ಹುತಾತ್ಮ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಅವರು ಭಾರತದ ರಾಷ್ಟ್ರಪತಿಗಳಿಂದ ಕೀರ್ತಿ ಚಕ್ರ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದನ್ನು ಒಂದು ವೀಡಿಯೊ ತೋರಿಸುತ್ತದೆ. ಇನ್ನೊಂದು ವಿಡಿಯೋದಲ್ಲಿ ಸ್ಮೃತಿ ಸಿಂಗ್‌ರನ್ನು ಹೋಲುವ ಮಹಿಳೆಯೊಬ್ಬರು ಕ್ಯಾಮರಾಗೆ ಪೋಸ್ ನೀಡುತ್ತಿದ್ದಾರೆ ಈ ಎರಡು ವಿಡಿಯೋಗಳ ಕೊಲಾಜ್ ವೈರಲ್ ಆಗುತ್ತಿದೆ. ಎರಡನೇ ವೀಡಿಯೊದಲ್ಲಿ ಪೋಸ್ ನೀಡುತ್ತಿರುವ ಮಹಿಳೆ ಸ್ಮೃತಿ ಸಿಂಗ್ ಎಂಬ ಹೇಳಿಕೆಯೊಂದಿಗೆ ಈ ಕೊಲಾಜ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ಕ್ಯಾಪ್ಟನ್ ಸಿಂಗ್ ಅವರ ಪೋಷಕರ ಬದಲಿಗೆ ಅವರು ಹಣಕಾಸಿನ ನೆರವು ಪಡೆಯುವ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಇದನ್ನು ಲಿಂಕ್ ಮಾಡಲಾಗಿದೆ. ಹಾಗಾದರೆ ಈ ಲೇಖನದ ಮೂಲಕ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಹುತಾತ್ಮ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಅವರು ಕ್ಯಾಮರಾಗೆ ಪೋಸ್ ನೀಡುತ್ತಿರುವ ವಿಡಿಯೋ.
ಫ್ಯಾಕ್ಟ್: ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಮಹಿಳೆ ಹುತಾತ್ಮ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಅಲ್ಲ. ಅವರು ರೇಷ್ಮಾ ಸೆಬಾಸ್ಟಿಯನ್ ಎಂಬ ಮಾಡೆಲ್, ಅವರು 24 ಏಪ್ರಿಲ್ 2024 ರಂದು ತಮ್ಮ ಇನ್ಸ್ಟ್ಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರಿಗೆ ಮರಣೋತ್ತರವಾಗಿ ಭಾರತದ ಎರಡನೇ ಅತ್ಯುನ್ನತ ಶಾಂತಿ ಪುರಸ್ಕಾರ ಶೌರ್ಯಸಾಧನೆಯ ಗೌರವವಾದ ಕೀರ್ತಿ ಚಕ್ರವನ್ನು ನೀಡಲಾಗಿದೆ. ಅವರ ಪತ್ನಿ ಸ್ಮೃತಿ ಸಿಂಗ್ ಅವರು ಜುಲೈ 5, 2024 ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಇದರ ನಂತರ, ಕುಟುಂಬವು ಒಂದೆರಡು ವಿವಾದಗಳಿಗೆ ಎಡೆಯಾಗಿದೆ.
ಸ್ಮೃತಿ ಸಿಂಗ್ ಪ್ರಶಸ್ತಿ ಸ್ವೀಕರಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಅವರು ಅಶ್ಲೀಲ ಟೀಕೆಗಳ ಸುರಿಮಳೆಯನ್ನು ಎದುರಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ. ಸೋಷಿಯಲ್ ಮೀಡಿಯಾದಲ್ಲಿ ನಕಲಿ ಸುದ್ದಿಗಳನ್ನು ಪ್ರಸಾರ ಮಾಡಲಾಗಿದ್ದು, ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ವಿವಾದಾತ್ಮಕ ಹೇಳಿಕೆಯನ್ನುಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹಂಚಲಾಗಿದೆ. Factly ಇದಕ್ಕೆ ಸಂಬಂದಿಸಿದ ಕ್ಲೇಮ್ ಅನ್ನು ಡಿಬಂಕ್ ಮಾಡಿದ್ದು, ಈ ಕುರಿತಾದ ವಿವರವಾದ ಸತ್ಯ-ಪರಿಶೀಲನೆ ಲೇಖನವನ್ನು ಇಲ್ಲಿ ಓದಬಹುದು.
ಸ್ಮೃತಿ ಸಿಂಗ್ ಅವರ ವಿರುದ್ಧ ಮತ್ತೊಂದು ವಿವಾದ ಭುಗಿಲೆದ್ದಿದೆ. ತಮ್ಮ ಮಗನಿಗೆ ಮರಣೋತ್ತರವಾಗಿ ನೀಡಿದ ಭಾರತದ ಎರಡನೇ ಅತ್ಯುನ್ನತ ಶಾಂತಿ ಪುರಸ್ಕಾರ ಶೌರ್ಯ ಪ್ರತೀಕದ ಗೌರವವಾದ ಕೀರ್ತಿ ಚಕ್ರವನ್ನು ನೀಡಿದ ಕೆಲವು ದಿನಗಳ ನಂತರ, ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪೋಷಕರು ಭಾರತೀಯ ಸೇನೆಯ ‘ನೆಕ್ಸ್ಟ್ ಆಫ್ ಕಿನ್’ (NOK) ಪಾಲಿಸಿಯನ್ನು ಪರಿಷ್ಕರಿಸಲು ಕರೆ ನೀಡಿದರು. ಸೇನಾ ಸಿಬ್ಬಂದಿಯ ಮರಣದ ಸಂದರ್ಭದಲ್ಲಿ ಕುಟುಂಬಗಳಿಗೆ ಹಣಕಾಸಿನ ನೆರವು ಹಂಚಿಕೆಯನ್ನು ಈ ನೀತಿ ನಿರ್ಧರಿಸುತ್ತದೆ.
ಆರ್ಮಿ ಗ್ರೂಪ್ ಇನ್ಶೂರೆನ್ಸ್ ಫಂಡ್‌ನಿಂದ ಕುಟುಂಬವು 1 ಕೋಟಿ ರೂ ಆರ್ಥಿಕ ಸಹಾಯವನ್ನು ಪಡೆದುಕೊಂಡಿದೆ. ಇದನ್ನು ಅಂಶುಮಾನ್ ಅವರ ಪೋಷಕರು ಮತ್ತು ಅವರ ಪತ್ನಿ ನಡುವೆ ಸಮಾನವಾಗಿ ಹಂಚಲಾಯಿತು. ಇದರ ಬೆನ್ನಲ್ಲೇ ಹುತಾತ್ಮ ಯೋಧನ ಪೋಷಕರು ಅತೃಪ್ತಿ ವ್ಯಕ್ತಪಡಿಸಿ, ಸೊಸೆ ಗೌರವ ಪ್ರಶಸ್ತಿಯನ್ನು ಸ್ವೀಕರಿಸಿ ನಿರ್ಗಮಿಸಿದ್ದು, ತನಗೆ ಏನೂ ದೊರಕಿಲ್ಲ ಎಂದು ಹೇಳಿದ್ದಾರೆ. ಹುತಾತ್ಮರ ಕುಟುಂಬಗಳಿಗೆ (ಇಲ್ಲಿ ಮತ್ತು ಇಲ್ಲಿ) ಸೇನೆಯ ಹಣಕಾಸಿನ ನೆರವು ನಿಯಮ ಬದಲಾವಣೆಗಳನ್ನು ಮಾಡಲು ಅವರು ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, 1 ಕೋಟಿ ನೆರವು ಪಡೆದ ಹುತಾತ್ಮ ಯೋಧನ ಪತ್ನಿ ಎಂದು ವೈರಲ್ ಆಗಿದೆ.
ಪೋಸ್ ಕೊಡುತ್ತಿರುವ ಮಹಿಳೆ ಸ್ಮೃತಿ ಸಿಂಗ್ ಅಲ್ಲ:
ವೈರಲ್ ಹೇಳಿಕೆಗೆ ವಿರುದ್ಧವಾಗಿ, ವೀಡಿಯೊದಲ್ಲಿ ಕಂಡುಬರುವ ಮಹಿಳೆ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಅಲ್ಲ. ವೈರಲ್ ವೀಡಿಯೊದಿಂದ ಸ್ಕ್ರೀನ್‌ಶಾಟ್‌ಗಳ ರಿವರ್ಸ್ ಇಮೇಜ್ ಹುಡುಕಾಟವು ರೇಷ್ಮಾ ಸೆಬಾಸ್ಟಿಯನ್ ಎಂಬ ಇಂಜಿನಿಯರ್ ಮತ್ತು ಮಾಡೆಲ್ ಅವರ ಇನ್ಸ್ಟಾಗ್ರಾಮ್ ಪ್ರೊಫೈಲ್‌ಗೆ ನಮ್ಮನ್ನು ಸೂಚಿಸಿತು. ಈಗ ವೈರಲ್ ಆಗುತ್ತಿರುವ ವೀಡಿಯೊವನ್ನು 24 ಏಪ್ರಿಲ್ 2024 ರಂದು ಆಕೆಯ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಅವರು ‘TEDxStTeresasCollege’ ನಲ್ಲಿ ಮಾತನಾಡುತ್ತಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ನೋಡಲು ಸ್ಮೃತಿ ಸಿಂಗ್ ಅನ್ನು ಸ್ವಲ್ಪ ಹೋಲುತಿದ್ದರು, ಸೂಕ್ಷ್ಮವಾದ ಪರಿಶೀಲಿಸಿದಾಗ ವ್ಯತ್ಯಾಸಗಳು ಕಂಡುಬರುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕ್ಯಾಮೆರಾಗೆ ಪೋಸ್ ನೀಡುತ್ತಿರುವ ಮಾಡೆಲ್‌ನ ವೀಡಿಯೊವನ್ನು ಹುತಾತ್ಮ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.