‘ಬಿಬಿಸಿ’ ವರದಿ ಮಾಡಿರುವ ಈ ವಿಡಿಯೋ ಇತ್ತೀಚಿನ ತ್ರಿಪುರಾ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದ್ದಲ್ಲ!

ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರ ಘಟನೆ ಬಗ್ಗೆ ‘ಬಿಬಿಸಿ’ ಸುದ್ದಿ ಮಾಡಿದ್ದ ತುಣುಕು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೊಲೀಸ್ ಸಿಬ್ಬಂದಿ ಪ್ರತಿಭಟನಾಕಾರರನ್ನು ಹೊಡೆಯುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ. ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರದ ಹಿನ್ನೆಲೆಯಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ತ್ರಿಪುರಾದಲ್ಲಿ ನಡೆದ ಕೋಮುಗಲಭೆಯನ್ನು ವರದಿ ಮಾಡಿರುವ ‘ಬಿಬಿಸಿ’ ಸುದ್ದಿವಾಹಿನಿಯ ವೀಡಿಯೋ. 

ಸತ್ಯ: ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು 2020ರಲ್ಲಿ ನಡೆದ ದೆಹಲಿ ಗಲಭೆಗೆ ಸಂಬಂಧಿಸಿದ ಹಳೆಯ ವಿಡಿಯೋ ಆಗಿದ್ದು, ಇದು ‘ಬಿಬಿಸಿ’ ಸುದ್ದಿ ವರದಿಯನ್ನು ತೋರಿಸುತ್ತದೆ. ಈ ವೀಡಿಯೊವನ್ನು CAA ವಿರೋಧಿ ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದನ್ನು ತೋರಿಸುತ್ತದೆ. ಇತ್ತೀಚಿನ ತ್ರಿಪುರಾ ಕೋಮುಗಲಭೆಗೂ ಈ ವಿಡಿಯೋಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊವನ್ನು ಎಚ್ಚರಿಕೆಯಿಂದ ಗಮನಿಸಿದರೆ, ವೀಡಿಯೊದ 2:26 ನಿಮಿಷದ ಸಮಯದಲ್ಲಿ ಬಿಬಿಸಿ ಪತ್ರಕರ್ತ ‘ದೆಹಲಿಯಲ್ಲಿ ಘಟನೆ ನಡೆದಿದೆ’ ಎಂದು ಹೇಳುವುದು ಕೇಳಿಸುತ್ತದೆ. ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದ ಆರೋಪಗಳ ಬಗ್ಗೆ ದೆಹಲಿ ಪೊಲೀಸರು ಪ್ರತಿಕ್ರಿಯಿಸಲಿಲ್ಲ ಎಂದೂ ಹೇಳುತ್ತಾರೆ. ಅಲ್ಲದೆ, ಪೊಲೀಸ್ ಠಾಣೆ ಕಟ್ಟಡದ ಮೇಲೆ ‘ಥಾನಾ ಖಜುರಿ ಖಾಸ್’ ಎಂದು ಬರೆದಿರುವುದನ್ನು ನಾವು ವಿಡಿಯೋದಲ್ಲಿ ನೋಡಿದ್ದೇವೆ. ‘ಖಜೂರಿ ಖಾಸ್‘ ದೆಹಲಿಯ ಈಶಾನ್ಯ ಭಾಗದಲ್ಲಿರುವ ನೆರೆಹೊರೆಯಾಗಿದೆ.

ಈ ಕೀವರ್ಡ್‌ಗಳನ್ನು ಬಳಸಿ ಮತ್ತು ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್‌ ಇಮೇಜ್‌ ಮೂಲಕ ಹುಡುಕಿದಾಗ, 03 ಮಾರ್ಚ್ 2020 ರಂದು ‘ಬಿಬಿಸಿ’ ಸುದ್ದಿ ವಾಹಿನಿ ಮಾಡಿದ ಟ್ವೀಟ್‌ ದೊರೆತಿದ್ದು, ಅದರಲ್ಲಿ ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ವೀಡಿಯೊ ಕಂಡುಬಂದಿದೆ. ‘ಬಿಬಿಸಿ’ ಇದನ್ನು ದೆಹಲಿ ಪೊಲೀಸರ ಲಾಠಿ ಚಾರ್ಜ್‌ನ ತನಿಖಾ ವರದಿಯಾಗಿ ವರದಿ ಮಾಡಿದೆ. ದೆಹಲಿ ಪೊಲೀಸರು ಹಿಂದೂ ಉಗ್ರಗಾಮಿಗಳೊಂದಿಗೆ ಸೇರಿಕೊಂಡು ದೆಹಲಿಯಲ್ಲಿ ಮುಸ್ಲಿಂ ಪ್ರತಿಭಟನಾಕಾರರ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ದುಃಖದ ದೃಶ್ಯಗಳು ಎಂದು ‘ಬಿಬಿಸಿ’ ವರದಿ ಮಾಡಿದೆ. ‘BBC’ ಒಂದೇ ರೀತಿಯ ದೃಶ್ಯಗಳೊಂದಿಗೆ ಅನೇಕ ವೀಡಿಯೊಗಳನ್ನು ಪ್ರಕಟಿಸಿದೆ, 2020 ರಲ್ಲಿ ದೆಹಲಿ ಗಲಭೆಯ ದೃಶ್ಯಗಳು ಎಂದು ವರದಿ ಮಾಡಿದೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಘಟನೆಯ ಇದೇ ರೀತಿಯ ದೃಶ್ಯಗಳನ್ನು ಒಳಗೊಂಡ ಲೇಖನವನ್ನೂ ಕೋಡ ‘BBC’ 04 ಮಾರ್ಚ್ 2020 ರಂದು ಪ್ರಕಟಿಸಿತ್ತು. ‘BBC’ ವೆಬ್‌ಸೈಟ್ ತ್ರಿಪುರಾದಲ್ಲಿ ಇತ್ತೀಚಿನ ಕೋಮು ಹಿಂಸಾಚಾರವನ್ನು ವರದಿ ಮಾಡಿದೆ. ಆದರೆ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ 2020 ರ ದೆಹಲಿ ಗಲಭೆಗೆ ಸಂಬಂಧಿಸಿದೆ ಹೊರತು ತ್ರಿಪುರಕ್ಕೆ ಸಂಬಂಧಿಸಿದ್ದಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ, 2020ರ ದೆಹಲಿ ಗಲಭೆಗಳ ಕುರಿತು ಹಳೆಯ ‘ಬಿಬಿಸಿ’ ವರದಿಯನ್ನು ತ್ರಿಪುರಾದಲ್ಲಿನ ಕೋಮು ಹಿಂಸಾಚಾರವನ್ನು ವರದಿ ಮಾಡುವ ‘ಬಿಬಿಸಿ’ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.