ಜಿಂಕೆ ಮರಿಯನ್ನು ರಕ್ಷಿಸುತ್ತಿರುವ ಬಾಂಗ್ಲಾದೇಶಿ ಹುಡುಗನ ಚಿತ್ರಗಳನ್ನು ಅಸ್ಸಾಂನ ಬಾಹುಬಲಿ ಎಂದು ಬಣ್ಣಿಸಲಾಗಿದೆ

ನದಿ ನೀರಿನಲ್ಲಿ ಮುಳುಗದಂತೆ ಜಿಂಕೆ ಮರಿಯನ್ನು ಸಾಗಿಸುತ್ತಿರುವ ಹುಡುಗನ ಅನೇಕ ಫೋಟೋಗಳನ್ನು ಅಸ್ಸಾಂನ ಧೈರ್ಯಶಾಲಿ ಹುಡುಗ ಎಂದು ಬಣ್ಣಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋಗಳಲ್ಲಿ, ಹುಡುಗನೊಬ್ಬ ಜಿಂಕೆಯನ್ನು ಒಂದು ಕೈಯಿಂದ ತಲೆಯ ಮೇಲೆ ಹಿಡಿದಿಟ್ಟುಕೊಂಡು ಹರಿಯುತ್ತಿರುವ ನೀರನ್ನು ದಾಟುತ್ತಿರುವುದನ್ನು ಕಾಣಬಹುದು. ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಅಸ್ಸಾಂನ ಧೈರ್ಯಶಾಲಿ ಹುಡುಗ ನಿರ್ಭಯದಿಂದ ಜಿಂಕೆ ಮರಿಯನ್ನು ನದಿ ನೀರಿನಲ್ಲಿ ಮುಳಗದಂತೆ ರಕ್ಷಿಸಿದನು.

ನಿಜಾಂಶ: ಆಗ್ನೇಯ ಬಾಂಗ್ಲಾದೇಶದ ನೊವಾಕಾಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದ ಸಂದರ್ಭದಲ್ಲಿ ಬೆಲಾಲ್ ಎಂಬ ಬಾಂಗ್ಲಾದೇಶದ ಹುಡುಗನೊಬ್ಬ ಜಿಂಕೆ ಮರಿಯನ್ನು ನದಿಯಲ್ಲಿ ಮುಳುಗದಂತೆ ರಕ್ಷಿಸಿದ್ದ. ಆ ಸಂದರ್ಭಲ್ಲಿ ಈ ಫೋಟೋಗಳನ್ನು ಸೆರೆ ಹಿಡಿಯಲಾಗಿದೆ. ಈ ಫೋಟೋಗಳಲ್ಲಿರುವ ಹುಡುಗ ಭಾರತದ ಅಸ್ಸಾಂ ರಾಜ್ಯಕ್ಕೆ ಸೇರಿದವನಲ್ಲ. ಆದ್ದರಿಂದ ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ ನಲ್ಲಿ ಹಂಚಿಕೊಳ್ಳಲಾಗಿರುವ ಫೋಟೋಗಳನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ‘ಡೈಲಿ ಮೇಲ್’ ಎಂಬ ಸುದ್ದಿ ವೆಬ್‌ಸೈಟ್ ‘06 ಫೆಬ್ರವರಿ 2014’ ರಂದು ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ಫೋಟೋಗಳು ಕಂಡುಬಂದಿವೆ. ಅಸಹಾಯಕ ಜಿಂಕೆ ಮರಿ ನದಿಯಲ್ಲಿ ಮುಳುಗದಂತೆ, ಅದನ್ನು ಉಳಿಸಲು ಬೆಲಾಲ್ ಎಂಬ ಧೈರ್ಯಶಾಲಿ ಹುಡುಗ ತನ್ನ ಪ್ರಾಣವನ್ನು ಪಣಕ್ಕಿಟ್ಟಿದ್ದಾನೆ ಎಂದು ಅವರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಈ ಘಟನೆ ಆಗ್ನೇಯ ಬಾಂಗ್ಲಾದೇಶದ ನೊವಾಖಾಲಿ ಜಿಲ್ಲೆಯಲ್ಲಿ ನಡೆದಿದೆ. ನೊವಾಖಾಲಿ ಪ್ರವಾಹದ ಸಮಯದಲ್ಲಿ ಫೋಟೋ ಪ್ರವಾಸಕ್ಕಾಗಿ ಅಲ್ಲಿಗೆ ಭೇಟಿ ನೀಡಿದ್ದ ವನ್ಯಜೀವಿ ಛಾಯಾಚಿತ್ರಗಾರ ಹಸಿಬುಲ್ ವಹಾಬ್ ಈ ಫೋಟೋಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದ್ದಾರೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಮತ್ತೊಂದು ಫೋಟೋವನ್ನೂ ರಿವರ್ಸ್‌ ಇಮೇಜ್‌ಗೆ ಒಳಪಡಿಸಿದಾಗ, ‘ದಿ ಹಫಿಂಗ್ಟನ್ ಪೋಸ್ಟ್’ ಸುದ್ದಿತಾಣ ಪ್ರಕಟಿಸಿದ ಮತ್ತೊಂದು ಲೇಖನವು ಇದೇ ಘಟನೆಯನ್ನು ಸಂದರ್ಭದೊಂದಿಗೆ ವಿವರಿಸಿದೆ.

ಅಗತ್ಯ ಕೀವರ್ಡ್‌ಗಳೊಂದಿಗೆ ಹುಡುಕಿದಾಗ, ಬಾಂಗ್ಲಾದೇಶದ ಬ್ಲಾಗ್ ಮತ್ತು ಫೇಸ್‌ಬುಕ್‌ ಪುಟದಲ್ಲಿ ಪ್ರಕಟವಾದ ಪೋಸ್ಟ್‌ ಗಳಲ್ಲಿ ಈ ಘಟನೆಯ ಇನ್ನೂ ಕೆಲವು ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಹುಡುಗನೊಬ್ಬ ಜಿಂಕೆಮರಿಯನ್ನು ರಕ್ಷಿಸುವ ಹಳೆಯ ಫೋಟೋಗಳನ್ನು ಅಸ್ಸಾಂನ ಯುವ ಬಾಹುಬಲಿ ಎಂದು ತಪ್ಪಾಗಿ ಬಿಂಬಿಸಲಾಗಿದೆ.