ಭಾರತದ ಶ್ರೀಮಂತ ಭಿಕ್ಷುಕರಲ್ಲಿ ಒಬ್ಬರಾದ ಭರತ್ ಜೈನ್ ಅವರ ಫೋಟೋದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗುತ್ತಿದ್ದು, ಅವರು ಐಐಎಂ ಕಲ್ಕತ್ತಾದ ಹಳೆಯ ವಿದ್ಯಾರ್ಥಿ ಎಂದು ಕ್ಲೈಮ್ ಮಾಡಲಾಗುತ್ತಿದೆ. ಭರತ್ ಸುಮಾರು 18,000 ಭಿಕ್ಷುಕರನ್ನು ಒಳಗೊಂಡ ಭಿಕ್ಷಾಟನೆಯ ಸಾಮ್ರಾಜ್ಯವನ್ನು ನಡೆಸುತ್ತಿದ್ದು, ತಮ್ಮ ವ್ಯವಹಾರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸುತ್ತಿದ್ದಾರೆ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮನ್ನು ಪರಿಶೀಲಿಸೋಣ.
ಕ್ಲೇಮ್: ಭಾರತದ ಅತಿ ಶ್ರೀಮಂತ ಭಿಕ್ಷುಕರಲ್ಲಿ ಒಬ್ಬರಾದ ಭರತ್ ಜೈನ್ ಅವರು ಐಐಎಂ ಕಲ್ಕತ್ತಾ ಪದವೀಧರರಾಗಿದ್ದು, ಬೃಹತ್ ಭಿಕ್ಷಾಟನೆಯ ಸಾಮ್ರಾಜ್ಯವನ್ನು ನಡೆಸುತ್ತಿದ್ದಾರೆ.
ಫ್ಯಾಕ್ಟ್: ಭರತ್ ಜೈನ್ ಅವರು ತಿಂಗಳಿಗೆ ಸುಮಾರು 60-70 ಸಾವಿರ ರೂಪಾಯಿ ಸಂಪಾದಿಸುವ ಭಾರತದ ಶ್ರೀಮಂತ ಭಿಕ್ಷುಕರಲ್ಲಿ ಒಬ್ಬರೆಂದು ಮಾಧ್ಯಮ ವರದಿಗಳು ತಿಳಿಸಿವೆಯಾದರೂ, ವರದಿಗಳ ಪ್ರಕಾರ ಅವರು ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆದಿಲ್ಲ. ಅವರ ಬಗ್ಗೆ ವರದಿ ಮಾಡಿದ ಯಾವುದೇ ಪ್ರಮುಖ ಮಾಧ್ಯಮಗಳು ಅವರು ಐಐಎಂ ಕಲ್ಕತ್ತಾದ ಪದವೀಧರರೆಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಈ ಕ್ಲೇಮ್ ತಪ್ಪುದಾರಿಗೆಳೆಯುವಂತಿದೆ.
ಭರತ್ ಜೈನ್ ಅವರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು, ನಾವು ಇಂಟರ್ನೆಟ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದೆವು. ಇದು ಅವರ ಬಗ್ಗೆ ಪ್ರಕಟವಾದ ಅನೇಕ ಸುದ್ದಿ ವರದಿಗಳತ್ತ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ) ನಮ್ಮನ್ನು ಕೊಂಡೊಯ್ದವು. ಆ ವರದಿಗಳು ವೈರಲ್ ಪೋಸ್ಟ್‌ನಲ್ಲಿರುವ ಫೋಟೋದಂತೆಯೇ ಇರುವ ಫೋಟೋವನ್ನು ಒಳಗೊಂಡಿದ್ದವು.
ಜುಲೈ 2023 ರಲ್ಲಿ, ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದಂತೆ ಭರತ್ ಜೈನ್ ಅವರ ಆದಾಯವು ‘60,000 ರೂ. ನಿಂದ 75,000 ರೂ. ಗಳ ನಡುವೆ ಇರುತ್ತದೆ..’, ಮತ್ತು ಭರತ್ ಅವರು ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆದಿಲ್ಲ ಎಂದು ಆ ವರದಿಗಳು ತಿಳಿಸಿದೆ.
ಅವರ ಕುರಿತಾದ ಸುದ್ದಿಯನ್ನು ಪ್ರಕಟಿಸಿದ ಮಾಧ್ಯಮ ವರದಿಗಳು, ಅವರು 1.2 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್ ಹೊಂದಿದ್ದಾರೆ. ಅವರ ಒಟ್ಟು ಆಸ್ತಿ 7.5 ಕೋಟಿ ರೂಪಾಯಿ ಎಂದು ಉಲ್ಲೇಖಿಸಿವೆ. ಆದರೆ ಇವುಗಳಲ್ಲಿ ಯಾವುದೂ ಅವರು ಐಐಎಂ ಕಲ್ಕತ್ತಾ ಪದವೀಧರರು, ಭಾರಿ ಭಿಕ್ಷಾಟನೆಯ ಸಾಮ್ರಾಜ್ಯವನ್ನು ನಡೆಸುತ್ತಿದ್ದಾರೆ ಮತ್ತು ವಿದೇಶಗಳಿಗೂ ವಿಸ್ತರಿಸುತ್ತಿದ್ದಾರೆ ಎಂದು ತಿಳಿಸಿಲ್ಲ. ಬದಲಾಗಿ ವೈರಲ್ ಪೋಸ್ಟ್‌ನಲ್ಲಿ ಇಂತಹ ಕ್ಲೇಮ್ ಮಾಡಲಾಗುತ್ತಿದೆ. ಮಾಧ್ಯಮ ವರದಿಗಳು ವೈರಲ್ ಪೋಸ್ಟ್‌ನಲ್ಲಿರುವ ಅಂಶಗಳಿಗೆ ವಿರುದ್ಧವಾಗಿರುವುದರಿಂದ, ವೈರಲ್ ಪೋಸ್ಟ್ ಭರತ್ ಜೈನ್ ಅವರ ಕಥೆಯನ್ನು ಕಟ್ಟುಕಥೆಯಾಗಿ ಸೃಷ್ಟಿಸಿದೆ ಎಂದು ನಾವು ಹೇಳಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಭರತ್ ಜೈನ್ ಅವರು ಭಾರತದ ಭಿಕ್ಷಾಟನಾ ಸಾಮ್ರಾಜ್ಯದ ಕಿಂಗ್‌ಪಿನ್ ಮತ್ತು ಐಐಎಂ ಕಲ್ಕತ್ತಾದ ಹಳೆಯ ವಿದ್ಯಾರ್ಥಿ ಎಂದು ಸಾಬೀತುಪಡಿಸಲು ಇಂಟರ್ನೆಟ್ ನಲ್ಲಿ ಯಾವುದೇ ಪುರಾವೆಗಳಿಲ್ಲ.