ್ನು ಕೆಡವುವ ಹಳೆಯ ವೀಡಿಯೊವನ್ನು ಡಿಎಂಕೆ ಸರ್ಕಾರ ಇತ್ತೀಚಿನ ನಡೆಸಿರುವ ಧ್ವಂಸವೆಂದು ಹಂಚಿಕೊಳ್ಳಲಾಗಿದೆ

ತಮಿಳುನಾಡಿನ ಚೆನ್ನೈ ಬಳಿಯ ತಾಂಬರಂನಲ್ಲಿ ರಾಮಮಂದಿರ ಧ್ವಂಸ ಮಾಡುತ್ತಿರುವ ಇತ್ತೀಚಿನ ದೃಶ್ಯಗಳು ಎಂದು ಪ್ರತಿಪಾದಿಸಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. “ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರವು ತಮಿಳುನಾಡಿನಲ್ಲಿ ಹಿಂದೂ ದೇವಾಲಯಗಳನ್ನು ಗುರಿಯಾಗಿಸಿಕೊಂಡು ಧ್ವಂಸಗೊಳಿಸುತ್ತಿದೆ” ಎಂಬ ಆರೋಪದೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಇತ್ತೀಚೆಗೆ ತಮಿಳುನಾಡಿನ ಡಿಎಂಕೆ ಸರ್ಕಾರದಿಂದ ರಾಮಮಂದಿರ ಧ್ವಂಸ ನಡೆಯುತ್ತಿರುವ ವಿಡಿಯೊ.

ವಾಸ್ತವ: ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ತಮಿಳುನಾಡಿನ ಚೆನ್ನೈನ ತಾಂಬರಂ ಪ್ರದೇಶದ ಬಳಿಯ ವರದರಾಜಪುರಂನಲ್ಲಿರುವ ಆಂಜನೇಯ ದೇವಾಲಯ ಧ್ವಂಸದ ಹಳೆಯ ದೃಶ್ಯಗಳಾಗಿವೆ. 2022ರ ಜನವರಿ  10ರಂದು, ತಾಂಬರಂ ಸಹಾಯಕ ಆಯುಕ್ತರ ನೇತೃತ್ವದ ಪೊಲೀಸ್ ಪಡೆಗಳೊಂದಿಗೆ ಕಂದಾಯ ಅಧಿಕಾರಿಗಳು ಈ ದೇವಾಲಯವನ್ನು ವರದರಾಜಪುರಂನ ಅಡ್ಯಾರ್ ನದಿಪಾತ್ರವನ್ನು ಅತಿಕ್ರಮಿಸಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಕೆಡವಿದ್ದಾರೆ. ಆಂಜನೇಯ ದೇವಸ್ಥಾನದ ಧ್ವಂಸ ವಿವಾದದ ಕುರಿತು ಪ್ರತಿಕ್ರಿಯಿಸಿದ ತಾಂಬರಂ ಪೊಲೀಸ್ ಕಮಿಷನರ್, 2015 ರ ಮದ್ರಾಸ್ ಹೈಕೋರ್ಟ್ ನಿರ್ದೇಶನದ ಪ್ರಕಾರ ದೇವಾಲಯದ ಜೊತೆಗೆ ಇತರ ಧಾರ್ಮಿಕ ಕಟ್ಟಡಗಳನ್ನು ಕೂಡಾ ಕೆಡವಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪುದಾರಿಗೆಳೆಯುತ್ತದೆ.

ವೀಡಿಯೊ ಸ್ಕ್ರೀನ್‌ಶಾಟ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್‌ ನಡೆಸಿದಾಗ, ಇದೇ ರೀತಿಯ ದೃಶ್ಯಗಳ ವೀಡಿಯೊವನ್ನು 2022ರ ಜನವರಿ 11 ರಂದು ‘ಪಾಲಿಮರ್ ನ್ಯೂಸ್’ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ್ದು ಕಂಡುಬಂದಿದೆ. ನದಿಪಾತ್ರವನ್ನು ಅತಿಕ್ರಮಿಸಿದ್ದಕ್ಕಾಗಿ ಆಂಜನೇಯ ದೇವಸ್ಥಾನವನ್ನು ಕೆಡವುವ ದೃಶ್ಯಗಳು ಎಂದು ವಿಡಿಯೊ ಬಗ್ಗೆ ಪಾಲಿಮರ್ ನ್ಯೂಸ್ ವರದಿ ಮಾಡಿದೆ. ಈ ಅತಿಕ್ರಮಣ ವಿರೋಧಿ ಅಭಿಯಾನದ ಭಾಗವಾಗಿ ಚರ್ಚ್‌ನ ಗೋಡೆಯನ್ನು ಕೂಡಾ ಕೆಡವಲಾಗಿದೆ ಎಂದು ಈ ಸುದ್ದಿ ವಾಹಿನಿ ವರದಿ ಮಾಡಿದೆ.

ಈ ಬಗ್ಗೆ ಹೆಚ್ಚಿನ ವಿವರಕ್ಕಾಗಿ ಇಂಟರ್ನೆಟ್‌ನಲ್ಲಿ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದಾಗ, 2022ರ ಜನವರಿ 11ರಂದು ‘DT ನೆಕ್ಸ್ಟ್’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಘಟನೆಯ ವಿವರಗಳು ಕಂಡುಬಂದಿವೆ. ಈ ಸುದ್ದಿಯ ಪ್ರಕಾರ, 2022ರ ಜನವರಿ10ರಂದು, ಪೊಲೀಸ್ ಪಡೆಗಳ ಜೊತೆಗೆ ಕಂದಾಯ ಅಧಿಕಾರಿಗಳು ನೇತೃತ್ವದಲ್ಲಿ ಇದು ನಡೆದಿದೆ. ತಮಿಳುನಾಡಿನ ಚೆನ್ನೈನ ತಾಂಬರಂ ಪ್ರದೇಶದ ಬಳಿಯ ವರದರಾಜಪುರಂನಲ್ಲಿರುವ ಅಡ್ಯಾರ್ ನದಿಪಾತ್ರವನ್ನು ಅತಿಕ್ರಮಣ ಮಾಡಿದ ಆರೋಪದ ಮೇಲೆ ತಾಂಬರಂ ಸಹಾಯಕ ಆಯುಕ್ತರು ಆಂಜನೇಯ ದೇವಸ್ಥಾನವನ್ನು ಕೆಡವಿದ್ದಾರೆ. ಇದೇ ರೀತಿ ವರದಿ ಹಲವಾರು ಇತರ ಸುದ್ದಿ ವೆಬ್‌ಸೈಟ್‌ಗಳು ಕೂಡಾ 2022ರ ಜನವರಿಯಲ್ಲಿ ಸುದ್ದಿಯನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಆಂಜನೇಯ ದೇವಸ್ಥಾನ ಧ್ವಂಸ ವಿವಾದದ ಕುರಿತು ಪ್ರತಿಕ್ರಿಯಿಸಿದ ತಾಂಬರಂ ಪೊಲೀಸ್ ಕಮಿಷನರ್, 2022 ರ ಜನವರಿಯಲ್ಲಿ ಅಡ್ಯಾರ್ ನದಿಪಾತ್ರವನ್ನು ಅತಿಕ್ರಮಿಸಿ ಅಕ್ರಮವಾಗಿ ನಿರ್ಮಿಸಲಾದ ಎಲ್ಲಾ ಧಾರ್ಮಿಕ ಮತ್ತು ವಾಣಿಜ್ಯ ಕಟ್ಟಡಗಳನ್ನು 2015 ರ ಮದ್ರಾಸ್ ಹೈಕೋರ್ಟ್ ನಿರ್ದೇಶನದ ಪ್ರಕಾರ ನೆಲಸಮಗೊಳಿಸಲಾಗುವುದು ಎಂದು ಪತ್ರಿಕಾ ಟಿಪ್ಪಣಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಅತಿಕ್ರಮಣ ಕಾರ್ಯಾಚರಣೆಯಲ್ಲಿ ಆಂಜನೇಯ ದೇವಸ್ಥಾನದ ಜೊತೆಗೆ ಚರ್ಚ್ ಅನ್ನು ಸಹ ಕೆಡವಲಾಯಿತು ಎಂದು ತಾಂಬರಂ ಆಯುಕ್ತರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ತಮಿಳುನಾಡಿನ ಅಡ್ಯಾರ್ ನದಿಪಾತ್ರವನ್ನು ಆಕ್ರಮಿಸಿಕೊಂಡಿದೆ ಎಂದು ಹೇಳಲಾದ ದೇವಾಲಯದ ಧ್ವಂಸವನ್ನು ತೋರಿಸುವ ಹಳೆಯ ವೀಡಿಯೊವನ್ನು ಡಿಎಂಕೆ ಸರ್ಕಾರದ ಉದ್ದೇಶ ಪೂರ್ವಕವಾಗಿ ಧ್ವಂಸಗೊಳಿಸುವ ಅಭಿಯಾನ ನಡೆಸುತ್ತಿದೆ ಎಂದು ಹಂಚಿಕೊಳ್ಳಲಾಗಿದೆ.