“ಆಜ್‌ತಕ್ ಸುದ್ದಿ ಸಂಸ್ಥೆಯ ‘ಮುಂದಿನ ಪ್ರಧಾನಿ ಯಾರು’ ಎಂಬ ಸಮೀಕ್ಷೆಯಲ್ಲಿ ರಾಹುಲ್ ಗಾಂಧಿ ಅತಿ ಹೆಚ್ಚು ಮತಗಳನ್ನು ಪಡೆದಿದ್ದಾರೆ” ಎಂದು ಎಡಿಟ್‌ ಮಾಡಿದ ಫೋಟೊ ಶೇರ್‌ ಮಾಡಲಾಗುತ್ತಿದೆ

ಆಜ್‌ತಕ್ ಸುದ್ದಿ ಸಂಸ್ಥೆ ‘ಮುಂದಿನ ಪ್ರಧಾನಿ ಯಾರು?’ ಎಂಬ ವಿಷಯದಲ್ಲಿ ನಡೆಸಿದ್ದ ಇತ್ತೀಚೆಗಿನ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ 52% ಮತ್ತು ಪ್ರಧಾನಿ ನರೇಂದ್ರ ಮೋದಿ 46% ಮತಗಳನ್ನು ಪಡೆದಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣದಲ್ಲಿ ಒಂದು ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಈ ಚಿತ್ರವನ್ನು, 2024 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ ಎಂದು ಹೇಳಿಕೊಂಡು ಶೇರ್‌  ಮಾಡಲಾಗುತ್ತಿದೆ. ಆ ಪೋಸ್ಟ್ ನಿಜವೆ ಎಂದು ನೋಡೋಣ.

ಪ್ರತಿಪಾದನೆ: ‘ಆಜ್ ತಕ್’ ಸುದ್ದಿ ಸಂಸ್ಥೆ ಮುಂದಿನ ಪ್ರಧಾನಿ ಯಾರು ಎಂಬ ವಿಷಯದಲ್ಲಿ ಸಮೀಕ್ಷೆ ನಡೆಸಿದೆ. ಅದರಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ 52% ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು 46% ರಷ್ಟು ಮತಗಳನ್ನು ಪಡೆದ್ದಾರೆ ಎಂದು ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ.

ನಿಜಾಂಶ: ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋವನ್ನು ಎಡಿಟ್ ಮಾಡಲಾಗಿದೆ. ಆಜ್‌ತಕ್ ಸುದ್ದಿ ಸಂಸ್ಥೆ ನಡೆಸಿದ, “ಮೂಡ್‌ ಆಫ್‌ ನೇಷನ್-2019” ಸಮೀಕ್ಷೆಯಲ್ಲಿ, ಸಂಸ್ಥೆಯು ಎರಡು ಬೇರೆ ಬೇರೆ ಪ್ರಶ್ನೆಗಳನ್ನು ಕೇಳಿದೆ. ಈ ಎರಡು ಬೇರೆ ಬೇರೆ ಪ್ರಶ್ನೆಗಳಿಗೆ ಬಂದ, ಬೇರೆ ಬೇರೆ ಉತ್ತರವನ್ನು ಒಟ್ಟು ಸೇರಿಸಿ ಸಂಬಂಧವಿಲ್ಲದೆ ಎಡಿಟ್ ಚಿತ್ರವನ್ನು ತಯಾರುಗೊಳಿಸಲಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಟೋ ಕುರಿತು ವಿವರಗಳಿಗಾಗಿ ಗೂಗಲ್‌ನಲ್ಲಿ ಹುಡುಕಿದರೆ, 2019 ರ ಜನವರಿಯಲ್ಲಿ ‘ಆಜ್ ತಕ್’ ಸುದ್ದಿ ಚಾನೆಲ್ ಬಿಡುಗಡೆ ಮಾಡಿದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯ ಫಲಿತಾಂಶಗಳು ನಮಗೆ ಸಿಗುತ್ತದೆ. ಈ ಸಮೀಕ್ಷೆ ಫಲಿತಾಂಶಗಳನ್ನು ವಿವರಿಸುವ ವಿಡಿಯೊವನ್ನು ‘ಆಜ್ ತಕ್’ 24 ಜನವರಿ 2019  ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಿದೆ. 2019 ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾರ್ವೇ ಸಂಸ್ಥೆಯ ಜೊತೆಗೂಡಿ ‘ಆಜ್ ತಕ್’ ಸುದ್ದಿ ಸಂಸ್ಥೆ ಈ ಸಮೀಕ್ಷೆಯನ್ನು ನಡೆಸಿದೆ. ಈ ವೀಡಿಯೊದಲ್ಲಿ, ಸಮೀಕ್ಷೆಯು ಎರಡು ಬೇರೆ ಬೇರೆ ಪ್ರಶ್ನೆಗಳನ್ನು ಕೇಳಿದೆ ಎಂದು ತಿಳಿದು ಬರುತ್ತದೆ.

ಸಮೀಕ್ಷೆಯ ಒಂದು ಪ್ರಶ್ನೆ, ಪ್ರಧಾನಿ ಮೋದಿಯನ್ನು ಕಟ್ಟಿ ಹಾಕಬಲ್ಲ ಅತ್ಯಂತ ಸಮರ್ಥ ಪ್ರತಿಪಕ್ಷ ನಾಯಕ ಯಾರು ಎಂಬುವುದಾಗಿತ್ತು. ಈ ಸಮೀಕ್ಷೆಯಲ್ಲಿ ರಾಹುಲ್ ಗಾಂಧಿ ಅವರು ಅತಿ ಹೆಚ್ಚು 52% ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಆಜ್‌ತಕ್‌ ವರದಿ ಮಾಡಿತ್ತು. ಈ ಪ್ರಶ್ನೆಯೊಂದಿಗೆ ಉತ್ತರವಾಗಿ ರಾಹುಲ್ ಗಾಂಧಿ ಜೊತೆಗೆ ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಅರವಿಂದ ಕೇಜ್ರಿವಾಲ್ ಮತ್ತು ಮಾಯಾವತಿ ಅವರ ಹೆಸರಿದ್ದವು. ಈ ದೃಶ್ಯಗಳನ್ನು ‘ಆಜ್ ತಕ್’ ವೀಡಿಯೋದಲ್ಲಿ 7:56 ನಿಮಿಷಗಳ ನಂತರ ನೋಡಬಹುದು.

ಜೊತೆಗೆ ಸಮೀಕ್ಷೆಯ ಮತ್ತೊಂದು ಪ್ರಶ್ನೆ, ‘ಭಾರತದ ಮುಂದಿನ ಪ್ರಧಾನಿ ಯಾರು?’ ಎಂಬುವುದಾಗಿತ್ತು. ಈ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅತಿ ಹೆಚ್ಚು 46% ರಷ್ಟು ಮತಗಳನ್ನು ಪಡೆದಿದ್ದು, ರಾಹುಲ್ ಗಾಂಧಿ ಕೇವಲ 34% ಮತಗಳನ್ನು ಪಡೆದಿದ್ದರು. ಈ ದೃಶ್ಯಗಳನ್ನು ‘ಆಜ್ ತಕ್’ ವಿಡಿಯೋದಲ್ಲಿ 19:54 ನಿಮಿಷಗಳ ನಂತರ ನೋಡಬಹುದು.

ಜೊತೆಗೆ, ‘ಆಜ್‌ತಕ್‌‌ ಮೂಡ್‌ ಆಫ್‌ ನೇಷನ್‌-2019’ ಸಮೀಕ್ಷೆಯ ಫಲಿತಾಂಶಗಳನ್ನು ವಿವರಿಸುವ ವರದಿಯನ್ನು ‘ಇಂಡಿಯಾ ಟುಡೇ’ ಸುದ್ದಿ ಸಂಸ್ಥೆ ಕೂಡಾ ವರದಿ ಮಾಡಿತ್ತು. ಆ ಲೇಖನ ಇಲ್ಲಿದೆ. ಇದರಲ್ಲಿ ‘ಮೂಡ್‌ ಆಫ್‌ ನೇಷನ್‌‌-2019’ ಸಮೀಕ್ಷೆಯ ಫಲಿತಾಂಗಳನ್ನು ವಿವರಿಸಲಾಗಿದೆ. ಈ ವಿವರಗಳ ಆಧಾರದ ಮೇಲೆ, ಆಜ್‌ತಕ್‌ ನಡೆಸಿದ್ದ ಸಮೀಕ್ಷೆಯು ಎರಡು ಬೇರೆ ಬೇರೆ ಪ್ರಶ್ನೆಗಳನ್ನು ಕೇಳಿತ್ತು ಎಂದು ಸ್ಪಷ್ಟವಾಗುತ್ತದೆ.

ಒಟ್ಟಿನಲ್ಲಿ, ‘ಆಜ್ ತಕ್’ ಸುದ್ದಿ ಸಂಸ್ಥೆ ನಡೆಸಿದ್ದ ಸಮೀಕ್ಷೆಯ ಎರಡು ಚಿತ್ರವನ್ನು ಬಳಸಿಕೊಂಡು, ಮುಂದಿನ ಪ್ರಧಾನಿ ಯಾರು ಎಂಬ ಸಮೀಕ್ಷೆಯಲ್ಲಿ ರಾಹುಲ್ ಗಾಂಧಿ ಅತಿ ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂದು ಎಡಿಟ್‌ ಮಾಡಿರುವ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ.