ಜೂನ್ 26, 2025 ರಂದು, ಉತ್ತರ ಪ್ರದೇಶದ ಲಕ್ನೋದ ಮಲಿಹಾಬಾದ್‌ನಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಜಾಲವನ್ನು ಪೊಲೀಸರು ಭೇದಿಸಿದ್ದಾರೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಆರೋಪಿ ಹಕೀಮ್ ಸಲಾಹುದ್ದೀನ್ ಮಲಿಹಾಬಾದ್‌ನಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಮತ್ತು ಅವರ ಮನೆಯಿಂದ ಅಕ್ರಮ ಬಂದೂಕುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಎಂದು ವರದಿಯಾಗಿದೆ. ಪೊಲೀಸರು ಅವರ ಮಮೆಯಿಂದ ಹಲವಾರು ಬಂದೂಕುಗಳು, ಕಾರ್ಟ್ರಿಡ್ಜ್‌ಗಳು, ನಗದು ಮತ್ತು ಜಿಂಕೆಯ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ, ಲಕ್ನೋದಲ್ಲಿರುವ ಹಕೀಮ್ ಮನೆಯಿಂದ 3,000 ಬಂದೂಕುಗಳು, 50,000 ಬುಲೆಟ್ ಕಾರ್ಟ್ರಿಡ್ಜ್‌ಗಳು ಮತ್ತು ಡಾಲರ್ ಕರೆನ್ಸಿ ತುಂಬಿದ 20 ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನುವ ಫೋಟೋ ಮತ್ತು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ ಮತ್ತು ಇಲ್ಲಿ) ವೈರಲ್ ಆಗುತ್ತಿದೆ. ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ವೀಡಿಯೊವು ಜೂನ್ 26, 2025 ರಂದು ಮಲಿಹಾಬಾದ್, ಲಕ್ನೋ ದಾಳಿಯಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು, ಕಾರ್ಟ್ರಿಡ್ಜ್‌ಗಳು ಮತ್ತು ಹಣವನ್ನು ತೋರಿಸುತ್ತದೆ.
ಫ್ಯಾಕ್ಟ್: ಪೊಲೀಸರು ಜೂನ್ 26, 2025 ರಂದು ಹಕೀಮ್ ಸಲಾಹುದ್ದೀನ್ ಅವರ ಮನೆಯಿಂದ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಮೊದಲೇ ಈ ವೈರಲ್ ಫೋಟೋ ಮತ್ತು ವೀಡಿಯೊಗಳು ಇಂಟರ್ನೆಟ್‌ನಲ್ಲಿದ್ದವು ಹಾಗಾಗಿ ಈ ದೃಶ್ಯಗಳು ಘಟನೆಗೆ ಸಂಬಂಧಿಸಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.
ಫೋಟೋ
ಈ ಫೋಟೋವನ್ನು ಲಕ್ನೋದಲ್ಲಿರುವ ಹಕೀಮ್ ಸಲಾಹುದ್ದೀನ್ ಅವರ ಮನೆಯಿಂದ ವಶಪಡಿಸಿಕೊಂಡ 3,000 ಬಂದೂಕುಗಳು ಮತ್ತು 50,000 ಕಾರ್ಟ್ರಿಡ್ಜ್‌ಗಳನ್ನು ಹೊಂದಿರುವ 20 ಚೀಲಗಳನ್ನು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ವೈರಲ್ ಆದ ಫೋಟೋವನ್ನು ಗೂಗಲ್ ಲೆನ್ಸ್ ನಲ್ಲಿ ಹುಡುಕಿದಾಗ, ಅಕ್ಟೋಬರ್ 2021 ರಲ್ಲಿ ಗನ್ ಲವರ್ ಎಂಬ ಪುಟದಿಂದ ‘X’ ನಲ್ಲಿ (ಆರ್ಕೈವ್ ಮಾಡಲಾಗಿದೆ) ಹಂಚಿಕೊಳ್ಳಲಾದ ಅದರ ಒರಿಜಿನಲ್, ಎಡಿಟ್ ಮಾಡದೇ ಇರುವ ವರ್ಷನ್ ನಮಗೆ ಸಿಕ್ಕಿತು. ಜೂನ್ 2025 ರ ಲಕ್ನೋ ದಾಳಿಗೆ ಬಹಳ ಹಿಂದೆಯೇ ಈ ಫೋಟೋ ಇಂಟರ್ನೆಟ್‌ನಲ್ಲಿದ್ದು, ಆ ಘಟನೆಗೆ ಇದು ಸಂಬಂಧಿಸಿಲ್ಲ ಎಂದು ಇದು ಖಚಿತಪಡಿಸುತ್ತದೆ.
ತನಿಖೆಯ ಪ್ರಕ್ರಿಯೆಯಲ್ಲಿ, ಸ್ಟಾಕ್ ಇಮೇಜ್ ವೆಬ್‌ಸೈಟ್ ಅಲಾಮಿಯಲ್ಲಿ ನಾವು ಇದೇ ರೀತಿಯ ಫೋಟೋವನ್ನು ಕಂಡುಕೊಂಡಿದ್ದೇವೆ, ಅದು ವೈರಲ್ ಫೋಟೋದಂತೆಯೇ ದೃಶ್ಯಗಳನ್ನು ತೋರಿಸುತ್ತದೆ. “ಐಯೋವಾ ಅಪರಾಧ ತನಿಖಾ ಇಲಾಖೆಯ ಅಪರಾಧಶಾಸ್ತ್ರಜ್ಞ ಕಾರ್ಲ್ ಬೇಸ್‌ಮನ್, ಜೂನ್ 7, 2005 ರ ಮಂಗಳವಾರ, ಅಯೋವಾದ ಅಂಕೆನಿಯಲ್ಲಿರುವ ಬ್ಯಾಲಿಸ್ಟಿಕ್ಸ್ ಲ್ಯಾಬ್‌ನಲ್ಲಿ ಇರಿಸಲಾಗಿರುವ 3,300 ಕ್ಕೂ ಹೆಚ್ಚು ಬಂದೂಕುಗಳಲ್ಲಿ ಒಂದನ್ನು ನೋಡುತ್ತಾರೆ. ಈ ಬಂದೂಕುಗಳನ್ನು ತನಿಖೆಗಳಲ್ಲಿ ಉಲ್ಲೇಖವಾಗಿ ಬಳಸಲಾಗುತ್ತದೆ.” ಎಂದು ಕ್ಯಾಪ್ಶನ್ ನಲ್ಲಿ ಹೇಳಲಾಗಿದೆ. ಈ ಫೋಟೋವನ್ನು ಅಸೋಸಿಯೇಟೆಡ್ ಪ್ರೆಸ್‌ನ ಸ್ಟೀವ್ ಪೋಪ್ ಅವರಿಗೆ ಸಲ್ಲುತ್ತದೆ. ಕ್ವಾಡ್ ಸಿಟಿ ಟೈಮ್ಸ್‌ನ 2005 ರ ವರದಿಯಲ್ಲಿಯೂ ಇದೇ ಚಿತ್ರವನ್ನು ತೋರಿಸಲಾಗಿದೆ. ಅಂಕೆನಿ ಯು.ಎಸ್. ರಾಜ್ಯ ಅಯೋವಾದಲ್ಲಿರುವ ಒಂದು ನಗರವಾಗಿದ್ದು, ಅಲ್ಲಿ ಬ್ಯಾಲಿಸ್ಟಿಕ್ಸ್ ಪ್ರಯೋಗಾಲಯವು ಅಪರಾಧ ತನಿಖೆಗಳಿಗೆ ವೈಜ್ಞಾನಿಕ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸುತ್ತದೆ.
ಈ ಮಾಹಿತಿಯ ಆಧಾರದ ಮೇಲೆ, ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಅಯೋವಾ ಸಾರ್ವಜನಿಕ ಸುರಕ್ಷತಾ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಿಂಕ್ ಮಾಡಲಾದ ಯೂಟ್ಯೂಬ್ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಅದು ಅಯೋವಾ ಅಪರಾಧ ತನಿಖಾ ವಿಭಾಗದ ಅಪರಾಧಶಾಸ್ತ್ರ ಪ್ರಯೋಗಾಲಯದ ವರ್ಚುವಲ್ ಟೂರ್ ನೀಡುತ್ತದೆ. ವೀಡಿಯೊದಲ್ಲಿ, 4:11–4:13 ಮತ್ತು 4:48–4:54 ರ ನಡುವೆ, ವೈರಲ್ ಫೋಟೋದಂತೆಯೇ ಅದೇ ದೃಶ್ಯವು ಕಾಣಿಸಿಕೊಂದಂತಹ ಹಲವಾರು ಪಿಸ್ತೂಲ್‌ಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ.
ಲಕ್ನೋದಲ್ಲಿ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳುವಿಕೆಯ ಪುರಾವೆಯಾಗಿ ಹಂಚಿಕೊಳ್ಳಲಾಗುತ್ತಿರುವ ಫೋಟೋ ವಾಸ್ತವವಾಗಿ ಅಮೆರಿಕದ ಅಯೋವಾ ರಾಜ್ಯದ ಕ್ರಿಮಿನಲಿಸ್ಟಿಕ್ಸ್ ಲ್ಯಾಬೋರೇಟರಿಯಿಂದ ಬಂದಿದೆ ಎಂದು ಇದು ದೃಢಪಡಿಸುತ್ತದೆ.
ಉತ್ತರ ಪ್ರದೇಶದ ಲಕ್ನೋದ ಮಲಿಹಾಬಾದ್‌ನಲ್ಲಿರುವ ಹಕೀಮ್ ಸಲಾಹುದ್ದೀನ್ ಅವರ ನಿವಾಸದ ಮೇಲೆ ಜೂನ್ 26, 2025 ರಂದು ನಡೆದ ದಾಳಿಯ ವಿವರಗಳನ್ನು ಒದಗಿಸುವ, ಜೂನ್ 27, 2025 ರಂದು ಲಕ್ನೋ ಪೊಲೀಸರು ಬರೆದ X ಪೋಸ್ಟ್ (ಆರ್ಕೈವ್ ಮಾಡಲಾಗಿದೆ) ಅನ್ನು ಸಹ ನಾವು ಕಂಡುಕೊಂಡಿದ್ದೇವೆ. ಪೋಸ್ಟ್ ಪ್ರಕಾರ, ಈ ಕೆಳಗಿನವುಗಳನ್ನು ವಶಪಡಿಸಿಕೊಳ್ಳಲಾಗಿದೆ: ಮೂರು ಪಿಸ್ತೂಲ್‌ಗಳು (.32 ಬೋರ್), ಒಂದು ಕಂಟ್ರಿ-ಮೇಡ್ ಪಿಸ್ತೂಲ್ (.315 ಬೋರ್), ಎರಡು ಕಂಟ್ರಿ-ಮೇಡ್ ಪಿಸ್ತೂಲ್‌ಗಳು (.22 ಬೋರ್), ಒಂದು ರೈಫಲ್ (.22 ಬೋರ್), ಮತ್ತು ಏಳು ಏರ್‌ಗನ್‌ಗಳು. ಹೆಚ್ಚುವರಿಯಾಗಿ, 88 ಲೈವ್ ಕಾರ್ಟ್ರಿಡ್ಜ್‌ಗಳು, .22 ಬೋರ್‌ನ 40 ಖಾಲಿ ಕಾರ್ಟ್ರಿಡ್ಜ್‌ಗಳು, 12 ಬೋರ್‌ನ 30 ಕಾರ್ಟ್ರಿಡ್ಜ್‌ಗಳು, .32 ಬೋರ್‌ನ ಎರಡು ಲೈವ್ ಕಾರ್ಟ್ರಿಡ್ಜ್‌ಗಳು, .32 ಬೋರ್‌ನ ಒಂದು ಖಾಲಿ ಕಾರ್ಟ್ರಿಡ್ಜ್, ಆರು ಕೋಲುಗಳು, ಎರಡು ಚಾಕುಗಳು, ಒಂದು ಗರಗಸ, ಒಂಬತ್ತು ಕೊಡಲಿಗಳು, ಅರೆ-ತಯಾರಿಸಿದ ಆಯುಧಗಳು, ಅಕ್ರಮ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಳಸುವ ಪರಿಕರಗಳು ಮತ್ತು ವಸ್ತುಗಳು, ನಗದು ಮತ್ತು ಜಿಂಕೆಯ ಚರ್ಮವನ್ನು ವಶಪಡಿಸಿಕೊಳ್ಳಲಾಗಿದೆ. ಸಲಾವುದ್ದೀನ್ ಮನೆಯಿಂದ 3,000 ಬಂದೂಕುಗಳು ಮತ್ತು 50,000 ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಫೀಷಿಯಲ್ ಬ್ರೀಫಿಂಗ್‌ನಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ.
ಘಟನೆಗೆ ಸಂಬಂಧಿಸಿದಂತೆ ಮಲಿಹಾಬಾದ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ – ಅಕ್ರಮ ಶಸ್ತ್ರಾಸ್ತ್ರಗಳಿಗಾಗಿ ಎಫ್‌ಐಆರ್ ನಂ 142/25 ಮತ್ತು ದಾಳಿಯ ಸಮಯದಲ್ಲಿ ಜಿಂಕೆ ಚರ್ಮವನ್ನು ವಶಪಡಿಸಿಕೊಳ್ಳಲಾಗಿರುವುದರಿಂದ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಎಫ್‌ಐಆರ್ ಸಂಖ್ಯೆ 143/25 ದಾಖಲಿಸಲಾಗಿದೆ. ನಾವು ಎರಡೂ ಎಫ್‌ಐಆರ್ ಪ್ರತಿಗಳನ್ನು ಗಮನಿಸಿದ್ದು, ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ಅಫೀಷಿಯಲ್ ಕೌಂಟ್ಸ್ ಪರಿಶೀಲಿಸಿದ್ದೇವೆ. ಸಲಾಹುದ್ದೀನ್ ಅವರ ಮನೆಯಿಂದ 3,000 ಬಂದೂಕುಗಳು ಮತ್ತು 50,000 ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಈ ದಾಖಲೆಗಳಲ್ಲಿ ಎಲ್ಲಿಯೂ ಉಲ್ಲೇಖಿಸಲಾಗಿಲ್ಲ.
ವಿಡಿಯೋ
ನೆಲದ ಮೇಲೆ ಇಡಲಾದ ಶಸ್ತ್ರಾಸ್ತ್ರಗಳು ಮತ್ತು ಕೋಣೆಯೊಳಗೆ ಕರೆನ್ಸಿ ನೋಟುಗಳ ರಾಶಿಯನ್ನು ತೋರಿಸುವ ಈ ವೀಡಿಯೊವನ್ನು (ಇಲ್ಲಿ), ಉತ್ತರ ಪ್ರದೇಶದ ಲಕ್ನೋದಿಂದ ಇತ್ತೀಚಿನ ಜೂನ್ 2025 ರ ದೃಶ್ಯಗಳನ್ನು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ವೈರಲ್ ವೀಡಿಯೊದಲ್ಲಿ ಹಲವಾರು ಕ್ಲಿಪ್ ಗಳನ್ನು ಎಡಿಟ್ ಮಾಡಿರುವುದನ್ನು ಎಂದು ನಾವು ಕಂಡುಕೊಂಡಿದ್ದೇವೆ. ನಾವು ಪ್ರತಿ ಕ್ಲಿಪ್‌ನಿಂದ ಕೀಫ್ರೇಮ್‌ಗಳನ್ನು ಹೊರತೆಗೆದು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಇದು ಆಗಸ್ಟ್ 2021 ರ ವೈರಲ್ ಕ್ಲಿಪ್‌ನ ಮೊದಲ ಭಾಗವನ್ನು ಒಳಗೊಂಡ ಹಲವಾರು ಮಾಧ್ಯಮ ವೀಡಿಯೊ ವರದಿಗಳಿಗೆ (ಇಲ್ಲಿ, ಇಲ್ಲಿ) ನಮ್ಮನ್ನು ಕರೆದೊಯ್ಯಿತು, ಇದು ಹೊರಗಡೆ ಇರಿಸಲಾದ ಬಂದೂಕುಗಳು ಮತ್ತು ಶಸ್ತ್ರಾಸ್ತ್ರಗಳನ್ನು ತೋರಿಸುತ್ತದೆ. ಆ ವರದಿಗಳ ವಿವರಣೆಯು ತಾಲಿಬಾನ್ ಅಫಘಾನ್ ಪಡೆಗಳಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿದೆ. ಆ ಸಮಯದಲ್ಲಿ ಅಫಘಾನ್ ನಗರಗಳು ಪತನಗೊಳ್ಳುತ್ತಿದ್ದಾಗ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವುದು ತಾಲಿಬಾನ್‌ಗೆ ಪ್ರಮುಖ ಪ್ರಯೋಜನವೆಂದು ಪರಿಗಣಿಸಲಾಗಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, ಜೂನ್ 2025 ರಲ್ಲಿ ಲಕ್ನೋದಲ್ಲಿ ನಡೆದ ಅಕ್ರಮ ಬಂದೂಕು ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೆಯ ಮತ್ತು ಸಂಬಂಧವಿಲ್ಲದ ಫೋಟೋ ಮತ್ತು ವೀಡಿಯೊಗಳನ್ನು ತಪ್ಪಾಗಿ ಲಿಂಕ್ ಮಾಡಲಾಗುತ್ತಿದೆ.