ಜಮ್ಮು ಕಾಶ್ಮೀರದ ಹಳೆಯ ವಿಡಿಯೋವನ್ನು, ‘ರಾಜಸ್ಥಾನದಲ್ಲಿ ಗುಂಪೊಂದು ಪೊಲೀಸರ ಮೇಲೆ ಕಲ್ಲು ತೂರುವ ದೃಶ್ಯ’ ಎಂದು ಹಂಚಿಕೊಳ್ಳಲಾಗಿದೆ

ಇತ್ತೀಚೆಗೆ ರಾಜಸ್ಥಾನದ ಜೈಪುರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ಗುಂಪಿನ ದೃಶ್ಯಗಳು ಎಂದು ಹೇಳಿಕೊಳ್ಳುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಜೈಪುರದಲ್ಲಿ ಇತ್ತೀಚೆಗೆ ಪೊಲೀಸರ ಮೇಲೆ ಗುಂಪು ಹಲ್ಲೆ ನಡೆದ ಹಿನ್ನೆಲೆಯಲ್ಲಿ, ಈ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪತ್ರಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ರಾಜಸ್ಥಾನದ ಜೈಪುರದಲ್ಲಿ ಪೊಲೀಸರ ಮೇಲೆ ಗುಂಪೊಂದು ಕಲ್ಲು ತೂರುತ್ತಿರುವ ಇತ್ತೀಚಿನ ವಿಡಿಯೋ.

ವಾಸ್ತವ: ಪೋಸ್ಟ್‌ನಲ್ಲಿ ಹಂಚಿಕೊಂಡಿರುವುದು ಹಳೆಯ ವೀಡಿಯೊವಾಗಿದೆ. ಈ ಘಟನೆ ಕೆಲವು ವರ್ಷಗಳ ಹಿಂದೆ ಜಮ್ಮು ಕಾಶ್ಮೀರದ ಅನಂತನಾಗ್ ನಗರದ ಲಾಲ್ ಚೌಕ್ ಪ್ರದೇಶದಲ್ಲಿ ನಡೆಯಿತು. ಈ ವಿಡಿಯೋಗೂ, ರಾಜಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೋದಲ್ಲಿನ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಪರಿಶೀಲಿಸಿದಾಗ, ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ 2017 ರಿಂದಲೂ ಪ್ರಕಟವಾಗಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆದ್ದರಿಂದ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಹಳೆಯದು ಎಂದು ದೃಢವಾಗಿ ಹೇಳಬಹುದು.

ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವಿಡಿಯೊದಲ್ಲಿ ಕಾಣುವ ಎರಡು ಅಂಗಡಿಗಳಲ್ಲಿ ‘ವೆಸ್ಟರ್ನ್ ಹೋಸಿಯರಿ’ ಮತ್ತು ‘ಸಾಥೂ ಫರ್ನಿಶಿಂಗ್ಸ್’ ಎಂದು ಬೋರ್ಡ್‌ಗಳಲ್ಲಿ ಬರೆದಿರುವುದನ್ನು ನೋಡಬಹುದು. ನಾವು ಕೀವರ್ಡ್‌ಗಳನ್ನು ಬಳಸಿ ಈ ಶೋರೂಮ್‌ಗಳ ವಿವರಗಳನ್ನು ಹುಡುಕಿದಾಗ, ವಿಡಿಯೊದಲ್ಲಿ ಕಾಣುತ್ತಿರುವ ಅಂಗಡಿಗಳ ರೀತಿಯ ಚಿತ್ರವನ್ನು ನಾವು ‘ವೆಸ್ಟರ್ನ್ ಹೋಸಿಯರಿ’ ಫೇಸ್‌ಬುಕ್ ಪೇಜ್‌‌ನಲ್ಲಿ ಕಂಡುಕೊಂಡಿದ್ದೇವೆ. ಈ ಫೇಸ್‌ಬುಕ್ ಪುಟದಲ್ಲಿ ಒದಗಿಸಲಾದ ವಿವರಣೆಯ ಪ್ರಕಾರ, ಈ ಅಂಗಡಿಗಳು ಜಮ್ಮು ಕಾಶ್ಮೀರದ ಅನಂತನಾಗ್‌ನ ಲಾಲ್ ಚೌಕ್ ಪ್ರದೇಶದಲ್ಲಿವೆ. ಇದೇ ರೀತಿಯ ವಿವರಣೆಯೊಂದಿಗೆ ಅದೇ ಚಿತ್ರವು ‘ಅಲ್‌ಸ್ಟ್ರಾಂಗ್ ಎಂಟರ್‌ಪ್ರೈಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಫೇಸ್‌ಬುಕ್ ಪುಟದಲ್ಲಿ ಕಂಡುಬಂದಿದೆ.

ಅಲ್ಲದೆ, ವೀಡಿಯೋದಲ್ಲಿ ‘ಬಾಟಾ’ ಶೋರೂಂನ ಪಕ್ಕದಲ್ಲಿರುವ ‘ವಾಸ್ಕೋ’ ಸಂಗ್ರಹವನ್ನು ನೋಡಬಹುದು. ‘ಜಸ್ಟ್ ಡಯಲ್’ ವೆಬ್‌ಸೈಟ್‌ನಲ್ಲಿ ನೀಡಿರುವ ವಿವರಗಳನ್ನು ಉಲ್ಲೇಖಿಸುವ ಮೂಲಕ, ‘ವಾಸ್ಕೋ ಪಾಸ್ಕೊ’ ಶೂ ಕೇಂದ್ರವು ಅನಂತನಾಗ್‌ನ ಲಾಲ್ ಚೌಕ್‌ನಲ್ಲಿ ಇದೆ ಎಂದು ದೃಡಪಡಿಸಲಾಗಿದೆ.

‘ಇಂಡಿಯಾ ಟುಡೇ ಫ್ಯಾಕ್ಟ್-ಚೆಕ್’ ತಂಡವು ಈ ವೀಡಿಯೋಗೆ ಸಂಬಂಧಿಸಿದಂತೆ ಸ್ಪಷ್ಟೀಕರಣಕ್ಕಾಗಿ ‘ವೆಸ್ಟರ್ನ್ ಹೋಯಿಸರಿ’ ಅಂಗಡಿ ಮಾಲೀಕ ಖಾಲಿದ್ ಸಾಥೂ ಅವರನ್ನು ಸಂಪರ್ಕಿಸಿದೆ. ‘ಇಂಡಿಯಾ ಟುಡೇ’ಯೊಂದಿಗೆ ಮಾತನಾಡಿದ ಖಾಲಿದ್ ಸಾಥೂ, “ಈ ಎಲ್ಲ ಘಟನೆ ಸಂಭವಿಸಿದಾಗ ನಾನು ನನ್ನ ಅಂಗಡಿಯಲ್ಲಿ ಇದ್ದೆ. ಆ ದಿನ ನನಗೆ ನೆನಪಿದೆ; ಕೆಲವರು ಪೊಲೀಸ್ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದು ನಡೆಯುತ್ತಿರುವಾಗ, ಒಬ್ಬ ಪೊಲೀಸ್ ಅಧಿಕಾರಿ ನನ್ನ ಅಂಗಡಿಯಲ್ಲಿ ಆಶ್ರಯ ಪಡೆದಿದ್ದರು. ನಾನು ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದೆ. ಕಲ್ಲು ತೂರಾಟಗಾರರು ಇದನ್ನು ಗಮನಿಸಿದಾಗ, ಅವರು ಅವನನ್ನು ಹಿಡಿಯಲು ನನ್ನ ಅಂಗಡಿಯ ಕಡೆಗೆ ಓಡಿ ಬಂದರು”. ಈ ಎಲ್ಲಾ ಸಾಕ್ಷ್ಯಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಹಳೆಯದು ಮತ್ತು ರಾಜಸ್ಥಾನ ವಿಡಿಯೊಗೂ ಯಾವುದೇ ಸಂಬಂಧವಿಲ್ಲ ಎಂದು ತೀರ್ಮಾನಿಸಬಹುದು.

ಒಟ್ಟಿನಲ್ಲಿ ಸಂಕ್ಷಿಪ್ತವಾಗಿ ಹೇಳುವುದಾದರೆ, ಜಮ್ಮು ಕಾಶ್ಮೀರದ ಹಳೆಯ ವೀಡಿಯೊವನ್ನು ರಾಜಸ್ಥಾನದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುವ ಗುಂಪಿನ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.