IC3 ಸಂಸ್ಥೆಯ ಸ್ಥಾಪಕ ಗಣೇಶ್ ಕೊಹ್ಲಿಯವರ ಹಳೆಯ ವಿಡಿಯೋವನ್ನು ಗೂಗಲ್‌ ಸಿಇಒ ಸುಂದರ್ ಪಿಚ್ಚೈರವರದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಗೂಗಲ್‌  ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಸುಂದರ್ ಪಿಚ್ಚೈ 27 ವರ್ಷಗಳ ನಂತರ ತಮ್ಮ ಗಣಿತ ಶಿಕ್ಷಕಿಯನ್ನು ಅವರ ಮೈಸೂರಿನ ಮನೆಯಲ್ಲಿ ಭೇಟಿಯಾದರು ಎಂಬ ವಿಡಿಯೋ ಇರುವ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಇದು ನಿಜವೇ ಪರಿಶೀಲಿಸೋಣ ಬನ್ನಿ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಗೂಗಲ್‌ ಸಿಇಒ ಸುಂದರ್ ಪಿಚ್ಚೈ 27 ವರ್ಷಗಳ ನಂತರ ತಮ್ಮ ಗಣಿತ ಶಿಕ್ಷಕಿಯನ್ನು ಭೇಟಿಯಾದರು.

ನಿಜಾಂಶ: ಪೋಸ್ಟ್‌ ನ ವಿಡಿಯೋದಲ್ಲಿರುವುದು IC3 ಸಂಸ್ಥೆಯ ಸ್ಥಾಪಕ ಗಣೇಶ್ ಕೊಹ್ಲಿ. ಅವರು ತಮ್ಮ ಇತಿಹಾಸವನ್ನು ಮೆಲುಕು ಹಾಕುತ್ತಾ, 27 ವರ್ಷಗಳ ನಂತರ ತಮ್ಮ ಗಣಿತ ಶಿಕ್ಷಕಿ ಮೊಲ್ಲಿಅಬ್ರಾಹಂರವರನ್ನು ಭೇಟಿಯಾಗಿರುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ. ಆದರೆ ಅವರನ್ನು ಗೂಗಲ್‌ ಸಿಇಒ ಸುಂದರ್ ಪಿಚ್ಚೈ ಎಂದು ತಪ್ಪಾಗಿ ಅರ್ಥೈಸಿಕೊಂಡು ಪೋಸ್ಟ್‌ ನಲ್ಲಿ ಹೇಳಲಾಗಿದೆ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.

ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿರುವುದು ಗೂಗಲ್‌ ಸಿಇಒ ಸುಂದರ್ ಪಿಚ್ಚೈ ಅಲ್ಲ ಎಂಬುದು ತಿಳಿಯುತ್ತದೆ. ಅಲ್ಲದೇ ಅವರ ಹೆಸರು ಗಣೇಶ್ ಕೊಹ್ಲಿ ಎಂದು ಆರಂಭದಲ್ಲಿಯೇ ವಿಡಿಯೋದ ಎಡ ಕೆಳಭಾಗದಲ್ಲಿ ನೀಡಲಾಗಿದೆ. ಅವರು ತಮ್ಮ ಗಣಿತ ಶಿಕ್ಷಕಿ ಮೊಲ್ಲಿ ಅಬ್ರಾಹಂ ಎಂದು ವಿಡಿಯೋದಲ್ಲಿ ಹೆಸರಿದಿದ್ದಾರೆ. ‘ಗಣೇಶ್ ಕೊಹ್ಲಿ ತಮ್ಮ ಗಣಿತ ಶಿಕ್ಷಕಿಯನ್ನು ಭೇಟಿಯಾದರು’ ಎಂಬ ಕೀವರ್ಡ್ ಬಳಸಿ ಹುಡುಕಿದಾಗ ಅದೇ ವಿಡಿಯೋ ಗಣೇಶ್ ಕೊಹ್ಲಿಯವರ ವೆಬ್‌ಸೈಟ್‌ನಲ್ಲಿ ಸಿಕ್ಕಿದೆ. ಮೊಲ್ಲಿ ಟೀಚರ್‌ ಗೆ  ಗಣೇಶ್ ಕೊಹ್ಲಿಯವರಿಂದ ಗೌರವ ಎಂಬ ಶೀರ್ಷಿಕೆಯಲ್ಲಿ ಇದೇ ವಿಡಿಯೋವನ್ನು ನಾವು ಅವರ ಅಧಿಕೃತ ‘IC3ಮೂವ್‌ಮೆಂಟ್’ಯೂಟ್ಯೂಬ್‌ ಚಾನೆಲ್ ನಲ್ಲಿಯು ಕಾಣಬಹುದಾಗಿದೆ.

ಗಣೇಶ್ ಕೊಹ್ಲಿ ಅವರು ಶಿಕ್ಷಕರು, ಆಪ್ತ ಸಮಾಲೋಚಕರು ಮತ್ತು ಭಾರತದ IC3 ಸಂಸ್ಥೆಯ ಪ್ರಮುಖ ಸ್ಥಾಪಕರಲ್ಲೊಬ್ಬರಾಗಿದ್ದಾರೆ. ಅವರು ತಮ್ಮ ಗಣಿತ ಶಿಕ್ಷಕಿ ಮೊಲ್ಲಿ ಅಬ್ರಾಹಂರವರಿಂದ ಸ್ಫೂರ್ತಿಗೊಂಡು ಶಿಕ್ಷಕರಾಗಿದ್ದರಿಂದ ಅವರಿಗೆ ಗೌರವ ಸಲ್ಲಿಸಿ ಈ ವಿಡಿಯೋ ಬಿಡುಗಡೆಗೊಳಿಸಿದ್ದರು.

‘ಗೂಗಲ್‌ ಸಿಇಒ ಸುಂದರ್ ಪಿಚ್ಚೈ ತಮ್ಮ ಗಣಿತ ಶಿಕ್ಷಕಿಯನ್ನು ಭೇಟಿಯಾದರು’ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಗಣೇಶ್ ಕೊಹ್ಲಿಯವರು ಸ್ಪಷ್ಟನೆ ನೀಡಿದ್ದು, ಇದು ತಮ್ಮ ವಿಡಿಯೋವಾಗಿದ್ದು, ಮೂರು ವರ್ಷಗಳಷ್ಟು ಹಳೆಯದು ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ, IC3 ಸಂಸ್ಥೆಯ ಸ್ಥಾಪಕ ಗಣೇಶ್ ಕೊಹ್ಲಿಯವರ ಹಳೆಯ ವಿಡಿಯೋವನ್ನು ಗೂಗಲ್‌ ಸಿಇಒ ಸುಂದರ್ ಪಿಚ್ಚೈ ಅವರ್ ಗಣಿತ ಶಿಕ್ಷಕಿಯನ್ನು ಭೇಟಿ ಮಾಡುತ್ತಿರುವ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.