ಕೋಲ್ಕತ್ತಾದಲ್ಲಿನ ಸಿಎಎ ವಿರೋಧಿ ಪ್ರತಿಭಟನೆಯ ’ಗೋ ಬ್ಯಾಕ್ ಮೋದಿ’ ಚಿತ್ರವನ್ನು ಬಿಹಾರದ ಪ್ರತಿಭಟನೆಯದ್ದೆಂದು ಹಂಚಿಕೊಳ್ಳಲಾಗುತ್ತಿದೆ

ರಸ್ತೆಯ ಮೇಲೆ ’ಗೋ ಬ್ಯಾಕ್ ಮೋದಿ’ ಎಂದು ಬರೆದಿರುವ ಚಿತ್ರವನ್ನು “ಮೋದಿ ಮತ್ತು ಬಿಜೆಪಿ ವಿರುದ್ಧದ ಹೋರಾಟಕ್ಕೆ ಬಿಹಾರ ತಯಾರಾಗುತ್ತಿದೆ” ಎಂದು ಸಾಮಾಜಿಕ ಮಾಧ್ಯಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ಈ ಪ್ರತಿಪಾದನೆ ನಿಜವೆ ಪರಿಶೀಲಿಸೋಣ.

ಈ ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: 2020 ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಹಾರದಲ್ಲಿ ‘ಗೋ ಬ್ಯಾಕ್ ಮೋದಿ’ಎಂದು ಹೇಳುವ ರಸ್ತೆ ಬರಹದ  ಚಿತ್ರ.

ಸತ್ಯಾಂಶ: ಈ ಚಿತ್ರವು ಕೋಲ್ಕತ್ತಾದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ 2020 ರ ಜನವರಿಯಲ್ಲಿ ನಡೆದ ಪ್ರತಿಭಟನೆಯದ್ದಾಗಿದೆ. ಈ ಚಿತ್ರಕ್ಕೂ ಬಿಹಾರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿನ ಫೋಟೋವನ್ನು  ರಿವರ್ಸ್‌ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ, ಇದೇ ರೀತಿಯ ಚಿತ್ರವನ್ನು ಪತ್ರಕರ್ತರೊಬ್ಬರು ಟ್ವೀಟ್‌ ಮಾಡಿರುವುದು ಕಂಡುಬಂದಿತು. ಈ ಟ್ವೀಟ್ 11 ಜನವರಿ 2020 ರಲ್ಲಿ ಮಾಡಲಾಗಿದ್ದು, ಈ ಟ್ವೀಟ್ ಪ್ರಕಾರ ಚಿತ್ರ ಕೋಲ್ಕತ್ತದ್ದಾಗಿದೆ.

ಇದರ ಕುರಿತ ಹೆಚ್ಚಿನ ಹುಡುಕಾಟವು ನಮ್ಮನ್ನು ಜನವರಿ 2020 ರ ಸುದ್ದಿ ಲೇಖನಗಳಿಗೆ ಕರೆದೊಯ್ಯಿತು. ಆ ಲೇಖನಗಳಲ್ಲಿಯೂ ಸಹ ಇದೇ ರೀತಿಯ ಚಿತ್ರವನ್ನು ಹೊಂದಿದೆ. ಆದರೆ ಈ ಚಿತ್ರ ಇನ್ನೊಂದು ಕೋನದಿಂದ ಕಂಡುಬಂದಿದೆ. ಈ ಲೇಖನಗಳ ಪ್ರಕಾರ, ಈ ಚಿತ್ರವು ಕೋಲ್ಕತ್ತಾದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯದ್ದಾಗಿದೆ. ಈ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ಅಲ್ಲದೆ, ಈ ಪತ್ರಕರ್ತ ಹಂಚಿಕೊಂಡ ಪೋಸ್ಟ್‌ನಲ್ಲಿನ ಫೋಟೋದ ಮತ್ತೊಂದು ಆವೃತ್ತಿಯಲ್ಲಿ, ರಸ್ತೆಯ ಪಕ್ಕದ ಕಟ್ಟಡವೊಂದರಲ್ಲಿ ‘ಮೆಟ್ರೊ ಚಾನೆಲ್ ಕಂಟ್ರೋಲ್ ಪೋಸ್ಟ್ ಹರೆ ಸ್ಟ್ರೀಟ್ ಪೋಲಿಸ್ ಸ್ಟೇಷನ್’ ಎಂಬ ಫಲಕ ಗೋಚರಿಸುತ್ತಿದೆ. ಅದನ್ನು ಆಧಾರವಾಗಿಟ್ಟುಕೊಂಡು , ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್ ನಕ್ಷೆಗಳಲ್ಲಿನ ಹುಡುಕಾಟವು ಕೋಲ್ಕತ್ತಾದ ಸ್ಥಳಕ್ಕೆ ನಮ್ಮನ್ನು ಕರೆದೊಯ್ಯಿತು.

ಈ ಎಲ್ಲಾ ಆಧಾರಗಳಿಂದ, ಈ ಚಿತ್ರವು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಕೋಲ್ಕತ್ತಾದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದ್ದಾಗಿದ್ದು, ಇದಕ್ಕೂ ಪ್ರಸ್ತುತ ನಡೆಯುತ್ತಿರುವ ಬಿಹಾರ ವಿಧಾನಸಭಾ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂಬ ತೀರ್ಮಾನಕ್ಕೆ ಬರಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ವ್ಯಾಪಕವಾಗಿ  ಹಂಚಿಕೊಳ್ಳುತ್ತಿರುವ ಚಿತ್ರವು 2020 ರ ಜನವರಿಯಲ್ಲಿ ಕೋಲ್ಕತ್ತಾದಲ್ಲಿ ಸಿಎಎ ವಿರೋಧಿ ಪ್ರತಿಭಟನೆಯದ್ದಾಗಿದೆ. ಇದಕ್ಕೂ ಈಗ ನಡೆಯುತ್ತಿರುವ ಬಿಹಾರ ವಿಧಾನಸಭಾ ಚುನಾವಣೆಗೂ ಯಾವುದೇ ಸಂಬಂಧವಿಲ್ಲ.