Fake News - Kannada
 

ಮಲಬಾರ್ ಚಾರಿಟೇಬಲ್ ಟ್ರಸ್ಟ್ ವಿದ್ಯಾರ್ಥಿಗಳಿಗೆ ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿದ್ಯಾರ್ಥಿವೇತನವನ್ನು ನೀಡುವುದಿಲ್ಲ

0

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ವ್ಯವಹಾರದ ಭಾಗವಾಗಿರುವ ಮಲಬಾರ್ ಚಾರಿಟೇಬಲ್ ಟ್ರಸ್ಟ್ ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುತ್ತದೆ ಎಂಬ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಮಲಬಾರ್ ಚಾರಿಟೇಬಲ್ ಟ್ರಸ್ಟ್ ಸ್ಕಾಲರ್‌ಶಿಪ್ ಶೀರ್ಷಿಕೆಗಳನ್ನು ಹೊಂದಿರುವ ಬುರ್ಖಾಧಾರಿ ಮುಸ್ಲಿಂ ವಿದ್ಯಾರ್ಥಿಗಳ ಗುಂಪಿನ ಫೋಟೋವನ್ನು ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಆ ಪೋಸ್ಟ್‌ನಲ್ಲಿ ಎಷ್ಟು ಸತ್ಯವಿದೆ ಎಂದು ನೋಡೋಣ.

ಕ್ಲೇಮ್ : ಮಲಬಾರ್ ಚಾರಿಟೇಬಲ್ ಟ್ರಸ್ಟ್ ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನದ  ಸಹಾಯವನ್ನು ನೀಡುತ್ತದೆ.

ಫ್ಯಾಕ್ಟ್: ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ವ್ಯವಹಾರದ ಭಾಗವಾಗಿರುವ ಮಲಬಾರ್ ಚಾರಿಟೇಬಲ್ ಟ್ರಸ್ಟ್ ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸುವುದಿಲ್ಲ. ಅರ್ಹತೆ ಮತ್ತು ಕುಟುಂಬದ ಆರ್ಥಿಕ ಪರಿಸ್ಥಿತಿಗಳ ಆಧಾರದ ಮೇಲೆ ಮಲಬಾರ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯ ವಿದ್ಯಾರ್ಥಿವೇತನಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮಲಬಾರ್ ಚಾರಿಟಬಲ್ ಟ್ರಸ್ಟ್ ಮುಸ್ಲಿಮರಿಗೆ ಮಾತ್ರ ವಿದ್ಯಾರ್ಥಿವೇತನವನ್ನು ನೀಡುತ್ತದೆ ಎಂದು ತಪ್ಪಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋದ ವಿವರಗಳಿಗಾಗಿ ಅಂತರ್ಜಾಲದಲ್ಲಿ ಹುಡುಕಿದಾಗ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ಕಂಪನಿಯು ಫೋಟೋವನ್ನು ಹಂಚಿಕೊಳ್ಳುವ ಪಾಂಪ್ಲೆಟ್ ಪ್ರತಿಯು ಕಂಡುಬಂದಿದೆ. ಮಂಗಳೂರಿನ ಮಲಬಾರ್ ಚಾರಿಟೇಬಲ್ ಟ್ರಸ್ಟ್ ಸುಮಾರು 60 ಕಾಲೇಜುಗಳಲ್ಲಿ ಕಲಿಯುತ್ತಿರುವ 630 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದೆ ಎಂದು ಅದರಲ್ಲಿತಿಳಿಸಲಾಗಿದೆ. ಈ ಪಾಂಪ್ಲೆಟ್ ನಲ್ಲಿ  ನೀಡಿರುವ ವಿವರಗಳ ಪ್ರಕಾರ ಫೋಟೋದಲ್ಲಿ ಕಾಣುತ್ತಿರುವ ವಿದ್ಯಾರ್ಥಿಗಳು ಉಪ್ಪಿನಂಗಡಿ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳು.

ಆದರೆ, ಈ ಪಾಂಫ್ಲೆಟ್ನಲ್ಲಿ ಪ್ರಕಟವಾಗಿರುವ ಚಿತ್ರಗಳಲ್ಲಿ ಮಲಬಾರ್ ಚಾರಿಟೇಬಲ್ ಟ್ರಸ್ಟ್ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಾಗೂ ಅನ್ಯ ಧರ್ಮದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿರುವುದು ಸ್ಪಷ್ಟವಾಗಿದೆ. ಮಂಗಳೂರಿನಲ್ಲಿ ಮಲಬಾರ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದ ಇನ್ನೂ ಕೆಲವು ಫೋಟೋಗಳನ್ನು ಇಲ್ಲಿ, ಇಲ್ಲಿ ನೋಡಬಹುದು. ಈ ಫೋಟೋಗಳಲ್ಲಿ, ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋಗಳಲ್ಲಿ ಕಂಡುಬರುವ ಜನರು ಹಿಂದೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿರುವುದನ್ನು ಕಾಣಬಹುದು. ಈ ಘಟನೆಗೆ ಸಂಬಂಧಿಸಿದಂತೆ ಸುದ್ದಿ ಸಂಸ್ಥೆಗಳು ಪ್ರಕಟಿಸಿದ ಸುದ್ದಿ ವರದಿಗಳನ್ನು ಇಲ್ಲಿ, ಇಲ್ಲಿ ಕಾಣಬಹುದಾಗಿದೆ.

ಮಲಬಾರ್ ಚಾರಿಟೇಬಲ್ ಟ್ರಸ್ಟ್ ತನ್ನ ವೆಬ್‌ಸೈಟ್‌ನಲ್ಲಿ ಜಾತಿ ಮತ್ತು ಧರ್ಮದ ಬೇಧವಿಲ್ಲದೆ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುತ್ತಿದೆ ಎಂದು ತಿಳಿಸಿದೆ. ಮಲಬಾರ್ ಚಾರಿಟೇಬಲ್ ಟ್ರಸ್ಟ್ ಸ್ಕಾಲರ್‌ಶಿಪ್ ಅರ್ಹತಾ ಮಾನದಂಡವು  (ಎಲಿಜಿಬಿಲಿಟಿ  ಕ್ರೈಟೀರಿಯೆ) ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ನೀಡಲಾಗುವ ಈ ವಿದ್ಯಾರ್ಥಿವೇತನವನ್ನು ಅರ್ಹತೆ ಮತ್ತು ಕುಟುಂಬದ ಆರ್ಥಿಕ ಪರಿಸ್ಥಿತಿಗಳ ಆಧಾರದ ಮೇಲೆ ಮಾತ್ರ ಆಯ್ಕೆ ಮಾಡಲಾಗುತ್ತದೆ ಎಂದು ಹೇಳುತ್ತಿದೆ.

ಮಲಬಾರ್ ಸಂಸ್ಥೆಯು ಮುಸ್ಲಿಮರಿಗೆ ಮಾತ್ರ ವಿದ್ಯಾರ್ಥಿವೇತನವನ್ನು ನೀಡುತ್ತದೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಬಗ್ಗೆ FACTLY ನೊಂದಿಗೆ ಮಾತನಾಡಿದ ಮಲಬಾರ್ ಚಾರಿಟಬಲ್ ಟ್ರಸ್ಟ್‌ನ ಆಡಳಿತ ಮಂಡಳಿಯು  “ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಈ ಸುದ್ದಿ ಸಂಪೂರ್ಣವಾಗಿ ಸುಳ್ಳು. ಮಲಬಾರ್ ಚಾರಿಟೇಬಲ್ ಟ್ರಸ್ಟ್ ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿದ್ಯಾರ್ಥಿವೇತನವನ್ನು ನೀಡುವುದಿಲ್ಲ” ಎಂದು  FACTLY ಗೆ ತಿಳಿಸಿದೆ. ಮಲಬಾರ್ ಚಾರಿಟೇಬಲ್ ಟ್ರಸ್ಟ್ ಸ್ಕಾಲರ್‌ಶಿಪ್ ಹೊಂದಿರುವ ಮುಸ್ಲಿಂ ವಿದ್ಯಾರ್ಥಿಗಳ ಗ್ರೂಪ್ ಫೋಟೋವನ್ನು ಶೇರ್ ಮಾಡಿ, ಮಲಬಾರ್ ಚಾರಿಟಬಲ್ ಟ್ರಸ್ಟ್ ಮುಸ್ಲಿಮರಿಗೆ ಮಾತ್ರ ವಿದ್ಯಾರ್ಥಿವೇತನ ನೀಡುತ್ತದೆ ಎಂಬ ತಪ್ಪು ಸಂದೇಶವನ್ನು ಹಂಚಿಕೊಳ್ಳುತ್ತಿದ್ದಾರೆ.

ಹಾಗಾಗಿ, ಮಲಬಾರ್ ಚಾರಿಟೇಬಲ್ ಟ್ರಸ್ಟ್ ವಿದ್ಯಾರ್ಥಿಗಳಿಗೆ ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿದ್ಯಾರ್ಥಿವೇತನವನ್ನು ನೀಡುವುದಿಲ್ಲಎಂದು ಸ್ಪಷ್ಟವಾಗಿ ತಿಳಿಯುತ್ತಿದೆ.

Share.

Comments are closed.

scroll